ಅಂಕಣಗಳು

Subscribe


 

ತ್ರಿವಳಿ ದೋಣಿಗಳೊಳಗೆ ಕಾಲಿಟ್ಟು ಕೂತು ನೂಪುರದ ಹುಟ್ಟು ಹಾಕುತ್ತಾ…

Posted On: Sunday, August 12th, 2018
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕರು

ತ್ರಿಕೋದ್ಯಮ, ನೃತ್ಯ ಮತ್ತು ಸಂಶೋಧನೆ. ಒಂದಕ್ಕೊಂದು ಸಂಬಂಧವೇ ಇಲ್ಲವೆಂಬ ಮಟ್ಟಿಗೆ ಭಿನ್ನ ಪ್ರಪಂಚಗಳವು. ಆದಾಗ್ಯೂ ಬದುಕಿನ ಭಾವಸಾಮ್ರಾಜ್ಯವನ್ನೇ ಜಾಲಾಡಿಸುತ್ತಾ ರಸದೋಗರವನ್ನೇ ಮೊಗೆಮೊಗೆದು ಕುಡಿಸುವಂತೆ ಈ ಮೂರೂ ಆಯ್ಕೆಗಳನ್ನು ನನ್ನದೇ ಆದ ನೆಲೆಯಲ್ಲಿ ಸಮಷ್ಟಿಯಾಗಿ ಗುರುತಿಸಿಕೊಂಡ ಖುಷಿ ನನಗಿದೆ. ಈ ಮೂರೂ ನೆಲೆಗಳು ಪ್ರವೃತ್ತಿ-ವೃತ್ತಿಯೆಂಬ ಭೇದಗಳಿಲ್ಲದೆ ಬೆರೆತು ನನ್ನ ಪಾಲಿಗಂತೂ ಅನುಭವಸ್ವರೂಪಿಯಾಗಿವೆ.

ಜನ್ಮ್ಮದಾರಭ್ಯ ನಾನು ಹಲವು ದೋಣಿಗಳಲ್ಲಿ ಏಕಕಾಲಕ್ಕೆ ಕಾಲಿಡುವವಳೇ. ಸಂಗೀತ, ನೃತ್ಯ, ವಾದ್ಯ, ನಾಟಕ, ಅಭಿನಯ, ಯಕ್ಷಗಾನ, ದೇವಾಲಯ ಭೇಟಿ, ಕಥಾಕಾಲಕ್ಷೇಪ, ಸಂಘಟನೆ, ವಿಜ್ಞಾನ, ಇತಿಹಾಸ, ಸಾಹಿತ್ಯ, ಮನಃಶಾಸ್ತ್ರ, ಎಕನಾಮಿಕ್ಸ್, ಸಿನೆಮಾ, ಜ್ಯೋತಿಷ, ಹಸ್ತಸಾಮುದ್ರಿಕ, ಕುಶಲಕಲೆ, ಭಜನೆ..ಹೀಗೆ ಸಾಗುತ್ತಲೇ ಬಂದಿದೆ ಅಭಿರುಚಿಯ ವಿಸ್ತಾರ. ಕಬ್ಬಿಣದ ಕಡಲೆ ಗಣಿತವನ್ನು ಕುಟ್ಟಿ ಕುಟ್ಟಿಯಾದರೂ ಪುಡಿ ಮಾಡಿ ನುಂಗುವವಳೇ. ಮನಸಿಗನಿಸಿದ್ದು, ಬುದ್ಧಿಗೆ ತೋರಿದ್ದು ಬೇಕೆಂದು ಕಂಡರೆ, ಹಿಡಿದ ಕೆಲಸ ಪೂರ್ತಿಯಾಗಲೇಬೇಕೆಂದು ಹಟ ಮೈದೋರಿದರೆ ಎಂಥ ಇಕ್ಕಟ್ಟಿನ ಬಿಕ್ಕಟ್ಟಿನ ಸ್ಥಿತಿಯಿದ್ದರೂ ಛಲ ಹೊತ್ತು ಸಾಧಿಸುವ ತನಕ ನೆಮ್ಮದಿಯಿಲ್ಲ. ಹಾಗೆಂದು ‘ಬೇಡ’ವೆಂಬ ವೈರಾಗ್ಯ ಹೊಕ್ಕು ಬೆಚ್ಚಗೆ ಕೂತರೆ, ಜಪ್ಪಯ್ಯವೆಂದರೂ ಮತ್ತೊಮ್ಮೆ ಅದರೆಡೆಗೆ ಕಣ್ತಿರುಗದು. ಮಾಡಿದ್ದನ್ನೇ ರಿಪೀಟ್ ಮಾಡುವುದೆಂದರೆ ಮಹಾ ಬೋರು. ರುಚಿ-ರಸ ಕಡಿಮೆಯಾದಾಗೆಲ್ಲಾ ಅವು ಸ್ವಾದ ಕಳೆದುಕೊಳ್ಳುತ್ತಿತ್ತು. ಯಾವುದೇ ಅನುಭವವೂ ಆತ್ಯಂತಿಕವಾಗಿ ಅನುಭವಿಸಲ್ಪಟ್ಟರೆ ಅದುವೇ ಕೊನೆಗೆ ವೈರಾಗ್ಯದರ್ಶನ ಮಾಡಿಸುತ್ತಿತ್ತು. ಅದು ನನ್ನ ಪ್ರಿಯವಾದ ನೃತ್ಯವೇ ಆಗಿದ್ದರೂ ! ಕಾಲು ನೋಯುವಷ್ಟು ಕುಣಿದವಳು ಹಾಗೆಯೇ ಹಾಯಾಗಿ ಇರಬಲ್ಲೆನೆನಿಸಿದ ಕ್ಷಣದಿಂದ ಎಷ್ಟೋ ವರುಷದ ನಂತರಕ್ಕೂ ಕಾಲಿಗೆ ಹೆಚ್ಚಿನ ಕೆಲಸ ಕೊಡದೆಯೇ ಸರ್ವೇಸಾಮಾನ್ಯ ನಡೆದಾಡುವ ಹುಡುಗಿಯಾದೆ. ಆದರೇನಾಯಿತು, ಜಗತ್ತು ಹೇಗಿದ್ದರೂ ದೊಡ್ಡದಿದೆಯಲ್ಲಾ ! ಯಾವುದು ಹಿಡಿಸಿತೋ ಅವುಗಳೊಳಗೆ ಇಳಿದು ಬೊಗಸೆಯನ್ನಾದರೂ ತುಂಬಿಕೊಳ್ಳುವ ಅದಮ್ಯ ಆಸೆ. ಆಯ್ಕೆಗಳು ಇದ್ದರೂ ಕಷ್ಟ, ಇರಲಿಲ್ಲವೆಂದರೂ ಕಷ್ಟ, ನೋಡಿ. ಇಂತಹ ‘ಬಹುಮುಖ ಪ್ರತಿಭೆ’ಯೂ ಒಂದು ಬದ್ಧತೆಗೋ, ಗುರಿಗೋ, ಬದುಕು ‘ಸೆಟಲ್ಡ್’ ಆಗಲು ಶಾಪವಾಗುವುದೋ ಇದೆ ಎಷ್ಟೋ ಸಲ ! ಒಬ್ಬೊಬ್ಬರೂ ನನ್ನ ಬಗ್ಗೆ ಒಂದೊಂದು ಷರಾ ಬರೆಯುವವರೇ?

‘ಜಾಕ್ ಆಫ್ ಆಲ್’ ಎಂಬುದೇನೋ ಸರಿ. ‘ಮಾಸ್ಟರ್ ಆಫ್ ಒನ್’ ಆದರೂ ಆಗಬೇಕಲ್ಲಾ? ಬರೆವಣಿಗೆಯ ಕಿಡಿ ಸಣ್ಣದಿದ್ದಾಗಲೇ ಹೊತ್ತಿಕೊಂಡಿತ್ತು. ಡೈರಿ ಬರೆಯುವುದು, ಸುಭಾಷಿತ ಸಂಗ್ರಹ, ಶಾಲೆಯಲ್ಲಿ ವಾರ್ತಾಧಿಕಾರಿ, ಕತೆ, ಕವನ, ಪ್ರಬಂಧ, ಸಣ್ಣ ಪುಟ್ಟ ಲೇಖನ, ನುಡಿಚಿತ್ರ…ಹೀಗೆ ವಯೋಮಾನಕ್ಕೊಪ್ಪುವಂತೆ ಪೆನ್ನು-ಕಾಗದಗಳು ಸುಖ-ದುಃಖ-ಸಂಕಟ-ನಲಿವು-ಒಲವಿಗೆಲ್ಲಾ ನಿತ್ಯಸಂಗಾತಿ. ಇದನ್ನು ಮೂರ್ತೀಕರಿಸುವಂತೆ ಎಟುಕಿದ ಪತ್ರಿಕೋದ್ಯಮ ಪದವಿ ಆಯ್ಕೆ ಸ್ನಾತಕೋತ್ತರ ಡಿಗ್ರಿಯ ತನಕ ಪಯಣ ಬೆಳೆಸಿತು. ಅಷ್ಟರಲ್ಲಾಗಲೇ ದೊರಕಿದ ಪತ್ರಿಕಾ ಕಛೇರಿಗಳ ಅನುಭವ ಕುಲುಮೆಯ ದಾವು ಅದ್ಯಾಕೋ ಭವಿಷ್ಯಕ್ಕೂ ಬೇಯ್ವ ಬಿಸಿಯನ್ನೇ ಒಡ್ಡಿದರೆಂಬ ಸಣ್ಣ ಸಂದೇಹ. ಮಿನಿಟು ಮಿನಿಟಿಗೂ ಲೆಕ್ಕ ಹಾಕುವ, ಸಮಯಪಾಲನೆಯಾಗದಿದ್ದರೆ ಶರಂಪರ ಕಿರಿಕಿರಿಯಾಗುವ, ‘ಸರಿಯಿಲ್ಲ’ ವೆನಿಸಿದಾಗ ರೊಚ್ಚಿಗೇಳುವ, ಸುಧಾರಣೆ ಸಾಧ್ಯವಾಗದಾಗ ಭರ್ತ್ಸನೆಯ ರೂಪ ತಾಳುವ ಒಳಗಿನ ಕಿಚ್ಚಿನ ಬಿಸಿ ಇನ್ನಷ್ಟು ಹೊತ್ತಿ ನನ್ನನ್ನೇ ಬಲಿ ಪಡೆದೀತೆದೆಂದೆಣಿಸಿದ್ದೇ ತಡ, ಕೃತಜ್ಞತೆ ನೀಡುವ, ಸಹಜ ಉಸಿರಾಟದ ಉದ್ಯೋಗವನ್ನು ಅರಸಿತ್ತು ಬುದ್ದಿ. ಆದರೂ ಪತ್ರಿಕೋದ್ಯಮವೆಂಬುದು ಬಿಟ್ಟರೂ ಬಿಡದ ಮಾಯೆ. ಜೊತೆಗೆ ಕಲಿತ ಅಕ್ಷರ‌ಋಣ ತೀರಿಸಬೇಕಲ್ಲಾ ? ಪತ್ರಿಕೋದ್ಯಮದ ಪಾಠ ನೃತ್ಯದ ಕೈಹಿಡಿದಿದ್ದವು. ಜೊತೆಗೊಂದು ಉಪನ್ಯಾಸಕವೃತ್ತಿ. ಅಲ್ಲಿಯೂ ಪತ್ರಿಕೋದ್ಯಮವೇ ನಿತ್ಯದ ಆದ್ಯತೆ.

ಹೇಗಿದ್ದರೂ ಸಾಂಸ್ಕೃತಿಕ ಪತ್ರಿಕೋದ್ಯಮವೂ ಹೆಬ್ಬಾವಿನಂತೆ ಮಲಗಿತ್ತಷ್ಟೇ. ಸಮಾಜೋದ್ಧಾರದ ಕನಸು ಬೇರೆ. ವೃತ್ತಿಗೆ ಪ್ರವೃತ್ತಿಯನ್ನು ಜೊತೆ ಮಾಡಹೊರಟೆ. ಬರೆವಣಿಗೆಯನ್ನು ಕರ್ತವ್ಯವಾಗಿ ಕಾಣುವ ಅದಮ್ಯ ಬಯಕೆಗೆ ‘ನೂಪುರ ಭ್ರಮರಿ’ ಗೆಜ್ಜೆ ಕಟ್ಟಿತು. ಕಲೆಯ ಸೋಂಕಿಲ್ಲದೆ ಇರಲಾರದಾದ ನನಗೆ ಕಲೆಯನ್ನೇ ಕನಸಿನಲ್ಲೂ ಧ್ಯಾನಿಸುವ ಪತ್ರಿಕೋದ್ಯೋಗ. ನಾನೇ ಸಾರಥಿಯಾದುದು ಹೆಮ್ಮೆ ಕೂಡಾ. ಸವಾಲುಗಳೂ ಸಾಕಷ್ಟಿದ್ದವಾದರೂ, ಸಾಹಸದಿಂದಲೇ ಆರಂಭಿಸಿದ ‘ನೂಪುರ ಭ್ರಮರಿ’ ಮೊದಲು ಕಣ್ಣುಬಿಟ್ಟದ್ದು ಪ್ರಿಂಟ್ ಔಟ್-ಜೆರಾಕ್ಸ್ ಪ್ರತಿಯಾಗಿಯೇ. ಸಂಭಮದಿಂದಲೇ ಸ್ವಂತ ಖರ್ಚಿನಲ್ಲಿ ಕಾಪಿಗಳನ್ನು ಮಾಡಿಸಿ ಗೊತ್ತಿದ್ದ ಎಲ್ಲಾ ಕಲಾಹೃದಯಕ್ಕೂ ಉಚಿತವಾಗಿ ಹಂಚಲು ಪ್ರಾರಂಭಿಸಿದ್ದೆ. ವರುಷಗಳೊಂದಷ್ಟರ ಸತತ ಶ್ರಮ, ಸಮಾನಹೃದಯಿಗಳ ಬೆಂಬಲ ಸಿದ್ಧಿ ಮತ್ತು ಪ್ರಸಿದ್ಧಿಯ ಒಂದೊಂದೇ ಮೆಟ್ಟಿಲುಗಳನ್ನು ಕ್ರಮಿಸತೊಡಗಿತ್ತು. ಆದರೂ ಮನಸ್ಸಿಗೆ ನೆಮ್ಮದಿ ಸಿಕ್ಕಿರಲಿಲ್ಲ.

ದೇಶದ ಆತ್ಮವೇ ಕಲೆ-ಸಂಸ್ಕೃತಿಯ ಭಾವಜೀವಿಕೆಗಳಲ್ಲಿದೆ ಎಂಬುದು ನನ್ನ ಸ್ಪಷ್ಟ ನಿಲುವು. ಅಭಿನಯ ನನ್ನೊಳಗಿನ ಹಸಿವು. ಭಾವಪ್ರಪಂಚದ ಎಲ್ಲಾ ಬಗೆಯ ವಿಭಾವ-ಸಂಚಾರಿಗಳೂ ನನಗೆ ಪರಮಾಪ್ತ. ಎಲ್ಲವನ್ನೂ ಉತ್ಕಟವಾಗಿ ಅನುಭವಿಸಿ ಅದು ಕೊಡುವ ಅನುಭಾವಗಳಲ್ಲಿ ಮೀಯುವುದೇ ನನ್ನ ಸುಖ. ಆದರೆ ಬಾಲ್ಯದಿಂದಲೂ ಸರಿಯಾದ ಗುರು ಸಿಗದೆ ಅಂಡಲೆದ ದಾರಿ. ಕಲಾಕ್ಷೇತ್ರದಲ್ಲೂ ವಿರೋಧಭಾಸಗಳಿಲ್ಲದಿದ್ದಾವೆಯೇ? ಹುಳುಕುಗಳು ಎಲ್ಲಿಲ್ಲ? ಅದಕ್ಕಾಗಿ ಅನುಭವವೇ ಗುರುವಾಯಿತು. ಅನುಭವಿಗಳ ಹಿತವಚನಗಳು ದಾರಿ ಮಾಡಿಕೊಟ್ಟವು. ನೃತ್ಯ ಸ್ನಾತಕೋತ್ತರ ಪದವಿಯ ಬೆನ್ನು ಹತ್ತಿ ಪಡೆದೆ. ಎರಡೂ ಕ್ಷೇತ್ರವನ್ನೂ ಸಮನ್ವೀಕರಿಸಿದ ಪಿ‌ಎಚ್‌ಡಿ ವ್ಯಾಸಂಗ. ಕೆಲವು ಸಂಶೋಧನೆಯ ಕೆಲಸಗಳು ಅರಸಿಬರತೊಡಗಿದ್ದವು. ಸ್ವಂತ ಶೋಧಕೃತಿ ‘ಮುದ್ರಾರ್ಣವ’ ಬೆಳಕು ಕಂಡಿತ್ತು. ನನ್ನೊಳಗೆ ಶೋಧಕಿ ಇದ್ದಾಳೆ ಎಂಬುದು ಅಷ್ಟರಲ್ಲಾಗಲೇ ಸ್ಪಷ್ಟವಾಗತೊಡಗಿತ್ತು.

ವೃತ್ತಿಪರ ನರ್ತಕಿಯಾಗುವುದು ನನಗೆ ಕಷ್ಟದ ಕೆಲಸವಾಗಿರಲಿಲ್ಲ. ಅಂತೆಯೇ ಪತ್ರಿಕೋದ್ಯಮಿಯೋ, ಉದ್ಯೋಗಿಯೋ ಆಗುವುದೂ ಕೂಡಾ. ಆದರೆ ನೃತ್ಯ ಕಲಿಸುವುದರಲ್ಲಿ, ವಿದ್ಯಾರ್ಥಿಗಳನ್ನು ಎಕ್ಸಾಮಿಗೆ ಕೂರಿಸುವುದೋ, ಪ್ರದರ್ಶನಗಳನ್ನು ನೀಡಿಸುವುದರಲ್ಲೋ ನನಗೆ ಒಲವಿಲ್ಲ. ಇಂದಿಗೆ ನೃತ್ಯೋದ್ಯೋಗ ಕಂಡ ಅಪಸವ್ಯಗಳ ಅರಿವಿದ್ದ ನನಗೆ ವಿದ್ಯೆಯನ್ನು ಮಾರಬಾರದೆಂಬುದು ಆದರ್ಶ. ಯಾವ ಹೊತ್ತಿಗೂ ಅದು ನನ್ನಿಂದಾಗದ ಕೆಲಸ. ಇನ್ನು ಮತ್ತೊಬ್ಬರ ರಿಪೋರ್ಟು ಬರೆಯುವ, ಬದಲಾವಣೆ ತರುತ್ತಿದ್ದೇನೆಂಬ ಭ್ರಮೆಯಲ್ಲಿ ಸ್ಟೋರಿಗಳನ್ನು ಛಾಪಿಸುವ ಪತ್ರಿಕೋದ್ಯಮದ ವೃತ್ತಿಯೂ ನನ್ನಿಂದ ಬಹುದೂರ ನಡೆದಾಗಿತ್ತು. ಉಪನ್ಯಾಸಕಿಯಾಗಿಯೂ, ಸಂಘಟಕಿಯಾಗಿ, ನಿರೂಪಕಿಯಾಗಿ, ನಿರ್ದೇಶಕಿಯಾಗಿಯೂ ನನ್ನಳತೆಯನ್ನು ಪರೀಕ್ಷೆ ಮಾಡಿಕೊಂಡೆ. ಎಲ್ಲದರಲ್ಲೂ ಸೈ ಎನಿಸಿಕೊಂಡೆ. ಆದರೂ ನನ್ನೊಳಗಿನ ಹುಡುಕಾಟಕ್ಕೆ ಒಂದು ಸ್ಟ್ರೀಮ್ ಲೈನ್ ದೊರೆತಿರಲಿಲ್ಲ. ‘ಬಾಲಪ್ರತಿಭೆ’ಯಾಗಿದ್ದಾಗೇನೋ ಸರಿ, ಆದರೆ ನಂತರಕ್ಕೂ ಬರಿಯ ಹೊಗಳಿಕೆಗಳಿಂದ ತೃಪ್ತಗೊಂಡೀತೆಂದರೆ ಹೇಗೆ? ಪ್ರಶಂಸೆಯ ಹಿಂದಿನ ಯತಾರ್ಥ ಅರಸುತ್ತಿತ್ತು ಬುದ್ಧಿ. ಆಗಲೇ ವರವಾಗಿ ದಕ್ಕಿದ್ದು ಇವೆಲ್ಲದನ್ನೂ ಸಮತೂಕದಲ್ಲಿ ದಾರಿಗಾಣಿಸಿಕೊಡುವ ಶೋಧನೆಯ ನಿಕಷ ! ಪ್ರತಿ ಹೆಜ್ಜೆಗೂ ಬರೆಹಗಳ, ಶೋಧನೆಯ ಹೊಸ ಪ್ರಭಾವಳಿ ದಕ್ಕಿದಾಗಲೆಲ್ಲಾ ಪುಳಕ. ಒಂದನ್ನೊಂದು ಹೊಂದಿಸಿಕೊಂಡು ಅನ್ವಯಿಸಿ ಅನುನಯಿಸಿಕೊಳ್ಳ್ಳುವ ಜಾಣ್ಮೆ ಇದ್ದರೆ ಎಷ್ಟೇ ದೋಣಿಗಳಾದರೂ ಕಾಲು ಬಿಡಲು ಅಡ್ಡಿಯಿಲ್ಲವೆನಿಸಿದ್ದು ಆಗಲೇ.

ಇಂದಿನ ಕಾಲಕ್ಕಂತೂ ಪತ್ರಿಕೆ ಮಾಡುವುದೆಂದರೆ ಮೂಲತಃ ಅದು ಧ್ಯೇಯೋದ್ದೇಶಕ್ಕಿಂತ ಹೆಚ್ಚಾಗಿ ಆರ್ಥಿಕವಾಗಿಯೋ, ಸಾಮಾಜಿಕವಾಗಿಯೋ ಲಾಭ ಮಾಡಿಕೊಳ್ಳುವ ಇಲ್ಲವೇ ಗತ್ತುಗಾರಿಕೆಯ ಒಂದು ಖಾಯಿಲೆ. ಲಾಭ ಕೈಬಿಡುತ್ತಿದೆಯೆಂದಾಕ್ಷಣ ತಾವೇ ಜತನದಿಂದ ಪಾಲಿಸಿದ ಕೂಸನ್ನು ಬೀದಿಪಾಲು ಮಾಡುವವರೇ ಹೆಚ್ಚು. ಆದರೆ ಅದ್ಯಾಕೋ ಪತ್ರಿಕೆ ಮಾಡುವುದು ನನಗೆ ಲಾಭದಾಯಕವಾದ ವಿಷಯವೆನಿಸಲೇ ಇಲ್ಲ. ಅದು ಸಾಂಸ್ಕೃತಿಕ ಪತ್ರಿಕೋದ್ಯಮದ ಮಿತಿಯೂ ಹೌದು ಎಂದೇ ಒಪ್ಪಿಕೊಳ್ಳುವ. ಆದರೆ ಗಿಮಿಕ್‌ಗಳನ್ನು ಮಾಡುವ ಮನಸ್ಸಿಲ್ಲದ, ಜಾಹೀರಾತುಗಳತ್ತ ಕೈಚಾಚುವ ಕಸುಬುದಾರಿಕೆಯೂ ಮೈ ಪರಚಿಕೊಂಡಂತೆನಿಸುವ ನನಗೆ ಪತ್ರಿಕೆ ರೂಪಿಸುವುದು ಇವೆಲ್ಲದಕ್ಕಿಂತ ಮಿಗಿಲಾದ ಒಂದು ಬಿಡುಗಡೆಯ ಅನುಭವವಾಗಿಯೇ ಕಂಡಿದೆ. ಇನ್ನು ಕಲಾಪತ್ರಿಕೆಯಲ್ಲಿಯೂ ಕಲಾವಿಷಯಕವಾದ ಲಾಭ ಮಾಡಿಕೊಳ್ಳಬಹುದಾದ ಸಾಧ್ಯತೆಗಳಿದ್ದರೆ ಅದರತ್ತ ಯೋಚಿಸಲೂ ಅದ್ಯಾಕೋ ರೇಜಿಗೆ. ಆತ್ಮಾವಲೋಕನ ಮಾಡಿಕೊಳ್ಳುವ ಹುಚ್ಚಿರುವ ನನಗೆ, ನನ್ನ ಮೇಲೆಯೇ ಮುಂದೊಮ್ಮೆ ಮುಜುಗರಪಟ್ಟುಕೊಳ್ಳುವಂತಾದರೆ ಎಂಬ ಸಣ್ಣ ಅನುಮಾನವೂ ಬೇಳೆ ಬೇಯಿಸಿಕೊಳ್ಳುವ ಕಿಚ್ಚು ಹಚ್ಚದು. ಇನ್ನು ಕಲಾಸಾಮ್ರಾಜ್ಯವನ್ನೇ ಸುಧಾರಿಸುತ್ತೇನೆಂಬ ಧಾಢಸೀತನ ಮೊದಮೊದಲಿಗಿದ್ದೀತೋ ಏನೋ ! ಆದರೆ ಬರಬರುತ್ತಾ ನಮ್ಮನ್ನು ನಾವು ಮೀರಿಕೊಳ್ಳುವ ಆತ್ಮೋದ್ಧಾರವೇ ಬದುಕಿನ ಮೂಲಮಂತ್ರ ಎಂಬ ಪರಮಸತ್ಯ ಎಟುಕಿದಂದಲ್ಲಿನಿಂದ ಅಧ್ಯಯನ, ಬರೆವಣಿಗೆಗಳಲ್ಲಿ ಸ್ವಾತ್ಮಾನಂದದ ರಸಸೃಷ್ಟಿಯ ದರ್ಶನವಾಗತೊಡಗಿತು. ಈಗೆಲ್ಲಾ ಯಾವುದರಲ್ಲಿ ನಾನು ನಾನಾಗಲಾಗಲಿಲ್ಲವೋ ಅದನ್ನೆಲ್ಲವನ್ನೂ ನನ್ನಲ್ಲಿ ತುಂಬಿಸುತ್ತಾ ನಾನು ನಾನಾಗೇ ಇರುವಂತೆ ಮಾಡುತ್ತದೆ ಅಕ್ಷರ ಜಾತ್ರೆ. ಅಲ್ಲಿರುವುದು ಹಗುರಾಗುವ ಹಿಗ್ಗೇ. ಒಮ್ಮೊಮ್ಮೆ ಇಣುಕುವ ಖೇದಗಳಿಗೂ ಸಂತೈಕೆ ನೀಡುವುದೇ ಬರೆಹ. ನನಗೆ ನಾನೇ ರಾಣಿ, ನನಗೆ ನಾನೇ ಸೇವಕಿ.

ಹಾಗಾಗಿಯೇ ಹಲವರು ನೂರೆಂಟು ಬಗೆಯಾಗಿ ಕುಟುಕಿದರೂ ಅದೊಂದು ನನಗೆ ಜೀವನಧರ್ಮಯಜ್ಞ. ಎಲ್ಲ ಲೌಕಿಕ ಲಾಭಕ್ಕಿಂತ ಹಿರಿದಾದ ಚಿತ್ತಪ್ರಕಾಶ. ನಮ್ಮ ಮನೆಯ ಮತ್ತೊಬ್ಬ ಬಳಗದಂತೆ ಹೇಗೋ, ಹಾಗೆ ಇದ್ದಾಳೆ ‘ನೂಪುರ ಭ್ರಮರಿ’. ಇಂದಿಗೆ ಹತ್ತು ವರುಷ ದಾಟಿದ್ದಾಳೆ ಈ ಕಿಶೋರಿ. ಮಗುವಾಗುತ್ತಲೇ ನನ್ನನ್ನು ಮಾಗಿಸಿದ ಧನ್ಯತೆ ದಕ್ಕುವಂತೆ ಮಾಡಿದ ತಾಯಿಯಾಕೆ. ಪ್ರಶಂಸೆಗಳ ಬುತ್ತಿಯನ್ನೇ ಬಿಚ್ಚಿಟ್ಟು ಮನ್ನಣೆ ಆತ್ಮವನ್ನೇ ತಿನ್ನುವುದಂತೆ ಎಂಬ ಎಚ್ಚರಿಕೆಯನ್ನೂ ಕೊಟ್ಟ ಗುರುವೂ ಆಕೆಯೇ! ನನ್ನೊಳಗನ್ನಷ್ಟೇ ಅಲ್ಲಾ, ಕಲಾಸಾಮ್ರಾಜ್ಯವನ್ನೇ ಶೋಧಿಸಿ ಬಗೆದು ಹರಹಿ ಮುಂದಿಡುವ ಸಖಿ. ಹಾಗಾಗಿಯೇ ನಾನೇ ನನ್ನನ್ನು ಆಕೆಗೆ ಕಟ್ಟಿಹಾಕಿಕೊಂಡಿದ್ದೇನೆ. ಪ್ರತೀ ಸಂಚಿಕೆಯನ್ನು ಹೊರತಂದಾಗಲೂ ಆಗಷ್ಟೇ ಹೆರಿಗೆಯಾಯಿತೆನಿಸುವ ಭಾವ. ಅಂಥಾ ದೊಡ್ಡಮಟ್ಟದ ಓದುಗರಸಂಖ್ಯೆ ನಮ್ಮದಲ್ಲವಾದರೂ, ಹೊರಪ್ರಪಂಚಕ್ಕೆ ಕೈಸುಟ್ಟುಕೊಂಡದ್ದೇ ಹೆಚ್ಚು ಎಂದನಿಸಿದರೂ ಈ ಅನುಭವವಿಶೇಷವನ್ನು ತಪ್ಪಿಸಿಕೊಳ್ಳಲು ನನ್ನಿಂದಾಗದು. ಹೀಗೆ, ಒಂದಷ್ಟು ವರುಷ ನೃತ್ಯ ಮಾಡದೇ ಇದ್ದರೂ ನರ್ತನಲೋಕವನ್ನು ಆವಾಹಿಸಿ ಬರೆವಣಿಗೆಯ ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದುಹೋಗುವಂತೆ ಮಾಡಿದ ಫಲವೋ ಏನೋ, ನನ್ನದಲ್ಲದ ಬೇರೆ ಬೇರೆ ಕ್ಷೇತ್ರಗಳಲ್ಲೂ ಈಗ ಬೀಡುಬೀಸಾಗಿ ಭಾವಯಾನ ಮಾಡುತ್ತೇನೆ. ಒಳ್ಳೆಯ ವಿಮರ್ಶಕಿ, ಮೇಲಾಗಿ ಪ್ರೇಕ್ಷಕಿಯಾಗಿ, ತರ-ತಮ ವಿವೇಕ, ಔಚಿತ್ಯದ ಪಾಕದಲ್ಲಿ ಮೀಯುತ್ತಿದ್ದೇನೆ. ತೆಗೆದಿಟ್ಟ ಗೆಜ್ಜೆಯನ್ನು ಮತ್ತೆ ಕಟ್ಟಿಸಿದೆ, ಕವಿಯಾಗಿಸಿದೆ. ಬಗೆಬಗೆಯ ಆಯಕಟ್ಟಿನ ಪ್ರಬಂಧ-ಗೋಷ್ಠಿ-ಕೃತಿರಚನೆಗಳೂ ಸಾಧ್ಯವಾಗಿದ್ದು, ಎಡಿಟಿಂಗ್ ಕತ್ತರಿಯ ಕೊನೆಗೆ ತಕ್ಕಮಟ್ಟಿಗೆ ಒಳ್ಳೆಯ ಸಂಪಾದಕಿಯೂ ಆಗಿದ್ದು ಹೀಗೆಯೇ.

ಕಾಲದೋಟಕ್ಕೆ ತಕ್ಕಂತೆ ಪತ್ರಿಕೆಗೆ ಅಚ್ಚಿನ ಪ್ರಕಟಣೆಯನ್ನು ಬದಿಗಿರಿಸಿ ಪತ್ರಿಕೆಯನ್ನು ಅದಾಗಲೇ ಆನ್ಲೈನ್‌ನನ್ನು ಅಪ್ಪಿಕೊಂಡಾಗಿದೆ. ಈ ಸಂಚಿಕೆಯ ನಂತರಕ್ಕಂತೂ ಪಿಡಿ‌ಎಫ್ ಆವೃತ್ತಿಯೂ ನಿಲುಗಡೆಗೆ ಬಂದು ಪೂರ್ಣ ಆನ್‌ಲೈನ್ ಪ್ರಕಟಣೆಯೇ ಭವಿಷ್ಯದಲ್ಲಿ ಕಾಣಲಿದ್ದೇವೆ. ಆದರೂ ಈ ಹೊತ್ತಿಗೆ ಸಾಂಕ್ರಾಮಿಕವಾದ ಸಾಮಾಜಿಕ ಜಾಲತಾಣಗಳ ರದ್ದಿಯ ಸೋಂಕಿಲ್ಲ. ಜಾಳಿಲ್ಲ. ಗೋಳಿಲ್ಲ, ಕಂಡಕಂಡದ್ದನ್ನೆಲ್ಲಾ ಬರೆಯಬೇಕೆನ್ನುವ ತೆವಲಿಲ್ಲ. ಮತ್ತೊಬ್ಬರ ಅನುಮತಿಗಂಜಿಯೇ ಗಂಜಿ ಕುಡಿಯಬೇಕಾದ ಪಾರತಂತ್ರ್ಯವಿಲ್ಲ. ಪ್ರತೀ ಸಂಚಿಕೆಯನ್ನೂ ಕಣ್ಣಿಗೆ ಎಣ್ಣೇ ಬಿಟ್ಟೇ ರೂಪಿಸುತ್ತೇನೆ ಎಂಬ ಹಟ. ‘ಓಹ್, ನೂಪುರ ಭ್ರಮರಿಗೆ ಬರೆಯಬೇಕೆಂದರೆ ಜವಾಬ್ದಾರಿ ಬೇಕು, ಪ್ರಕಟವಾಗುವುದಿದ್ದರೆ ಮೌಲ್ಯವಿರಲೇಬೇಕು’ ಎನ್ನುವ ಮಟ್ಟಿಗೆ ವೈದುಷ್ಯವಿರುವ ವಿದ್ವಾಂಸರ ನಂಬಿಕೆಗೆ ಶತ ಪ್ರತಿಶತ ಅರ್ಹ. ಒಬ್ಬೊಬ್ಬ ಓದುಗನೂ ಸಾವಿರ ಓದುಗರಿಗೆ ಸಮ. ನನಗಷ್ಟೇ ಅಲ್ಲ, ಕಲೆಯನ್ನೋ- ಕಲಾಬರೆಹವನ್ನೋ ಧ್ಯಾನಿಸುವ ಸಹೃದಯರ ಸರಕುಗಳಿಗೆ ಇದರಲ್ಲಿ ಸೂರು ಸಿಕ್ಕಿದೆ, ಅವರ ಕಸುವಿನ ಸಾಣೆ ಹಿಡಿದಿದೆ ಎಂಬ ಧನ್ಯತೆ. ಅಂತೂ ಇಂದಿನ ಕಾಲಕ್ಕೆ ನಗಣ್ಯವೇ ಆಗಿಹೋಗಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೆ ಮುಂದೊಮ್ಮೆ ಇತಿಹಾಸ ಬರೆಯುವುದಿದ್ದರೆ ಅದರೊಳಗೆ ಖಾಯಂ ಸೀಟೊಂದು ಉಂಟು ಎಂಬ ಖಾತ್ರಿಯಿದೆ. ಆತ್ಯಂತಿಕವಾಗಿ ಅನುಭವಿಸಿದ ನಂತರಕ್ಕೆ ವೈರಾಗ್ಯ ದರ್ಶನವಾಗುವ ಖಯಾಲಿ ಭವಿಷ್ಯವನ್ನು ಪ್ರಶ್ನಿಸಬಹುದೇನೋ ! ಇರಲಿ, ಆದರೆ ಈಗಾಗಲೇ ತೇಯಿಸಿಕೊಂಡ ಬೌದ್ಧಿಕ-ಮಾನಸಿಕ-ನೈತಿಕ ಗಂಧದ ಕೊರಡೂ ಬದುಕಿನುದ್ದಕ್ಕೂ ಸುವಾಸನೆಯನ್ನಷ್ಟೇ ಬೀರುವುದೆಂಬ ನಂಬಿಕೆಯೂ ಇದೆ. ಸಾವಿರ ಜನರು ಒಂದು ದಿನ ಕುಳಿತು ಓದುವ ಸಾಹಿತ್ಯಕ್ಕಿಂತ ಹತ್ತು ಹತ್ತೇ ಜನರು ಸಾವಿರ ವರ್ಷ ಓದುವಂತಾದರೆ ಅದಲ್ಲವೇ ಸಾರ್ಥಕತೆ?

ನಾನೇನು ಅಂಥ ದೊಡ್ಡ, ಎಲ್ಲರನ್ನೂ ತನ್ಮಯತೆಯಲ್ಲಿ ಓದಿಸಿಕೊಳ್ಳುವ, ಆಕರ್ಷಕ ಶೈಲಿಯ ಬರೆಹಗಾರ್ತಿಯಲ್ಲ. ಆದರೆ ಬರೆದಂತೆಲ್ಲಾ ಖಾಲಿಯಾಗುತ್ತಾ, ಮತ್ತೆ ಮತ್ತೆ ತುಂಬಿಕೊಳ್ಳುತ್ತಾ, ಮತ್ತೊಮ್ಮೆ ಅವುಗಳನ್ನೇ ಓದಿಕೊಳ್ಳುವಾಗ ಹೊಸಬಳಾಗುವುದು ನನ್ನ ಇಷ್ಟ. ಜ್ಞಾನಿಹೆಮ್ಮರಗಳನ್ನು ಕಣ್ಣರಳಿಸಿ ನೋಡಿ ಬೆರಗುಗೊಂಡು, ಅವುಗಳ ಬೀಜ ನೆಲದೊಳಗೆ ಬಿದ್ದರೆ ಅದರ ಹೊಸ ಮೊಳಕೆಯಾಗುವಲ್ಲಿ ಮನಸಂತುಷ್ಟ. ಯಾವುದೇ ಕ್ಷೇತ್ರದ ಆಳಚಿಂತನೆಯೂ ಅದರ ಬುಡವನ್ನೇ ಗಟ್ಟಿ ಮಾಡಿಸುವುದಷ್ಟೇ ಅಲ್ಲ, ನಮ್ಮ ಬದುಕಿನ ಉಳಿದ ವಿಷಯಗಳಿಗೂ ಸಹಚಾರಿಯಾಗಿ ಸಲಹುತ್ತದೆ ಎಂಬುದು ನನ್ನ ಆದ್ಯ ನಂಬಿಕೆ. ಬರವಣಿಗೆ ನನ್ನ ಪಾಲಿಗೆ ಆನಂದ ನರ್ತನ. ಭಾವ-ಭಾಷೆ-ಭಾಂಧವ್ಯ ಬೆಸೆಯುವ ಧ್ಯಾನ. ಧಾವಂತ-ಅವಸರಕ್ಕೆ ಬೀಳುವ ಮನಸ್ಸು ಹುಚ್ಚು ಕುದುರೆಯಂತೆ ಓಡದೆ ಹೆಚ್ಚಿನ ಉದ್ವೇಗ, ಕಿರಿಕಿರಿ ತಾಳಿಕೊಳ್ಳದೆಯೂ ಎಲ್ಲಾ ಬಗೆಯ ಭಾವಗಳನ್ನು ಆತ್ಯಂತಿಕವಾಗಿ ಕಾಣಬೇಕೆಂದರೆ ಇರುವ ಸಂಯಮದ ಸತ್ತ್ವೋದ್ಯೋಗ. ಎಲ್ಲವನ್ನೂ ಒಂದೇ ಗುಕ್ಕಿಗೆ ಕಾಣುವ ನನ್ನ ಹಟವೇ ಒಮ್ಮೊಮ್ಮೆ ತೊಡಕಾದರೂ ಆ ಅನುಭವವೇ ಪರಮಾದರ್ಶವಾಗಿ ಅನುಕೂಲಗಳನ್ನೂ ಕೊಟ್ಟಿದೆ. ಶೋಧಪ್ರಪಂಚದಲ್ಲಿ ಹಕ್ಕಿಯಂತೆ ಹಾರಾಡಿಸುತ್ತಿದೆ.

ಹಾಗೆ ನೋಡಿದರೆ ಪ್ರತಿಯೊಂದು ಅವಮಾನ, ಹಂಗಿಸುವಿಕೆ, ವಿದ್ರೋಹಗಳೇ ನನ್ನೆಲ್ಲಾ ಕೆಲಸಗಳ ಮೂಲಶಕ್ತಿ. ಒಂದು ನಿರುತ್ಸಾಹ, ಒಂದು ಖಿನ್ನತೆ, ಒಂದು ಅವಮಾನ, ಒಂದು ತಾತ್ಸಾರ ಬಡಿಯುವ ತನಕವಷ್ಟೇ. ನಂತರ ಅದು ರಜಸ್ಸಿನಿಂದ ಸಾಗುತ್ತಾ ಸಾತ್ತ್ವಿಕದ ಗುರಿಯಲ್ಲಿ ಪರ್ಯಾವಸಾನವಾಗುವಲ್ಲಿಯವರೆಗೆ ತಿಂದದ್ದು ತಿಂದದ್ದಲ್ಲ, ಉಂಡದ್ದು ಉಂಡದ್ದಲ್ಲ. ಒಟ್ಟಿನಲ್ಲಿ ಬದುಕಿನ ತುಂಬಾ ಸಾತ್ತ್ವಿಕ ರೋಚಕತೆ ಆಗಾಗ ಪುಟಿಯುತ್ತಲೇ ಇರಬೆಕು. ಖಾಲಿತನದಿಂದ ಎದ್ದು ಬಂದ ಒಂದು ಹುಮ್ಮಸ್ಸು ಮತ್ತೆ ಶಾಂತವಾಗಿ ನನ್ನೊಳಗಿನ ಬೋಧೆಯನ್ನು ತುಂಬುತ್ತಾ ಮತ್ತೆ ಪುನಃ ನನ್ನನ್ನೇ ಖಾಲಿಯಾಗಿಸಿ ಮತ್ತೊಂದಕ್ಕೆ ಸನ್ನದ್ಧವಾಗಿಸುವಲ್ಲಿಗೆ ಒಳಗೂ ಹೊರಗೂ ತೃಪ್ತಳು. ಆಗ ನಿಂದೆ-ಪ್ರಶಂಸೆಗಳೂ ನನ್ನ ಹೊರಗನ್ನಷ್ಟೇ ತಟ್ಟಿ ತಮ್ಮ ಪಾಡಿಗೆ ಹೊರಟುಹೋಗುತ್ತವಲ್ಲದೆ ಆಂತರ್ಯಕ್ಕೆ ಎಟುಕಿದ ಸಚ್ಚಿತ್ಸುಂದರ ಪ್ರಪಂಚವನ್ನು ಕಸಿಯದು. ರಸಾನಂದ, ತನ್ಮೂಲಕ ಒದಗುವ ನಿರ್ಮಮ ಸತ್ತ್ವವೇ ಎಲ್ಲದರ ಒಳಗಿನ ಅನನ್ಯ ಪ್ರಧಾನ ಕೇಂದ್ರ. ಅದರತ್ತಲೇ ನಮ್ಮ ನಿತ್ಯ ಪಯಣ.

Leave a Reply

*

code