ಅಂಕಣಗಳು

Subscribe


 

ಕರ್ನಾಟಕ ಕಲಾ ತಿಲಕ ನಾಟ್ಯಮೋಹನ ಉಳ್ಳಾಲ ಮೋಹನ್ ಕುಮಾರ್

Posted On: Monday, August 16th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕರ್ನಾಟಕ ಕಲಾತಿಲಕ ಶ್ರೀಯುತ ಉಳ್ಳಾಲ ಮೋಹನ್ ಕುಮಾರ್ ಅವರ ಹೆಸರನ್ನು ಕೇಳದವರು ಯಾರು? ದಕ್ಷಿಣ ಕರಾವಳಿಯ ಭರತನಾಟ್ಯ ಪರಂಪರೆಯಲ್ಲಿ ಅವರ ಹೆಸರಿಲ್ಲದಿದ್ದರೆ ಅದು ಅಪೂರ್ಣವೆನಿಸುವಷ್ಟರ ಮಟ್ಟಿಗೆ ನೃತ್ಯ ಕ್ಷೇತ್ರದ ನಾಡಿಮಿಡಿತವಾಗಿದ್ದಾರೆ. ಇಂದಿಗೆ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲದೆ ಕರ್ನಾಟಕ, ಹೊರರಾಜ್ಯಗಳಲ್ಲಿ ಖ್ಯಾತರಾಗಿರುವ ಸುಮಾರು ೧೦೦ಕ್ಕೂ ಮಿಗಿಲು ನೃತ್ಯ ಶಿಕ್ಷಕರು-ಗುರುಗಳು ಉಳ್ಳಾಲ ಮೋಹನ್ ಕುಮಾರ್ ಅವರ ಗರಡಿಯಲ್ಲಿ ಪಳಗಿ ದೊಡ್ಡವರಾದವರೇ ಹೌದು. ಮಂಗಳೂರಿನ ಉಳ್ಳಾಲದ ಕೋಲ್ಯ ಕೋಟೆಕಾರ್‌ನಲ್ಲಿ ನೆಲೆಸಿರುವ ಶ್ರೀಯುತರು ; ತಮ್ಮ ಸಂಸ್ಥೆ ನಾಟ್ಯನಿಕೇತನದ ಮೂಲಕವಾಗಿ ಅದೆಷ್ಟೋ ನೃತ್ಯಾಸಕ್ತ ಹೃದಯಗಳಲ್ಲಿ ಜಾಗೃತಿಯನ್ನು ಮೂಡಿಸಿದವರು. ಮಂಗಳೂರಿನ ಭರತನಾಟ್ಯ ಸಂಸ್ಕೃತಿಗೊಂದು ರೂಪ ತಂದಿತ್ತವರಲ್ಲಿ ಇವರೂ ಒಬ್ಬರಾಗಿದ್ದು ; ನೃತ್ಯ ಪರಂಪರೆಯಲ್ಲಿ ಮಂಗಳೂರಿಗೆ ಸ್ಥಾನವನ್ನು ದಕ್ಕಿಸಿಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟವರು.

ಹಲವು ನೃತ್ಯ ರೂಪಕ, ನೃತ್ಯಬಂಧಗಳನ್ನು ಸಂಯೋಜಿಸಿರುವ ಮೋಹನ್ ಕುಮಾರ್ ಅವರದ್ದು ಇಳಿವಯಸ್ಸಿನಲ್ಲೂ ಬಳಲದ, ಚಟುವಟಿಕೆಯುಳ್ಳ ಕ್ರಿಯಾಶೀಲ ವ್ಯಕ್ತಿತ್ವ. ಹಲವು ನೃತ್ಯ ಸಂಸ್ಥೆಗಳ, ಅಕಾಡೆಮಿಗಳ ಮಾರ್ಗದರ್ಶಿಯಾಗಿ, ಪರೀಕ್ಷಾ ಮಂಡಳಿ, ಪಠ್ಯಕ್ರಮ ಮಂಡಳಿಯ ಸದಸ್ಯರಾಗಿ, ಮೌಲ್ಯಮಾಪಕರಾಗಿ, ಪರೀಕ್ಷಕರಾಗಿ, ಸಂಯೋಜಕರಾಗಿ ದುಡಿದಿರುವ ಇವರು ದಕ್ಷಿಣ ಕನ್ನಡದ ನೃತ್ಯಪರಂಪರೆಯಲ್ಲಿ ಪ್ರತ್ಯಕ್ಷವಾಗಿ ಮತ್ತು ಅವರ ಶಿಷ್ಯರ ಮೂಲಕವಾಗಿ ಆಳವಾದ ಬೇರುಗಳನ್ನು ಹರಡಿಸಿದವರು. ಅವರ ನಾಟ್ಯನಿಕೇತನ ಸುವರ್ಣ ವರ್ಷಗಳ ದಾಖಲೆಯನ್ನು ಮಿರಿ ಮುನ್ನಡೆದಿದ್ದು, ಅವರ ಮಗಳು, ಶಿಷ್ಯೆ ವಿದುಷಿ ರಾಜಶ್ರೀ ತಮ್ಮ ತಂದೆಯ ಪರಂಪರೆಯ ಮುಂದಿನ ನೋಟಗಳಿಗೆ ಕೊಂಡಿಯಾಗಿದ್ದಾರೆ. ೧೯೮೯ರಲ್ಲಿ ಮಂಗಳೂರಿನಲ್ಲಿ ನಡೆದ ಸನ್ಮಾನದಲ್ಲಿ ಅಮೃತ ಸೋಮೇಶ್ವರ ಅವರ ಸಂಪಾದಕತ್ವದಲ್ಲಿ ನಾಟ್ಯಮೋಹನ ಎಂಬ ಅಭಿನಂದನಾ ಕೃತಿ ಹೊರಬಂದಿದೆ. ಹಲವು ಗುರು ಅಭಿವಂದನೆಗಳು, ಹೆಮ್ಮೆಯ ರಂಗಪ್ರವೇಶಗಳು, ಖ್ಯಾತ ಪುರಸ್ಕಾರ-ಸಮ್ಮಾನಗಳು ಅವರ ಮುಡಿಗೇರಿವೆ. ಅವರ ನೋಟ-ನಿಲುವುಗಳಿಗೆ ಸಾಕ್ಷಿಯಾಗಿ ಈ ಸಂ’ದರ್ಶನ’ ನಿಮ್ಮೆದುರಿಗಿದೆ.

ಸಂ'ದರ್ಶನ'

ನೀವು ಕಲಿಯುವ ಕಾಲದ ಮನಸ್ಥಿತಿ ಹೇಗಿತ್ತು?

ಕಲಿಯುವ ಆಕಾಂಕ್ಷೆ ಹೆಚ್ಚು. ಅದರಂತೆಯೇ ಕಷ್ಟವೂ ಕೂಡಾ. ಆಗ ವಿದ್ಯಾಭ್ಯಾಸ ಎಂದರೆ ಉದ್ಯೋಗಕ್ಕಾಗಿ ಮಾತ್ರ ಅಲ್ಲ. ವಿಠಲ ಮಾಸ್ಟ್ರು ನನ್ನ ಮೊದಲ ಗುರು. ನಂತರ ರಾಜರತ್ನಂ ಪಿಳ್ಳೈ ಅವರಲ್ಲಿ ಕಲಿಕೆ. ಆಗ ಅವರು ಕಲಾಮಂಡಲಂನಿಂದ ಹೊರಬಂದು ಲಲಿತ ಕಲಾ ಸದನದಲ್ಲಿ ಕಲಿಸ್ತಾ ಇದ್ದರು. ನಂತರದ ದಿನಗಳಲ್ಲಿ ಅವರ ಆಶೀರ್ವಾದದಿಂದಲೇ ತರಗತಿ ಪ್ರಾರಂಭಿಸಿದೆ.

ಉಳಿದ ಕಲೆಗಳಿಗಿಂತ ಭರತನಾಟ್ಯ ಹೇಗೆ ವಿಭಿನ್ನ ಎಂಬುದು ನಿಮ್ಮ ಅಭಿಪ್ರಾಯ?

ಭರತನಾಟ್ಯವೆಂದರೆ ಸಹಜ ಭಾವ. ನಮ್ಮ ನಿತ್ಯದ ಜೀವನಕ್ಕೆ ಬಹಳಷ್ಟು ಸಮೀಪದ್ದು ಭರತನಾಟ್ಯ. ಇದನ್ನು ಕಲಿತರೆ ಉಳಿದ ಕಲೆಗಳನ್ನು ಕಲಿಯಲು ಸುಲಭ. ಆದರೆ ಭರತನಾಟ್ಯದಲ್ಲಿ ಭರತನಾಟ್ಯವೇ ಇರಬೇಕು. ಅದೇ ಸಹಜ.

‘ಭರತನಾಟ್ಯದಲ್ಲಿ ಭರತನಾಟ್ಯವಿರಬೇಕು’. ಅಂದರೆ?

ಇಂದು ಎಲ್ಲದರಲ್ಲೂ ಅನುಕರಣೆಯಿದೆ. ಉದಾ : ವರ್ಣ, ಪದ, ಜಾವಳಿ, ಕೀರ್ತನೆಗಳಾದಿಯಾಗಿ ಎಲ್ಲದಕ್ಕೂ ತಟ್ಟುಮೆಟ್ಟು ಅಭಿನಯ. ಇದು ಕೂಚಿಪುಡಿಯ ಅನುಕರಣೆ. ಭರತನಾಟ್ಯದ ಸಹಜತೆಗೆ ಧಕ್ಕೆ. ಕೆಲವೊಂದು ನೃತ್ಯನಾಟಕಗಳಿಗೆ ಬದಲಾವಣೆ ಬೇಕು ನಿಜ. ಆದರೆ ಫ್ಯೂಷನ್ ಎನುತ್ತಾ ಏನೇನೋ ಅಬದ್ಧ ಮಾಡಿದರೆ ಅದು ನೃತ್ಯಕ್ಕೆ ಮಾಡುವ ಅನ್ಯಾಯವಲ್ಲದೇ ಬೇರೇನಲ್ಲ !

ಅಷ್ಟೇ ಏಕೆ, ಇಂದಿನ ಬಹಳಷ್ಟು ರಂಗಪ್ರವೇಶಗಳು ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳುತ್ತವೆ. ಶಾಸ್ತ್ರೀಯ ನೃತ್ಯ ರಂಗಪ್ರವೇಶವೆಂದು ಎಲ್ಲವನ್ನೂ ಅರ್ಧಂಬರ್ಧ ಮಾಡುತ್ತಾರೆ. ತಟ್ಟೆಯಿಟ್ಟು ಕುಣಿದು ಭರತನಾಟ್ಯವೆಂದು ತೋರಿಸುತ್ತಾರೆ. ಅದಕ್ಕೆ ಸರಿಯಾಗಿಯೋ ಎಂಬಂತೆ ತಟ್ಟೆ ಇಟ್ಟ ಕೂಡಲೇ ಭಯಂಕರ ಚಪ್ಪಾಳೆ. ಈ ಬಗೆಯ ಅಳವಡಿಕೆ ಸಹಜತೆಗೆ ಕೊಡಲಿಪೆಟ್ಟು. ನಮ್ಮಲ್ಲಿ ಮ್ಯಾಜಿಕ್‌ಗಳನ್ನು ಮಾಡುವವರಿದ್ದಾರೆ. ಆದರೆ ಮ್ಯಾಜಿಕ್ ಅಷ್ಟೇ ನೃತ್ಯವಲ್ಲ. ರಾಗಗಳಿಗೆ ಅನುಸಾರವಾಗಿ ಅಭಿನಯವನ್ನು ತರುವ ಶಕ್ತಿ ಕಲಾವಿದನಲ್ಲಿ ಇರಬೇಕು.

ಹಾಗಾದರೆ ಹಳೆಯ ಕ್ರಮಗಳಲ್ಲಿ ಇಂತಹ ಅನುಕರಣೆಯಿರಲಿಲ್ಲವೇ?

ಹಿಂದಿನದ್ದೆಲ್ಲ ಒಳ್ಳೆಯದು ಅಂತ ಅಲ್ಲ. ಹಾಗಂತ ಈಗಿನದ್ದು ಕೆಟ್ಟದ್ದೂ ಅಲ್ಲ. ದೇವದಾಸಿಗಳು ರಾಜರನ್ನು ಮೆಚ್ಚಿಸಲು ಮಾಡಿದ ರೀತಿಯಲ್ಲಿ ನಾವಿಂದು ಮಾಡಬಾರದು. ಹಿಂದಿನದ್ದೆಲ್ಲಾ ಒಳ್ಳೆಯದು ಎಂದು ಈಗ ಮಾಡಿದರೆ ಕಲ್ಲು ಬೀಳುವಂತಾದೀತು ! ಆಯಾಯ ಕಾಲದಲ್ಲಿ ಎಷ್ಟು ಒಳ್ಳೆಯದಾಗಿದೆಯೋ ಅಷ್ಟೇ ಕೆಟ್ಟದ್ದೂ ಆಗಿದೆ.


ಈ ಹಳತರಿಂದ ಹೊಸತಿನ ಪಲ್ಲಟ ಅಥವಾ ಸ್ಥಿತ್ಯಂತರಕ್ಕೆ ಒಂದು ಒಳ್ಳೆಯ ಉದಾಹರಣೆ ಕೊಡಬಹುದೇ?

ಅರಂಗೇಟ್ರಂ- ಗುರುವಿನ ಬಳಿ ಕಲಿತ ಬಳಿಕ ಸಮಾಜದ ವಿದ್ವಾಂಸರ ಎದುರಲ್ಲಿ ನೃತ್ಯ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿರುವ ಸಂಸ್ಕೃತಿ. ಆದರೆ ಇಂದು ಅದೊಂದು ತಾಕತ್ತು ಎಂಬಂತಾಗಿದೆ. ಸಿಕ್ಕಾಪಟ್ಟೆ ಖರ್ಚು ಮಾಡಿ ಮದುವೆಗಿಂತಲೂ ಭರ್ಜರಿ ಪ್ರವೇಶ ಮಾಡಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಕೆಲವರು ಮದುವೆಯಾದ ನಂತರ ನರ್ತಿಸುವುದನ್ನು ಸಂಪೂರ್ಣ ಬಿಟ್ಟುಬಿಡುತ್ತಾರೆ ! ಕ್ರಮೇಣ ಸುದ್ದಿಯೇ ಇಲ್ಲದಂತೆ ಅಡಗಿಹೋಗುತ್ತಾರೆ.


ಈ ಪಲ್ಲಟಕ್ಕೆ ಯಾವ ಮಾನದಂಡವನ್ನಿಟ್ಟರೆ ಒಳಿತು?

ಮೊದಲು ಗುರುವಿಗೆ ವಿದ್ಯಾರ್ಥಿಯ ಪ್ರತಿಭೆ ಸಮಾಧಾನ ಕೊಡಬೇಕು. ಏನಿಲ್ಲವೆಂದರೂ ಅರಂಗೇಟ್ರಂ ಮಾಡಲು ೧೮ ವರ್ಷ ಆದರೂ ವಿದ್ಯಾರ್ಥಿಗೆ ಆಗಿರಬೇಕು. ಚಿಕ್ಕ ಮಕ್ಕಳಿಗೆ ರಂಗಪ್ರವೇಶ ಮಾಡಿಸುವುದು ನಿಜಕ್ಕೂ ವ್ಯರ್ಥ.

ಇಂತಹ ಪಲ್ಲಟಗಳಷ್ಟೇ ಅಲ್ಲದೆ ಯಥಾವತ್ತು ಎಂದು ಕಂಡುಬಂದ ಸಂಗತಿಗಳೇನಾದರೂ ಇವೆಯೇ ?

ಹುಂ. ಇಂದಿನ ಪರೀಕ್ಷೆಗಳಲ್ಲಿ ವರ್ಣ, ಪದಂಗಳ ತುಂಬಾ ವಿರಹ ಭಾವವೇ ಜಾಸ್ತಿಯಾಗಿದೆ. ಶಬ್ದಂನಲ್ಲಿ ವಿರಹ ಭಾವ ಶುರುವಾಯಿತೆಂದರೆ ವರ್ಣ, ಪದ, ಜಾವಳಿ, ತಿಲ್ಲಾನ ಎಲ್ಲದರಲ್ಲೂ ವಿರಹವೇ ! ಅಂದು ದೇವದಾಸಿಗಳು ಹೆಚ್ಚಾಗಿ ವಿರಹ ಶೃಂಗಾರವನ್ನೇ ಮಾಡ್ತಾ ಇದ್ರು ಎಂದ ಮಾತ್ರಕ್ಕೆ ಈಗಲೂ ಅದನ್ನೇ ಮುಂದುವರೆಸಿದರೆ ಹೇಗೆ? ಉದಾ : ಕೆಲವು ಅಷ್ಟಪದಿಗಳನ್ನು ಕಲಿಸಲಿಕ್ಕಾಗೋದಿಲ್ಲ. ಹಾಗಂತ ಅವುಗಳು ಕೀಳು ಮಟ್ಟದ್ದು ಎಂಬ ಅಭಿಪ್ರಾಯವಲ್ಲ; ಬದಲಾಗಿ ಪಾಠ ಮಾಡುವಾಗ ಅದರ ಸಾಹಿತ್ಯಕ್ಕೆ ಅಭಿನಯ ಸಮಾಜದ ಮತ್ತು ನೋಡುಗರ ದೃಷ್ಟಿಯಿಂದ ಔಚಿತ್ಯಪೂರ್ಣವೆನಿಸದು. ಅಷ್ಟಪದಿ ಪವಿತ್ರವಾದರೂ ಅದಕ್ಕಿಂತಲೂ ಮಿಗಿಲಾಗಿ ನಾಟ್ಯವು ವೇದ ಎಂಬುದು ನಮ್ಮ ಮನಸ್ಸಿನಲ್ಲಿರಬೇಕು.

ಹಾಗಾದರೆ ವಿರಹ ಭಾವದ ಅಭಿನಯ ಕಲಿಕೆ ಯಾವ ನಿಟ್ಟಿನಲ್ಲಿದ್ದರೆ ಒಳ್ಳೆಯದು?

ಲವ್ ಮಾಡುವುದೇ ಬೇರೆ, ಶೃಂಗಾರವೇ ಬೇರೆ. ಎರಡೂ ಒಂದೇ ಎನ್ನುವ ಅಭಿಪ್ರಾಯ ಶಿಕ್ಷಕರಾದಿಯಾಗಿ ಶಿಷ್ಯರಲ್ಲೂ ಇದೆ. ಚಿಕ್ಕ ಮಕ್ಕಳಿಗೆ ವಿರಹ ಭಾವ ಕಲಿಸುವುದು ಸರಿಯಲ್ಲ. ಭಕ್ತಿ ಭಾವ ಬೇಕಾದ್ರೆ ಮಾಡಲಿ. ಅದೇ ವಾತ್ಸಲ್ಯ ಶೃಂಗಾರವೋ, ವಿರಹ ಶೃಂಗಾರವೋ ಮಾಡಿದರೆ ಹೇಗೆ? ಸಣ್ಣ ಹುಡುಗಿ ಅಲೈಪಾಯುದೇ ಮಾಡಿದರೆ ಅವಳಿಗೆ ಅದರ ಶೃಂಗಾರ ಮನೋಧರ್ಮ ಅರ್ಥವಾದೀತೇ? ಹತ್ತು ವರ್ಷದ ಹುಡುಗಿ ‘ಮನ್ಮಥನ ಬಾಣ ಚುಚ್ಚಿತು’ ಎಂದು ಮಾಡಿದರೆ ಗಿಳಿಪಾಠವಲ್ಲದೆ ಮತ್ತೇನು? ತಮಗೆ ಅರ್ಥವಾಗದ್ದನ್ನು ಯಾವತ್ತೂ ಮಾಡಬಾರದು. ಮಾಡಿದರೂ ಅದು ಸಹಜವೆನಿಸುವುದಿಲ್ಲ. ಹಾಗಾಗಿ ಅಂತಹ ಶೃಂಗಾರವನ್ನು ಪ್ರಬುದ್ಧರೆನಿಸಿಕೊಂಡವರು, ಮದುವೆಯಾದವರು ಅವರವರ ಅನುಭವಕ್ಕೆ ಸಮಂಜಸವಾಗಿ ಕಲಿಯುವುದು, ಮಾಡುವುದು ಒಳ್ಳೆಯದು.


ಅಭಿನಯ ಸ್ವರೂಪ ಹೇಗಿದ್ದರೆ ಚೆನ್ನ?

ಅಭಿನಯ ಹೇಳಿಕೊಟ್ಟು ಬರುವಂತದ್ದಲ್ಲ. ನಾಯಕಿ ಭಾವದಲ್ಲೂ ಒಂದರಿಂದ ಒಂದಕ್ಕೆ ಸಂಬಂಧ ಇದೆ. ಗುರುಗಳು ಸಾಮಾನ್ಯವಾಗಿ ಯಾವುದೇ ನೃತ್ಯ ಮಾಡಬೇಕಾದರೂ ನೆಗಾಡುತ್ತ, ಹಸನ್ಮುಖಳಾಗಿ ಮಾಡಬೇಕು ಅಂತ ಹೇಳಿಕೊಟ್ಟಿರುತ್ತಾರೆ. ಹಾಗೆಂದು ‘ಕರಿರಾಜ ಕಷ್ಟದಲ್ಲೂ ಆದಿಮೂಲ’ ಎನ್ನುವ ದುಃಖಭಾವಕ್ಕೂ ನಗಾಡುತ್ತಲೇ ನರ್ತಿಸಿದರೆ ಅದನ್ನು ಅಭಿನಯವೆನ್ನುವುದಾದರೂ ಹೇಗೆ? ರಸಪ್ರತಿಪಾದನೆಯೆನ್ನುವುದು ಸುಮ್ಮನೆ ಅಲ್ಲ ; ವೇದಿಕೆಯಲ್ಲಿರುವಾಗಲೇ ತನ್ನಿಂತಾನೇ ಭಾವ ಸೃಷ್ಟಿ ಮಾಡುವಷ್ಟು ತಾಕತ್ತು ಕಲಾವಿದನಿಗಿರಬೇಕು. ಸಂಗೀತದಲ್ಲಿ ಸ್ವರ ಪ್ರಸ್ಥಾರ ಮಾಡಿದಂತೆ ನೃತ್ಯದಲ್ಲಿ ರಸಭಾವಾಭಿನಯ ಬರಬೇಕು. ಸ್ವಂತವಾಗಿ ಬಂದರೆ ಮಾತ್ರ ಅದು ಪ್ರತಿಭೆ.

ಭರತನಾಟ್ಯದ ಅಭಿವ್ಯಕ್ತಿಗೆ ಯಾರು ಸೂಕ್ತ? ಪುರುಷನೋ? ಮಹಿಳೆಯೋ?

ಲಾಸ್ಯಕ್ಕೆ ಹೆಂಗಸರ ಅಭಿವ್ಯಕ್ತಿಯೇ ಬೇಕು. ಗಂಡಸರಿಗೆ ತಾಂಡವ ಒಪ್ಪುವಷ್ಟು ಲಾಸ್ಯ ಒಪ್ಪುವುದಿಲ್ಲ. ಭರತನಾಟ್ಯದಲ್ಲಿರೋದು ಸ್ತ್ರೀತ್ವ. ಹುಡುಗಿಯರ ಲಾಸ್ಯದ ದೃಷ್ಟಿ ಹುಡುಗರು ಎಷ್ಟೇ ಮಾಡಿದರೂ ಬರುವುದಿಲ್ಲ. ಅದರಲ್ಲೂ ನಾಯಕಿ ಭಾವಗಳನ್ನು ಮಾಡಿದರೆ ಹೇಸಿಗೆಯೆನಿಸುತ್ತದೆ. ಹಾಗಂತ ಹುಡುಗರು ಭರತನಾಟ್ಯ ಕಲಿಯಬಾರದು ಅಂತಲ್ಲ; ಹಾಗಾಗಿ ಕಲಿಯಬೇಕಾದ್ದನ್ನೆಲ್ಲಾ ಕಲಿಯಲೇಬೇಕು. ಅದರಲ್ಲೂ ಗುರುಗಳೆನಿಸಿಕೊಂಡವರಲ್ಲಿ ಬಹುಪಾಲು ಮಂದಿ ಪುರುಷರೇ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಸಬೇಕಾದರೆ ಮಾಡಿ, ಮಾಡಿಸಿ ತೋರಿಸಲಿಕ್ಕಾದರೂ ಎಲ್ಲದ ಜ್ಞಾನ ಇರಬೇಕಲ್ಲವೇ? ಆದರೆ ಪ್ರದರ್ಶನದ ವೇಳೆಗೆ ಹುಡುಗರಿಗೆ ಒಪ್ಪುವುದನ್ನು ಹುಡುಗರೇ ಮಾಡಬೇಕು. ಹುಡುಗಿಯರಿಗೆ ತಕ್ಕುದಾದದ್ದನ್ನು ಹುಡುಗಿಯರೇ ಮಾಡಬೇಕು.

ಆದರೆ ಯಕ್ಷಗಾನ, ಕೂಚಿಪುಡಿ, ಒಡಿಸ್ಸಿಗಳಲ್ಲಿ ಪುರುಷರಿಗೆ ಸ್ತ್ರೀ ಸಹಜ ಅಭಿನಯ, ಲಾಸ್ಯಗಳು ಒಪ್ಪುತ್ತವೆಯಲ್ಲವೇ?

ಪುರುಷರಿಗೆ ಸ್ತ್ರೀ ಸಹಜ ಅಭಿನಯ ನರ್ತನದ ಸಾಮರ್ಥ್ಯ ಇಲ್ಲವೆಂದಲ್ಲ. ಆದರೆ ಅಂಥವರು ಸಾವಿರದಲ್ಲೊಬ್ಬರು. ಉದಾ : ಕೂಚಿಪುಡಿಯ ವೇದಾಂತಂ ಸತ್ಯನಾರಾಯಣ ಶರ್ಮ. ಇನ್ನು ಯಕ್ಷಗಾನವಾದರೋ ದೇಸೀ ಪದ್ಧತಿ. ಏಕವ್ಯಕ್ತಿ ಯಕ್ಷಗಾನದಲ್ಲಿನ ಲಾಸ್ಯವೂ ಸ್ತ್ರೀಯರನ್ನೇ ನಾಚಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿ. ಅದು ಅವರವರ ಸೃಷ್ಟಿಶೀಲತೆ ಮತ್ತು ಪ್ರತಿಭೆ. ಆದರೆ ಭರತನಾಟ್ಯ ಮಾರ್ಗೀ ಪದ್ಧತಿಯದ್ದು. ಅವರಂತೆಯೇ ನಾವೂ ಇಲ್ಲಿ ಮಾಡಬೇಕು ಅಂದರೆ ಹೇಗೆ?

ಹಾಗಾದರೆ ಭರತನಾಟ್ಯ ನಾಟ್ಯದ ಅಂಶಗಳಿಗಿಂತಲೂ ನೃತ್ಯದ ಅಂಶಗಳನ್ನೇ ಹೆಚ್ಚು ಅಳವಡಿಸಿಕೊಂಡಿದೆ ಎಂಬ ಮಾತು ಒಪ್ಪುತ್ತೀರಾ?

ಪದ್ಮಾ ಸುಬ್ರಹ್ಮಣ್ಯಂ ಈ ಅಂಶವನ್ನೇ ವಾದಿಸುತ್ತಾರೆ. ಅವರ ಮನೋಧರ್ಮ ಪ್ರಬಲವಾದದ್ದು. ಅವರು ಭರತನೃತ್ಯವೆಂದೇ ಭರತನಾಟ್ಯವನ್ನು ಕರೆಯುತ್ತಾರೆ. ಅಂತೆಯೇ ನಡೆದುಕೊಳ್ಳುತ್ತಾರೆ ಕೂಡಾ ! ಹಾಗೆಂದು ಅವರನ್ನೇ ಉಳಿದವರೂ ಅನುಕರಿಸಿದರೆ ಅದು ಅವರವರ ಅಭಿವ್ಯಕ್ತಿಗೆ ಒಪ್ಪೀತೇ ಎಂಬುದು ಯೋಚಿಸಿ ಕಂಡುಕೊಳ್ಳಬೇಕು.

ಭರತನಾಟ್ಯದ ಸ್ಥಾನ, ಮಟ್ಟ ಈಗ ಹೇಗಿದೆಯೆನಿಸುತ್ತದೆ ?

ನೃತ್ಯದ ಮಟ್ಟ ಜಾಸ್ತಿ ಆಗಿದೆ. ಒಳ್ಳೆಯ ಬೆಳವಣಿಗೆಗಳಾಗಿವೆ. ದೇವದಾಸಿಗಳು ಮಾಡುತ್ತಿದ್ದ ರೀತಿಯಲ್ಲಿ ಪರಿಷ್ಕಾರಗಳಾಗಿ ವೈಜಾನಿಕವಾಗಿದೆ. ರೇಖೆಯ ಮೇಲೆ ಅಡವುಗಳ ವಿನ್ಯಾಸಗಳಾಗಿವೆ. ರುಕ್ಮಿಣೀ ದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಅವರ ಪರಿಶ್ರಮ ನಿಜಕ್ಕೂ ನಾವೆಲ್ಲರೂ ಮರೆಯಬಾರದು.

ಹಾಗಾದರೆ ಯಾವುದೇ ಲೋಪದೋಷಗಳು ಇಲ್ಲವೆನ್ನುತ್ತೀರಾ?

ಭರತ ಮಕ್ಕಳಿಗೆ ಶಾಪ ಕೊಟ್ಟನೆಂಬ ನಂಬಿಕೆಯಿದೆಯಲ್ಲವೇ? ಅದು ಬೇರಾರು ಅಲ್ಲ. ಈಗಿನ ಕಲಾವಿದರಾದ ನಾವೇ! ಇಂದು ಎಲ್ಲರೂ ವಿದುಷಿಗಳೇ ಆಗಿಹೋಗಿದ್ದಾರೆ. ಶಿಕ್ಷಕಿಯರೆನಿಸಿಕೊಂಡವರು ಗುರುಗಳಾಗಿದ್ದಾರೆ. ವೇದಿಕೆಗಳಲ್ಲಿ ಕುಣಿಸಿ ಹಣ ಗಳಿಸಬೇಕು ಎನ್ನುವ ಗುರಿಯೇ ಹೆಚ್ಚು ; ಗೂಡಂಗಡಿ ಇಡುವ ವಿದ್ಯಾರ್ಥಿಗಳೇ ಜಾಸ್ತಿ. ಗುರುಗಳು ಯಾವಾಗ, ಹೇಗೆ ಆಗುತ್ತಾರೆ ಎಂಬ ಪ್ರಜ್ಞೆ ನಮ್ಮಲ್ಲಿಲ್ಲ. ಕಡಿಮೆಯೆಂದ್ರೂ ೧೫ ವರ್ಷ ಗುರುಗಳಾಗಿ ಪರಿಶ್ರಮವಿರಬೇಕು. ಈ ಕ್ಷೇತ್ರದ ಒಳಹೊರಗು ತಿಳಿದವರಿರಬೇಕು. ಹೇಗ್ಹೆಗೋ ಪಾಸು ಮಾಡಿ ಕ್ಲಾಸು ಪ್ರಾರಂಭ ಮಾಡಿದವ್ರು ಇಂದು ಗುರುಗಳಾಗುತ್ತಿದ್ದಾರೆ. ಎಲ್ಲರೂ ಕಲಿಸಲಿಕ್ಕೆ ಪ್ರಾರಂಭಿಸಿದರೆ ಶಿಕ್ಷಣ ಆಗುತ್ತದಾ? ಇಂದು ಕಲೆಗಾಗಿ ಕಲಿಯುವವರು ಯಾರಿದ್ದಾರೆ? ಇದರಿಂದಾಗಿಯೋ ಏನೋ ಇಲ್ಲಿನ ವಿದುಷಿಗಳಿಗೆ ತಮಿಳ್ನಾಡಿನಲ್ಲಿ ಬೆಲೆ ಇಲ್ಲ. ಅಲ್ಲಿ ಈ ತರಹದ ಪ್ರಮೇಯವೂ ಇಲ್ಲ. ಹಾಗಾಗಿಯೇ ಇಂದು ಭರತನಾಟ್ಯ ಎಂದಾಕ್ಷಣ ವಿದ್ವಾಂಸರು ನೋಡುವುದು ತಮಿಳ್ನಾಡನ್ನೇ !

ಅಂದರೆ, ಕರ್ನಾಟಕದಲ್ಲಿನ ಭರತನಾಟ್ಯ ಕಲಿಕೆ ಮತ್ತು ಪರೀಕ್ಷಾ ಕ್ರಮ ಎಡವಿದೆ ಎನ್ನುತ್ತೀರಾ?

ಈಗಂತೂ ನಮ್ಮಲ್ಲಿನ ಪ್ರಾಥಮಿಕ ಅಭ್ಯಾಸವೇ ಚೆನ್ನಾಗಿರೋದಿಲ್ಲ. ಸಾಕಷ್ಟು ಲಾಬಿಯೂ ನಡೀತಿದೆ. ಪರೀಕ್ಷೆಯ ಹೆಸರು ಹೇಳಿಕೊಂಡು ಶಿಕ್ಷಕರು ಹಣ ಕೀಳೋದು ಹೆಚ್ಚಾಗುತ್ತಿದೆ. ವಿದ್ವತ್ತು ಪರೀಕ್ಷೆಗಳಲ್ಲಿ ಎಷ್ಟೋ ಅಪಚಾರಗಳಾಗುವುದೂ ಇದೆ. ಪರೀಕ್ಷೆಗೆ ಸರಿಯಾದ ಪರೀಕ್ಷಕರು ಬರ್ತಾ ಇಲ್ಲ ಅನ್ನೋದು ದೊಡ್ಡ ಕೊರಗು. ಇದಕ್ಕೆ ಪೂರಕವಾಗಿ ಪರೀಕ್ಷೆಯ ಸಂಭಾವನೆಂii ಸಮಸ್ಯೆ ಇಂದು ನಿನ್ನೆಯದಲ್ಲ.

ನೃತ್ಯ ಸಂಗೀತದ ಪ್ರಾಥಮಿಕ ಜ್ಞಾನವಿಲ್ಲದ ಜನರು ಪರೀಕ್ಷಕರಾಗಿರುವುದನ್ನು ಕಂಡಿದ್ದೇನೆ. ಪರೀಕ್ಷಕರು ಬಾರದೇ ಇದ್ದರೆ ಅವರವರ ಊರಿನಲ್ಲಿ ಇರುವ ಶಿಕ್ಷಕರನ್ನು, ಗುರುಗಳನ್ನು ಪರೀಕ್ಷಕರನ್ನಾಗಿಸುವುದಂತೂ ನಿರಂತರ ಬೆಳೆದು ಬಂದಿದೆ. ಅಂತಹ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಅಂತಹ ಪರೀಕ್ಷಕರ ಶಿಷ್ಯರೇ ಆಗಿರುತ್ತಾರೆ.

ಅದರಲ್ಲೂ ಪರೀಕ್ಷಕರದ್ದು ಮೌಲ್ಯಮಾಪನ ಮಾಡುವ ಹೊಣೆಗಾರಿಕೆಯೇ ಹೊರತು ವಿನಾಕಾರಣ ವಿದ್ಯಾರ್ಥಿಗಳನ್ನು ದೂಷಿಸುವುದು, ಹೆಚ್ಚುಗಾರಿಕೆ ತೋರಿಸುವುದು, ಅವರ ಮೇಲೆ ಅಭಿಪ್ರಾಯಗಳನ್ನು ಹೇರುವುದು ಒಳ್ಳೆಯದಲ್ಲ. ಹಲವು ಬಾರಿ ಪರೀಕ್ಷೆಗಳಲ್ಲಿ ದೊಡ್ಡ ದೊಡ್ಡದಾಗಿ ಮಾತಾಡಿ ಬಿಂಕ ತೋರಿಸುವ ಕಲಾವಿದರು ತಾವು ಪ್ರದರ್ಶನ ಕೊಡುವ ಹಣೆಬರಹ ನೋಡಿದರೆ ದೇವರೇ ಕಾಪಾಡಬೇಕೆನ್ನಿಸುತ್ತದೆ.

ಸಂಗೀತದಲ್ಲಿ ಪ್ರಕೃತಿ ಸ್ವರ ಯಾವುದು, ವಿಕೃತಿ ಸ್ವರ ಯಾವುದು ಎಂದೇ ಗೊತ್ತಿಲ್ಲದವರು ಸಂಗೀತ ನೃತ್ಯ ಪರೀಕ್ಷೆಗಳಲ್ಲಿ ನಿರ್ಣಯಕಾರರಾಗಿದ್ದನ್ನು ನೋಡಿದ್ದೇನೆ. ಇಂತವರು ಬಂದ್ರೆ ಯಾವುದು ಮೌಲ್ಯಯುತ ಎಂದು ಅಳೆಯುವುದಾದರೂ ಹೇಗೆ? ಕೆಲವೊಮ್ಮೆ ಅಭ್ಯರ್ಥಿಗೆ ಹೆಚ್ಚಿನ ಅಂಕ ಹಾಕುವ ಒತ್ತಾಯಗಳು ಪರೀಕ್ಷಕರಿಗೆ ಬರುತ್ತವೆ. ೪೦ ಅಂಕವಿದ್ದವರಿಗೆ ಬೇಕಾದರೆ ಎರಡಂಕ ಜಾಸ್ತಿ ಹಾಕಬಹುದೇನೋ; ಆದರೆ ೧೦ ಅಂಕವಿದ್ದವರಿಗೆ ೪೦ ಅಂಕ ಮಾಡಬೇಕೆನ್ನುವುದು ನ್ಯಾಯವೇ? ಇದರಿಂದಾಗಿ ಹಲವು ಬಾರಿ ಉತ್ತಮವಾಗಿ ನರ್ತಿಸುವ ವಿದ್ಯಾಥಿಗಳಿಗೇ ಕಡಿಮೆ ಅಂಕಗಳು ಬರುತ್ತವೆ.

ಪ್ರಾಥಮಿಕ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳನ್ನು ಪಾಸು ಮಾಡಬೇಕು ಎಂಬ ಅಘೋಷಿತ ಪ್ರವೃತ್ತಿ ಬೆಳೆದಿದೆ. ಹಾಗಾದರೆ ಪರೀಕ್ಷೆಗೆ ಯಾಕೆ ಕುಳಿತುಕೊಳ್ಳಬೇಕು ; ಫೇಲ್ ಮಾಡ್ಬಾರ್ದು ಅಂತಾದ್ರ್ರೆ ಯಾರು ಬೇಕಾದ್ರೂ ಹೋಗಿ ಸುಮ್ಮನೆ ನಿಲ್ಬೋದಲ್ವಾ? ಇದರಿಂದ ಮನುಷ್ಯರಿರಲಿ ; ಯಾವುದೇ ಪ್ರಾಣಿಯನ್ನೂ ಪಾಸು ಮಾಡಬಹುದು ಎಂಬ ಭಾವನೆ ಬೆಳೆದಿದೆ. ಇನ್ನಾದರೂ ಕಾಯಕಲ್ಪ ಮಾಡದಿದ್ದರೆ ಭವಿಷ್ಯದಲ್ಲಿ ಉತ್ತಮ ಬದಲಾವಣೆ ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇತ್ತೀಚೆಗೆ ಪರೀಕ್ಷಾ ಮಂಡಳಿ ಕೆಲವೊಂದು ಕಾನೂನನ್ನು ಮಾಡಿರುವುದು ಒಳ್ಳೆಯ ಬೆಳವಣಿಗೆ.

ಪಠ್ಯಕ್ರಮದಲ್ಲಿ ಏನಾದರೂ ಸುಧಾರಣೆ ಅಗತ್ಯವಿದೆಯೇ?

ಜೂನಿಯರ್, ಸೀನಿಯರ್, ವಿದ್ವತ್ ಪಠ್ಯಗಳಲ್ಲಿ ಒಂದೊಂದಕ್ಕೂ ಸಂಬಂಧವಿಲ್ಲ ಅಂತಾಗಿದೆ. ಜೊತೆಗೆ ಪಠ್ಯ ರಚಿಸುವವರು ತಮ್ಮ ತಮ್ಮ ಸಂಪ್ರದಾಯದ ಪ್ರಕಾರ ಪಠ್ಯ ರೂಪಿಸಿದರೆ ಕಲಿಯುವ ಮಕ್ಕಳು ಕಷ್ಟಪಡುತ್ತಾರೆ. ಉದಾ : ಉಪ ಅಡವುಗಳು ಮುಖ್ಯ ಅಡವುಗಳ ಆಧಾರದಲ್ಲೇ ಇರಬೇಕು. ಆಗಲೇ ಅದಕ್ಕೆ ಚೆಂದ, ಆನಂದ. ಇಲ್ಲದೇ ಹೋದರೆ ರೇಖಾ ವಿನ್ಯಾಸ ಸಾಧಿತವಾಗುವುದಾದರೂ ಹೇಗೆ? ಆದರೆ ತಮ್ಮದೇ ಶೈಲಿ ಊರವರ ಶೈಲಿ ಆಗಬೇಕು ಅನ್ನುವ ಲೋಭವಿದ್ದರೆ ಏನು ಮಾಡೋಣ?


ಹಾಗಿದ್ದಲ್ಲಿ ಶೈಲಿಯ ಪ್ರವೃತ್ತಿ ಹೇಗಿದ್ದರೆ ಒಳ್ಳೆಯದು?

ಆಯಾಯ ಕ್ರಮಗಳಲ್ಲಿ ಆಯಾಯ ಶೈಲಿಗಳನ್ನು ಮುಂದುವರೆಸಿಕೊಂಡು ಹೋಗುವುದು ಎಲ್ಲದಕ್ಕೂ ಉತ್ತಮ. ಅದರಲ್ಲೂ ಮೂಗೂರು, ಮೈಸೂರು ಶೈಲಿಗೆ ಇತ್ತೀಚೆಗೆ ಅಸ್ತಿತ್ತ್ವವೇ ಇಲ್ಲದಂತಾಗಿದೆ. ಯಾವ ಶೈಲಿಯೇ ಆದರೂ ರೇಖಾವಿನ್ಯಾಸ ಸರಿಯಾಗಿರಬೇಕಲ್ವಾ? ಸೊಲ್ಕಟ್ಟ್ ಸಾಹಿತ್ಯಗಳಿಗೆ ಸರಿಯಾಗಿ ಮಾಡುವುದೇ ಮುಖ್ಯ ಅಲ್ವೇ ?

ಪ್ರಶಸ್ತಿ ಪುರಸ್ಕಾರಗಳ ಮಟ್ಟ ಹೇಗಿದೆ?

ಇಂದಿನ ಹಲವು ಪ್ರಶಸ್ತಿಗಳು ಅರ್ಹತೆಗಿಂತಲೂ ಹೆಚ್ಚಾಗಿ ಶಿಫಾರಸ್ಸುಗಳನ್ನೇ ಅವಲಂಬಿಸಿದೆ. ಪ್ರಶಸ್ತಿ, ಅಭಿನಯ ಸರಸ್ವತಿ, ನಾಟ್ಯರಾಣಿ ಶಾಂತಲೆ ಎಂಬ ಅಭಿದಾನಗಳೆಲ್ಲಾ ಚಿಕ್ಕ ವಯಸ್ಸಿಗೆ ಒಲಿಯಬೇಕು ಎಂಬ ಹಠ ಪೋಷಕರದ್ದು. ಆದರೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಪ್ರಶಸ್ತಿ ಪುರಸ್ಕಾರಗಳ ಅಮಲು ಹತ್ತಿಸಿದರೆ ಅದೇ ಅವರ ಆಸಕ್ತಿಯಾಗುತ್ತದೆಯೇ ವಿನಾ ನೃತ್ಯವಾಗುವುದಿಲ್ಲ. ಗುರುಗಳಲ್ಲೂ ಕೂಡಾ ತಮ್ಮಿಂದ ವಿದ್ಯಾರ್ಥಿಗಳು ಒಳ್ಳೆಯ ದಾರಿಯಲ್ಲಿ ಮುನ್ನಡೆದರೆ ಅದುವೇ ಪ್ರಶಸ್ತಿಯೆಂದು ಭಾವಿಸುವವರು ಕಡಿಮೆ.

ಇದಕ್ಕೆಲ್ಲಾ ಮುಖ್ಯ ಯಾರು ಕಾರಣ ಅಂತೀರಿ?

ಈಗ ಜನರಲ್ಲಿ ದುಡ್ಡು ತುಂಬಾ ಆಗಿದೆ. ಸ್ಪರ್ಧೆಯಲ್ಲಿ ಫಸ್ಟ್ ಬರ್ಬೇಕು, ಪೇಪರ್‌ನಲ್ಲಿ ಹಾಕಬೇಕು ಎನ್ನುವ ಮನಸ್ಸು ; ಫಲವಾಗಿ ವಿದ್ಯಾರ್ಥಿಗಳ ಕೈಯಲ್ಲಿ ಒದ್ದಾಡುವ ಗುರುಗಳೂ ಇದ್ದಾರೆ. ಆದರೆ ಮಕ್ಕಳ ಬೆಳವಣಿಗೆ ಅಲ್ಲಿಗೇ ಕುಂಠಿತವಾಗುವುದೆಂಬ ಪರಿಜ್ಞಾನವೂ ಇರುವುದಿಲ್ಲ. ಒಟ್ಟಾರೆ ನೃತ್ಯವೆಂದರೆ ಪೋಷಕರಿಗೂ ಪ್ರತಿಷ್ಠೆಯ ಸಾಧನ. ಪರೀಕ್ಷೆ, ಸ್ಪರ್ಧೆಗಳಲ್ಲಿ ತಮ್ಮ ಮಕ್ಕಳೇ ಮೊದಲಿಗರಾಗಬೇಕು ಎನ್ನುವುದೇನೋ ಒಳ್ಳೆಯದೇ! ಆದರೆ ಅದು ಲೋಭವಾಗಬಾರದು.

ಗುರು-ಶಿಕ್ಷಕರದ್ದು ಏನೂ ತಪ್ಪಿಲ್ಲವೇ?

ದುಡ್ಡು ಕೊಡ್ತಾರೆ ಅಂತ ಪರೀಕ್ಷೆಗೆ ಕಟ್ಟಿಸಿ ಪಾಸು ಮಾಡುವುದು ಗುರುಗಳಿಗೆ ಒಳ್ಳೆಯದಲ್ಲ. ಎಲ್ಲವನ್ನೂ ಸರಿ ಮಾಡ್ಲಿಕ್ಕೆ ಆಗೋದಿಲ್ಲ; ನಿಜ. ಆದರೆ ಗುರುಗಳು ಸ್ವಲ್ಪವಾದರೂ ಮಟ್ಟವನ್ನು ಕಾಯ್ದುಕೊಳ್ಳುವ, ಉಳಿಸುವ ಶಕ್ತಿ ಕಂಡುಕೊಂಡರೆ ಒಳ್ಳೆಯದಾಗಬಹುದು. ಅಷ್ಟು ಮಾತ್ರವಲ್ಲ, ಕೆಲವು ಗುರು(?)ಗಳಿಗೆ ಶಿಷ್ಯರಲ್ಲಿ ತಾರತಮ್ಯ ನೋಡುವ ಪ್ರವೃತ್ತಿ ಇದೆ. ದುಡ್ಡಿರೋವ್ರು ಎಂದು ಹೆಚ್ಚಿನ ಒತ್ತು ಕೊಡೋದು, ಪಾಸು-ಫೇಲ್ ಮಾಡೋದು ಸಾಮಾನ್ಯವೆನಿಸಿದೆ. ಕೆಲವು ಮಕ್ಕಳು ಪ್ರತಿಭಾವಂತರಾಗಿರುತ್ತಾರೆ; ಕೆಲವರು ಪೆದ್ದರಾಗಿರುತ್ತಾರೆ. ಆದರೆ ಗುರುಗಳು ತಾಳ್ಮೆಯಿಂದ ಕಲಿಸಬೇಕು. ಗುರು ಎನ್ನುವುದಕ್ಕೆ ಬಹಳ ಉನ್ನತವಾದ ಸ್ಥಾನವಿದೆ.

‘ಭರತನಾಟ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ’ ಎಂಬ ಆರೋಪ ಇದೆಯಲ್ವಾ? ಭಾಷೆಯು ಕಲೆಯ ಸಂವಹನಕ್ಕೆ ತೊಡಕಾಗುತ್ತದೆಯೇ?

‘ಭರತನಾಟ್ಯ ನಮ್ಮಂತವರಿಗೆ ಅರ್ಥವಾಗುವುದಿಲ್ಲ’ ಅನ್ನುತ್ತಾರಲ್ಲಾ ; ಕೇರಳದ ಕಥಕಳಿ ಹೇಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಯಿತು-ಅರ್ಥವಾಯಿತು? ಹಾಗಾದರೆ ಭರತನಾಟ್ಯವನ್ನು ಹಿಂದಿಯಲ್ಲಿ ಮಾಡಿದರೆ ಅರ್ಥವಾಗುತ್ತಾ ? ತ್ಯಾಗರಾಜರ ಕೀರ್ತನೆಯನ್ನು ಕನ್ನಡದಲ್ಲಿ ಮಾಡಿ ಅಂದ್ರೆ ಅದರ ಗುಣಮಟ್ಟಕ್ಕೆ ಏರಲು ಸಾಧ್ಯವೇ ? ಕಥಕಳಿ, ಕೂಚಿಪುಡಿಯನ್ನು ಕನ್ನಡದಲ್ಲಿ ಮಾಡಿ ಅಂದರೆ ಹೇಗೆ ಸಾಧ್ಯ ? ಅರ್ಥವಾಗುವುದಿಲ್ಲ ಅನ್ನೋದೆಲ್ಲಾ ಸುಳ್ಳು. ಜನರಿಗೆ ಅರ್ಥವಾಗುತ್ತದೆ. ಕಲಾವಿದನಿಗೆ ಸರಿಯಾಗಿ ಅಭಿವ್ಯಕ್ತಿಸಲು ಬರೋದಿಲ್ಲ ಅಂದ್ರೆ ಜನರಿಗೆ ಅರ್ಥವಾಗೋದಿಲ್ಲ ಎಂಬ ಆರೋಪ ಹೊರಿಸುತ್ತಾರೆ. ಹಾಗಂತ ಜನರಿಗೆ ಅರ್ಥವಾಗದ್ದು ಮಾಡಬೇಕೆಂದು ಹೇಳುವುದಲ್ಲ.

ಹಾಗೊಂದು ವೇಳೆ ಜನರಿಗೆ ಅರ್ಥ ಮಾಡಿಸಲಿಕ್ಕೆ ಅಂತೇನಾದರೂ ಹೊರಟರೆ ಸಾಹಿತ್ಯಿಕವಾಗಿ ಮಾಡುವುದು ಹೇಗೆ? ಯಕ್ಷಗಾನವನ್ನು ತಮಿಳಲ್ಲಿ ಮಾಡಬಹುದು ; ಆದರೆ ಕನ್ನಡದಷ್ಟು ಶಕ್ತಿಯುತವಾಗಿರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.ಅದಕ್ಕೆ ಅದರದ್ದೇ ಆದ ಸೊಗಡು ಇರುತ್ತದೆ. ಉದಾ : ನಮ್ಮದೇ ಸಂಯೊಜನೆಯಲ್ಲಿ ಮೂಡಿಬಂದ ಏಳುವೆರ್ ದೆಯ್ಯರ್. ಅದು ತುಳುವಿನಲ್ಲಿದೆ. ಕನ್ನಡದಲ್ಲಿ ಸಪ್ತ ಮಾತೃಕೆಯರು ಎಂದೂ ಮಾಡಿದ್ದೇವೆ. ಆದರೆ ತುಳುವಿನಷ್ಟು ಪ್ರಭಾವಶಾಲಿಯಾದುದಲ್ಲ.

ಅದರಲ್ಲೂ ಈಗೀಗ ನಾಯಕಿಭಾವ ಇಲ್ಲದ ಎಷ್ಟೋ ವರ್ಣಗಳು ಇವೆ. ಇಂದಿನ ಕನ್ನಡ ವರ್ಣಗಳಲ್ಲಂತೂ ನಾಯಕಿ ಭಾವವೂ ಸರಿಯಾಗಿರುವುದಿಲ್ಲ. ಅದರಲ್ಲೂ ವರ್ಣಗಳ ಮಟ್ಟ ಗಮನಾರ್ಹವಾಗಿ ಇಳಿದಿದೆ. ಸಂಯೋಜನೆಗಳು ಕೂಡಾ ತಾಳ-ಲಯ-ಪಾಠಾಕ್ಷರಗಳಿಗೆ ಸಮವಾಗಿರುವುದಿಲ್ಲ. ವರ್ಣ ವರ್ಣದ ಹಾಗೇ ಇರಬೇಕು. ಅರ್ಥವಾಗುವುದಿಲ್ಲ ಎನ್ನುತ್ತಾ ಸರಳೀಕರಿಸುವುದು ಯಾಕೆ? ಬೇಕಾದರೆ ಸಣ್ಣದು ಮಾಡಿಕೊಂಡು ಸಮಯಕ್ಕೆ ಅನುಕೂಲವಾಗಿ ಒಂದಷ್ಟು ಹೊಂದಾಣಿಕೆ ಮಾಡಬಹುದು. ಆದರೆ ಏನನ್ನು ಮಾಡುತ್ತೇವೆಯೋ ಅದನ್ನು ಸರಿಯಾಗಿ ಮಾಡಬೇಕು. ಸಂಗೀತ ಕಚೇರಿ ಎಂಬಂತೆ ನಾವು ನೀಡುವ ನೃತ್ಯ ಪ್ರದರ್ಶನ ನಾಟ್ಯ ಕಚೇರಿ ಎನ್ನುವುದು ಅರ್ಥವಾಗಬೇಕು.

ಎಂತಹ ಬೆಳವಣಿಗೆ ನಮ್ಮ ಭರತನಾಟ್ಯ ನಾಟ್ಯಕ್ರಮಕ್ಕೆ ಬೇಕು? ನಿಮ್ಮ ಸಲಹೆಗಳೇನು?

ಸರಿಯಾಗಿ ನಟುವಾಂಗ ಮಾಡುವವರು, ಅದರ ಜ್ಞಾನ ಇರುವವರು ಹೆಚ್ಚಾಗಬೇಕಿದೆ. ಇಲ್ಲದಿದ್ದರೆ ವೈಯಕ್ತಿಕ ನಾಟ್ಯ ಕಚೇರಿ ಯಾವಾಗ ಉಳಿಯುವುದು? ಗುರುಗಳೇ ನಟುವಾಂಗ ಮಾಡಬೇಕು ಅಂತೇನಿಲ್ಲ. ಆದರೆ ಹಾಡುವವರಿಗೆ ನಟುವಾಂಗ ಯಾವತ್ತೂ ಕಿರಿಕಿರಿ ಮಾಡಬಾರದು ಎಂಬುದು ನಟ್ಟುವನ್ನಾರ್‌ಗಳಿಗೆ ಗೊತ್ತಿರಬೇಕಿದೆ.

ನಮ್ಮಲ್ಲಿನ ದೇವಸ್ಥಾನಗಳಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳಿಗೆ ಅವಕಾಶ ಎಂದು ಕಡ್ಡಾಯ ಮಾಡಿಸಬೇಕು. ಅದನ್ನ ಬಿಟ್ಟು ಆರ್ಕೆಸ್ಟ್ರಾ ಮಾಡಿಸಿದರೆ ಹೇಗೆ? ಈಗೀಗ ಸಂಗೀತ ನೃತ್ಯ ಕಾರಕ್ರಮವೆಂದರೆ ಅಷ್ಟಬಂಧ-ಬ್ರಹ್ಮಕಲಶ, ವಾರ್ಷಿಕೋತ್ಸವಗಳಲ್ಲಿ ಮೊದಲು ಎರಡು ಭಕ್ತಿ ಸಂಗೀತ, ನಂತರ ಫಿಲ್ಮ್ ಹಾಡಿಗೆ ಡ್ಯಾನ್ಸ್ ಮಾಡುವುದು ಎಂದೇ ಆಗಿಹೋಗಿದೆ. ಆರ್ಕೆಸ್ತ್ರಾ ಹಾಕಿ ಡ್ಯಾನ್ಸ್ ಮಾಡುವುದು ಮಾಮೂಲಿಯೆನಿಸಿದೆ.

ಕೇರಳದ ದೇವಸ್ಥಾನಗಳಲ್ಲಿ ಸಂಗೀತ ನಾಟ್ಯಕ್ಕೆ ಫಂಡ್ ಇದೆ. ಆದರೆ ಇಲ್ಲಿನ ಪ್ರತೀ ದೇವಸ್ಥನದಲ್ಲೂ ಮಕ್ಕಳಿಂದ ಉಚಿತ ಕಾರ್ಯಕ್ರಮ ಕೊಡಿಸೋದು ಜಾಸ್ತಿ ಆಗಿದೆ. ಹಾಗಾಗಿ ಕಲಾವಿದರಿಗೆ ಸಂಭಾವನೆಯ ಮಟ್ಟವೂ ಕುಸಿಯುತ್ತಿದೆ. ಹೊರಗಿನ ರಾಜ್ಯದ ಕಲಾವಿದರಿಗೆ ಸಿಗುವ ರಾಜ ಮರ್ಯಾದೆ, ಇಲ್ಲಿನವರಿಗೆ ಇಲ್ಲವೆಂಬಂತಾಗುವುದೇ ಹೀಗೆ ! ಗೌರವವನ್ನಿಟ್ಟುಕೊಳ್ಳಲಿಕ್ಕೆ ಬಾರದೆ ಹೋದರೆ ಮತ್ತೆ ದೂರುವುದರಲ್ಲಿ ಅರ್ಥವಿಲ್ಲ.


ಈ ಹಂತದಲ್ಲಿ ಭರತನಾಟ್ಯಕ್ಕೆ ಸಂಬಂಧಿಸಿದ ಸಂಸ್ಥೆ, ಪರಿಷತ್, ಅಕಾಡೆಮಿಗಳ ಸ್ಥಾಪನೆ ಮತ್ತು ಪಾತ್ರ ಹೇಗಿರಬೇಕು?

ನೃತ್ಯ ಸಂಗೀತಗಳಿಗಾಗಿ ಹೊಸ ಪರಿಷತ್, ಸಂಸ್ಥೆ ಅಂತ ಆಗಾಗ ಮಾಡುತ್ತಲೇ ಇರುತ್ತಾರೆ ; ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ಅದರ ಹಿಂದಿನ ಕಾರ್ಯ ತತ್ಪರತೆ, ಜವಾಬ್ದಾರಿ, ಸೌಹಾರ್ದ ಸಂಬಂಧಗಳನ್ನು ಮರೆಯುತ್ತಾರೆ. ಹಳೆಯ ದೇವಸ್ಥಾನಕ್ಕೆ ಜೀರ್ಣೋದ್ಧಾರ ಮಾಡದೆ ಹೊಸತು ದೇವಸ್ಥಾನ ಕಟ್ಟಿ ಬ್ರಹ್ಮಕಲಶ ಮಾಡುವುದು ಏತಕ್ಕೆ? ಆದರೆ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಪ್ರತ್ಯೇಕವಾದ ಹಾಗೆ ಸಂಗೀತ ನೃತ್ಯಕ್ಕೂ ಪ್ರತ್ಯೇಕ ಅಕಾಡೆಮಿಯೆನ್ನುವುದು ರೂಪುಗೊಂಡರೆ ಒಳ್ಳೆಯದು ಎನ್ನುವುದು ನನ್ನ ಅನಿಸಿಕೆ.

ಇಂದಿನ ವಿಮರ್ಶೆಗಳ ಸ್ಥಿತಿ ಹೇಗಿದೆ ?

ಈಗೀಗ ವಿಮರ್ಶೆಗಳನ್ನು ಏನೂ ಗೊತ್ತಿಲ್ಲದವರು ಬರೆಯುತ್ತಾರೆ. ಅನುಭವ ಇಲ್ಲದವರೂ ಬರೆಯುತ್ತಾರೆ. ಎ ಯಿಂದ ಝಡ್ ವರೆಗೆ ಎಲ್ಲವೂ ಸರಿ ಎಂದೇ ಆಗಿದೆ. ಸಾಮಾನ್ಯ ಪೇಕ್ಷಕರು ಚೆನ್ನಾಗಿದೆ ಅನ್ನೋದಕ್ಕೂ, ವಿದ್ವಾಂಸರ ಪ್ರಶಂಸೆಗೂ ವ್ಯತ್ಯಾಸವಿದೆಯಲ್ವೇ? ಹಾಗಂತ ಯಾರೂ ಆಲೋಚನೆ ಮಾಡುವುದಿಲ್ಲ.

ಆದರೆ ವಸ್ತುನಿಷ್ಟವೆಂದು ಮಕ್ಕಳಿಗೆ ಕಟು ವಿಮರ್ಶೆ ಮಾಡಿ ನೋಯಿಸಬಾರದು. ವೇದಿಕೆಗಳಲ್ಲಿ ಪ್ರೋತ್ಸಾಹಕವಾಗಿ ಮಾತನಾಡಬೇಕಾಗುತ್ತದೆ; ಬರೆಯುವಾಗ ನೋಡಿ ಅನುಭವಿಸಿ ಬರೆಯಬೇಕು.

ಸೋದರ ಕಲೆಗಳ ಕಲಿಕೆ ಯಾವ ಮಟ್ಟದಲ್ಲಿದ್ದರೆ ಸೂಕ್ತ ?

ಸೋದರ ಕಲೆಗಳನ್ನೂ ಕಲಿಯಬೇಕು. ಆದರೆ ಒಂದು ವಿಷಯವನ್ನು ಸರಿಯಾಗಿ ಕಲಿತ ಮೇಲಷ್ಟೇ ಉಳಿದುದರ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಅದನ್ನೂ ಅರಗಿಸಿಕೊಳ್ಳಲಿಕ್ಕಾದೀತು.

ಆಲದ ಮರ ಬೆಳೆಯೋದಕ್ಕೆ ಮುಂಚೆ ತಾಯಿಬೇರನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಅಂತೆಯೇ ನಮ್ಮ ತಾಯಿಬೇರನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು.

************

(ಉದಯವಾಣ ಕೃಪೆ ಕೆಳಗಿನ ಸಾಲುಗಳು)

ಉಳ್ಳಾಲ್ ಮೋಹನ್ ಕುಮಾರ್


ನೃತ್ಯ ಕ್ಷೇತ್ರದಲ್ಲಿ ನೃತ್ಯಗುರು ಎಂದು ಗುರುತಿಸಲ್ಪಡುವ ಉಳ್ಳಾಲ ಮೋಹನ ಕುಮಾರ್ ಇವರು ಮಂಗಳೂರು ಸೋಮೇಶ್ವರದ ಕೊಲ್ಯದಲ್ಲಿ 4.10.1933ರಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದು 40 ವರ್ಷಗಳ ಸೇವೆ ಸಲ್ಲಿಸಿರುವ ಇವರು ಪ್ರವೃತ್ತಿಯಲ್ಲಿ ಓರ್ವ ನೃತ್ಯಗುರುವಾಗಿ ಪ್ರಸಿದ್ಧರು. ಹಿರಿಯ ನೃತ್ಯಗುರು ಮಾ. ವಿಠಲ್ ಇವರಲ್ಲಿ ನೃತ್ಯ ತರಬೇತಿ ಪಡೆದು ನೃತ್ಯ ಕಲಾಪ್ರವೀಣ ಬಿರುದಾಂಕಿತ ದಿ. ರಾಜನ್ ಅಯ್ಯರ್ ಇವರಲ್ಲಿ ಅಭ್ಯಾಸ ಮುಂದುವರಿಸಿದರು. ಬಳಿಕ ತಮಿಳುನಾಡಿನ ಪ್ರಸಿದ್ಧ ಭರತ ನೃತ್ಯಗುರು ಅಭಿನಯ ಶಿರೋಮಣಿ ದಿ> ರಾಜರತ್ನಂ ಪಿಳ್ಳೆ ಇವರಲ್ಲಿ ಪಂದನಲ್ಲೂರು ಸಂಪ್ರದಾಯದ ಭರತನಾಟ್ಯ ಶೈಲಿಯನ್ನು ಕರಗತ ಮಾಡಿಕೊಂಡರು.

ನೃತ್ಯದಲ್ಲಿ ಶಾಸ್ತ್ರೀಯತೆಯ ಮಟ್ಟವನ್ನು ಸಡಿಲಗೊಳಿಸುವಲ್ಲಿ ರಾಜಿ ಮಾಡಿಕೊಳ್ಳದ ಇವರು ಅನೇಕ ನೃತ್ಯ ಬಂಧುಗಳಿಗೆ, ಶಾಸ್ತ್ರೀಯ ಕೀರ್ತನೆಗಳಿಗೆ, ನೃತ್ಯ ಸಂಯೋಜಿಸಿರುವರು ಅಲ್ಲದೆ, ಇವರ ನಿರ್ದೇಶನದ ಶ್ರೀ ಪರಶುರಾಮ, ಮನ್ಮಥದಹನ, ಪಳನಿ ಮಹಾತ್ಮ್ಯ, ಶ್ರೀಕೃಷ್ಣ ಪಾರಿಜಾತ, ಮಹಿಷಾಸುರ ಮರ್ದಿನಿ, ಶಿವಗಾಮಿಶಪಥಂ, ಶ್ರೀ ಆದಿಶಂಕರಾಚಾರ್ಯ, ಪುತ್ರಕಾಮೇಷ್ಠಿ ಯಾಗ ಮೂದಲಾದ ನೃತ್ಯ ರೂಪಕಗಳು ಜನಪ್ರಿಯವಾಗಿವೆ. ಪ್ರಸಿದ್ಧ ವಿದ್ವಾಂಸ ಡಾ> ಅಮೃತ ಸೋಮೇಶ್ವರ ವಿರಚಿತ “ತುಳುವಾಲ ಬಲಿಯೇಂದ್ರ’, “ಎಳುವೆರ್ ದಯ್ನಾರ್’ ಎಂಬ ತುಳು ಶಾಸ್ತ್ರೀಯ ನೃತ್ಯ ರೂಪಕಗಳು ಸುಮಾರು 250ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡಿವೆ.

ಕೇಂದ್ರ ಸರಕಾರದ ವಾರ್ತಾ ಇಲಾಖೆಯ ಡಾಕ್ಯುಮೆಂಟರಿ ಚಲನಚಿತ್ರಕ್ಕೆ ಸಾಮೂಹಿಕ ನೃತ್ಯ ಸಂಯೋಜಿಸಿ ಇಲಾಖೆಯಿಂದ ಪ್ರಶಸ್ತಿ ಪತ್ರ ಪಡೆದಿರುವರು. ಬೆಂಗಳೂರು ದೂರದರ್ಶನದಲ್ಲಿ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಲು ಕಲಾವಿದರನ್ನು ಆರಿಸುವ ಅಡಿಶನ್­ನಲ್ಲಿ ಪರೀಕ್ಷಕರಾಗಿ ನಿಯೋಜಿಸಲ್ಪಟ್ಟಿದ್ದಾರೆ. ಕರ್ನಾಟಕ ಸರಕಾರದ ಶಾಸ್ತ್ರೀಯ ನೃತ್ಯ ಪರೀಕ್ಷಾ ಮಂಡಳಿಯಲ್ಲಿ ಪರೀಕ್ಷಕರಾಗಿಯೂ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವರು. ದೂರದರ್ಶನದ ಚಂದನ ವಿಭಾಗದ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ದೂರದರ್ಶನದಲ್ಲಿ ಇವರ ಶಿಷ್ಯರ ನೃತ್ಯ ಪ್ರದರ್ಶನಗಳು ಪ್ರಸಾರವಾಗಿ ಪ್ರಸಿದ್ಧಿ ಪಡೆದಿವೆ. ಮಂಗಳೂರು ವಿಶ್ವವಿದ್ಯಾನಿಲಯದ ಭರತನಾಟ್ಯ ಪದವಿ ತರಗತಿಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿರುವರು. ಉಡುಪಿ ದ.ಕ. ಜಿಲ್ಲೆಯನ್ನೊಳಗೊಂಡ ಕರಾವಳಿ ನೃತ್ಯ ಪರಿಷತ್ ಇದರ ಸ್ಥಾಪಕಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವರು. ಮಂಗಳೂರು ಆಕಾಶವಾಣಿಯ ಸಲಹಾ ಸಮಿತಿಯ ಸದಸ್ಯರಾಗಿಯೂ ಆರಿಸಲ್ಪಟ್ಟಿದ್ದರು.

ಇವರ ನೃತ್ಯ ಕಲಾ ಬದುಕಿನ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು 1985ರಲ್ಲಿ ಪುರಸ್ಕಾರವನ್ನು ಮತ್ತು 1922ರಲ್ಲಿ ಕರ್ನಾಟಕ ಕಲಾತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. ಅನೇಕ ಸಂಘ ಸಂಸ್ಥೆಗಳು ಇವರ ಕಲಾಸೇವೆಯನ್ನು ಗುರುತಿಸಿ ಸಮ್ಮಾನ ಮಾಡಿವೆ. ಕೊಲ್ಯ ಶ್ರೀ ರಮಾನಂದ ಸ್ವಾಮೀಜಿಯವರಿಂದ ನೃತ್ಯ ಸಿದ್ಧಯೋಗಿ, ಹುಟ್ಟೂರಿನ ಸಾರ್ವಜನಿಕ ಸಮ್ಮಾನದಲ್ಲಿ ನಾಟ್ಯ ಮೋಹನ ಗ್ರಂಥಗಳ ಸಮರ್ಪಣೆ, ಚಿತ್ರದುರ್ಗ ನೃತ್ಯೋತ್ಸವದಲ್ಲಿ ನಾಟ್ಯಕಲಾ ಕೌಸ್ತುಭ, ಮೈಸೂರು ಭಾರತೀಯ ನೃತ್ಯಕಲಾ ಪರಿಷತ್ತಿನಿಂದ ನೃತ್ಯ ಕಲಾತಿಲಕ, ಉಳ್ಳಾಲ ಲಯನ್ಸ್ ಕ್ಲಬ್ ವತಿಯಿಂದ ನಾಟ್ಯಕಲಾ ಕೇಸರಿ, ಅಖೀಲ ಕರ್ನಾಟಕ ನೃತ್ಯ ಕಲಾವಿದರ ಸಮಾವೇಶದಲ್ಲಿ ನಾಟಕಲಾವಾರಿಧ, ಮುಂಬಯಿ ಬಾನ್ಸೂರಿ ಕಲಾವೇದಿಕೆಯಲ್ಲಿ ನಾಟ್ಯ ಕಲಾಶಿರೋಮಣಿ, ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಸುವರ್ಣ ಮೋಹನ, ಗದಗಿನ ಕಲಾವಿಕಾಸ ಪರಿಷತ್ತಿನಿಂದ ರಾಷ್ಟ್ರೀಯ ಕಲಾವಿಕಾಸ ಪ್ರಶಸ್ತಿ, 2007 ಎಡನೀರು ಶ್ರೀ ಕೇಶವಾನಂದ ಭಾರತೀಗಳವರಿಂದ ಅನುಗ್ರಹ ಪ್ರಶಸ್ತಿ, ಬೆಂಗಳೂರು ಪ್ರತಿಷ್ಠಿತ ಬಿರಾದರಿ ಸಂಸ್ಥೆಯಿಂದ ಬಿರಾದರಿ ಪ್ರಶಸ್ತಿ, ಹಾಸನದಲ್ಲಿ ಮಂಗಳ ಕಲಾ ವೇದಿಕೆಯಲ್ಲಿ ಸಾಧನಾ ಪ್ರಶಸ್ತಿ, ಮಂಗಳೂರು ಸುಮ ಸೌರಭ ಪತ್ರಿಕೆಯ ಸೌರಭ ಪ್ರಶಸ್ತಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ರಾಮ ವಿಠಲ ಪ್ರಶಸ್ತಿ ಮೂದಲಾದ ಬಿರುದುಗಳು ಇವರಿಗೆ ಸಂದಿವೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಸುಪ್ರಸಿದ್ಧ ಅಂತಾರಾಷ್ಟ್ರೀಯ ನರ್ತಕಿ ವಸುಂಧರಾ ದೊರೆಸ್ವಾಮಿಯವರ ಪಾರಂಗೋತ್ಸವದಲ್ಲಿ “ನೃತ್ಯ ಸುಂದರಂ’ ಬಿರುದು ಸ್ವರ್ಣ ಪದಕದೊಡನೆ ಲಭಿಸಿದೆ.

1956ರಲ್ಲಿ ಸ್ಥಾಪಿಸಲ್ಪಟ್ಟ ಮೋಹನ್ ಕುಮಾರ್ ನಾಟ್ಯ ನಿಕೇತನ ನೃತ್ಯ ಸಂಸ್ಥೆಯು 50 ಸಂವತ್ಸರಗಳ ಸುವರ್ಣ ಮಹೋತ್ಸವವನ್ನು ಮಂಗಳೂರು ಪುರಭವನದಲ್ಲಿ 5 ದಿನಗಳ ನೃತ್ಯೋತ್ಸವದೊಡನೆ ಅದ್ದೂರಿಯಾಗಿ ಆಚರಿಸಿದೆ. ಈ ಸಂದರ್ಭದಲ್ಲಿ ಅನೇಕ ಘನ ವಿದ್ವಾಂಸರನ್ನು ಸಮ್ಮಾನಿಸಿ ಗೌರವಿಸಲಾಗಿದೆ. ಅದರ ಸವಿನೆನಪಿಗಾಗಿ ಭರತಾರ್ಪಣೆ ಎಂಬ ಸ್ಮರಣ ಸಂಚಿಕೆ ಬಿಡುಗಡೆಯಾಗಿದೆ.

ನಾಟ್ಯ ನಿಕೇತನದಲ್ಲಿ ಗುರುಕುಲ ಪದ್ಧತಿಯ ನೃತ್ಯ ಶಿಕ್ಷಣ ನೀಡಲು ಇವರ ಸಹಧರ್ಮಿಣಿ ಶ್ರೀಮತಿ ಸಬಿತಾ ಇವರ ತುಂಬು ಹೃದಯದ ಸಹಕಾರ ಅವಿಸ್ಮರಣೀಯವಾಗಿದೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿರುವ ನಾಟ್ಯ ನಿಕೇತನದಲ್ಲಿ ತರಬೇತಿ ಹೊಂದಿದ ಅನೇಕರು ನೃತ್ಯ ಶಿಕ್ಷಕರಾಗಿಯೂ ಪ್ರದರ್ಶನ ಕಲಾವಿದರಾಗಿಯೂ, ನೃತ್ಯ ಪ್ರಸಾರ ಕಾರ್ಯ ಮಾಡುತ್ತಿರುವುದು ಗಮನಾರ್ಹವಾಗಿದೆ. ಕರಾವಳಿ ಜಿಲ್ಲೆಗಳ ಬಹುಪಾಲು ನೃತ್ಯ ಶಿಕ್ಷಕರು ನಾಟ್ಯ ನಿಕೇತನದಲ್ಲಿ ಪಳಗಿದವರೇ ಆಗಿರುವರು. ವಿದೇಶಗಳಿಂದಲೂ ಆಗಾಗ ಕಲಾವಿದರು ಆಗಮಿಸಿ ಈ ಸಂಸ್ಥೆಯಲ್ಲಿ ನೃತ್ಯ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮೋಹನ್ ಕುಮಾರರ ಈ ನೃತ್ಯ ಪರಂಪರೆಯನ್ನು ತಮ್ಮ ಶಿಷ್ಯರು ಉಳಿಸಿ ಬೆಳೆಸಿ ಬರಬೇಕೆಂಬ ಹಂಬಲ ಇವರದು.

ನಾಟ್ಯ ನಿಕೇತನದ ರೂವಾರಿಯಾದ ಮೋಹನ್ ಕುಮಾರರು ತನ್ನ ಹೆಚ್ಚಿನ ಜವಾಬ್ದಾರಿಯನ್ನು ಶಾಸ್ತ್ರೀಯ ನೃತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ತನ್ನ ಪುತ್ರಿ ನೃತ್ಯ ವಿದುಷಿ ಶ್ರೀಮತಿ ರಾಜಶ್ರೀಯವರಿಗೆ ಒಪ್ಪಿಸಿ ಈ ನೃತ್ಯ ಕ್ಷೇತ್ರದಲ್ಲಿ ಸನಾತನ ಸಂಸ್ಕೃತಿಯು ಉಳಿಯುವ ಸಾರ್ಥಕ ಸೇವೆ ಸಲ್ಲುವಂತಾಗಬೇಕೆಂಬ ಆಶಯ ಹೊಂದಿರುವರು.

Leave a Reply

*

code