ಅಂಕಣಗಳು

Subscribe


 

ಅಷ್ಟನಾಯಿಕಾ ಚಿತ್ತವೃತ್ತಿ – ಸ್ವಾಧೀನಪತಿಕೆ

Posted On: Tuesday, January 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ಮನೂಬನ.

 

ನಾಯಕನಿಗೆ ಅರ್ಪಿಸಲ್ಪಟ್ಟು; ಅವನ ಆಜ್ಞಾನುವರ್ತಿಯಾಗುತ್ತಲೇ ಆತನನ್ನು ತನ್ನ ಪ್ರೇಮದ ಸ್ವಾಧೀನವನ್ನಾಗಿಸಿಕೊಳ್ಳುವ ನಾಯಿಕೆ ಸ್ವಾಧೀನಪತಿಕೆ. ಅನುರಾಗದಿಂದ ಪತಿಯನ್ನು ಕೂಡಿ; ಒಂದು ಘಳಿಗೆಯೂ ಬಿಡಂತೆ ಆಶ್ರಯಿಸಿದ್ದು; ಅವನೊಡನೆ ಸಲ್ಲಾಪಕ್ರೀಡೆಗಳನ್ನು ನಡೆಸುತ್ತಾ ; ತನ್ನ ಅದೃಷ್ಟವನ್ನು ಕೊಂಡಾಡುತ್ತಾ, ತನ್ನ ನಾಯಕನ ಕುರಿತು ಹೆಮ್ಮೆ-ಗರ್ವಪಡುವವಳು ಈಕೆ. ಅಂತೆಯೇ ಪ್ರಿಯನನ್ನು ತನ್ನ ಅಂಗೈಯಲ್ಲಿರಿಸಿಕೊಂಡು ಆಡಿಸಿ ಆನಂದಿಸುವವಳೂ ಸ್ವಾಧೀನಪತಿಕೆಯೇ. ಈಕೆಯ ಇನಿಯ ಇವಳಿಗೆ ವಿಧೇಯ. ಲಜ್ಜೆ, ಆತ್ಮವಿಶ್ವಾಸ, ನಿರ್ಭೀತಿ, ಉಲ್ಲಾಸ, ಹುರುಪು, ಆಟೋಟ-ನೃತ್ಯಾದಿಗಳಲ್ಲಿ ಭಾಗವಹಿಸುವುದು, ಸಂತೋಷದಿಂದ ಕಾರ್ಯೋನ್ಮುಖಳಾಗುವುದು, ಪೂಜಾದಿ ಉತ್ಸವದಲ್ಲಿ ನಿರತಳಾಗುವುದು, ಜಲಕ್ರೀಡೆ, ಪುಷ್ಪಶಯ್ಯೆ, ಅಲಂಕಾರ, ಆರಾಧನೆ, ಶೃಂಗಾರ, ವನಸಂಚಾರ.., ಹೀಗೆ ಹತ್ತು ಹಲವು ಆನಂದದ ಚರ್ಯೆಗಳು, ಅನುಭಾವ-ವಿಭಾವ-ಸಂಚಾರಿಭಾವಗಳು ಈಕೆಯವು. ಒಟ್ಟಿನಲ್ಲಿ ಹಲವು ಅವಸ್ಥೆಗಳನ್ನು ದಾಟಿಬಂದು ಕಲಹವಾದರೂ ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ ಎಂಬಂತೆ ಸಖ್ಯ ಕುದುರುವಲ್ಲಿಗೆ ಸ್ವಾಧೀನಪತಿಕೆಯ ದರ್ಶನವಾಗುತ್ತದೆ.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ.

ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿದ್ದು; ಸುಮಾರು ೫೦,೨೨೦ರಷ್ಟು ನಾಯಿಕಾಬೇಧಗಳಿವೆ ಎಂದಿದ್ದಾರೆ ಪ್ರಾಜ್ಞರು!! ಒಟ್ಟಿನಲ್ಲಿ ನಾಯಿಕೆಯ ಸಂಸ್ಕಾರ-ವಯಸ್ಸು-ಸಾಮಾಜಿಕಸ್ಥಾನಮಾನ-ಸೌಶೀಲ್ಯದಿಂದ ಆಕೆಯ ವರ್ತನೆ ಮೃದುವೋ, ಕಟುವೋ, ಮಧ್ಯಮವೋ ಎಂಬುದು ನಿರ್ಧಾರವಾಗುತ್ತದೆ.

ಉದಾಹರಣೆಗೆ : ಉತ್ತಮ ಸ್ವಾಧೀನಪತಿಕೆಯು ಪ್ರಣಯ ಕುಂದಿಹೋದರೂ ಮರುಘಳಿಗೆ ಸಹಜವಾಗಿರುವವಳಾದರೆ; ಮಧ್ಯಮಳು ಕಲಹದ ಕಾರಣವನ್ನು ಕ್ಷಿಪ್ರವಾಗಿ ಅರಿತು ಪ್ರೇಮಿಯನ್ನು ಸಮಾಧಾನಪಡಿಸುತ್ತಾಳೆ. ಅಧಮಳು ಪ್ರೇಮಿಯೇ ತನ್ನನ್ನು ಸಮಾಧಾನಪಡಿಸಲು ಕಾದಿರುತ್ತಾಳೆ. ಅಂತೆಯೇ ಸ್ವೀಯಳಲ್ಲಿ ಉತ್ತಮ ಸ್ವಾಧೀನಪತಿಕೆಯು ಸಾಯುತವತನಕವೂ ಪತಿಗೆ ಅನುಸಾರಳಾಗಿದ್ದರೆ; ಮಧ್ಯಮಳು ಪತಿಯ ಮನಸ್ಸು ಅನುಕೂಲವಾಗಿದ್ದರೆ ಅದರ ಅನುಸಾರವಾಗಿ ನಡೆದುಕೊಳ್ಳುವವಳಾಗಿರುತ್ತಾಳೆ. ಅಧಮಳು ಮನಸ್ಸಿನ ಬದಲಾವಣೆಯಿದ್ದರೂ ನಾಯಕನ ಬಳಿ ಇರುವವಳು. ಅದೇ ಪರಕೀಯಳಲ್ಲಿ ಉತ್ತಮಳು ತನ್ನ ಪ್ರೇಮಿಯನ್ನು ರಹಸ್ಯವಾಗಿರಿಸಿ ಕೊನೆಯ ತನಕವೂ ಪ್ರೇಮಿಯನ್ನು ಹೊಂದುವವಳು; ಮಧ್ಯಮಳು ತನ್ನ ಪ್ರೇಮಪ್ರಸಂಗ ಊರ ಮಾತಾಗುವಂತೆ ಮಾಡುತ್ತಾಳೆ. ಅಧಮಳಲ್ಲಿ ಚಪಲತೆ ಹೆಚ್ಚು. ಅಂತೆಯೇ ಸಾಮಾನ್ಯೆಯನ್ನೂ ವರ್ಗೀಕರಿಸಬಹುದು.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣದ ಸಮ್ಮಿಶ್ರಣ ಹೊಂದಿರುವ ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳು. ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಜನಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ಮೇದಿನಿ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಕಳೆದ ಒಂದು ವರುಷದಿಂದ ನಿಮ್ಮ ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರಕ್ಕೆ ವೇದಿಕೆಯಾಗಿರುವ ಈ ಅಷ್ಟನಾಯಿಕಾ ಚಿತ್ತವೃತ್ತಿ ಈ ಸಂಚಿಕೆಗೆ ಸಮಾಪ್ತಿಯಾಗುತ್ತಲಿದೆ. ಸಹಜ ಜೀವನಾನುಭವನ್ನೂ, ಆನಂದದ ನೆಲೆಯನ್ನೂ ಕಲೆಯ ಸಂಸ್ಪರ್ಶದೊಂದಿಗೆ ನೀಡುತ್ತಲಿದೆ. ಪತ್ರಿಕೆಯ ಎಂಟು ಸಂಚಿಕೆಗಳುದ್ದಕ್ಕೂ ಈ ಅಂಕಣ ಬಹಳಷ್ಟು ಮಂದಿಗೆ ಅಪ್ಯಾಯಮಾನವಾಗಿತ್ತೆನ್ನುವುದಕ್ಕೆ ; ದಕ್ಕಿರುವ ಪ್ರತಿಕ್ರಿಯೆಗಳೇ ಸಾಕ್ಷಿ. ಈ ಹಿನ್ನೆಲೆಯಲ್ಲಿ ಈ ಅಂಕಣದ ಯಶಸ್ಸಿಗೆ ಸಹಕರಿಸಿದ ಹಿರಿಯ ವಿದ್ವನ್ಮಣಿಗಳಿಗೆ ಅಭಾರಿಯಾಗಿರುತ್ತದೆ ನೂಪುರದ ಬಳಗ.

ಪ್ರತೀ ನಾಯಿಕೆಗೂ ತನ್ನದೇ ಆದ ಭಾವಾನುಭಾವ ಸ್ಥಿತಿ ಸನ್ನಿವೇಶಗಳಿದ್ದರೂ ಅವೆಲ್ಲವೂ ಒಂದೇ ತಂತುವಿಗೆ ಹೆಣೆದವು ಎಂಬುದನ್ನು ಪ್ರತೀ ಸಂಚಿಕೆಗೂ ಕಂಡಿದ್ದೀರಿ. ಹಾಂ, ಹಾಗಾದರೆ ಮುಂದಿನ ಸಂಚಿಕೆಯಿಂದ ಮತ್ತಿನ್ನೇನು ಎಂದು ಆಲೋಚಿಸುತ್ತೀದ್ದೀರಾ? ಇಂತಹ ಅಷ್ಟನಾಯಿಕೆಯರ ಅಭಿವ್ಯಕ್ತಿಗೆ ಸರಿಸಮನೆಂಬಂತೆ ನಾಯಕರ ಗುಣಾವಗುಣಗಳ ಕುರಿತ ಕಾವ್ಯ, ವಿವರ-ವಿಶ್ಲೇಷಣೆಗಳು ನೂಪುರವನ್ನು ಸಮೃದ್ಧವನ್ನಾಗಿಸಲಿವೆ. ಇಂದಿನ ಸಂಚಿಕೆಯಲ್ಲಿ ನಾಯಿಕೆಯು ನಾಯಕನನ್ನು ಸೇರಿ ಸ್ವಾಧೀನಪತಿಕೆಯಾಗಲಿದ್ದಾಳೆ. ಆದರೆ ಮುಂದಿನ ಹಂತಕ್ಕೆ ನಾಯಿಕೆಯು ಅನುಭವಿಸಿದ ಭಾವಾನುಭಾವ ವಿಭಾವಗಳ ಸುಳಿಯಲ್ಲಿ ನಾಯಕ ಮಿಂದೇಳಲಿದ್ದಾನೆ.

ಸಾಮಾನ್ಯವಾಗಿ ನಾಯಕರ ಅಭಿವ್ಯಕ್ತಿ ನರ್ತನದಲ್ಲಿ ಅಷ್ಟು ಸುಸ್ಪಷ್ಟವಾಗಿ ತೋರಿಬರುವುದು ಕಡಿಮೆಯೇ ಸರಿ. ಆದ್ದರಿಂದ ಪತ್ರಿಕೆಯು ಈ ನಿಟ್ಟಿನಲ್ಲಿ ನರ್ತನದಲ್ಲಿ ಪುರುಷಾಭಿವ್ಯಕ್ತಿಗೆ ಹೆಚ್ಚಿನ ಪೋಷಣೆ ಮತ್ತು ವಿಸ್ತಾರವನ್ನಿತ್ತು ದೀವಟಿಗೆಯಾಗುವುದರೊಂದಿಗೆ ಪುರುಷ ಸಹಜ ಭಾವನೆಗಳಿಗೂ ಕನ್ನಡಿ ಹಿಡಿಯಲು ಪ್ರಯತ್ನಿಸಲಿದೆ. ಇದಕ್ಕೆ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿರುವ ಶತಾವಧಾನಿ ಡಾ. ಆರ್. ಗಣೇಶರೇ ಮುಂದಿನ ಲಲಿತಲಹರಿಗೂ ಹೂರಣವನ್ನಿತ್ತಿದ್ದಾರೆ. ಕಾಯುತ್ತೀರಲ್ವಾ?

 

 

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

ಮಲಯಮಾರುತ ರಾಗ : ವಸಂತತಿಲಕ

ಬಾಲಾರ್ಕಭಾನುವಿನ ಪೊಂಬಿಸಿಲೀಗಳೀಗಳ್

ಪ್ರಾಲೇಯಬಿಂದುದಲಿತಾಂಬುಜರಾಜಿತೇಜೋ

ಲೀಲೋತ್ಸವಕ್ಕೊಸಗೆಯಾಗೆ ಸಮೀರಧೀರ

ಶ್ರೀಲಾಸ್ಯದಂತೆ ದಯಿತಂ ಸತಿಯತ್ತಲೊಲ್ದಂ ||


ವಾಸಂತಿ ರಾಗ : ಮಾಲಿನೀ

ಹೃದಯರಸಿಕನಾಣ್ಮಂ ಬಂದು ಬೇಡಲ್ಕೆ ಬಳ್ಕು

ತ್ತೊದವಿದಮೃತಯೋಗಕ್ಕಾಂತು ಸಂತೋಷಬಾಷ್ಪಂ |

ಪದಪಿನವನ ನರ್ಮೋತ್ಕರ್ಮಮಂ ಶರ್ಮದಿಂದಂ

ಪುದಿದು ಪಡೆವಳೀಗಳ್ ಕಾಂತವಾಲ್ಲಭ್ಯಮುಣ್ಮಲ್ ||

(ಸೂರ್ಯೋದಯದ ವೇಳೆಗೆ ವಿನಮ್ರನಾಗಿ ಬಂದು ತನ್ನಲ್ಲಿ ನಲ್ಮೆಯನ್ನು ತೋರುವ ನಲ್ಲನನ್ನು ಕಂಡು ಆತನು ತನಗಿನ್ನು ಶಾಶ್ವತನರ್ಮನಾಯಕನೆಂದು ಗ್ರಹಿಸಿ ಅವನ ಪ್ರಣಯಾರಾಧನೆಯಲ್ಲಿ ಹಿಗ್ಗಿ ವೆಗ್ಗಳಿಸುವ ನಾಯಿಕೆಯೇ ಸ್ವಾಧೀನಪತಿಕೆ.)


ದೇಶ್, ಬೃಂದಾವನೀ, ಮಾರುಬಿಹಾಗ್, ಬಿಹಾಗ್, ಖಮಾಚ್, ಪಹಾಡೀ, ಬಹುದಾರಿ, ಮೋಹನಕಲ್ಯಾಣಿ, ಹಮೀರಕಲ್ಯಾಣಿ ರಾಗಗಳು- ಅಷ್ಟ, ಏಕ, ರೂಪಕ ತಾಳಗಳು

ಎನ್ನವನೇಂ ಚೆನ್ನನೋ- ಸಂಪನ್ನನೋ |

ಮನ್ನಿಪುದೇಂ ಚೆನ್ನವೋ -ಸೌಜನ್ಯವೋ ||ಪ||

ಎನ್ನ ಮನೋರಥಪಥವನ್ನರಿವ -ನುರಿತವ

ನೆನ್ನ ಮನೋಗತಮತವಿನತ ವಿನುತ ||ಅ.ಪ||

ಎನ್ನಯ ಕಂಗಳ ಕೊನೆಯಲಿ ಕುಣಿಯುವ

ನೆನ್ನಯ ಕುರುಳಿಗೆ ಬಿಗಿದುಳಿವ |

ಬಿನ್ನಣ- ಬಿಂಕದ ಬಗೆಯನೆ ತಿಳಿಯದ

ಜೊನ್ನದ ಮನದವನಿವನೆರೆಯ ||

ಗೀಚಿದ ಗೀಟನು ದಾಟದ ಬೇಟಿಗ

ನಾಚುವನನ್ಯೆಯ ನೋಡಲಿಕೆ |

ದೋಚಿದನೆನ್ನಯ ಚೇತನವನ್ನಿವ

ನೇ ಚತುರಪ್ರಿಯ ಚಿತ್ತಜನೇ ||

ಮಿಸುನಿಮೆಯ್ಮಾಟದ ಮೆಲ್ಲುಲಿಯಾಟದ

ನಸುನಗೆನೋಟದ ನಾಯಕನೇ |

ಪೊಸಬಯಕೆಗಳೆಸೆವೊಸಗೆಯ ಪಸರಿಪ

ರಸಿಕಶಿಖಾಮಣಿ ಮೋಹನನೇ ||


ಮಧ್ಯಮಾವತಿ ರಾಗ : ಕಂದಪದ್ಯ

ಇಂತಾ ಕಾಂತಾಮಣಿ ತಾಂ

ಸಂತತಮಾಂತರ್ಯವೇನಿತ್ತಂ ನಿಜಪತಿಯಿಂ |

ಸಂತಾಪವೀತೆ ನಿಧುವನ

ಸಂತೋಷವಿಲಾಸೆ ಭಾಸೆ ನಲಮಂ ಗೆಲಿದಳ್ ||


ಮೋಹನ ರಾಗ : ಶಾರ್ದೂಲವಿಕ್ರೀಡಿತ ವೃತ್ತ

ಶೃಂಗಾರಂ ಜಗತೀಮನಹರರಸಂ ಹೃದ್ಧರ್ಮಸಂಸ್ಕಾರಕಂ

ತುಂಗಾಂತಃಕರಣರ್ಗೆ ಕಂಗಳ ಸವಂ ಮಾಧುರ್ಯಧುರ್ಯಂ ಚಿರಂ |

ಸಂಗೀತಾಯತನಂ ಸಮಸ್ತಹೃದುತ್ತಂಸರ್ಗೆ ಸರ್ಗೋಜ್ಜ್ವಲಂ

ಸಾಂಗಂ ರಾಗನಿರೂಪಿತಂ ರಸಫಲಂ ಭದ್ರಂ ಶುಭಂ ಮಂಗಳಂ ||


ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ.

ಹೋ ಹೋ ಬಾನೊಡೆಯಿತು ಓಡಿ

ಆ ಹಾ ಏನದ್ಭುತ ನೋಡಿ

ಓ ಹೋ ಸಿಡಿಲಿನ ಹೊಸಮೋಡಿ

ಬಾ ಬಾ ನಲಿಯುವ ನಾವಾಡಿ

ನಿನ್ನಯ ಹಾಡಿಗೆ ನವಿಲಾಗಿದೆ ಮನ

ಚೆನ್ನಿಗ ಕುಣಿಯುವೆ ತಕಝಣು ಎನ್ನುತ

ಹೊನ್ನ ಬೆಳಕ ಸೆಳೆಮಿಂಚಿನ ಪುಳಕ

ಕಣ್ಣ ಮುಚ್ಚಿಸಿತು ಸಿಡಿಲಿನ ನಡುಕ

ಬಣ್ಣಗಳೇಳರ ಬಾನಿನ ಎರಕ

ಸಣ್ಣ ಮಳೆಗೆ ಮೈ ತೋಯುವ ತವಕ

ಮಣ್ಣ ವಾಸನೆಗೆ ಮೂಗರಳಿಸು ಬಾ

ಕಣ್ಣ ಪ್ರೇಮದಲಿ ಕಾವಡಗಿಸು ಬಾ

ಇಳೆಗೆ ಜಳಕದ ಪುಳಕದೈಸಿರಿ |

ಮಳೆಗೆ ಪ್ರೀತಿಯ ಎರಕವಾದುದು |

ಕೆಳೆಗೆ ಹೊಳೆದುದು ನಳನಳಿಪ ಶೃಂಗಾರ ರಸವಾಗ ||

ಕಳೆದು ವಿರಹವ ಧರಣಿ ತೋಷದಿ |

ಮುಳುಗಿ ನಿಂದಳು ಮೇಘನೊಲವಲಿ|

ಬೆಳೆದ ಪ್ರೇಮದ ಪರಿಯು ಮೊಳೆಯಲಿ ಉಳಿಯಲೀ ಸಿರಿಯು ||


 

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

…ಅರೆ ! ಇದೇನಿದು, ಮೆಟ್ಟಿಲ ಮೇಲೆ ನನ್ನವನು ಬೋರಲಾಗಿ ಮಲಗಿದ್ದ. ಇಟ್ಟ ಹೆಜ್ಜೆಯನ್ನು ಹಾಗೇ ಹಿಂದೆ ಇಟ್ಟೆ. ಒಂದು ಕ್ಷಣ ಹಾಗೇ ನಿಂತೆ. ಏನು ಮಾಡಲೂ ತೋಚಲಿಲ್ಲ. ಮತ್ತೆ ಪುನಾ ವಿಪ್ಲವ. ಓಡುತ್ತಿರುವ ಮನಸ್ಸನ್ನು ತಡೆದು ನಿಲ್ಲಿಸಿಕೊಂಡೆ. ಅವನ ನಿಶ್ಚಲವಾದ ನಿದ್ರೆ ನನ್ನನ್ನು ಸೆಳೆಯಿತು. ನಿದ್ರೆ ಮಾಡಿದ ಮಗುವಿನಂತೆ ಕಂಡಿತು. ಆದರೂ ಬಿಗುಮಾನ. ಬಾಗಿಲು ತಟ್ಟಿದೆ; ಕಾಲ್ಗೆಜ್ಜೆ ಸಪ್ಪಳ ಮಾಡಿದೆ; ಎಚ್ಚರ ಆಗಲಿಲ್ಲ. ಅವನ ನಿರ್ಜೀವತೆಯ ನಿದ್ರೆ ಕಂಡು ನನಗೆ ಹುಸಿಕೋಪ ಬಂತು. ಇಲ್ಲವಾಗಿದ್ದರೆ ನಾನು ಹೊರಗೆ ದಬ್ಬಿದ ಮೇಲೆ ರಾತ್ರಿ ಇಡೀ ಇಲ್ಲೇ ನಿದ್ರಿಸಿದನೆಂದಾಯ್ತು. ಬಾಗಿಲನ್ನಾದರೂ ತಟ್ಟಬಹುದಿತ್ತು. ಒಮ್ಮೆ ಕೂಗಿ ಕರೆಯಬಹುದಿತ್ತು. ನಾನು ಇಲ್ಲೇ ಇದ್ದೇನೆ ಎಂದು ಹೇಗಾದರೂ ಸೂಚಿಸಬಹುದಿತ್ತು. ಇವನ ಬಿಗುಮಾನಕ್ಕಿಷ್ಟು ಬೆಂಕಿಬಿತ್ತು ಎನ್ನಿಸಿತು. ಹೊರಗೆ ಚಳಿ- ನಾನು ಬೆಚ್ಚನೆ ಒಳಗೆ. ರಾತ್ರಿ ಎಲ್ಲ ವ್ಯರ್ಥವಾಗಿ ಪ್ರಲಾಪಿಸುವ ಅಗತ್ಯ ಇಲ್ಲವಾಗಿತ್ತು ಎಂಬ ಸಿಟ್ಟ್ಟು. ಬಂದ ಸಿಟ್ಟನ್ನು ಬಲವಂತವಾಗಿ ಇಳಿಸಿಕೊಂಡೆ. ಚಳಿಯಲ್ಲೂ ನಿದ್ರೆ ಅನಿವಾರ್ಯ ಆಗಿತ್ತು ಆತನಿಗೆ. ಕಳೆದ ರಾತ್ರಿಯ ನನ್ನ ದಶಾವತಾರದ ಎದುರು ಇದೇ ಪರಮಸುಖ ಎಂದು ನಿರ್ಣಯಿಸಿದ್ದನೋ ಎನೋ, ಏನೇ ಇರಲಿ; ಅವನನ್ನು ಒಳಗೆ ಕರೆದುಕೊಂಡು ಹೋಗಬೇಕೆಂದು ನಿರ್ಣಯಿಸಿದೆ.

ಭಯ-ಭೀತಿ-ನಾಚಿಕೆಗಳಿಂದ ಅವನನ್ನು ಎಬ್ಬಿಸಲು ಮೆಯ್ ಮುಟ್ಟಿದೆ. ನಿಧಾನವಾಗಿ ಕಣ್ತೆರೆದು ನನ್ನನ್ನು ಕಂಡ. ನಿನ್ನೆ ರಾತ್ರಿ ಏನೂ ಆಗಿಲ್ಲದವನಂತೆ ಎದ್ದು ಮುಗುಳುನಗುತ್ತಾ ನನ್ನನ್ನು ಕಣ್ಣಲ್ಲೇ ಸೋಲಿಸಿದ. ಇನ್ನು ನಮ್ಮ ಹಗಲುವೇಷ ಹೊರಗಿನವರು ಕಂಡಾರು ಎಂದು ಒಳಗೆ ದಯಮಾಡು ಎಂದು ಅಭಿನಯಿಸಿದೆ. ನನ್ನ ಅಭಿನಯಕ್ಕೆ ಆತ ಮಾರು ಹೋಗಲಿಲ್ಲ. ಆತನಿಗೆ ನನ್ನ ಸಹಜತೆ ಬೇಕಿತ್ತು. ಅಂತೂ ನಾನು ಸೋತೆ. ಅಲ್ಲಿ ಆತ ತನ್ನ ನಡವಳಿಕೆಯಿಂದ ಸೋಲಿಸಿದ. ನಾಚಿ ನೀರಾದ ನಾನು ನನ್ನ ಬಲಗೈಯನ್ನು ಮುಂದೆ ಮಾಡಿ ಮುಖವನ್ನು ತಿರುಗಿಸಿ ಕೆಳಗೆ ಹಾಕಿ ನಿಂತೆ. ನನ್ನ ಕೈ ಹಿಡಿದು ಅಮುಕಿದ. ನನ್ನ ಕಣ್ಣುಗಳು ಮಾತ್ರ ಚಲಿಸಿತು. ನೀನು ಚಲಿಸುವುದಿಲ್ಲವೇ ಅಥವಾ ನನ್ನನ್ನು ಹೊರದಬ್ಬುತ್ತೀಯಾ ಎಂದು ಮಾತನಾಡದೆ ಸ್ಪರ್ಶಾನುಭವದಲ್ಲೇ ಪ್ರಶ್ನಿಸಿದ. ಅದೇನಿದ್ದರೂ ನನ್ನ ಉತ್ತರ ಸಂಪೂರ್ಣ ಒಪ್ಪಿಗೆಯೇ ಆಗಿತ್ತು. ನಿಧಾನವಾಗಿ ಮುಖವನ್ನು ತಗ್ಗಿಸಿ ಒಳಗೆ ಹಜ್ಜೆ ಹಾಕಿದೆ. ಮದುಮಗಳಂತೆ, ಸಪ್ತಪದಿ ಇಡುವಂತೆ. ಅಬ್ಬಾ ನಾನು ಬದುಕಿದೆ. ನನ ಪ್ರಾಣಪಕ್ಷಿ ಹಾರಿಹೋಗಿದ್ದು ಗೂಡುಸೇರಿತು.

ವಿಷಾದದ ವಾತಾವರಣಕ್ಕೆ ನನಗೆ ಹೊಂದಿಕೊಳ್ಳಲು ಸಮಯ ಬೇಕಾಯ್ತು. ನಾಟಕ ನನಗೆ ಕೂಡದು. ಆದರೂ ಅನಿವಾರ್ಯವಾಗಿತ್ತು. ಸಹಜತೆಯ ಭಾವಪ್ರಕಟಣೆಗೆ ನಿನ್ನೆಯ ಘಟನೆಯ ಬಿರುಗಾಳಿ ಎದುರಾಗುತ್ತಿತ್ತು. ಯಾಂತ್ರಿಕವಾಗಿ ನೀರಿನ ತಂಬಿಗೆ ತಂದಿಟ್ಟೆ ಕಾಲ್ತೊಳೆಯಲು. ಆತನೋ ಅದನ್ನು ಮುಟ್ಟಲೇ ಇಲ್ಲ. ತಿಳಿಯಿತು. ಇನ್ನು ಮತ್ತೆ ರಗಳೆ ಆಗಬಾರದೆಂದು ನಾನೇ ಕಾಲು ತೊಳೆದೆ. ಭಾವನೆಗಳು ಹೆಪ್ಪುಗಟ್ಟಿ ಕೋಮಲತೆಯನ್ನು ಕಳೆದುಕೊಂಡಿದ್ದವು. ಸಿಟ್ಟಿನಲ್ಲೂ ಭಯಭಕ್ತಿ ಇದ್ದಿತು. ಕಾಲ್ತೊಳೆದ ನೀರನ್ನು ತಲೆಗೆ ಸಿಂಪಡಿಸಿಕೊಂಡೆ ನಿರ್ಭಾವದವಳಾಗಿ. ಮಂದಹಾಸದಿಂದ ಆತ ತಾನು ಗಂಡು ಎನ್ನುವಂತೆ ಕೆಣಕುತ್ತಿದ್ದ. ಬಗ್ಗಿದರೆ ಎರಡುಗುದ್ದು ಎನ್ನುವಂತೆ ಎಣಿಸಿದ ಈತನ ಚೆಲ್ಲುತನ ನನ್ನನ್ನು ಛೇಡಿಸಿತು. ಅದಕ್ಕೆ ಸ್ಪಂದಿಸಿದಂತೆ ಪಾದಗಳನ್ನು ನವಿರಾಗಿ ಚಿವುಟಿದೆ. ಯಾವ ಪ್ರತಿಕ್ರಿಯೆ ಇಲ್ಲದ ಮಂದಹಾಸದ ಆತನ ಶಾಂತರೂಪ ನನ್ನನ್ನು ಸೋಲಿಸಿತ್ತು. ನನ್ನ ಹೃದಯದ ಭಾವನೆಗಳನ್ನು ಒಮ್ಮೆಲೇ ಪ್ರಕಟಿಸಬೇಕೆಂಬ ಆತುರ ನನ್ನದು. ದಾರಿ ಕಾಣಿಸುತ್ತಲೇ ಇಲ್ಲವಾಗಿತ್ತು. ಆತನ ಪ್ರತಿಕ್ರಿಯೆಗಾಗಿ ಹಂಬಲಿಸಿದೆ. ಸೆರಗಿನಿಂದ ಕೃತಕವಾದ ಚಲನೆಗಳಿಂದ ಒತ್ತಿ ಒತ್ತಿ ಕಾಲೊರೆಸಿ ಭೂತದಂತೆ ಕುಳಿತೆ. ಇದ್ದಕ್ಕಿದ್ದಂತೆ ತಲೆಕುಟ್ಟಿ ಕಚಗುಳಿ. ಕತ್ತೆತ್ತಿ ನೋಡಿದರೆ ಪತಿರಾಯನದ್ದು ಹಾಲು ಬೇಕೆಂದು ಮೂಕಾಭಿನಯದ ಪ್ರದರ್ಶನ. ಬಿಸಿಬಿಸಿಯಾದ ಹಾಲನ್ನು ಬೆಳ್ಳಿಲೋಟದಲ್ಲಿ ತಂದಿಟ್ಟೆ. ಉಗುರುಬೆಚ್ಚಗಿನ ಹಾಲನ್ನು ತಣಿಸುವಂತೆ ನಟಿಸುತ್ತಾ ಉಫ್ ಉಫ್ ಎನ್ನುತ್ತಾ ನೀಡಿದೆ. ಎಷ್ಟೇ ಹೊತ್ತಾದರೂ ಕೈಯಿಂದ ಲೋಟ ಪಡೆಯಲಿಲ್ಲ. ತಿರುಗಿ ನೋಡಿದರೆ ಆತನೂ ಮೇಲೆ ನೋಡುತ್ತಲೇ ಇದ್ದ. ನಾನೇ ಕೈಯಾರೆ ಕುಡಿಸಬೇಕೆಂಬ ಸಂಕೇತ. ಈ ಸಂಕೇತ ಪ್ರೇಮಿಗಳಿಗೆ ತಿಳಿಯುವಂತಹದು. ಚಿಕ್ಕಮಕ್ಕಳ ಚೂಚಾಟದ ನೆನಪು ಬಂದು ಕಾರಣವಿಲ್ಲದ-ಅರ್ಥವಿಲ್ಲದ ಈ ನಾಟಕಕ್ಕೆ ಮಂಗಳ ಹಾಡಲು ಮುಂದಾದೆ.

ಹತ್ತಿರಬಂದು ಕುಳಿತೆ. ಅವನಿಗೆ ತಿಳಿಯದಂತೆ ಹಂತಹಂತವಾಗಿ ನಾನು ಸೋಲಿಸುತ್ತಲೇ ಇದ್ದೆ; ಅಥವಾ ಗೆಲ್ಲುತ್ತಿದ್ದೆನೋ ಏನೋ ? ನಿಶ್ಶಬ್ದದಲ್ಲಿ ನನ್ನ ಉಸಿರೇ ಮೌನವನ್ನು ಮುರಿಯುವ ವಾದ್ಯದಂತೆ ಕೇಳಿಸುತ್ತಿತ್ತು. ನಿಧಾನವಾಗಿ ಹಾಲಿನ ಲೋಟವನ್ನು ಆತನ ತುಟಿಗೆ ಸ್ಪರ್ಶಿಸಿದೆ. ಪಕ್ಕನೆ ನನ್ನ ಕಂಡ ಕಣ್ಣುಗಳು ಎವೆಯಿಕ್ಕದೆ ಮಾತನಾಡುತ್ತಿತ್ತು. ಆತನ ನಾಲಗೆ ಹಾಲನ್ನು ಬಯಸುತ್ತಿತ್ತು. ನನ್ನ ಮನಸ್ಸು ನನಗರಿವಿಲ್ಲದೆ ಆತನಿಗೆ ಅಮೃತ ನೀಡಲು ಪ್ರಾರಂಭಿಸಿತ್ತು. ನಿನ್ನ ಅಧರಾಮೃತವನ್ನು ಪಡೆಯುವ ಶಕ್ತಿ ಇಲ್ಲ; ಅದನ್ನು ಪಡೆಯುವ ಶಕ್ತಿಗಾಗಿ ಈ ಹಾಲಿನ ಅಮೃತ ಪಡೆಯುತ್ತಿದ್ದೇನೆ ಎನ್ನುವಂತಿದ್ದವು ಆತನ ಕಣ್ಣುಗಳು. ಹಾಲನ್ನು ಆತ ಕುಡಿಯುತ್ತಿದ್ದರೂ ಆತನ ಅಧರಾಮೃತದ ಸವಿಯಂತೆ ನನ್ನ ತುಟಿಗಳು ಸವರಿಕೊಳ್ಳುತ್ತಾ ಆಸ್ವಾದಿಸುತ್ತಿದ್ದವು. ನನ್ನ ಪ್ರೀತಿಯು ಹಾಲಿನ ರೂಪದಲ್ಲಿ ಅವನ ಬಾಯೊಳಗೆ ಸೇರುವುದನ್ನು ಕಂಡೆ. ಆತನೂ ಹಾಗೆ; ಹಾಲು ಜೇನಾಗಿ, ಜೇನು ರಸವಾಗಿ ಆತನ ಮುಖದಲ್ಲಿ ಹೊರಸೂಸುವುದನ್ನು ಕಂಡೆ. ಕೊನೆಯ ಹನಿಯನ್ನೂ ಆತ ಬಿಡಲಿಲ್ಲ. ಅಹಂಕಾರ ಮರೆತು ಹಾಲು ಕುಡಿಯುವುದನ್ನು ಕಂಡಾಗ ಸುಪ್ತವಾಗಿದ್ದ ನನ್ನ ಅಹಂಕಾರವೂ ದೂರವಾಗಿ ಎರಡು ಹನಿ ಆನಂದಭಾಷ್ಪ ಕಣ್ಣಿನಲ್ಲಿ ಮಿಡಿಯಿತು.

ಏನನ್ನಿಸಿತೋ ಏನೋ, ನನ್ನ ಕೈಹಿಡಿದು ಸೆಳೆದು ನನ್ನನ್ನು ದಿಟ್ಟಿಸಲು ಮುಂದಾದ. ಮುಖ ಮುಚ್ಚಿಕೊಂಡು ತಿರುಗಿ ಕುಳಿತೆ. ತೋಳನ್ನು ಚಿವುಟಿದ. ತನ್ನ ಹೊಟ್ಟೆ ಮುಟ್ಟಿಕೊಂಡು ಹಸಿವು ಎಂದ. ಮನೆಯಲ್ಲಿ ಏನೂ ಇಲ್ಲ. ಅಡುಗೆ ಮಾಡಿಲ್ಲ. ನೀನು ಬರುತ್ತೀ ಎಂದ ದಿನ ಎಲ್ಲಾ ಮಾಡಿದ್ದೆ. ಅದೆಲ್ಲಾ ಹಳಸಿತ್ತು– ಹೀಗೆ ಅಭಿಪ್ರಾಯ ಸಾಗಿತ್ತು. ಆದರೆ ಎಲ್ಲೂ ಮಾತಿಲ್ಲ. ಅಭಿನಯದ ತರಬೇತಿಯಂತಿತ್ತು. ಅರೆ, ನೀನೇನು ಮಾಡಿಕೊಂಡಿದ್ದೀ, ಅದೇ ಸಾಕು ನನಗೆ ಎಂಬ ಧೋರಣೆ ಅವನದ್ದು. ಆಗ ನನ್ನ ಪಾವಿತ್ರ್ಯ-ಸತ್ಯತೆ- ಪಾರದರ್ಶಕತೆ- ಸಹಜತೆಯನ್ನು ತಿಳಿಸುವ ಸಂದರ್ಭ ಬಂದಿತ್ತು. ನಾನೋ ಊಟಗೀಟ ಮಾಡಿಲ್ಲ. ನಿನ್ನ ಆಗಮನಕ್ಕಾಗಿ ಕಾಯುವುದರಲ್ಲೇ, ನಿರೀಕ್ಷೆಯಲ್ಲೇ ಹಸಿವೆ ಕಾಣೀಸಿಲ್ಲವಾಗಿತ್ತು. ನಿನ್ನ ಸಾಮೀಫ್ಯದ ಗತಿ ಬದಲಾದಂತೆ ಹತಾಶಳಾಗಿ, ಉತ್ಸಾಹ ಕಳಕೊಂಡು, ತಣ್ಣೀರು ಕುಡಿದು, ಬಿಸಿಯಾದ ದೇಹದ ತಂಪಿಗೆ ತಣ್ಣೀರ ಪಟ್ಟಿ ಹೊಟ್ಟೆಯ ಮೇಲಿಟ್ಟುಕೊಂಡೆ ಎಂದು ನಿಸ್ತೇಜಳಾಗಿ ಒತ್ತರಿಸಿ ಬರುತ್ತಿದ್ದ ದುಃಖದಿಂದ ತತ್ತರಿಸಿ, ಬಿಕ್ಕಳಿಸಿ ಆತನ ತೊಡೆಯ ಮೇಲೆ ಬಿದ್ದೆ; ಅತ್ತೆ. ನನ್ನ ದುಃಖ ಇಳಿಯುವ ತನಕ ಆತನ ಸಹಾನುಭೂತಿ ನನ್ನ ಪಾಲಿಗೆ ಅವಿಸ್ಮರಣೀಯ ಕ್ಷಣ. ಅವನೊಳಗೆ ನಾನು ಸೇರಿಕೊಂಡೆ; ಅಲ್ಲ ನನ್ನೊಳಗೆ ಅವನು ಸೇರಿಕೊಂಡ.

ಆತನಿಂದ ಸಾಂತ್ವನ. ನನ್ನ ತಲೆಗೂದಲನ್ನು ನೇವರಿಸಿ ಸಮಾಧಾನಿಸುತ್ತಿದ್ದ, ಮಾತಿಲ್ಲದೆ ತುಂಬಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ನನಗೆ. ಉತ್ತರವೂ ಬೇಕಾಗಿಲ್ಲ ಎನಿಸಿತ್ತು. ಹೆಣ್ಣಿಗೆ ಗಂಡು ಎಷ್ಟು ಆಧಾರ ಎನಿಸಿದ್ದೂ ನನಗೆ ಅದೇ ದಿನ, ಅದೇ ಕ್ಷಣದಲ್ಲಿ. ಹೆಣ್ಣಿನ ದೌರ್ಬಲ್ಯ ತಿಳಿದದ್ದು ಅಂದೇ, ಗಂಡಿನ ಅಧಿಕಾರದ ಪ್ರಾಬಲ್ಯ ಅರಿವೂ ಅಂದೇ ತಿಳಿಯಿತು. ಹೆಣ್ಣಿನ ಸೂಕ್ಷ್ಮಭಾವನೆಗಳು ಪ್ರಕಟವಾಗಬೇಕಾದರೆ, ಹೆಣ್ಣು ಹೆಣ್ಣೇ ಅಗಿ ಇರಬೇಕಾದರೆ ಗಂಡು ಗಂಡಾಗಿಯೇ ಇರಬೇಕೆಂದು ಒಪ್ಪಿದೆ. ಗಂಡಿನಂತೆಯೇ ಹೆಣ್ಣು ಸ್ವಾತಂತ್ರ್ಯವನ್ನು ಬಳಸಿಕೊಂಡಲ್ಲಿ ಅಥವಾ ಸಮಾನತೆಯ ಗುಂಗು ಹೊಂದಿದಲ್ಲಿ ಹೆಣ್ಣು ಹೆಣ್ಣಾಗಿರಲಾರಳು; ಹೆಣ್ಣಿನ ಸಹಜಸ್ವಭಾವದಿಂದ ವಂಚಿತಳಾಗುತ್ತಾಳೆ ಎಂದು ಅರಿತೆ. ಹೆಣ್ಣು ಹೆಣ್ಣಾಗಿಯೇ ಇದ್ದಾಗ, ಹೆಣ್ತನದಿಂದ ಗಂಡನ್ನು ಬಳಸಿಕೊಂಡಾಗ, ಗಂಡನ್ನು ಒಲಿಸಿ ಗಂಡಿನ ಗಂಡುತನವನ್ನು ಅನುಭವಿಸಿದಾಗ ಹೆಣ್ಣಿನ ಸ್ವಾರಸ್ಯ ಅರ್ಥವಾದೀತು. ಇಲ್ಲಿ ಸಮಾನತೆಗಿಂತ ಒಬ್ಬರಿಗೊಬ್ಬರು ಪೂರಕ ಎನ್ನುವುದು ಮಹತ್ತ್ವದ್ದು. ಪ್ರಕೃತಿ-ಪುರುಷನ ವಿಶಿಷ್ಟ ಅನುಭವ ನನ್ನ ಪಾಲಾಯ್ತು.

ಇನ್ನು ನಾನು ಗೆಲ್ಲಬೇಕೆಂಬುದರಲ್ಲಿ ಅರ್ಥವಿಲ್ಲ ಎನ್ನುವುದರಲ್ಲೇ ನಾನು ಗೆದ್ದಿದ್ದೇನೆ. ತಾನು ಸೋಲುವುದರಲ್ಲೇ ಗೆದ್ದಿದ್ದಾನೆ ಆತ. ಇಬ್ಬರ ಸೋಲು-ಗೆಲುವು ಗೆಲುವಾಗುವುದಾದರೆ ಒಬ್ಬರನ್ನೊಬ್ಬರು ಹೊಂದಿಕೊಲ್ಳುವುದೇ ಬದುಕಿನ ಸಾರವೆಂದು ಗ್ರಹಿಸಿದೆ. ನನ್ನಲ್ಲಿ ಅತೀವವಾದ ಒಂದು ರೀತಿಯ ಸಂಸ್ಕಾರದ ಪ್ರಭಾವ ಉಂಟಾಯ್ತು. ಅಲ್ಲದೆ ಒಂದು ರೀತಿಯ ಪ್ರೌಢತೆ ಮೂಡಿತ್ತು. ಬದಲಾವಣೆಯ ಭಾವನೆಗಳಿಂದ ನನ್ನಲ್ಲೂ ನಡೆನುಡಿ ಬದಲಾಗಿತ್ತು. ಆತನಲ್ಲಿ ಪೂಜ್ಯತೆ ಕಂಡೆ; ಧನ್ಯಳಾದೆ. ಇವುಗಳೆಲ್ಲಾ ನನಗರಿವಿಲ್ಲದೆ ನನ್ನನ್ನು ಆವರಿಸಿತ್ತು. ಹಸಿವೆ ಎಂದ ಆತನ ಮುಖ ಮರೆಯಲಾಗಲಿಲ್ಲ. ಮಗುವಿನಂತಹ ಮುಗ್ಧಮುಖದ ಆತನ ದೈನ್ಯ ಕಂಡು ಒಳಗೆ ಓಡಿದೆ. ದೇವರಿಗರ್ಪಿಸಿದ ಬಾಳೆಹಣ್ಣನ್ನು ತಂದೆ. ಯಾಂತ್ರಿಕವಾಗಿದ್ದ ನನ್ನ ಚಲನೆಗಳಲ್ಲಿ ಜೀವ ತುಂಬಿತ್ತು; ಭಾವ ಕರಗಿತ್ತು. ಸಿಪ್ಪೆಗಳನ್ನು ಸುಲಿಯುತ್ತಾ ನನ್ನ ಅಹಂಕಾರಗಳನ್ನು ತೊಡೆದೆ ಎಂಬ ಭಾವ ತಳೆದೆ. ಮಾಗಿದ ಪಕ್ವಗೊಂಡ ಹೆಣ್ಣಿನಂತೆ ಸಿಹಿಯಾಗಿದೆ ನನ್ನ ಮನಸ್ಸು ಎಂಬಂತೆ ಬಾಳೆಹಣ್ಣು ತಿನ್ನಿಸಿದೆ. ಯಾವುದೇ ಯೋಚನೆ-ಚಿಂತನೆ- ಅನುಮಾನ- ಜಿಜ್ಞಾಸೆ ಇಲ್ಲದೆ ತಿನ್ನುತ್ತಿರುವ ಆತನನ್ನು ಕಂಡಾಗ ನನ್ನ ಪ್ರೀತಿಯಲ್ಲೂ ಆತ ಹಾಗೆ ತಿಳಿದಿದ್ದಾನೆ ಎಂದು ಭಾವಿಸಿದೆ. ಆನಂದಾತಿರೇಕದಿಂದ ಉಳಿದರ್ಧ ಹಣ್ಣನ್ನು ಸುಲಿದೆ. ಸುಲಿದ ಸಿಪ್ಪೆಯನ್ನು ಆಡಿಸುತ್ತಾ ನಮ್ಮ ಬದುಕಿನ ಅಹಂಕಾರವೆಂಬ ಸಿಪ್ಪೆಯನ್ನು ಎಸೆಯೋಣವೆಂದು ಎಸೆದೆ. ಉಳಿದರ್ಧ ಹಣ್ಣನ್ನು ಕಲಾತ್ಮಕವಾಗಿ ಕೈಯ್ಯಲ್ಲಿ ಹಿಡಿದು ನಾಚಿ ನೀರಾಗಿ ಮುದ್ದೆಯಾಗಿ ತಲೆತಗ್ಗಿಸಿ ಕೈಯೆತ್ತಿ ಹಣ್ಣನ್ನು ನೇರವಾಗಿ ಅವನ ಬಾಯಿಯತ್ತ ತಿರುಗಿಸಿದೆ. ಎತ್ತಿದ ನನ್ನ ಕೈಯನ್ನು ತಡೆಹಿಡಿದ. ಏಕೆ ಎಂದು ಪ್ರಶ್ನಿಸಿದೆ.ಅರ್ಧ ನಿನಗೆ ಎಂದ. ಬೇಡ ಎಂದೆ. ಒತ್ತಾಯಿಸಿದ; ಬಲವಂತಪಡಿಸಿದ. ನೀನು ಚೆನ್ನಾಗಿರು ಎಂದೆ. ಒಂದು ಹಣ್ಣನ್ನು ಹಂಚಿ ತಿನ್ನೋಣವೆಂದು ಬಲವಂತದಿಂದ ನನ್ನ ಬಾಯಿಗೆ ತುರುಕಿದ. ನನಗಂತೂ ದುಃಖದ ಕಟ್ಟೆ ಒಡೆಯಿತು.

ನಾನು ಕರಗಿ ಕರಗಿ ಹೋದೆ. ಒಂದೇ ಹಣ್ಣು ಇಬ್ಬರಿಗೂ ಎನ್ನುವ ನಿನ್ನ ತತ್ತ್ವ ನಮ್ಮ ಜೀವನಕ್ಕೆ ಬರಲಿಲ್ಲವಲ್ಲಾ ಎಂದು ಇನ್ನೊಂದು ಹೆಣ್ಣನ್ನು ಹೆಸರಿಸದೆ ಸೂಕ್ಷ್ಮವಾಗಿ ತಿಳಿಸಿದೆ. ಹಳೆಯದನ್ನು ಕೆದಕಬಾರದು ಎಂದು ಎಷ್ಟೇ ಪ್ರಯತ್ನಿಸಿದರೂ ಸಂದರ್ಭ ಹಾಗೆ ಮೂಡಿಬಂತು. ಆಗ ಅತ ಅದನ್ನು ಎಷ್ಟು ಸರಳವಾಗಿ ತೆಗೆದುಕೊಂಡನೆಂದರೆ ಓಹೋ ಅದಕ್ಕೆ ಇಷ್ಟೆಲ್ಲಾ ರಾದ್ಧಾಂತವೇ? ಅಯ್ಯೋ ಪೆದ್ದೀ.. ಪ್ರೀತಿ ಎನ್ನುವುದು ಒಬ್ಬರಿಗೇ; ಅದು ನಿನಗೆ ಮಾತ್ರ. ನೀ ಕಂಡದ್ದೆಲ್ಲಾ ಸತ್ಯ ಅಲ್ಲ. ನಿನ್ನ ಪ್ರೀತಿಯೇ ನನ್ನ ಜೀವ. ಕಣ್ಣಿನಿಂದ ಕಂಡಿರುವುದೆಲ್ಲಾ ಸತ್ಯವಲ್ಲ. ಒಳಗಣ್ಣು ಕುರುಡಾದಾಗ ಹೊರಗಣ್ಣು ಪ್ರಮಾಣವಾಗುತ್ತದೆ. ಆ ಬಡತನ ನಿನಗಿಲ್ಲ. ಒಳಗಣ್ಣು ತೆರೆದುನೋಡು. ಪ್ರೀತಿಯನ್ನು ನೋಡಲು ಹೃದಯದ ಕಣ್ಣು ಮುಖ್ಯ. ಅದನ್ನು ಕುರುಡು ಮಾಡಿಕೊಳ್ಳಬೇಡ.. ಇನ್ನೂ ಏನೇನೋ ಹೇಳುತ್ತಲೇ ಇದ್ದ. ನಾನು ಬೆಪ್ಪುತಕ್ಕಡಿ ಆಲಿಸುತ್ತಲೇ ಇದ್ದೆ. ನಿನಗೆ ನಂಬಿಕೆ ಬೇಕಿದ್ದರೆ ಪ್ರಮಾಣ ಮಾಡುತ್ತೇನೆ ಎಂದ. ಅದೇ ಮಾತಿಗೆ ಕಟ್ಟುಬಿದ್ದೆ. ಸತ್ಯವಾಗಿ ದೇವರಾಣೆ ಎಂದು ಕೈಯ ಮೇಲೆ ಭಾಷೆ ಕೊಟ್ಟ; ಕುತ್ತಿಗೆ ಮುಟ್ಟಿ ತಿಳಿಸಿದ. ತಲೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ರಮಿಸುತ್ತಲೇ ನೀನೊಬ್ಬಳೇ ನನಗೆ ಪ್ರೀತಿಪಾತ್ರಳು ಎಂದ. ಆತನ ಕೈಯ ಸ್ಪರ್ಶ, ನಿಶ್ಚಲವಾದ ಆತನ ಮಾತಿನ ಗಟ್ಟಿತನ ಇವುಗಳೆಲ್ಲಾ ನನ್ನ ಪಾಲಿಗೆ ನಂಬಿಕೆ-ಹರ್ಷವೆರಡೂ ಆಯ್ತು.

ಆತನ ಕೈಯನ್ನು ನಾನಾಗಿಯೇ ಸ್ಪರ್ಶಿಸಿದೆ. ಈ ಸ್ಪರ್ಶದಲ್ಲಿ ಒಪ್ಪಿಗೆ ಇತ್ತು ; ಕ್ಷಮೆ ಇತ್ತು ; ಬಯಕೆ ಇತ್ತು; ಸಾಂತ್ವನ ಇತ್ತು ; ಹತ್ತು ಹಲವು ಭಾವಗಳ ತೀವ್ರತೆಯಿತ್ತು. ಗಟ್ಟಿಯಾಗಿ ಆತನ ಕೈ ಹಿಡಿದುಕೊಂಡೆ. ನೀನು ನನಗೊಬ್ಬನಿಗೇ ಸೇರಿದವನೆಂದು ಬಿಗಿದು ಹಿಡಿದು ನಿಂದೆ. ನಾನು ಗೆದ್ದೇ ಗೆದ್ದೆನೆಂದು ಚಂಗನೆದ್ದು ಹಾರಿದೆ. ಕನಸಲ್ಲವೆಂದು ಮನದಟ್ಟು ಮಾಡಿಕೊಂಡೆ. ನನ್ನವನನ್ನು ಓರೆನೋಟದಿಂದ ಕಂಡೆ. ಮಂದಹಾಸದಿಂದ ಠೀವಿಯಲ್ಲಿ ಕುಳಿತವನನ್ನು ಕಣ್ತುಂಬ ಕಂಡೆ; ಕಣ್ಣಲ್ಲಿ ತುಂಬಿಕೊಂಡೆ. ಎಲ್ಲೆಲ್ಲೂ ನನ್ನವನನ್ನೇ ಕಂಡೆ. ಪ್ರಪಂಚದಲ್ಲಿ ನನ್ನನ್ನು ಅರ್ಥಮಾಡಿಕೊಂಡವನು ಇವನೊಬ್ಬನೇ ಎಂದು ಅನಿಸಿತು. ಹೆಂಡತಿಯನ್ನು ಅರ್ಥಮಾಡಿಕೊಂಡ ಗಂಡುಗಳಲ್ಲಿ ನನ್ನವನೇ ಪ್ರಥಮ ಎಂದೆ. ನನ್ನವನು ದೇವನಂತೆ ಕಂಡ; ಮನ್ಮಥನಂತೆ ಕಂಡ; ಹಿರಿಯನಂತೆ ಕಂಡ; ಮಗುವಿನಂತೆ ಕಂಡ; ನನ್ನನ್ನು ನಡೆಸಿಕೊಂಡು ಹೋಗುವ ಗುರುವಿನಂತೆಯೂ ಕಂಡ. ನಾನು ಅವನನ್ನು ಅರ್ಥಮಾಡಿಕೊಂಡೆನೇ ಅಥವಾ ಅವನೇ ನನ್ನನ್ನು ಅರ್ಥಮಾಡಿಕೊಂಡನೇ? ಒಂದೂ ತಿಳಿಯಲಿಲ್ಲ. ನನಗೀಗ ಅದು ಬೇಕಾಗಿಯೂ ಇಲ್ಲ. ನನಗಾಗಿ ಅವನು, ಅವನಿಗಾಗಿ ನಾನು- ಇವಿಷ್ಟೇ ನಾನು ಬಯಸುವ ಪ್ರಪಂಚ. ಆ ಪ್ರಪಂಚ ಇದೀಗ ನನ್ನ ಕೈಗೆ.

ಹಿಂದಿನ ಕಹಿನೆನಪು-ಮುಂದಿನ ಸವಿನೆನಪು ಯಾವುದೂ ನನ್ನನ್ನು ಕಾಡುತ್ತಿಲ್ಲ. ನನಗೀಗ ಆತನ ಸಾಮೀಪ್ಯವೇ ಜೀವ; ಪ್ರಾಣ. ಇಲ್ಲಿ ಬಯಕೆಗಳಿಲ್ಲ; ವೇದನೆಗಳಿಲ್ಲ. ಇರುವುದು ಇಂದೇ; ಆನಂದ. ಈ ಆನಂದದ ಕ್ಷಣವನ್ನು ಹೆಚ್ಚುಹೊತ್ತು ಉಳಿಸಿಕೊಳ್ಳಲು ವಿನೋದ ಬೇಕು; ಪೂಜೆ ಬೇಕು; ಸಮರ್ಪಣೆ ಬೇಕು; ಅದಕ್ಕೆ ಸಿದ್ಧಳಾದೆ. ಆತನ ಕೈ ಹಿಡಿದು ಬಾವಿಕಟ್ಟೆ ಕಡೆಗೆ ಹೊರಟೆ. ತಿರುಗಾಟದಲ್ಲಿದ್ದ ಆತನನ್ನು ಸ್ನಾನಮಾಡಿಸಲು ಮುಂದಾದೆ. ಕೊಡದ ಬಾಯಿಗೆ ಉರುಳು ಸುತ್ತಿ ನೀರಿಗಿಳಿಸಿದೆ. ಆತನೊಂದಿಗೆ ಹರಟುತ್ತಾ ನೀರು ಸೆಳೆಯುವಾಗ ನನ್ನ ಲಯ ತಪ್ಪಿತು. ಕಾರಣ ಆತನೂ ಕೈಗೂಡಿ ನೀರು ಸೆಳೆದಿದ್ದ. ಬೊಗಸೆ ಬೊಗಸೆಯಾಗಿ ನೀರು ಎರಚಿ ಸ್ನಾನ ಮಾಡಿಸಿದೆ. ಆತನ ಕಿರುಚೇಷ್ಟೆಗಳಿಂದ ನಾನು ಉನ್ಮತ್ತಳಾಗಿದ್ದೆ. ತನ್ನ ತುಂಟತನವನ್ನು ಪ್ರಕಟಿಸುತ್ತಿದ್ದ. ನಮ್ಮೀರ್ವರ ಚಕ್ಕಂದದ ಗಲಾಟೆ ನೋಡಿ ಪಕ್ಕದ ಮನೆಯ ಗೆಳತಿ ಇಣುಕಿದಳು. ನೀರವತೆಯ ನಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಉಂಟಾದ ಕುಲುಕುಲು ಆಕೆಗೆ ಅನುಮಾನ ತಂದಿತ್ತು. ಆಗ ಈತನೋ ಮುದುಡಿ ಕುಳಿತಿದ್ದ. ಆತನಿಗೆ ಸೆರಗು ಅಡ್ಡ ಹಿಡಿದಿದ್ದೆ. ಕೆಳಗಿನಿಂದಲೇ ಕೀಟಲೆ ಮಾಡುತ್ತಿದ್ದ. ಆಕೆಗೆ ಹೀಗೆ ಗಾಳಿಗೆ ಸೀರೆ ಒಣಗಿಸುತ್ತಿದ್ದೇನೆಂದು ತಿಳಿಸಿದೆ; ಹಾಲು ಉಕ್ಕಿರಬಹುದೆಂದು ಸೂಚಿಸಿ ಆಕೆಯನ್ನು ಒಳಗೆ ಕಳಿಸಿದೆ. ನನ್ನವನಿಗೆ ಇದರ ಪರಿವೆಯೇ ಇಲ್ಲದೆ ನನ್ನನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದ. ಈ ಗಂಡುಗಳೇ ಹಾಗೆ. ಚರ್ಮ ದಪ್ಪ ಎಂದು ಆತನ ತಲೆ ಮೇಲೆ ಬಟ್ಟೆ ಇಟ್ಟು ಕ್ಷಣದಲ್ಲೇ ಆತನನ್ನು ಒಳಗೆ ಎಳೆದುಕೊಂಡು ಬಂದೆ.

ಆತನ ಹಸಿವೆ ನೀಗಿಸಲು ಸುಲಭದ ತಿಂಡಿಗಾಗಿ ಸಿದ್ಧಳಾದೆ. ರೊಟ್ಟಿ ಕಾಯಿಸಲು ಮುಂದಾದೆ. ಆತನ ಸಹಕಾರ, ಕೀಟಲೆ ಎಲ್ಲವೂ ತೊಡಕಾದರೂ ನನ್ನ ಪಾಲಿಗೆ ಉಲ್ಲಾಸಕರವಾಗಿತ್ತು. ಎಲ್ಲವೂ ಸಿದ್ಧವಾದ ಮೇಲೆ ಆತನನ್ನು ಕುಳ್ಳಿರಿಸಿ ತಿನ್ನಿಸುವುದಕ್ಕೆ ಮುಂದಾದೆ. ನನ್ನ ಕೈಯಲ್ಲಿಯ ತಿಂಡಿ ತಿನ್ನಲು ಆತ ಹಪಹಪಿಸುವುದನ್ನು ಕಂಡಾಗ ಹೊಟ್ಟೆ ತುಂಬಿ ಬಂತು. ನನ್ನ ಪಾಲಿಗೆ ಮಗುವಿನಂತೆ ಕಂಡ. ಮಾತೃವಾತ್ಸಲ್ಯದ ನವಿರಾದ ಭಾವ ಮೂಡಿ ಕಣ್ಣು ತುಂಬಿ ಬಂತು. ಪ್ರೀತಿಯ ಒತ್ತಡ ಹೆಚ್ಚಾಗಿ ಮೇಲಿಂದ ಮೇಲೆ ತಿಂಡಿ ನೀಡಿ, ಗಂಟಲು ಕಟ್ಟಿದಾಗ ನೀರು ಕುಡಿಸಿ ತಲೆ ಬಡಿದೆ, ಎದೆ ನೇವರಿಸಿದೆ. ಆತನ ಹೊಟ್ಟೆ ತುಂಬಿ ಧನ್ಯತೆಯನ್ನು ಪ್ರಕಟಿಸಿದ. ನಾನೂ ಧನ್ಯಳಾದೆ.

ನನ್ನ ಸೇವೆಯಿಂದ ಸಂತುಷ್ಟನಾದ ಆತ ನನ್ನ ಜಡೆ ಹಿಡಿದು ನಿಧಾನವಾಗಿ ಎಳೆದು ಬಿಡಿಸಿ ತಲೆಗೂದಲನ್ನು ಬಾಚಿ ಹೆಣೆದ. ನನ್ನ ಅಲಂಕಾರ ಮಾಡಲು ಮುಂದಾದ. ತಾನು ತಂದಿರುವ ಆಭರಣಗಳನ್ನು ತೊಡಿಸಿದ. ಪ್ರೀತಿಯ ಸಂಕೇತವಾಗಿ ತನ್ನ ಕೈಯಲ್ಲಿನ ಉಂಗುರ ತೊಡಿಸಲು ಮುಂದಾದ. ಆದರೆ ಅದು ಬಿಗಿಯಾದಂತಿತ್ತು. ಎಣ್ಣೆ ಸವರಿ ಉಂಗುರ ತೊಡಿಸಿದ. ಆಗ ಆತ ಕೆನ್ನೆ ಸವರಿ ದಪ್ಪವಾಗಿದ್ದೀಯ ಎಂದು ಪ್ರಶ್ನಿಸಿದ. ದಪ್ಪಕ್ಕೆ ಕಾರಣ ನೆನೆದೆ; ನಾಚಿ ನೀರಾದೆ. ನನ್ನ ಭಾವಾನುರಾಗದ ಗೊಂದಲ ಆತನನ್ನು ಕಸಿವಿಸಿ ಮಾಡಿಸಿತು. ಪ್ರಶ್ನಿಸಿದ; ಮತ್ತೂ ನಾಚಿದೆ. ಕೈ ಅಮುಕಿದ. ಆಗ ಆತನ ಕೈಯನ್ನು ಹೊಟ್ಟೆಯ ಮೇಲೆ ಆಡಿಸುತ್ತಾ ಮುಖವನ್ನು ತಗ್ಗಿಸಿ ಇನ್ನೊಂದು ಕೈಯಿಂದ ಮೂರು ಬೆರಳುಗಳನ್ನು ಎತ್ತಿ ತೋರಿಸುತ್ತಾ ನಾನು ಮೂರು ತಿಂಗಳ ಗರ್ಭಿಣಿ ಎಂದು ಸೂಚಿಸಿದೆ. ಆಗ ಆತ ನನ್ನನ್ನು ಅಪ್ಪಿ ಮುದ್ದಾಡಿ ಎತ್ತಿ ಹಾರಿದ. ಭಯಗೊಂಡ ನಾನು ಆತನನ್ನು ಆಲಿಂಗಿಸಿ ಕಣ್ಣು ಮುಚ್ಚಿಕೊಂಡೆ. ಆತ ನನ್ನ ಹೊಟ್ಟೆಯ ಮೇಲೆ ಮುಖವನ್ನಿಟ್ಟುಕೊಂಡು ತನ್ನ ಕನಸುಗಳನ್ನು ಕಾಣುತ್ತಿದ್ದ.

ಸಂತೋಷದ ಅಮಲಿನಲ್ಲಿ ನನ್ನನ್ನು ಶೃಂಗರಿಸಲು ಮುಂದಾದ. ನನ್ನ ಮೈಗೆಲ್ಲಾ ಅತ್ತರು ಬಡಿದು ಪನ್ನೀರು ಸಿಂಪಡಿಸಿದ. ಕೈಗೆ- ಕಾಲಿಗೆ ಬಣ್ಣದ ಚಿತ್ತಾರ ಮೂಡಿಸಿದ. ಕಿರುಗೆಜ್ಜೆ ಕಟ್ಟಿದ. ತಾನೇ ತಂದ ಹೂಗಳನ್ನು ಮುಡಿಸಿದ. ಕಣ್ಣಿಗೆ ಕಪ್ಪಿಟ್ಟ. ದೃಷ್ಟಿಯಾಗದಿರಲಿ ಎಂದು ದೃಷ್ಟಿಬೊಟ್ಟು ಇಟ್ಟ. ನನ್ನನ್ನು ಮದುಮಗಳ ರೀತಿಯಲ್ಲಿ ಶೃಂಗರಿಸಿದ. ನನ್ನನ್ನು ಉನ್ಮಾದಗೊಳಿಸಿದ. ನಾನು ಹಾಡಿದರೆ ಕುಣಿದ. ನಾನು ಕುಣಿದರೆ ತಾಳ ಹಾಕಿದ. ತಾಳ ಹಾಕಿದರೆ ವಾದ್ಯ ಬಾರಿಸಿದ. ನನ್ನ ಒಟ್ಟಿಗೇ ಅಭಿನಯಿಸಿದ. ವ್ಹಾ ! ನಾನಿಟ್ಟ ಹಜ್ಜೆ ಹಜ್ಜೆಗೂ ಸ್ಪಂದಿಸಿದ. ಫಲ ನೀಡಿದ. ನನ್ನನ್ನು ಪುಟಿಯುವಂತೆ ಮಾಡಿದ ಚೇತನ ಆತನಲ್ಲಿ ಇದ್ದರೂ ಸ್ವಲ್ಪವೂ ಬಿಂಕವಿಲ್ಲದೆ ಇರುವ ಆತನನ್ನು ಕಂಡೆ. ನನ್ನನ್ನು ವಶೀಕರಿಸಿಕೊಳ್ಳುವ ಶಕ್ತಿ ಇದ್ದರೂ ಎಲ್ಲಿಯೂ ಆತ ಗೆಲ್ಲಲು ಪ್ರಯತ್ನಿಸದೆ ಗೆಲ್ಲುತ್ತಿದ್ದ.

ನಾನು ಹಾಕಿದ ಗೆರೆ ದಾಟಲಾರದ; ಇನ್ನೊಂದು ಹೆಣ್ಣಿನ ಪ್ರಸ್ತಾಪ ಬಂದರೆ ಸಂಕೋಚಪಡುವ; ನನ್ನ ಬಯಕೆಗಳನ್ನು ಅಲೆ ಅಲೆಯಾಗಿ ಎಬ್ಬಿಸುವ ಮೋಹಕಶಕ್ತಿ, ನನ್ನ ಸಂಪೂರ್ಣ ಹೆಣ್ತನವನ್ನು ಧಾರೆಧಾರೆಯಾಗಿ ಅರ್ಪಿಸುವಂತಹ ಕಾಂತಶಕ್ತಿ ನನ್ನ ಕಾಂತನಲ್ಲಿ ಕಂಡೆ. ಉನ್ಮಾದದ ಅಮಲಿನಲ್ಲಿ ನಾನೂ ಹಾಡಿದೆ; ನರ್ತಿಸಿದೆ. ಅಬ್ಬಾ ! ದ್ವಂದ್ವ ನರ್ತನಕ್ಕೂ ಆತ ಸಿದ್ಧನಾದ. ನಿಜಕ್ಕೂ ಧನ್ಯಳಾದೆ. ನನ್ನಂತಹ ಧನ್ಯತೆ ಜಗತ್ತಿನ ಇನ್ನಾವ ಹೆಣ್ಣಿಗೂ ಲಭಿಸಿರಲಾರದು ಎಂಬ ಹೆಮ್ಮೆಯೂ ಬಂತು ನನಗೆ. ಇನ್ನು ತಡೆಯಲಾಗಲಿಲ್ಲ. ನನ್ನ ತೀವ್ರತೆ ಹೆಚ್ಚಾದಂತೆ ಆತನ ಸಾಮೀಪ್ಯದ ಹಂಬಲ ಹೆಚ್ಚಾಯ್ತು. ಆತನನ್ನು ಬಿಟ್ಟಿರಲಾರದ ತುಡಿತ ಹೆಚ್ಚಾಯ್ತು. ಆತನನ್ನು ಪಡೆಯುವಲ್ಲಿ ಆತನ ಕೈ ಹಿಡಿದೆ; ಕುಣಿಯುತ್ತಲೇ ಕೈಹಿಡಿದೆ. ಭಾವಾತಿರೇಕದಿಂದ ಅಪ್ಪಿದೆ, ಆನಂದಿಸಿದೆ, ಆತನಲ್ಲಿ ಒಂದಾದೆ; ಆತನಲ್ಲಿಯೇ ನಾನು ನನ್ನನ್ನು ಕಂಡೆ. ನನ್ನವನಲ್ಲದೆ ಇನ್ನಾರಲ್ಲೂ ನಾನು ನನ್ನನ್ನು ಕಾಣಲಾರೆ ಎಂಬ ಸತ್ಯ ಅರಿತೆ. ನಾನು ನನ್ನತನವನ್ನೇ ಕರಗಿಸಿಕೊಂಡೆ. ಬದುಕಿನ ಆ ಸುಂದರ ಕ್ಷಣವೊಂದಕ್ಕಾಗಿ ಬದುಕನ್ನೂ, ಬದುಕಿನ ಕಹಿಯನ್ನೂ ಮರೆಯುವ ಸಿದ್ಧಿ ಪಡೆದೆ. ನಾನೇ ಗೆದ್ದೆ; ಸೋತು ಗೆದ್ದೆ. ಗೆಲುವಿನ ತಂತಿ ಮೀಟಿ ಪ್ರೀತಿಯ ರಾಗ ಹಾಡಿದೆ. ಆಗಲೇ ಉದಯರಾಗ ಪ್ರಾರಂಭವಾಗಿತ್ತು. ಬದುಕಿನ ಇನ್ನೊಂದು ಹಜ್ಜೆಗೆ ಅಣಿಯಾಗಲು ಅನುಭವದ ಶ್ರುತಿ ಆಗಲೇ ಶ್ರುತಿಗೊಂಡಿತ್ತು. ಆಗಲೇ ನಾನು ಭಾಮಿನಿಯಾದೆ.

-ಮುಗಿಯಿತು-

Leave a Reply

*

code