ಅಂಕಣಗಳು

Subscribe


 

ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ-ಚರ್ಚೆ ೩

Posted On: Saturday, August 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಚಂದ್ರಶೇಖರ ದಾಮ್ಲೆ, ಯಕ್ಷಗಾನ ಕಲಾವಿದರು, ಉಪನ್ಯಾಸಕರು, ಸುಳ್ಯ, ದ.ಕ.

(ಕಳೆದ ಸಲದ ಸಂಚಿಕೆಯಲ್ಲಿ ‘ಯಕ್ಷಗಾನ ಕಾರ್ಯಾಗಾರ ಮತ್ತು ಪಾಠ ಪಟ್ಟಿ’ ಎಂಬ ಶಿರೋನಾಮೆಯಲ್ಲಿ ಪ್ರಕಟವಾದ ತಿಂಗಳ ಚರ್ಚೆಯಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದವರು ನೀಡಿದ ಚರ್ಚೆಗೆ ಮರುಪ್ರತಿಕ್ರಿಯೆ)



ಸದ್ರಿ ಚರ್ಚೆಯಲ್ಲಿ ನನ್ನನ್ನು ಸಮಾಜಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂದು ಮಾತ್ರ ಪರಿಚಯಿಸಿರುವುದು ಲೇಖಕರ ಸಂಕುಚಿತವಾದ ಹಾಗೂ ದುರುದ್ದೇಶದ ಮನಸ್ಸು ಎಂದು ಹೇಳದೆ ವಿಧಿಯಿಲ್ಲ. ನನ್ನನ್ನು ವೈಯಕ್ತಿಕವಾಗಿ ಖಂಡಿಸಿದ್ದಾರೆಯೇ ಹೊರತು ತಾತ್ವಿಕ ಉತ್ತರ ನೀಡಿಲ್ಲ ಎಂಬುದಕ್ಕೆ ಸ್ಪಷ್ಟೀಕರಣವಿದು. ಸುಳ್ಯದಲ್ಲಿ ೧೯೮೩ರಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅದರ ಸಂಚಾಲಕನಾಗಿ, ಕಲಾಕಾರ್ಯಕ್ರಮಗಳ ಸಂಘಟಕನಾಗಿ, ಹಾಗೂ ಮಕ್ಕಳ ಯಕ್ಷಗಾನ ಮೇಳದ ನಿರ್ದೇಶಕನಾಗಿ ಕಳೆದ ೨೫ ವರ್ಷಗಳಲ್ಲಿ ನಿರಂತರವಾಗಿ ಯಕ್ಷಗಾನದ ಹವ್ಯಾಸಿಯಾಗಿದ್ದೇನೆ. ಆದರೆ ನನ್ನ ವ್ಯಕ್ತಿತ್ವದಿಂದ ಯಕ್ಷಗಾನವನ್ನು ಕಳೆದು ಪರಿಚಯಿಸಿದ್ದೆಂದರೆ ಅದು ದುರುದ್ದೇಶದಿಂದಲ್ಲದೆ ಮತ್ತೇನು? ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಗಳ ಇತಿಹಾಸವನ್ನು ಅಳಿಸಿ ಹಾಕುವ ಒಂದು ಅಪಾಯಕಾರಿ ದೃಷ್ಠಿ ಈ ಲೇಖನದಲ್ಲಿರುವುದು ಸ್ಪಷ್ಟವಾಗಿದೆ.

ನಾನು ಯಕ್ಷಗಾನ ವೇದಿಕೆಯ ಸಂಚಾಲಕನಾಗಿ ನಡೆಸಿದ ಕಾರ್ಯಗಾರಗಳು, ವಿಚಾರ ಸಂಕಿರಣಗಳು ಹಾಗೂ ಪ್ರಾತ್ಯಕ್ಷಿಕೆಗಳಿಗೆ ನಿರ್ದೇಶಕರಾಗಿ ಯಕ್ಷಗಾನದ ತಜ್ಞರನ್ನೇ ಆಹ್ವಾನಿಸಿದ್ದೆ. ನಾಲ್ಕು ದಿನಗಳ ‘ಯಕ್ಷಗಾನ ಹಿಮ್ಮೇಳ ಅಧ್ಯಯನ’ ಶಿಬಿರವನ್ನು ಹಾಗೂ ಮೂರು ದಿನಗಳ ‘ಅರ್ಥಗಾರಿಕೆ’ಯ ಶಿಬಿರವನ್ನು ದಿ| ಶೇಣಿ ಗೋಪಾಲಕೃಷ್ಣ ಭಟ್ಟರು ನಿರ್ದೇಶಕರಾಗಿ ನಡೆಸಿಕೊಟ್ಟಿದ್ದರು. ಆಗ ಬಲಿಪ ಶೈಲಿಯ ಭಾಗವತಿಕೆಯನ್ನು ದಾಖಲಿಸಲಾಗಿತ್ತು. ನಾವು ಏರ್ಪಡಿಸಿದ ‘ಯಕ್ಷಗಾನದಲ್ಲಿ ಹಾಸ್ಯ’ ಎಂಬ ವಿಚಾರಗೋಷ್ಠಿ ಹಾಗೂ ತಾಳಮದ್ದಳೆಯನ್ನು ದಿ| ವಿಟ್ಲ ಗೋಪಾಲಕೃಷ್ಣ ಭಟ್ಟರು ನಿರ್ದೇಶಿಸಿದ್ದರು. ‘ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ’ ಕುರಿತಾಗಿ ನಡೆಸಿದ್ದ ನಮ್ಮ ವಿಚಾರ ಸಂಕಿರಣದ ಮುಂಚೂಣಿಯಲ್ಲಿದ್ದವರು ಶ್ರೀ ಕೊಳ್ಯೂರು ರಾಮಚಂದ್ರ ರಾಯರು, ಕೊಕ್ಕಡ ಈಶ್ವರ ಭಟ್ ಮುಂತಾದವರು. ನಾನು ಇವುಗಳ ಸಂಘಟನೆಯ ಪಾತ್ರ ವಹಿಸಿದ್ದೆನಷ್ಟೇ ಹೊರತು ನಿರ್ದೇಶಕನಾಗಲಿಲ್ಲ. ಹಾಗಾಗಿ ಸುಳ್ಯದಲ್ಲಿ ನಡೆದ ಯಕ್ಷ ಶಿಕ್ಷಣ ಕಾರ್ಯಗಾರಕ್ಕೂ ತಜ್ಞರನ್ನೇ ನಿರ್ದೇಶಕರಾಗಿ ಆಹ್ವಾನಿಸಿ ನಡೆಸುತ್ತಿದ್ದರೆ ಅದರ ರೂಪುರೇಷೆಯು ಗುಣಾತ್ಮಕವಾಗಿರುತ್ತಿತ್ತು. ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಶ್ರೀಯುತ ಕೆ. ಗೋವಿಂದ ಭಟ್ಟರನ್ನೇ ನಿರ್ದೇಶಕರಾಗಿ ಆಹ್ವಾನಿಸಬಹುದಿತ್ತು. ಅಥವಾ ಒಂದು ನಿರ್ದೇಶಕ ಮಂಡಳಿಯಾಗಿ ಬಲಿಪರು, ಜೋಶಿಯವರು, ಗೋವಿಂದ ಭಟ್ಟರು, ಕೊಳ್ಯೂರು ರಾಮಚಂದ್ರ ರಾಯರು, ಪುತ್ತೂರು ಶ್ರೀಧರ ಭಂಡಾರಿ, ಕರ್ಗಲ್ಲು, ಸಬ್ಬಣಕೋಡಿ, ಗೇರುಕಟ್ಟೆ ಗಂಗಯ್ಯ ಶೆಟ್ಟರು ಹೀಗೆ ಕೆಲವರನ್ನು ಕರೆದು ಒಂದು ಪೂರ್ವಭಾವಿ ಸಭೆ ನಡೆಸಿ ಇದರ ರೂಪುರೇಷೆಗಳನ್ನು ನಿರ್ಣಯಿಸಬಹುದಿತ್ತು. ಬಳಿಕ ವ್ಯಾಪಕ ಮಟ್ಟದಲ್ಲಿ ಒಂದೆರಡು ದಿನದ ಕಾರ್‍ಯಾಗಾರ ನಡೆಸಬೇಕಾಗಿತ್ತು. ಆಗ ಅದರ ಲಾಭಗಳು ಬೇರೇ ಇದ್ದುವೆಂಬುದೇ ನನ್ನ ಟೀಕೆಯ ಆಶಯ.

ಪ್ರಸ್ತುತ ಕಾರ್ಯಗಾರವನ್ನು ರಾಜ್ಯಮಟ್ಟದ ಹಲವಾರು ಪಠ್ಯ ಪುಸ್ತಕ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವ ಪ್ರಕಾಶ ಮೂಡಿತ್ತಾಯರು ಕಾರ್ಯತಃ ನಿರ್ದೇಶಿಸಿದ್ದಾರೆ. ಶಿಕ್ಷಣದ ಕ್ಷೇತ್ರದಲ್ಲಿ ಅವರ ತಜ್ಞತೆಯ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಯಕ್ಷಗಾನದ ಪಠ್ಯ ರಚನೆಗೆ ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾಗಬಹುದಷ್ಟೇ ಹೊರತು; ನಿರ್ದೇಶಕರಾಗುವುದು ಸೂಕ್ತವಲ್ಲ. ಹಾಗೆಂದು ನಾನು ಆ ಕೇಂದ್ರ ಸ್ಥಾನದಲ್ಲಿದ್ದಿರಬೇಕೆಂಬ ಆಸೆ ನನ್ನಲ್ಲಿಲ್ಲ. ಏಕೆಂದರೆ ಆ ಸ್ಥಾನದಲ್ಲಿದ್ದು ಮಾರ್ಗದರ್ಶನ ನೀಡಬಲ್ಲ ಹಾಗೂ ಕಲೆಯ ಒಳ ಹೊರಗನ್ನು ಅನುಭವದಿಂದ ಅರಿತ ಸೂಕ್ತ ವ್ಯಕ್ತಿಗಳಿದ್ದಾರೆ. ಉದಾಹರಣೆಗೆ ಕೆ. ಗೋವಿಂದ ಭಟ್ಟರೇ ಸಾಕಷ್ಟು ನೋಟ್ಸ್ ಮಾಡಿಕೊಂಡು ಬಂದಿದ್ದರು. ಹಾಗೆ ಮಾಡಿಕೊಂಡು ಬಂದವರೆಷ್ಟು ಮಂದಿ ಇದ್ದರು? ಈ ಕಾರ್ಯಾಗಾರದಲ್ಲಿ ಒಟ್ಟಾರೆಯಾಗಿ ಸಂಘಟಕರೇ ಪ್ರಮುಖರಾಗಿದ್ದರೇ ಹೊರತು ಕಲಾವಿದರಲ್ಲ. ಹಾಗಾಗಿಯೇ ಕೆಲವು ಹಿರಿಯ ಕಲಾವಿದರು ಹಾಗೂ ಕಲಾವಿಮರ್ಶಕರು ಅಲ್ಲಿ ನಮಗೇನು ಕೆಲಸವೆಂತ ಭಾವಿಸಿದ್ದರಲ್ಲಿ ಅಚ್ಚರಿ ಇಲ್ಲ. ನಾನೂ ಅರೆಬರೆಯಾಗಿ ಭಾಗವಹಿಸಿದ್ದೇನೆಂದು ಹೇಳಿದ್ದಾರೆ. ಯಕ್ಷಗಾನದ ಬಗ್ಗೆ ಅರೆಬರೆ ತಿಳಿದವರ ನಿರ್ದೇಶನದಲ್ಲಿ ಮತ್ತೇನು ಮಾಡಲು ಸಾಧ್ಯ?

ಯಕ್ಷಗಾನ ಅಕಾಡೆಮಿ ಸದ್ಯಸನಾಗುವ ಬಗ್ಗೆ ರಾಜಕೀಯ ಓಟದ ಸ್ಪರ್ಧೆಯಲ್ಲಿ ನಾನು ಸೋತಿದ್ದೇನೆಂದು ಬರೆದಿದ್ದಾರೆ. ಹಾಗೇಕೆ ಹೇಳಬೇಕು? ಅದರ ಬದಲು ಸುಂದರ ಕೇನಾಜೆಯವರು ರಾಜಕೀಯ ಸಂದಿಗಳಲ್ಲೇ ಸಾಗಿ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ ಹಾಗೂ ಅದಕ್ಕಾಗಿ ನಾನು ಹತಾಶೆಗೊಂಡಿದ್ದೇನೆಂದು ನಿಜವನ್ನೇ ಬರೆಯಬಹುದಿತ್ತಲ್ಲ. ಇಲ್ಲಿ ಹತಾಶೆಗೊಳ್ಳದೆ ವಿಧಿ ಇಲ್ಲ. ಏಕೆಂದರೆ ಕೇನಾಜೆಯವರು ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಪರಿಶ್ರಮ ಹೊಂದಿದವರಲ್ಲ. ಅವರೊಬ್ಬ ಜಾನಪದ ಸಂಶೋಧಕನೆಂಬ ನೆಲೆಯಲ್ಲಿ ಅವರ ಬಗ್ಗೆ ಪ್ರೀತ್ಯಾದರಗಳಿವೆ. ಆದರೆ ಯಕ್ಷಗಾನದಲ್ಲಿ ಅವರೇನೂ ಕೆಲಸ ಮಾಡಿಲ್ಲ. ವಾಸ್ತವಿಕವಾಗಿ ಅವರ ನೇಮಕವಾದಾಗ ಅವರು ಯಾರೆಂಬ ಪ್ರಶ್ನೆಯೇ ಯಕ್ಷಗಾನ ವಲಯದಲ್ಲಿ ಸುತ್ತುತ್ತಿತು.

ಈಗ ಅಕಾಡೆಮಿ ಸದಸ್ಯರಾದ ಬಳಿಕವೇ ಅವರು ಶಿಕ್ಷಕರ ಯಕ್ಷಗಾನ ಒಕ್ಕೂಟದಲ್ಲಿ ಸೇರಿಕೊಂಡು ಅದನ್ನೀಗ ಯಕ್ಷಗಾನದಲ್ಲಿ ತಾನು ಯಾರೆಂದು ಪರಿಚಯಿಸಿಕೊಳ್ಳುವುದಕ್ಕೆ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಯಕ್ಷಗಾನಕ್ಕೆ ಅಪರಿಚಿತರಾದ ಅವರು ರಾಜಕೀಯದ ಮೂಲಕ ಅಕಾಡೆಮಿ ಸದಸ್ಯರಾಗಬಹುದಾದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಕ್ಷಗಾನದಲ್ಲಿ ಕಲಾಸ್ವರೂಪದ ಉಳಿವಿಗಾಗಿ ಗುಣಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿದ ನನಗೆ ಅಕಾಡೆಮಿ ಸದಸ್ಯನಾಗುವ ಆಸೆ ಇದ್ದರೆ ಅದು ಅನುಚಿತವಲ್ಲ. ಆದರೆ ನನ್ನ ತೇಜೋವಧೆಗಾಗಿ ನಾನು ರಾಜಕೀಯ ಓಟದಲ್ಲಿದ್ದೆನೆಂಬ ಸುಳ್ಳನ್ನು ಬರೆಯುವುದು ಅಗತ್ಯವಿಲ್ಲ. ಅಕಾಡೆಮಿ ಸದಸ್ಯತನ ಅಪೇಕ್ಷಿಸಿ ನಾನು ನನ್ನ ಸಾಧನೆಗಳ ಪರಿಚಯ ಪತ್ರ ಸಲ್ಲಿಸಿದ್ದೆ. ಅಲ್ಲಿಗೆ ನನ್ನ ಕೆಲಸ ಮುಗಿದಿತ್ತು. ಅದಕ್ಕೊಂದು ರಾಜಕೀಯ ಓಟದ ಸ್ಪರ್ಧೆ ಇದೆ ಎಂಬ ಅರಿವಿದ್ದದ್ದು ಕೇನಾಜೆಯವರಿಗೆ. ಪ್ರಸ್ತುತ ತನ್ನ ಹುದ್ದೆಯಲ್ಲಿ ಸಿಗುವ ಪುರುಸೊತ್ತು ಹಾಗೂ ರಾಜಕೀಯ ಕೊಂಡಿಗಳಿಂದಾಗಿ ಅವರಿಗೇ ಅದು ಸಾಧ್ಯ.

ನಾನು ಶಿಕ್ಷಕರ ಯಕ್ಷಗಾನ ಒಕ್ಕೂಟದ ಆರಂಭದಲ್ಲೇ ಇದ್ದವನು. ಈ ಒಕ್ಕೂಟದಲ್ಲಿ ಕಲಾ ನಿಷ್ಠೆಯುಳ್ಳವರಿದ್ದಾರೆ. ಬಹಳ ನಿರೀಕ್ಷೆಗಳಿಂದಲೇ ಅದನ್ನು ಸಂಘಟಿಸಲಾಗಿತ್ತು. ಮೊದಲ ವರ್ಷಗಳಲ್ಲಿ ನಾನೂ ಬಣ್ಣವನ್ನೂ ಹಾಕಿದ್ದೇನೆ. ಆದರೆ ಈಗ ಬಿಟ್ಟಿದ್ದೇನೆ. ಅದರ ಕಾರಣಗಳನ್ನು ನಾನಿಲ್ಲಿ ಚರ್ಚಿಸುವುದಿಲ್ಲ. ಅವು ಕಲೆಯ ನಿಷ್ಠೆಗೆ ಸಂಬಂಧಿಸಿದುವು.

ಇನ್ನು ಒಂದು ವಿಚಾರ: ಸುಳ್ಯದ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದವರೆಲ್ಲ ತಮ್ಮ ಪರವಾಗಿದ್ದಾರೆಂಬ ರೀತಿಯಲ್ಲಿ ಶಿಕ್ಷಕರ ಒಕ್ಕೂಟದ ಅಧ್ಯಕ್ಷರು ಬರೆದಿದ್ದಾರೆ. ಯಕ್ಷಗಾನ ಅಕಾಡೆಮಿಯು ಬೆಂಗಳೂರಿಂದಲೇ ಒಮ್ಮೆ ಪತ್ರ ಬರೆದು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರದ ಯಶಸ್ವಿನ ಬಗ್ಗೆ ಜಿeeಜ bಚಿಛಿಞ ಪಡೆಯುವ ಕೆಲಸ ಮಾಡಲಿ. ಆಗ ನಿಜವಾದ ವಿವರಗಳು ಸಿಗುತ್ತವೆ.

ಕೇನಾಜೆಯವರು ಕರೆದ ಸಭೆಗಳಿಗೆ ನಾನು ಬರಲಿಲ್ಲವೆಂದು ಆಕ್ಷೇಪ ಇದೆ. ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಹೋಗುವುದಾದರೂ ಹೇಗೆ? ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ವಿಚಾರ ಸಂಕಿರಣವನ್ನು ನಮ್ಮ ಸ್ನೇಹ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಅವರೇ ನಡೆಸಿದಾಗ ಇಲ್ಲಿಗೆ ಅನೇಕ ಬಾರಿ ಬಂದ ಹಾಗೂ ನನ್ನನ್ನು ಸಂಪರ್ಕಿಸಿದ್ದ ಅವರು ಈ ಯಕ್ಷಗಾನ ಕಾರ್ಯಾಗಾರದ ಸಂಘಟನೆಯ ಬಗ್ಗೆಯೂ ಅನೌಪಚಾರಿಕವಾಗಿಯಾದರೂ ಮಾತಾಡಲು ಬಂದಿದ್ದರೆ ಯಾರ ನಿರ್ದೇಶನದಲ್ಲಿ ಹೆಚ್ಚು ಉಪಯುಕ್ತವಾಗಿ ಇದನ್ನು ಮಾಡಬಹುದೆಂಬ ಸಲಹೆ ನೀಡುತ್ತಿದ್ದೆ. ಆದರೆ ಆ ಸಂವೇದನೆ ಅವರಿಗಿರಲ್ಲಿಲ್ಲ. ಇದಕ್ಕೆ ಪ್ರಸ್ತುತ ಶಿಕ್ಷಕರ ಯಕ್ಷಗಾನ ಒಕ್ಕೂಟದ ಅಧ್ಯಕ್ಷರ ಹಾಗೂ ಕೇನಾಜೆಯವರೊಳಗಿನ ಮೈತ್ರಿ ಅಡ್ಡಿಯಾಗಿರಬಹುದು.

ಅನೇಕ ವರ್ಷಗಳಿಂದ ಶಾಲೆಗಳಲ್ಲಿ ಯಕ್ಷಗಾನದ ಪಾಠವಿತ್ತು, ಮಕ್ಕಳ ಮೇಳಗಳ ಮೂಲಕ ಯಕ್ಷಗಾನ ಶಿಕ್ಷಣ ನಡೆಯುತ್ತಿತ್ತು. ಉಡುಪಿ ತಾಲೂಕಿನ ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣದ ಚಳುವಳಿಯೇ ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಡೆದಿದೆ. ಆದರೆ ಶಿಕ್ಷಣದಲ್ಲಿ ಯಕ್ಷಗಾನ ನಮ್ಮದೇ ಪ್ರಥಮ ಪ್ರಯತ್ನ ಎಂಬ ಹೇಳಿಕೆ ಸತ್ಯವಾಗಬೇಕಿದ್ದರೆ ನಾನು ಇಲ್ಲಿ ಮಕ್ಕಳ ಮೇಳ ಕಟ್ಟಿ ನೂರಾರು ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನಡೆಸಿರುವುದು ಹಾಗೂ ನಮ್ಮ ಶಾಲೆಯಲ್ಲಿ ಒಂದು ದಶಕಕ್ಕೂ ಮೊದಲೇ ಯಕ್ಷಗಾನ ಶಿಕ್ಷಣ ನಡೆಯುತ್ತಿರುವ ಸಂಗತಿಯನ್ನು ಮರೆಮಾಡಬೇಕಾಗುತ್ತದೆ. ಹಾಗಾಗಿಯೇ ಈ ಬಾರಿಯ ಸಂಯೋಜನೆಯಲ್ಲಿ ನನ್ನನ್ನು ದೂರವಿಡುವುದೇ ಅವರಿಗೆ ಸೂಕ್ತವಾಗಿತ್ತು.

ಇನ್ನು ಅವರ ಅನಿಸಿಕೆಯಲ್ಲಿರುವ ಯಕ್ಷಗಾನದ ಮೂಲಸಂಗತಿಗಳನ್ನು ಎಷ್ಟರ ಮಟ್ಟಿಗೆ ಕಲಿಯಬೇಕೆಂಬ ಚಿಂತನೆ, ಯಕ್ಷಗಾನದ ಪರಿಷ್ಕಾರ, ಯಕ್ಷಗಾನಕ್ಕೆ ಹೊಸ ಆಯಾಮ ಮುಂತಾದ ವಿರೋಧಾಭಾಸದ ಕೆಲವು ವಿಚಾರಗಳಿಗೆ ಉತ್ತರ ನೀಡಲು ಹೋದರೆ ಪುಟಗಳು ಸಾಲವು. ಒಂದು ಮಾತ್ರ ಸತ್ಯ – ನನ್ನದು ಪೂರ್ವಗ್ರಹವೂ ಅಲ್ಲ, ವೈಯಕ್ತಿಕ ಪ್ರಶ್ನೆಗಳೂ ಅಲ್ಲ. ಅವು ಯಕ್ಷಗಾನ ಕಲೆಗೆ ಸಂಬಂಧಿಸಿದುವೇ ಆಗಿವೆ. ಇದೇ ಪತ್ರಿಕೆಯಲ್ಲಿ ದೀವಟಿಗೆ ಅಂಕಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅಶೋಕವರ್ಧನರ ನಿಷ್ಪಕ್ಷಪಾತಿಕ ನಿಲುವಿನಷ್ಟೇ ನನ್ನದೂ ಯಕ್ಷಗಾನದ ಸಮಗ್ರತೆಯ ನಿಲುವೇ ಆಗಿದೆ.


( ಲೇಖಕರು ಯಕ್ಷಗಾನ ಕಲಾವಿದರು, ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪನ್ಯಾಸಕರು.ಸುಳ್ಯ, ದ.ಕ.)

Leave a Reply

*

code