ಅಂಕಣಗಳು

Subscribe


 

ನೃತ್ಯದಲ್ಲಿ ಜತಿವಿಸ್ತಾರ ಅಸಹಜವಾಗುತ್ತಿದೆಯೇ?

Posted On: Friday, October 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಭರತನಾಟ್ಯ ನೃತ್ಯ ಕಾರ್ಯಕ್ರಮವದು. ಅರೆ, ಜತಿಸ್ವರದ ಜತಿ-ಕೋರ್ವೆಗಳನ್ನು ಬೇರೊಂದು ರಾಗದ ಅದೇ ತಾಳದ ನೃತ್ಯಬಂಧವೊಂದರಲ್ಲಿ ಕಂಡ ನೆನಪು. ಶಬ್ದಬಂಧವನ್ನು ಗಮನಿಸಿದರೆ ಅದರಲ್ಲೂ ಒಂದೇ ತೆರನಾದ ಭಾವ. ವರ್ಣವನ್ನು ನೋಡುವ ಹೊತ್ತಿಗೆ, ನಿಚ್ಚಳವಾಯಿತು ; ಯಾವುದೋ ಜತಿಸ್ವರ, ಶಬ್ದ, ವರ್ಣಗಳ ಜತಿ-ಕೋರ್ವೆಗಳ ಯಥಾವತ್ತು ನಕಲು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತೊಂದು ರೂಪಕದಲ್ಲಿ ಎರಡು ಜತಿಗಳನ್ನು ಹೆಣೆದು ಮಾಡಿರುವ ಮಿಕ್ಸಡ್ ಅಡುಗೆ ಎನ್ನುವುದು ಮತ್ತಷ್ಟು ಸ್ಪಷ್ಟ ! ಹಾಡು ಹಳೆಯದಾದರೇನು ; ಭಾವ ನವನವೀನ ಎನ್ನೋಣವೇ? ಉಹುಂ..ಒಂದಿಂಚೂ ಅವಕಾಶವಿಲ್ಲ.
ಇದೇನು ಹೊಸತಲ್ಲ. ಕಂಡಕಂಡಲ್ಲಿ ಬೀದಿಗೊಂದರಂತೆ ಡ್ಯಾನ್ಸ್ ಕ್ಲಾಸ್ ಎಂಬ ಅಂಗಡಿ ತೆರೆದರೂ ಪುಟ್ಟ ಜತಿಯನ್ನು ಹೆಣೆಯಲು ಬಾರದ ಗುರು-ಕಲಾವಿದರುಗಳ ಅರ್ಹತೆಗೆ (?) ತಕ್ಕುದಾಗಿ ಸಿದ್ಧವಾಗುವ ಬೇರೆ ಜತಿಗಳಿಂದಾಯ್ದ ರೆಡಿಮೇಡ್ ಪದಾರ್ಥಗಳು ; ಅಪ್ಪ ಹಾಕಿದ ಆಲದ ಮರ ಎಂದು ಗುರುಗಳು ಹೇಳಿಕೊಟ್ಟ ಜತಿನಿರೂಪಣೆಯ ಯಥಾವತ್ತು ನಕಲಿನಿಂದಾಗಿ ಜತಿಗಳು ಪುನರಾವರ್ತನೆಯಾಗುವುದು ಮಾಮೂಲಿಯೆನಿಸಿದೆ. ಹೀಗಾಗಿ ಹೊಸತೆನಿಸುವ, ಸವಾಲೆನಿಸುವ ಜತಿಗಳ ನಿರ್ವಹಣೆ ಮತ್ತು ನೈಜವೆನಿಸುವ ಉತ್ಪತ್ತಿಗಳು ಕಂಡುಬಂದರೆ ಅದೇ ಸೌಭಾಗ್ಯವೆನ್ನಿಸಿದೆ. ಅದರಲ್ಲೂ ದಶಕಗಳಿಂದಲೂ ಕರ್ನಾಟಕದ ಅನೇಕ ಕಲಾವಿದರಿಗಿದು ಅನೂಚಾನ ಪದ್ಧತಿ.
ಜತಿಯೆಂಬುದು ಅಭಿನಯರಹಿತವಾದ ಅಂಗವಿನ್ಯಾಸಗಳನ್ನೊಳಗೊಂಡ ಶುದ್ಧ ನೃತ್ತ. ಮೃದಂಗ, ತಬಲ, ತಾಳ ಮುಂತಾದ ವಾದ್ಯಗಳಿಂದ ಬರುವ ಶಬ್ದಗಳನ್ನು ಕೆಲವು ಅಕ್ಷರಗಳಿಂದ ಗುರುತಿಸಿ, ನುಡಿಕಾರಗಳನ್ನು ತಾಳಾವರ್ತನಕ್ಕೆ ಹೊಂದಿಸಿ ರಚನೆ ಮಾಡಿದುದಾಗಿರುತ್ತದೆ. ಜತಿಯೆಂಬುದು ನರ್ತನದ ಅಡಿಪಾಯ ; ಭರತನಾಟ್ಯದ ಅನಿವಾರ್ಯ ಅವಶ್ಯಕತೆ. ಯಾವ ವಿಧವಾದ ಅರ್ಥ, ವಿಚಾರ, ಸನ್ನಿವೇಶಗಳನ್ನು ಬಳಸದೆ ಅಂಗಗಳ ಚಲನೆಯಿಂದ ಲಾಲಿತ್ಯಮಯವಾಗಿಯೂ ಸುಂದರ ರಚನೆಗಳನ್ನು ನಿರೂಪಿಸುವುದು ಜತಿಯ ಅಸಾಧಾರಣ ಶಕ್ತಿ. ತಾಳ, ಲಯ, ಪಾಠಾಕ್ಷರ, ಅಡವು ಮತ್ತು ಕರಣಗಳನ್ನು ತೀರ್ಮಾನ ಸಹಿತವಾಗಿ ಸಂಘಟಿಸಲಾಗುವ ಇದರಿಂದ ಕೇವಲ ರಂಜನೆಯಷ್ಟೇ ಅಲ್ಲದೆ ; ನೃತ್ಯ ಮತ್ತು ಸಂಗೀತ ವಾದ್ಯಗಳೊಳಗೆ ಸಾಂಗತ್ಯವು ಏರ್ಪಡಲು, ವಿವಿಧ ವಿಕ್ಷೇಪಗಳನ್ನು ನೆನಪಿನಲ್ಲಿರಿಸಲೂ ಸಹಕರಿಸುತ್ತದೆ. ಗತಿಭೇಧ ನಡೆಗಳುಳ್ಳ ಜತಿಯನ್ನು ವಿದ್ವತ್ಪೂರ್ಣ ನಟ್ಟುವನ್ನಾರ್‌ಗಳಿಂದ ಕೇಳುವುದಕ್ಕೆ ಸ್ವಾರಸ್ಯ ಮಾತ್ರವಲ್ಲದೆ ಕಲಾವಿದರ ಪ್ರತಿಭೆಗೆ ಕನ್ನಡಿಯೂ ಹೌದು.
ಜತಿಗಳ ಸಂಯೋಜನೆಯೂ ಆಕರ್ಷಕ. ಪಾತ್ರ ಜತಿ, ಮುಖ ಜತಿ, ಅಂತ್ಯ ಜತಿ, ಮುಕುಟ ಜತಿ, ನಿಲುಗಡೆ ಜತಿ, ಮೇಳ ಪ್ರಾಪ್ತಿ ಜತಿ, ಅಡವು ಜತಿ, ತ್ರಿಕಾಲ ಜತಿ ಹೀಗೆ ಹಲವು ವಿಧಗಳೂ ಮತ್ತು ಅವುಗಳ ನಿರೂಪಣಾ ವೈಶಿಷ್ಟ್ಯಗಳು, ನಿಯಮ ಬದ್ಧತೆಗಳೂ ಇವೆ. ಆದರೆ ಇತ್ತೀಚೆಗಿನ ಬಹಳಷ್ಟು ನೃತ್ಯಬಂಧ, ರೂಪಕಗಳಲ್ಲಿ ಜತಿಗಳ ವಿಶೇಷತೆ, ಕ್ರಮ-ಬದ್ಧತೆಗಳನ್ನರಿಯದೆ ಒಟ್ಟಾರೆ ಬಳಸುವುದು ಅಭ್ಯಾಸವೆಂಬಂತೆ ಆಗಿಹೋಗಿದೆ. ನೆರೆದವರ ಶಹಬ್ಭಾಸ್‌ಗಿರಿ ಗಿಟ್ಟಿಸುವ ನೆವದಲ್ಲಿ ಭಾವ ರಸಗಳಿಗೆ ತೊಂದರೆಯಾಗುವುದೆಂಬ ಪರಿಜ್ಞಾನವೂ ಇಲ್ಲದೆ ಅಳತೆ ಮೀರಿ ಜತಿಗಳನ್ನು ಅಳವಡಿಸುವುದೂ ಇದೆ.
ವರ್ಣಗಳಲ್ಲಂತೂ ರಸ ನಿರ್ವಹಣೆಗೆ ಭಂಗ ಬರುವಷ್ಟರ ಮಟ್ಟಿಗೆ ಚ್ಯೂಯಿಂಗ್‌ಗಮ್‌ನಂತೆ ಪಾಠಾಕ್ಷರಗಳನ್ನು ಮನಬಂದಂತೆ ಎಳೆಯುವುದರಿಂದಾಗಿ ಕಡಲೆಯೊಂದಿಗೆ ಕಲ್ಲನ್ನೂ ಅಗಿದಂತಾಗುವುದಂತೂ ನಿಜ. ಇದರೊಂದಿಗೆ ಲಾಸ್ಯ ಭಾವ, ಗತಿಗಳಿಗೆ ಅಸಹಜವೆಂಬಂತೆ ತೋರುವ ತಾಂಡವ ಜಾತಿಯ ಜತಿಗಳನ್ನು ಸಂಯೋಜಿಸುವುದು, ವಿರಹೋತ್ಕಂಠಿತ ನಾಯಕಿ ಕ್ಷಣಮಾತ್ರದಲ್ಲೇ ಚಕ್ಕನೆ ನೆಗೆದು, ಕುಣಿದು ಮರುಕ್ಷಣಕ್ಕೆ ವಿರಹ, ದುಃಖವನ್ನು ನಟಿಸುವುದು..; ಅಭಿನಯದ ವ್ಯಾಖ್ಯಾನಗಳನ್ನೇ ತಿರುವುಮುರುವನ್ನಾಗಿಸಿದೆ.
ಆದರೆ ಇವೆಲ್ಲವನ್ನೂ ‘ಸರಿ’ ಎಂಬರ್ಥದಲ್ಲಿ ಗುರುಗಳೆನಿಸಿಕೊಂಡವರು ಒಪ್ಪಿಕೊಂಡಿರುವುದು, ಪ್ರೇಕ್ಷಕರು ಮರುಮಾತಿಲ್ಲದೇ ಒಪ್ಪಿಕೊಳ್ಳುವಂತೆ ಮಾಡಿರುವುದು ದುರದೃಷ್ಟ. ತಕ್ಕಮಟ್ಟಿನ ಬದಲಾವಣೆ ತಂದರೆ ‘ಶಾಸ್ತ್ರದ್ರೋಹ’(ತಾವು ಅರಿಯದ)ವಾಗಿಬಿಡಬಹುದೋ ಎನ್ನುವ ಆತಂಕ ಮತ್ತು ಕಟ್ಟುನಿಟ್ಟಿನ ಅರ್ಥಹೀನ ಶಿಸ್ತು. ಹಾಗಾಗಿ ಯಥಾವತ್ತು ಸ್ಥಿತಿಯನ್ನು ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಯ್ದುಕೊಂಡು ವಿದ್ವತ್ಪೂರ್ಣ ರಚನೆಗಳಾಗಬೇಕಿದ್ದ ವರ್ಣದಂತಹ ನೃತ್ಯಬಂಧವನ್ನು ಭಾವ-ರಸವಿಹೀನವಾಗಿಸಲಾಗುತ್ತಿದೆ. ಹಾಗೆಂದು ಬದಲಾವಣೆ ಬಯಸಿದಿರೋ ಕಂಡಕಂಡಲ್ಲೆಲ್ಲಾ ಹೊಸತೆಂದು ಕಂಡರೂ ಅಸಂಬದ್ಧ ಜತಿಗಳನ್ನು ತುರುಕಲಾಗುತ್ತಿದೆ. ಒಳ್ಳೆಯ ಜತಿ ನಿರೂಪಣೆ ಎಲ್ಲೋ ಒಂದೆರಡು ಬಾರಿ ; ಅದೂ ಅಪೂರ್ವಕ್ಕೆ ಎಂಬಂತೆ !
ಪ್ರೇಕ್ಷಕರು ಮತ್ತು ನಟ ವರ್ಗದವರು ದೈಹಿಕವಾಗಿ ಮಾನಸಿಕವಾಗಿ ನರ್ತನದ ಪ್ರಧಾನ ಆಶಯಕ್ಕೆ ಸಿದ್ಧರಾಗುವುದು ಜತಿಯಿಂದಾಗಿ. ಅದು ನಿಯಮವೂ ಹೌದು. ಈ ನಿಟ್ಟಿನಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಜತಿ ನಿರೂಪಣೆಯನ್ನು ಕರಣಗಳ ಸಮೇತ ಸವಾಲೆಂಬಂತೆ ಸಹಜವೆನಿಸುವಂತೆ ನರ್ತನದ ವಸ್ತುವಿನ ಭಾವದಲ್ಲಿಯೇ ಬಳಸುತ್ತಾರೆ. ಇಂತಹ ಜತಿ ನಿರೂಪಣೆ ಎಲ್ಲರಿಂದಲೂ ಅಸಾಧುವಾದರೂ ತಕ್ಕಮಟ್ಟಿನ ಸಮಯ-ಸಹಜಪ್ರಜ್ಞೆಯುಳ್ಳ ಜತಿಯ ಬಳಕೆ, ನೈಜ ಅಭಿವ್ಯಕ್ತಿ, ಪುಟ್ಟದಾದರೂ ಗಟ್ಟಿತನದ ಸ್ವತಂತ್ರ ಸಂಯೋಜನೆ ಕಲಾವಿದರ ನೃತ್ತ ಸಮಯವನ್ನು ಆರೋಗ್ಯವಾಗಿರಿಸುವುದಲ್ಲದೆ, ನೃತ್ಯವನ್ನು ಜೀವಂತವಾಗಿರಿಸುತ್ತದೆ ; ನರ್ತನದ ಆಯುಷ್ಯವನ್ನು ಹೆಚ್ಚಿಸುತ್ತದೆ.

ಪ್ರೀತಿಯಿಂದ
ಸಂಪಾದಕರು

Leave a Reply

*

code