ಅಂಕಣಗಳು

Subscribe


 

ಸೂಚೀ ಹಸ್ತ

Posted On: Sunday, February 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

soochiಲಕ್ಷಣ: ತೋರು ಬೆರಳನ್ನು ನಿಡಿದಾಗಿ ಹಿಡಿದು ಉಳಿದ ಬೆರಳನ್ನು ಹೆಬ್ಬೆರಳಿನ ತುದಿಯೊಂದಿಗೆ ಒಂದು ಎಂಬರ್ಥದಲ್ಲಿ ಸೇರಿಸುವುದು. ಸೂಚೀ ಎಂದರೆ ಸೂಜಿ ಎಂದರ್ಥ. ಸೂಚೀಮುಖ ಎನ್ನುವುದು ಇನ್ನೊಂದು ಹೆಸರು. ಸೂಚ್ಯಾಸ್ಯ ನಾಟ್ಯಶಾಸ್ತ್ರ ನೀಡಿದ ಹೆಸರು. ಕಥಕ್ಕಳಿ, ಮಣಿಪುರಿ ಮುಂತಾದ ನೃತ್ಯ ಪದ್ಧತಿಗಳಲ್ಲಿ ಸೂಚೀಮುಖವೆಂದು ಕರೆಯುತ್ತಾರೆ. ಸೂಚಿ ಹಸ್ತದಲ್ಲೇ ಸ್ವಲ್ಪ ಬದಲಾವಣೆಗಳೊಂದಿಗೆ ಅಂದರೆ ಹೆಬ್ಬೆರಳನ್ನು ತೋರುಬೆರಳ ಕೆಳಗಿನ ಮೊದಲ ಗೆರೆಗೆ ಮುಟ್ಟಿಸಿದರೆ ಅದು ಅರ್ಧಸೂಚಿಯೆನಿಸಿಕೊಳ್ಳುತ್ತದೆ. ಅರ್ಧಸೂಚಿಯು ಮೊಳಕೆ ಚಿಗುರು, ಪಕ್ಷಿಯ ಮರಿಗಳು, ದೊಡ್ಡ ಕ್ರಿಮಿಗಳನ್ನು ಸೂಚಿಸುವುದು.
ಒಡಿಸ್ಸಿ ನೃತ್ಯ ಪದ್ಧತಿಯಲ್ಲಿ ಸೂಚೀ ಹಸ್ತಕ್ಕೆ ನಿರ್ದೇಶಿತ ಎಂದು ಕರೆಯುವುದಿದೆ. ಒಡಿಸ್ಸಿಯಲ್ಲಿ ಸೂಚೀ ತರಹದ ಇನ್ನೊಂದು ಹಸ್ತಕ್ಕೆ ಪ್ರಬೋಧಕ ಎಂದು ಹೆಸರು. ಇದು ಎಚ್ಚರಿಸು, ವಿಷದೀಕರಿಸು ಎಂಬುದನ್ನು ತಿಳಿಸುವಲ್ಲಿ ಉಪಯೋಗವಾಗುತ್ತದೆ.
ಆಗಮವೇದದಲ್ಲಿ ಕಂಡು ಬರುವ ೩೭ ಮುದ್ರೆಗಳಲ್ಲಿ ತ್ರಾಸಿನಿಮುದ್ರೆಯು ಸೂಚೀಹಸ್ತವೇ ಆಗಿದೆ. ಪರಿಗ್ರಹಮುದ್ರೆ ಎಂಬ ಇನ್ನೊಂದು ಮುದ್ರೆಯು ಅರ್ಧಸೂಚೀ ಎಂಬ ಮುದ್ರೆಯಾಗಿದೆ. ಯೋಗದಲ್ಲಿ ಕಂಡುಬರುವ ಚಿಕಿತ್ಸಕ ಮುದ್ರೆಗಳ ಪೈಕಿ ಅನುಶಾಸನ (ವಜ್ರ) ಮುದ್ರೆಯೆಂಬುದು ಸೂಚೀಹಸ್ತವೇ ಆಗಿದೆ. ಈ ಮುದ್ರೆಯು ಜೀವನದಲ್ಲಿ ಶಿಸ್ತು, ನಾಯಕತ್ವ, ಕಾರ್ಯಕ್ಷಮತೆ, ಚಟುವಟಿಕೆಯುಳ್ಳ ವ್ಯಕ್ತಿತ್ವ ಬೆಳವಣಿಗೆಗೆ, ರಕ್ತಪರಿಚಲನೆಯ ಅಡ್ಡಿಗಳನ್ನು ನಿವಾರಿಸಲು ಸಹಕರಿಸುತ್ತದೆ. ಜಪಮುದ್ರೆಯೆಂಬ ಇನ್ನೊಂದು ಮುದ್ರೆಯು ಅರ್ಧಸೂಚಿಹಸ್ತವಾಗಿದ್ದು ಜಪದ ಶೀಘ್ರ ಯಶಸ್ಸಿಗೆ ಕಾರಣವಾಗುತ್ತದೆ.
ಸಾಮಾನ್ಯ ಜನಜೀವನದಲ್ಲಿ ಸೂಚಿಹಸ್ತವನ್ನು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು. ಅವನು, ನೀನು ಎಂದು ತೋರಿಸಲು ನಿರ್ಲಕ್ಷ್ಯದಿಂದ ಏಕವಚನ ಪೂರ್ವಕ ಕರೆಯುವುದು, ತಲೆ ಕರೆದುಕೊಳ್ಳವುದು, ಯೋಚನೆ, `ಶ್’-ನಿಶ್ಯಬ್ಧ ಇತ್ಯಾದಿಯಾಗಿ ಸಂವಹನ ಮಾಡಲು ಉಪಯೋಗಿಸುತ್ತಾರೆ.ಯಕ್ಷಗಾನದಲ್ಲಿ ಮೂಲೆ, ಚಂದ್ರ, ಸೂರ್ಯ, ಆಶ್ಚರ್ಯ, ಕೇಳುವಿಕೆಗೆ ಈ ಹಸ್ತವನ್ನು ಬಳಸುತ್ತಾರೆ.
ವಿನಿಯೋಗ: ಒಂದು ಎಂಬ ಸಂಖ್ಯಾಸೂಚನೆ, ಪರಬ್ರಹ್ಮ ಎಂಬ ಭಾವನೆ, ನೂರು ಎಂಬ ಸಂಖ್ಯೆ, ರವಿ, ನಗರ, ಲೋಕ, ಹಾಗೆಯೇ ಎಂದು ಹೇಳುವುದು, ಇದು ಅಥವಾ ಅದು, ನಿರ್ಜನ ಪ್ರದೇಶ, ಬೆದರಿಸುವುದು, ಕೃಶವಾಗಿರುವಿಕೆ ಮುಳ್ಳು, ಕಾಂತಿ, ಶರೀರ, ಆಶ್ಚರ್ಯಸೂಚನೆ, ಜಡೆ ಹೆಣೆಯುವಿಕೆ, ಛತ್ರಿ, ಸಮರ್ಥಿಸುವುದು, ಕೈಗಳು, ರೋಮಾಂಚಕ, ನಗಾರಿ ಹೊಡೆಯುವುದು, ಕುಂಬಾರನ ಚಕ್ರ ತಿರುಗುವಿಕೆ, ಗಾಡಿಯ ಚಕ್ರದ ಸುತ್ತು, ಆಲೋಚನೆ, ಸಾಯಂಕಾಲ ಏಕಾಂತ ಜೀವನ, ಕೋಲು ಅಥವಾ ದಂಡ, ಯೋಗ್ಯತೆ, ವಿಮರ್ಶೆ.
ಇತರೆ ವಿನಿಯೋಗ: ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು, ನವಿಲಿನ ತಲೆಯ ಮೇಲಿನ ಜುಟ್ಟು, ಕೋರೆ ಹಲ್ಲಿನ ಪ್ರಾಣಿ, ಇವನು ಯಾರೆಂಬ ಭಾವ, ಸಂಯೋಗ, ವಿಯೋಗ, ಜಗಳ, ಜನರಗುಂಪು, ಧ್ವಜ, ಮೆಚ್ಚಿಗೆ, ಶ್ವಾಸ ನೋಡುವುದು, ವಿರಹ, ಸತ್ಯವಚನ, ಕುಂಡಲ, ಹುಣ್ಣಿಮೆ, ‘ನೀವು’ ನಾವು ಎಂಬುದನ್ನು ತೋರಿಸುವಾಗ, ವಿದ್ಯುತ್, ಬಳ್ಳಿ, ಕಿವಿಯ ಆಭರಣ, ಅಂಕುಡೊಂಕಾಗಿ ನಡೆಯುವುದು, ಭಲೆ ಭಲೆ ಎನ್ನುವುದು, ಮಗು, ಹಾವು, ಹೊಗೆ, ಬಳ್ಳಿ, ಹಕ್ಕಿಗಳ ಗರಿ ಬೀಳುವುದು, ನಕ್ಷತ್ರ, ಮೂಗು, ಎತ್ತರವಾಗಿ ಹಿಡಿದ ಕೋಲು, ಉದ್ದ ಹಲ್ಲುಗಳ ಮುಖ, ಉದ್ದ-ಎತ್ತರ, ಸೂರ್ಯೋದಯ-ಸೂರ್ಯಾಸ್ತ ವಾಕ್ಯರಚನೆ, `ಬೇಡ, ಹೇಳು’ ಮುಂತಾದವುದನ್ನು ಸೂಚಿಸಲು ಬಳಸುತ್ತಾರೆ.
ರೋಷ, ಬೆವರು ಸೂಚನೆಗೆ, ಪುರುಷನು ಕುಂಡಲ-ಅಂಗದ ಮೊದಲಾದ ಆಭರಣಗಳನ್ನು ಧರಿಸುವುದಕ್ಕೆ, ಗರ್ವ, ಶತ್ರುಗೋಚರ, ಯಾರಿವನು ಎಂಬ ಸೂಚನೆಗೆ, ಕಿವಿಯನ್ನು ತುರಿಸಲು, ಬಂಧನ, ಹಗಲು-ರಾತ್ರಿಗಳ ಕೊನೆಯನ್ನು ಬಿಡಿಸಿ ಸೂಚಿಸಲು, ಚಂದ್ರಮಂಡಲ, ಶಿವನ ಮೂರನೆಯ ಕಣ್ಣು, ಇಂದ್ರಮಂಡಲ, ಎಳೆಹಾವು, ಚಕ್ರ, ಮಿಂಚು, ಧ್ವಜ, ಅರಳಿದ ಹೂ, ಧೂಪದೀಪ, ಚಿತ್ತ, ಗದೆ, ಪಾರೋಳು, ಕಿವಿಯೋಲೆ, ಸರ್ವಸ್ವರ್ಗವನ್ನೂ ತೆಗೆದುಕೊಳ್ಳು, ಆಕಳಿಕೆ, ದೀರ್ಘ ಅಧ್ಯಯನ, ದೀರ್ಘದಿವಸ, ದೀರ್ಘವಾಕ್ಯ, `ಮಾತಾಡು, ಇಲ್ಲ-ಬೇಡ’ ಎನ್ನಲು ಬಳಸುತ್ತಾರೆ.
ಕುಂಡಲ, ತೋಳಬಂಧಿ ಕಪೋಲದಲ್ಲಿ ಬರೆದ ಚಕ್ರ, ಸಿಟ್ಟು, ಬೆವರು, ಕೂದಲು, ವೈರ, ಅಭಿಮಾನ, ಕಿವಿಕೆರೆತ, ಬೇಟೆ, ಸಮಾಗಮ, ವಿಚ್ಛೇದ, ಜಗಳ, ಸಂಜೆ ದಿನಾಂತ, ನಿಶಾಂತ್ಯ, ಬೆಳಿಗ್ಗೆ, ಯಾವುದಾದರೂ ಕೋಪ, ಕಲ್ಲು, ಯಾಂತ್ರಿಕ ವಸ್ತು, ಬೆಟ್ಟ, ಸುಳಿಗಾಳಿ, ಊಟಬಡಿಸು, ಶಿವ, ಇಂದ್ರ, ಪೂರ್ಣಚಂದ್ರ, ಇಂದ್ರ ಧ್ವಜ, ಶಿವನ ತ್ರಿನೇತ್ರ, ಇಂದ್ರನ ಕಣ್ಣು, ಹಲ್ಲು, ತಿಕ್ಕು, ಕುತ್ತುವ ಸೂಜಿ, ಮೋಹಿನಿವೇಷದ ಅವತಾರ, ಮುಂತಾದುವುಗಳ ಸೂಚನೆಗೆ ಬಳಸಬಹುದು.
ಸಂಕರ ಹಸ್ತದ ವಿಭಾಗದಲ್ಲಿ, ಸೂಚೀಹಸ್ತವನ್ನು ಹಿಂಭಾಗದಲ್ಲಿ ಪ್ರಸರಿಸಿದರೆ `ಅವನು’ ಎಂದೂ, ಮುಂದೆ ಚಾಚಿ ಹಿಡಿದರೆ `ವೀಕ್ಷಣೆ’, ಎರಡೂ ಸೂಚೀಹಸ್ತಗಳನ್ನು ಹಿಡಿದರೆ ಅಡ್ಡಿ, ವಿರೋಧ, ನಾಗ ಎಂದೂ, ಎರಡೂ ಸೂಚೀಹಸ್ತಗಳನ್ನು ಮೂಲಭಾಗದಲ್ಲಿ ಒಂದಕ್ಕೊಂದು ಸೇರಿಸಿದರೆ ಸಧಿಯೆಂದೂ ನಿಶ್ಚಲವಾಗಿ ಹಿಡಿದರೆ ಮೇಲಕ್ಕೆ ಎತ್ತಲ್ಪಟ್ಟದುದೆಂದು ಅರ್ಥವಾಗುವುದು.  ಅಧೋಮುಖವಾಗಿ ಹಿಡಿದರೆ ದಯೆ ತೋರಿಸುವುದು, ಕಿವಿಗಳ ಸಮೀಪ ಹಿಡಿದರೆ ಕರ್ಣಾಭರಣ ಎಂದಾಗುವುದು.
ನಾನಾರ್ಥ ಹಸ್ತ ವಿಭಾಗದಲ್ಲಿ ಸೂಚೀಮುಖಹಸ್ತವನ್ನು ಮುಖದ ಅಗ್ರಭಾಗದಲ್ಲಿ ಹಿಡಿದರೆ ಬ್ರಹ್ಮಚರ್ಯ, ಎಡಭಾಗದಲ್ಲಿ ಕೆಳಗೆ ಹಿಡಿದರೆ ಚಲಿಸದಿರುವಿಕೆ, ಮತ್ತು ಬರೆಯುವಿಕೆ ಮತ್ತು ನಿನ್ನೆಯ ದಿನ ಎಂಬರ್ಥಕ್ಕೂ ಉಪಯೋಗವಾಗುತ್ತದೆ.  ಸೂಚೀಹಸ್ತವನ್ನು ಮುಂದೆ ನಿಶ್ಚಲವಾಗಿ ನಿಲ್ಲಿಸಿದಲ್ಲಿ `ಒಂದು ಕಾಷ್ಠೆ’ ಎಂಬ ಕಾಲಪ್ರಮಾಣದ ಸೂಚಕವಾಗಿಯೂ ಬಳಸಬಹುದು.  ನಿಶ್ಚಲವಾಗಿ ಹಿಡಿದರೆ ಒಂದು ಮಾಸವೆಂದೂ ಚಾಲಿಸಿದರೆ ಒಂದು ವರ್ಷ, ಯುಗವೆಂದು ಅರ್ಥೈಸಬಹುದು.
ಇತರ ಗ್ರಂಥಗಳಲ್ಲಿ ಉಲ್ಲೇಖಿಸಲಾದ ನೃತ್ತ ಹಸ್ತಗಳ ಪೈಕಿ ಸೂಚೀವಿದ್ಧ ಹಸ್ತವೆಂಬುದಿದ್ದು ಸೂಚೀ ಹಸ್ತಗಳನ್ನು ಅನ್ಯೋನ್ಯಾಭಿಮುಖವಾಗಿ ಹಿಡಿಯುವುದರಿಂದ ಇದು ಸಂಘಟಿಸುತ್ತದೆ. ಪಾಂಡವ ಧರ್ಮರಾಜನನ್ನೂ ಸೂಚಿಸಲು ಎರಡು ಕೈಗಳಲ್ಲಿ ಸೂಚೀ ಹಸ್ತಗಳನ್ನು ಭುಜದ ಬಳಿ ಅಲುಗಾಡಿಸಬೇಕು.
ದೇವತಾ ಹಸ್ತಗಳಲ್ಲಿ ಒಂದಾದ ಸರಸ್ವತೀ ಹಸ್ತಕ್ಕೆ ಬಲಹಸ್ತದಲ್ಲಿ ಸೂಚಿ, ಎಡ ಹಸ್ತದಲ್ಲಿ ಅರ್ಧಚಂದ್ರ ಈ ಎರಡನ್ನೂ ಮೇಲ್ಮುಖವಾಗಿ ಎದೆಯ ಮುಂದೆ ಇರಿಸಬೇಕು. ಅಥವಾ ಬಲಗೈಯಲ್ಲಿ ಸೂಚಿ ಹಸ್ತವನ್ನು ಅಧೋಮುಖದಲ್ಲಿರಿಸಿ, ಸೊಂಟದ ಬಲಭಾಗಕ್ಕೆ ಬರುವಂತೆ ಹಿಡಿದು ಹಾಗೂ ಕಪಿತ್ಥ ಹಸ್ತವನ್ನು ಎಡಗೈಯಲ್ಲಿ ಉನ್ಮುಖವಾಗಿ ಭುಜಕ್ಕೆ ಇದಿರಾಗಿ ಹಿಡಿಯುವುದು. ನವಗ್ರಹ ಹಸ್ತಗಳಲ್ಲಿ ಕುಜ ಹಸ್ತವು ಎಡಗೈಯಲ್ಲಿ ಸೂಚೀಹಸ್ತ, ಬಲಗೈಯಲ್ಲಿ ಮುಷ್ಟಿಹಸ್ತವನ್ನು ಹಿಡಿಯುವುದರಿಂದ ಸಂಭವಿಸುತ್ತದೆ. ಎಡಗೈಯಲ್ಲಿ ಸರ್ಪಶೀರ್ಷ ಹಸ್ತವನ್ನು, ಬಲಗೈಯಲ್ಲಿ ಸೂಚೀ ಹಸ್ತವನ್ನು ಹಿಡಿದರೆ ಅದು ರಾಹು ಹಸ್ತ. ಎಡಗೈಯಲ್ಲಿ ಸೂಚೀಹಸ್ತವನ್ನೂ, ಬಲಗೈಯಲ್ಲಿ, ಅರ್ಧಪತಾಕಹಸ್ತವನ್ನೂ ಹಿಡಿಯುವುದು ಕೇತು ಹಸ್ತವೆನಿಸಿಕೊಳ್ಳುತ್ತದೆ.
ಸೂಚೀಹಸ್ತವನ್ನು ಭುಜದ ಬಳಿ ಬಗ್ಗಿಸಿ ಹಿಡಿದು ನೋಡಿದರೆ ಅದು ಭ್ರಾತೃಭಗಿನೀ ಅಂದರೆ ಸಹೋದರನ ಹೆಂಡತಿ(ಅತ್ತಿಗೆ)ಯನ್ನು ತೋರಿಸುತ್ತದೆ. ಸೂಚೀಹಸ್ತವನ್ನು ಮೇಲಕ್ಕೆತ್ತುವುದರಿಂದ ಶತಭಿಷಾ ಮತ್ತು ಸೂಚೀಹಸ್ತವನ್ನು ಸ್ವಸ್ತಿಕಾಕಾರ ಮಾಡುವುದರಿಂದ ಉತ್ತರಾಭಾದ್ರಾ ನಕ್ಷತ್ರವನ್ನು ಹೇಳಬಹುದು. ಸೂಚಿಹಸ್ತಗಳನ್ನು ಅಭಿಮುಖವಾಗಿ ಹಿಡಿಯುವುದು ಮಿಥುನರಾಶಿಯ ಸೂಚಕ.
ಸೂಚೀ ಹಸ್ತವನ್ನು ಅಲ್ಲಾಡಿಸುವುದು ರಕ್ತಸಾಯಿ ಅಥವಾ ಇಂಬಳ (ಜಿಗಣೆ)ಯನ್ನು ಸೂಚಿಸಿದರೆ ಪಕ್ಷಿಹಸ್ತಗಳ ಪೈಕಿ ಕಡಲಹದ್ದು (ಕುರರ) ಎಂಬ ಪಕ್ಷಿಯನ್ನು ಸಂವಹಿಸಲು ನಿಧಾನ ಮಾಡುತ್ತಿರುವ ಸೂಚೀಹಸ್ತವನ್ನು ಬಳಸಲಾಗುತ್ತದೆ. ಕಾಲವನ್ನು ಸೂಚಿಸುವ ಹಸ್ತಗಳಲ್ಲಿ ಇಡೀದಿನ ಮತ್ತು ತಿಂಗಳು ಎಂಬುದಕ್ಕೆ ಸೂಚೀಹಸ್ತವನ್ನು ಬಳಸಲಾಗುತ್ತದೆ. ನೇತ್ರಾವತೀ ನದಿ, ಲೋಕಪಾಲಕ ಮಂಧತ, ಚಕ್ರವರ್ತಿ ರಘುವನ್ನು ಸೂಚಿಸಲು ಬಳಸುತ್ತಾರೆ.

Leave a Reply

*

code