ಅಂಕಣಗಳು

Subscribe


 

ವಾಲಿ

Posted On: Tuesday, October 15th, 2013
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಕಟೀಲು

korgi venkateshwara upadhyayaಯಕ್ಷಗಾನ ಅರ್ಥಧಾರಿ, ಕಲಾವಿದ, ಪ್ರಸಂಗಕರ್ತ, ಸಾಹಿತಿ, ವಿಮರ್ಶಕ, ಶಿಕ್ಷಕ, ವೇದ ವ್ಯಾಖ್ಯಾನಕಾರ, ದ್ವಿವೇದಿ, ವಿದ್ವಾಂಸ, ಗುರು…ಹೀಗೆ ನಾಮವಿಶೇಷಣಗಳಿಗೆ ಅನ್ವರ್ಥ ಅಭಿದಾನಪ್ರಾಯರಾದ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಗತಿಸಿ ಈ ಸೆಪ್ಟೆಂಬರ್‌ಗೆ ೧೨ಕ್ಕೆ ೨ ವರುಷ. ವಿದ್ವದ್ಲೋಕದಿಂದ ಅವರ ಭೌತಿಕ ದೇಹ ಮರೆಯಾದರೂ ಅವರ ಬರೆವಣಿಗೆಗಳು, ಅರ್ಥವೈಭವಗಳು ಸದಾ ಮನದಂಗಣದ ನಂದಾದೀಪ. ಅವರ ನೆನಪಿಗೆ ಅವರಿಂದಲೇ ಲಿಖಿಸಲ್ಪಟ್ಟ ವಾಲಿಯ ವಾಕ್ಯಾರ್ಥವನ್ನು ಪ್ರಕಟಿಸುತ್ತಿದ್ದೇವೆ. ಇದು ಯಕ್ಷಗಾನ ತಾಳಮದ್ದಳೆಯ ಅರ್ಥವೈಭವದ ಲಿಖಿತಪ್ರತಿಯೆನಿಸಿದರೂ ಕಲಾವಿದರಿಗೆ ಅಂತಃಸ್ಪುರಣೆಯಾಗಬಲ್ಲ ಅಭಿನಯಾಂಶಗಳ ಸಾಧ್ಯತೆ, ಅರ್ಥವಿಸ್ತಾರ ಹೇರಳವಾಗಿ ದೊರೆಯುತ್ತದೆ. ಅನ್ಯಾದೃಶ್ಯವಾದ ಪದಪುಂಜ, ವಾಕ್ಯಸರಣಿ, ಅರ್ಥವಿಶೇಷಗಳಿಂದ ವಾಲಿಯ ಚರಮಕ್ಷಣದ ಮಾತುಗಳಿಗೆ ಮೂರ್ತರೂಪವನ್ನಿತ್ತ ಈ ರಸಾದ್ಭುತ ವಾದವನ್ನು ಅವಗಾಹಿಸಿ ಆನಂದಿಸೋಣ..ಬನ್ನಿ…

 ನನ್ನ ಬಗೆಯನ್ನು ಬಗೆದುಹೊಕ್ಕ ಜ್ವಲದಗ್ನಿಶಿಖೋಪಮವಾದ ಬಾಣವನ್ನು ಎಡಗೈಯಲಿ ಹಿಡಿದು ತಡೆದು ಬಲಗೈಯನ್ನು ಊರಿ ಆಧರಿಸಿ ಅನಿರೀಕ್ಷಿತವೂ ಆಕಸ್ಮಿಕವೂ ಆದ ಈ ಅಸ್ತ್ರಾಘಾತಕ್ಕೆ ಅಚ್ಚರಿಗೊಂಡು ಆತಂಕಿತನಾಗಿದ್ದೇನೆ.

ಭಯ, ಪರಾಜಯಗಳೇನೆಂಬುದನ್ನೇ ತಿಳಿಯದ ವಾಲಿಯ ಬಾಳಿನೊಂದಿಗೆ ಬೆಸೆದಿದ್ದ ಧೈರ್ಯ ಸ್ಥೈರ್ಯ ಶೌರ್ಯ ವೀರ್ಯಗಳ ಬೆಸುಗೆಯನ್ನು ಬೇರ್ಗೆಡಿಸಿ ಬೇರ್ಪಡಿಸಿ ಬಂಡೆಗಿಂತಲೂ ಬಿರುಸಾದ ಬಗೆಯನ್ನು ಬಗೆದು ಸಿಗಿವ ಈ ಬಾಣದೆಸುಗೆ ಯಾರದ್ದಿದ್ದೀತೆಂದು ಸುತ್ತಲೂ ನಿರುಕಿಸಿದರೆ- ಅದೋ ! ಅದೋ! ಕೋದಂಡಪಾಣಿಯಾದ ಮಂಗಲಮಯವಾದ ಮೂರ್ತಿಯೊಂದು ತನ್ನ ಸಂಗಾತಿಯೊಂದಿಗೆ ಮರದ ಮರೆಯಿಂದ ಇತ್ತಲೇ ಬರುತ್ತಿದೆ. ಕಾರ್ಮುಗಿಲ ಬಸಿರಿನಿಂದ ಕೋಲ್ಮಿಂಚು ಮೂಡಿದಂತೆಸೆವ ಈತನ ಮೊಗದಲ್ಲರಳಿದ ಮುಗುಳುನಗೆಯ ಮಲ್ಲಿಗೆಯ ಕಂಪು ತಿಂಗಳನ ತಂಪು ಬೆಂದಬಗೆಯ ಕೆಂಪನ್ನು ಕಳೆವಷ್ಟು ತೊಳೆವಷ್ಟು ಆದರವನ್ನು ತಳೆವಷ್ಟು ತಣ್ಣಗಾಗಿದೆ.

ತಾರೆ ಹೇಳಿದ ರಾಮಚಂದ್ರಮ ಈತನೇ ಇರಬೇಕು.

ಆಹಾ ! ಎಂತಹ ಓಜಸ್ಸು ! ಎಂತಹ ತೇಜಸ್ಸು ! ಎಂತಹ ವರ್ಚಸ್ಸು ! ಎಂತಹ ಊರ್ಜಸ್ಸು ! ಎಂತಹ ಭ್ರಾಜಸ್ಸು !

ಎತ್ತರವಾದ ಆಳ್ತನ. ನೀಳವಾದ ತೋಳು. ಅಗಲವಾದ ಎದೆ. ಅರಳಿದ ಕಣ್ಣುಗಳು. ಆಹಾ! ಆಹಾ! ಆಜಾನುಬಾಹು. ಅರವಿನ್ದದಲಾಯತಾಕ್ಷ. ನೀಲಮೇಘಶ್ಯಾಮ. ಕಂಡವರ ಕಣ್ಮನಗಳ ಪಾಪ ಕಳೆವ-ತೊಳೆವ ಚಾರುತರವಾದ ಚೆಲುವು.

ಅಯ್ಯಾ! ನೀನೇ ಏನು ರಾಮನೆಂಬವನು? ಜಾಣನಯ್ಯ ಜಾಣ! ಸಂಗರಕಲೆ ಪ್ರವೀಣ. ಹತ್ತು ಸಾವಿರ ಆನೆಯ ಬಲದ ತಾಟಕೆಯನ್ನು ಬಗ್ಗುಬಡಿದವ. ಸುನಾಭವೆಂಬ ಶಿವಧನುಸ್ಸನ್ನು ಸಲೀಲವಾಗಿ ಮೇಲಕ್ಕೆತ್ತಿ ಮುರಿದವ. ಸುಬಾಹುವನ್ನು ಸಂಹರಿಸಿದವ. ಮಾನವಾಸ್ತ್ರದಿಂದ ಮಾರೀಚನನ್ನು ಮಹಾಂಬುಧಿಗೆ ಬೀಳಿಸಿದವ. ಭಾರ್ಗವರ ವೈಷ್ಣವಧನುವನ್ನು ಸೆಳೆದವ. ನಿಂತನಿಲುವಿನಲ್ಲೇ ಖರನೇ ಮುಂತಾದ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿ ಬಾರದ ಹಣೆಯ ಬೆವರನ್ನು ಒರೆಸಿಕೊಂಡವ. ಆ ರಾಮ ನೀನೇ ಏನು ? ಹೇಗೆ ನಂಬುವುದು ಹೇಳು. ಆಕೃತಿಗೂ ಆಚಾರಕ್ಕೂ ಹೊಂದಿಕೆಯಿರುವುದಿಲ್ಲವೆಂಬುದನ್ನು ನನ್ನ ಸಮಕ್ಷ ಸಿದ್ಧ ಮಾಡಿ ತೋರಿದ ಧೀಮಂತ ನೀನು. ಚಾರಿತ್ರ್ಯಕ್ಕಿಂತ ಚಾತುರ್ಯವೇ ಹೆಚ್ಚಿನದೆಂದು ನಂಬಿದವ ನೀನು. ಚೆಲುವು ಚಾರಿತ್ಯಗಳು ಒಂದಿಗೇ ಇರುವುದಿಲ್ಲವೆಂಬುದನ್ನು ತಿಳಿಯದೇ ಹೋದ ಹುಂಬ ನಾನು. ಚಾಪಲ್ಯ ಮರ್ಕಟರಲ್ಲಿ ಮಾತ್ರವಲ್ಲ ಮನುಷ್ಯರ ಮನಸ್ಸಿನೊಳಗೇ ಮನೆ ಮಾಡಿಕೊಂಡಿರುತ್ತದೆ ಎಂಬ ಮಾತು ಎಷ್ಟು ಸತ್ಯ ಎಂಬುದು ಇಂದಷ್ಟೇ ನನಗರಿವಾಯಿತು.

ಸೂರ್ಯೋದಯವಾಗದೆ ರಾತ್ರಿಯ ಕತ್ತಲು ಕಳೆಯುವುದಿಲ್ಲ. ಹಗಲಿನ ಬೆಳಕು ಮೂಡುವುದಿಲ್ಲ. ಹೆಚ್ಚೇನು? ದಿನಗಣನೆಯೇ ಇಲ್ಲವಾಗಿ ಕಾಲವೇ ಮುಂದಕ್ಕೆ ಚಲಿಸುವುದಿಲ್ಲ. ಅಂತಹ ದಿನಮಣಿಯಾದ ದ್ಯುಮಣಿವಂಶದಲ್ಲಿ ಮೂಡಿಬಂದ ರಾಜನ್ಯಕುಲಶಿರೋಮಣಿ ನೀನು.

ನಿನ್ನ ವಂಶದಲ್ಲಿ ಹುಟ್ಟಿ ಆ ವಂಶವನ್ನು ಬೆಳಗಿದ ಮಹನೀಯರ ನಾಮೋಚ್ಚಾರಣೆ ಮಾಡುವುದಕ್ಕೂ ಸ್ಮರಣೆ ಮಾಡುವುದಕ್ಕೂ ಸುಕೃತ ಬೇಕು. ನಿನ್ನ ನಾಲಗೆಗೆ ಅಂತಹ ಸುಕೃತಾತ್ಮರ ಹೆಸರನ್ನು ಹೇಳುವ ಯೋಗ್ಯತೆಯಾದರೂ ಎಂತು ಬಂದೀತು? ಎಂದು ಬಂದೀತು?

Back-To-Godhead-Bali-Maharaj-With-Lord-Rama-Laxmana

ಹಸುವಿನಸು ಹೀರಬಂದ ಹುಲಿಗೆ ತನ್ನಸುವನ್ನು ಕಸಕ್ಕಿಂತ ಕಡೆಯಾಗಿ ಗಣಿಸಿ ಮೈಯ್ಯೊಪ್ಪಿಸುವುದಕ್ಕೆ ಮುಂದಾದ ದಿಲೀಪ. ಪಾರಿವಾಳದ ಪ್ರಾಣವುಳಿಸಲು ಮೈಯಮಾಂಸವನ್ನೇ ಮತ್ತೆ ಮತ್ತೆ ಕತ್ತರಿಸಿ ತೂಗಿ ಸಾಲದೇ ಹೋದಾಗ ತಾನೇ ತಕ್ಕಡಿಯೇರಿ ಕುಳಿತ ಶಿಬಿ. ಮೈಮರೆತು ಆಡಿದ ಮಾತನ್ನುಳಿಸಿಕೊಳ್ಳಲು ಮಡದಿ ಮಕ್ಕಳನ್ನು ಮಾರಿ ಹೊಲೆಯನಿಗೆ ಆಳಾಗಿ ಮಸಣವನ್ನು ಕಾದ ಹರಿಶ್ಚಂದ್ರ. ಕೇವಲ ಸ್ವರ್ಧುನಿಯಾಗಿದ್ದ ಗಂಗೆಯನ್ನು ಪಾತಾಲತಲದ ತನಕ ಕರೆತಂತು ಮೂರು ಲೋಕದ ಮಂದಿಗೂ ಮಂದಾಕಿನಿಯಲ್ಲಿ ಮಿಂದು ಪೂತಗಾತ್ರರಾಗುವ ಪುಣ್ಯಪಾತ್ರರಾಗುವ ಸೌಭಾಗ್ಯವನ್ನೊದಗಿಸಿದ ಭಗೀರಥ. ಕೃತಯುಗದ ಆಭರಣವಾಗಿ ಅಲಂಕಾರಪ್ರಾಯನಾಗಿದ್ದ ಮಾಂಧಾತ. ವಿಶ್ವಜಿದ್ಯುಜ್ಞವನ್ನು ಮಾಡಿ ಮಣ್ಣಿನ ಮಡಕೆಯನ್ನಷ್ಟೇ ಉಳಿಸಿಕೊಂಡ ರಘು ಮಹಾರಾಜ. ಅನ್ನ-ಚಿನ್ನ-ಮಣ್ಣುಗಳ ಅಂತರವನ್ನರಿತು ಬದುಕಬೇಕೆಂದು ಬೋಧಿಸಿದ ಮನುಮಹಾರಾಜ-ಹೀಗೆ ಮುನ್ನೀರತೆರೆಗಳು ಹಾರುವವರೆಗಿನ ಧರೆಗೆ ದೊರೆಗಳಾದ, ಬಾನಬೀದಿಯಲ್ಲಿ ತೇರಹಾದಿಯನ್ನು ಕೊರೆದ, ಗರ್ಭದಿಂದಲೇ ವಿಶುದ್ಧಚಿತ್ತರಾದ, ಜನ್ಮದಿಂದಲೇ ಗುಣಮಣಿಗಳಾದ, ಫಲಪಾಕಪರ್ಯಂತ ಪ್ರಯತ್ನಶೀಲರಾದ, ನೀಡುವುದಕ್ಕಾಗಿ ಗಳಿಸುತ್ತಿದ್ದ, ಸತ್ಯದುಳಿವಿಗಾಗಿ ಮಿತಭಾಷಿಗಳಾದ, ಕೀರ್ತಿಗಾಗಿ ಕಾಳಗ ಕೊಡುತ್ತಿದ್ದ ನಿನ್ನ ಪೂರ್ವಜರ ಮಿಹಿರಕುಲದ ಮಹೀಭುಜರೆಲ್ಲ ನಿನ್ನ ಈ ಮರದ ಮರೆಯ ಮೋಸದೆಸುಗೆಯ ಮಣ್ಣು ತಿನ್ನುವ ಕೆಲಸದಿಂದ ಕುಬ್ಜರಾಗಿಹೋದರು.

ಮೊಣಕಾಲುಗಳನ್ನು ಮೀರಿರುವ ನಿನ್ನ ತೋಳುಗಳು ಮರದ ಮರೆಯಿಂದ ಉರಬಗೆಯೆ ಸರಳೆಸೆದು ಕತ್ತಲಲ್ಲಿ ಕಚ್ಚುವ ಕಾಳೋರಗಕ್ಕಿಂತಲೂ ಕೀಳಾದ ಕ್ರೂರವಾದ ಕೃತ್ಯವನ್ನೆಸಗೀತೆಂದು ಸರಲಮಾನಸರು ತರ್ಕಿಸುವುದೆಂತು ! ನಿನ್ನ ಅಗಲವಾದ ಬಗೆಯೊಳಗೆ ಕೌಟಿಲ್ಯದ ಕರಿಬಂಡೆಯೊಂದು ಕುಡಿಯೊಡೆದು ಬೆಳೆದು ಭದ್ರವಾಗಿ ಬೇರು ಬಿಟ್ಟಿದೆ ಎಂಬುದು ನಮ್ಮಂತಹ ಮುಗ್ಧ ಮೃಗಬುದ್ಧಿಗೆ ತೋಚುವುದಾದರೂ ಹೇಗೆ? ನಾನು ನಿನ್ನಿದಿರಾಗಿ ನಿಲ್ಲದೇ ಸುಗ್ರೀವನೊಡನೆ ಹೋರುತ್ತಿದ್ದ ಹೊತ್ತು ಗಂಡನಿಲ್ಲದ ಹೆಂಗಸಿನಂತೆ ನಾಚಿ ಮೊಗದೋರದೆ ಮರದ ಮರೆಯಲ್ಲಿ ನಿಂಟು ಬಾಣವನ್ನು ಬಿಟ್ಟು ನನ್ನ ವಕ್ಷಃಸ್ಥಲವನ್ನು ಪ್ರಹರಿಸಿದೆ. ಎಲ್ಲಿ ಕಲಿತೆ- ಈ ಶಿಖಂಡಿವಿದ್ಯೆಯನ್ನು? ಯಾರಯ್ಯಾ ನಿನಗೆ ಈ ವಂಚನಾಚಾತುರಿಯನ್ನು ಬೋಧಿಸಿದ ಪರಮಗುರುಗಳು? ನಾನು ನಿನ್ನ ಕುರಿತಾಗಿ ಕೇಳಿದ ಕಥೆಗಳೆಲ್ಲ ಸುಳ್ಳಿನ ಕಂತೆಯ ಸಂತೆಯ ಕಥೆಗಳಾಗಿ ಹೋಯಿತು.

ಯಾಯಾಜಕರಾದ ದಶರಥ ಚಕ್ರವತ್ರಿಗಳ ಯಾಜಮಾನ್ಯದಲ್ಲಿ ವಸಿಷ್ಠರ ಆಚಾರ್ಯತ್ವದಲ್ಲಿ ಋಷ್ಯಶೃಙ್ಗರ ಬ್ರಹ್ಮತ್ವದಲ್ಲಿ ವಾಮದೇವಾದಿ ಮುನಿಗಳ ಆರ್ತ್ವಿಜ್ಯದಲ್ಲಿ ಕೈಗೊಂಡ ಅಶ್ವಮೇಧಪುರಃಸರವಾದ ಪುತ್ರಕಾಮೇಷ್ಟಿಯ ಯಜ್ಞಕುಂಡದಿಂದ ಪ್ರಾದುರ್ಭವಿಸಿದ ಪ್ರಾಜಪತ್ಯ ಪುರುಷನು ಅನುಗ್ರಹಿಸಿದ ಪುತ್ರಪ್ರದವಾದ ದೇವಪ್ರಸಾದರೂಪವಾದ ಪಾಯಸ. ಅದು ಏಲಕ್ಕಿ-ಲವಂಗ-ಖರ್ಜೂರ-ಕಲ್ಲುಸಕ್ಕರೆ-ದ್ರಾಕ್ಷಿ-ಉತ್ತುತ್ತೆ-ಕೇಸರಿ-ಅಕ್ಕಿ-ಬೆಲ್ಲ-ಹಾಲು ಮುಂತಾದ ದ್ರವ್ಯಗಳನ್ನು ಬೆರೆಸಿ ಬೇಯಿಸಿ ಪರಿಣತ ಪಾಚಕನೊಬ್ಬ ಸಿದ್ಧಪಡಿಸಿದ ಪುರುಷಕೃತ ಪಾಯಸವಲ್ಲ. ಇದಂ ಪಾಯಸಂ ದೇವನಿರ್ಮಿತಂ ದೇವತೆಗಳು ಪಕ್ವಗೊಳಿಸಿದ ಪಾಯಸ. ರಾಮಾದಿಗಳು ದೇವಲೋಕದ ಪಾಯಸದಿಂದ ಮೈದಳೆದವರು. ಅವರು ದೇವಕಲ್ಪರು. ಇದು ಮತಂಗಮಹಾಮುನಿಗಳಿಂದ ನಾವು ಕೇಳಿದ ಕಥೆ. ಆದರೆ ಅದು ಬರಿಯ ಹುರುಳಿರದ ಪೃಥೆ ಎಂಬುದು ಇಂದು ನನ್ನರಿವಿಗೆ ಬಂದಾಗ ರಾಮಾ ! ನನಗೆ ಇನ್ನಿಲ್ಲದ ವ್ಯಥೆಯಾಗುತ್ತಿದೆ.

ರಾಮ ವಿಗ್ರಹವಾನ್ ಧರ್ಮಃ ಎಂಬುದು ಊರಮಂದಿಯ ಮಾತು. ಧರ್ಮೋಹಿಪರಮೋಲೋಕೇ ಧರ್ಮೇಸತ್ಯಂ ಪ್ರತಿಷ್ಠಿತಂ ರಾಜ್ಯಕ್ಕಿಂತಲೂ ಐಸಿರಿಗಿಂತಲೂ ಪ್ರಾಣಕ್ಕಿಂತಲೂ ಧರ್ಮವೇ ಹಿರಿದಾದುದು-ಇದು ನಿನ್ನ ಮಾತು. ಇದನ್ನು ನಾವು ಕೇಳಿ ಸೋತೆವೋ? ಅಲ್ಲ, ಹೇಳಿದವರು ವಂಚಿಸಿದರೋ? ನಂಬಿಕೆಟ್ಟವರುಂಟೇ? ಎಂಬ ಪ್ರಶ್ನೆಯೂ ನಂಬಿ ಕೆಟ್ಟವರಿಲ್ಲವೋ ಎಂಬ ಆಶ್ವಾಸನೆಯೂ ಹೀಗೆ ಇವೆರಡೂ ನೂರಕ್ಕೆ ನೂರು ಸುಳ್ಳು ಎಂಬುದನ್ನು ನೀನಿಂದು ಪ್ರತ್ಯಕ್ಷ ಪ್ರಾಯೋಗಿಕವಾಗಿ ತೋರಿಕೊಟ್ಟೆ. ರಾಮ ! ನೀನು ಕಲಿತುದು ಹೆಚ್ಚಾಯಿತು. ನಿನಗೆ ಗುರುಗಳು ಒಬ್ಬರಲ್ಲ ಇಬ್ಬರು. ಉತ್ತರ ದಕ್ಷಿಣ ಧ್ರುವಗಳಂತಿರುವವರು. ಒಬ್ಬರು ದೇವ-ದಾನವ-ಮಾನವರೂ ಮಣಿವ ಬ್ರಹ್ಮರ್ಷಿ ವಸಿಷ್ಠರಾದರೆ; ಮತ್ತೊಬ್ಬರು ವರ್ಣಾಂತರ ವ್ಯಾಪಾರದಿಂದ ಲೋಕಾಂತರದಲ್ಲಿ ಭಾವಗಳನ್ನುಂಟುಮಾಡಿದ, ಬ್ರಹ್ಮಕ್ಷತ್ರಸಾಂಗತ್ಯದಿಂದ, ಸಮನ್ವಯದಿಂದ, ಪಾಕಗೊಂಡು ತೂಕವೆಡೆದ ಮಹರ್ಷಿ ವಿಶ್ವಾಮಿತ್ರರು.

ಶಿಷ್ಯರು ಗುರುಗಳನ್ನರಸಿಕೊಂಡು ಗುರುಕುಲಕ್ಕೆ ಹೋಗುವುದು ಸಾಮಾನ್ಯಕ್ರಮ. ರಾಮ! ನಿನ್ನ ಭಾಗ್ಯದ ಬೆಟ್ಟ ಎಷ್ಟು ಹಿರಿದಾದುದು ನೋಡು. ಗುರುಗಳಾದ ವಿಶ್ವಾಮಿತ್ರರೇ ನಿನ್ನನ್ನರಸಿಕೊಂಡು ಸಾಕೇತಕ್ಕೆ ಬಂದರು. ತಮ್ಮೊಂದಿಗೆ ಕರೆದೊಯ್ದರು. ಕೃಶಾಶ್ವದತ್ತವಾದ ಮಹಾಮನ್ತ್ರಾಸ್ತ್ರಗಳನ್ನು ಉಪದೇಶಿಸಿದರು. ಅಸ್ತ್ರದೇವತೆಗಳೆಲ್ಲ ಮೂರ್ತಿಮತ್ತಾಗಿ ಮೈದೋರಿ ನಿನ್ನ ಸೇರಿಕೊಂಡವಂತೆ. ಬಲ-ಅತಿಬಲ-ಶಬ್ದವೇಧಿ-ಜೃಂಭಕ ಮೊದಲಾದ ಧನುರ್ವೇದದ ಗುಹ್ಯಾತಿಗುಹ್ಯವಾದ ಅಸ್ತ್ರವಿದ್ಯೆಗಳು ನಿನಗೆ ಕರತಲಮಲಕವಂತೆ.

ವಿದ್ಯೆಯನ್ನು ಬಲ್ಲವನು ಅದನ್ನು ಪ್ರಯೋಗಿಸುವಲ್ಲಿ ವಿನಿಯೋಗದ ವಿಧಿನಿಷೇದಗಳನ್ನು ತಿಳಿದಿರಲೇಬೇಕು.

ರಾಕ್ಷಸಿಯಾದ ತಾಟಕೆಯನ್ನು ಕೊಲ್ಲುವ ಹೊತ್ತಿಗೆ ಇವಳು ವಧಾರ್ಹಳೇ? ಎಂದು ವಿಶ್ವಾಮಿತ್ರರನ್ನು ಪ್ರಶ್ನಿಸಿದ ವಿವೇಕಿಯಾದ ನೀನು ಈ ಹೊತ್ತು ಕಾಗೆಗೂಗೆಗಳ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಂತೆ, ಅಸ್ತ್ರವಿದ್ಯಾಪರಿಣತನಲ್ಲದ ನಿರಪರಾಧಿಯಾದ ವಾಲಿಯ ಮೇಲೆ ಅದೂ ಮತ್ತೊಬ್ಬನೊಂದಿಗೆ ಹೋರಾಡುತ್ತಿರುವ ಹೊತ್ತು ಯಾವುದೇ ಪೂರ್ವಸೂಚನೆಯನ್ನು ನೀಡದೆ ಪರಾಙ್ಮುಖವಧೆಗೆ ಮುಂದಾದ ನಿನಗೋ ನಿನ್ನ ವಂಶಸ್ಥರಿಗೋ ನಾನು ಮಾಡಿದ ಅನ್ಯಾಯವಾದರೂ ಏನು?

ನಯಶ್ಚ ವಿನಯಶ್ಚೋಭೌ ನಿಗ್ರಹಾನಾಂ ಗ್ರಹಾವಪಿ| ರಾಜವೃತ್ತಿರಸಂಕೀರ್ಣಾ ನನೃಪಾಃ ಕಾಮವೃತ್ತಯಃ ||

ದಂಡನೀತಿ, ವಿನಯ, ನಿಗ್ರಹ, ಅನುಗ್ರಹ-ಇವು ರಾಜನಲ್ಲಿರಬೇಕಾದ ಮುಖ್ಯಗುಣಗಳು. ಯಾವಾಗಲೂ ರಾಜನ ನಡವಳಿಕೆಯು ನಿರಭ್ರಶುಭ್ರವಾದ ಆಕಾಶದಂತೆ ನಿರ್ಮಲವಾಗಿರಬೇಕು. ಹಿಮಾಚಲದಂತೆ ಧವಲವಾಗಿರಬೇಕು. ಮೇರುವಿನಂತೆ ಅತುಲವಾಗಿರಬೇಕು.

ಸಾಮದಾನಂ ಕ್ಷಮಾಧರ್ಮಃ ಸತ್ಯಂಧೃತಿಪರಾಕ್ರಮೌ | ಪಾರ್ಥಿವಾನಾಂ ಗುಣರಾಜನ್ ದಣ್ಡಶ್ಚಾಪ್ಯಪರಾಧಿಷು ||

ಸಾಮ, ದಾನ, ಕ್ಷಮೆ, ಧರ್ಮನಿಷ್ಠೆ, ಧೈರ್ಯ, ಪರಾಕ್ರಮ, ಅಪರಾಧಿಗಳನ್ನು ದಂಡಿಸುವುದು ಇವೂ ರಾಜರ ಗುಣಗಳೇ.

ಇಂತಹ ನೃಪಕುಲತಿಲಕರ ಗುಣಗಣಗಳು ನಿನ್ನಲ್ಲಿವೆ ಎಂದು ಬಗೆದು; ನಿನ್ನ ಕುಲೋನ್ನತಿ, ವಿದ್ಯೋನ್ನತಿ, ಚಾರಿತ್ಯೋನ್ನತಿ, ಪಾರಿಶುಧ್ಯ, ಪ್ರಾಮಾಣಿಕತೆಗಳನ್ನು ಚಿರಸ್ಥಾಯಿಗಳಾದುವೆಂದು ನಂಬಿಯೇ, ತಾರೆ ತಡೆದರೂ ತಮ್ಮನೊಂದಿಗೆ ಯುದ್ಧಕ್ಕಾಗಿ ಬಂದವ ನಾನು. ಆದರೆ ನಾನೀ ಕದನಾಂಗಣದಲ್ಲಿ ಕಂಡುದೇನು? ಉಂಡುದೇನು? ಕೊಂಡುದೇನು? ನನಗೆ ಸ್ವರ್ಗವಿಲ್ಲ. ನಿನಗೆ ನರಕ ತಪ್ಪಿದ್ದಲ್ಲ.

rama-kills-vali-2-ramayan-desibantu

ಏನು ಮಾಡೋಣ? ನಾನು ಕಂದಮೂಲಫಲ ಜಲಪರ್ಣಾಶನಾದ ಕಪಿ. ಚಿನ್ನದ ತಟ್ಟೆಯಲ್ಲಿ ಸುಗಂದಿಯಾದ ಸಣ್ಣಕ್ಕಿ ಅನ್ನವನುಂಡವನಲ್ಲ. ನಿಮ್ಮಂತೆ ನಮ್ಮಲ್ಲಿ ಛತ್ರಚಾಮರ ಕೊಂಬುಕಹಳೆ ಮಕರ ತೋರಣಾದಿಗಳಿಲ್ಲ. ನಾವು ಬರಿಯ ಮಂಗಗಳು. ಹಾಗಾಗಿಯೇ ನೀನೊಬ್ಬ ವೇಷಧಾರಿ ಎಂಬುದು ತಿಳಿಯದೇ ಹೋಯ್ತು.

ನೀನು ದಟ್ಟವಾದ ಹಸಿಹಸಿರ ಹುಲ್ಲುಮುಚ್ಚಿದ ಆಳವಾದ ಹಾಳುಬಾವಿ. ಬೂದಿ ಮುಚ್ಚಿದ ಕೆಂಡ. ಆಹಾರದ ಆಸೆ ಹುಟ್ಟಿಸಿ ಆನೆಯನ್ನು ಹೊಂಡಕ್ಕೆ ತಳ್ಳುವ ಮಾನವ ಜಾತಿಗೆ ಸೇರಿದ ನಿನಗೆ ನಾಚಿಕೆ-ಮಾನ-ಮರ್ಯಾದೆಗಳೆಂಬ ಶಬ್ದಗಳೆಲ್ಲ ಅರ್ಥಹೀನವಾದ ಅಕ್ಷರಗಳ ಸಂತೆಯೇ ಸರಿ.

ಆಹಾ ! ನೋಡುವುದಕ್ಕೆ ಪ್ರತ್ಯಕ್ಷ ಪರಮೇಶ್ವರ. ಏನು ಜಟೆ? ಏನು ನಾಮ? ಏನು ವಲ್ಕಲ? ಇವುಗಳ ಮರ್ಯಾದೆಯನ್ನು ನೀನು ನಿರ್ಭೀತನಾಗಿ ನಿರ್ಲಜ್ಜನಾಗಿ ಕಳೆದುಬಿಟ್ಟೆ. ಕಾಡಬೇಡನೂ ಮಾಡದ ನಿನ್ನೀಕೃತ್ಯದಿಂದ ನಿನ್ನ ವಂಶದ ಇಪ್ಪತೊಂದು ತಲೆಮಾರಿನ ಪಿತೃಗಳೂ ನರಕಭಾಜನರಾದರು.

ನಿನ್ನ ತಂದೆಯವರಾದ ದಶರಥ ಚಕ್ರವರ್ತಿಗಳು ನನ್ನ ತಂದೆಯಾದ ದೇವೇಂದ್ರನ ಕರೆಯನ್ನು ಮನ್ನಿಸಿ ಸ್ವರ್ಗಕ್ಕೆ ತೆರಳಿ ದಾನವರ ಉಪಟಳವನ್ನು ಕೊನೆಗಾಣಿಸಿ ದೇವತೆಗಳ ಪ್ರಶಂಸೆಗೆ ಪಾತ್ರರಾಗಿ ದಿಗನ್ತವಿಶ್ರಾನ್ತವಾದ ಕೀರ್ತಿಯನ್ನು ಪಡೆದವರು. ಪ್ರತಿಬಾರಿಯೂ ಪುರಂದರನು ಅಭಿಮಾನದಿಂದ ಚಕ್ರವರ್ತಿಗಳ ಕೊರಳಿಗೆ ತೊಡಿಸುತ್ತಿದ್ದ ಮಂದಾರಪುಷ್ಪದ ಮಾಲಿಕೆಯಿಂದಾಗಿ ಇಡಿಯ ಸಾಕೇತವೇ ಸೌರಭದ ಸಾಗರವಾಗುತ್ತಿತ್ತಂತೆ. ಹಾಗಾಗಿಯೇ ನಿನ್ನ ಜನ್ಮಭೂಮಿಯಾದ ಅಯೋಧ್ಯೆಗೆಮಂದಾರಮಾಲ್ಯಮಧುವಾಸಿತವಾಸಭೂಮಿಃ ಎಂಬ ಪ್ರಶಸ್ತಿ.

ಎಂತಹ ತಂದೆಗೆ ಎಂತಹ ಮಗ? ನೀನಿಂದುಗೈದ ಹೊಲೆಗೆಲಸದ ದುರ್ಗಂಧವನ್ನು ದೂರ ಮಾಡುವುದಕ್ಕೆ ನಿನ್ನ ಮುಂದಿನ ನೂರು ತಲೆಮಾರಿನವರಿಗೂ ಸಾಧ್ಯವಾಗದು. ಆಗಸದೆತ್ತರದಲ್ಲಿದ್ದ ಅಯೋಧ್ಯೆಯನ್ನು ಪಾತಾಳದಾಳಕ್ಕೆ ತಳ್ಳಿಬಿಟ್ಟೆ. ಸಾಕ್ಷಾತ್ ಶ್ವೇತವರಾಹನೇ ಮೈದಾಳಿಬಂದರೂ ಅಪಕೀರ್ತಿಯಲ್ಲಿ ನೀನು ಮುಳುಗಿಸಿಬಿಟ್ಟ ಈ ಅಯೋಧ್ಯೆಯನ್ನು ಮೇಲಕ್ಕೆತ್ತಲಾರ.

ಭೂಮಿರ್ಹಿರಣ್ಯಂರೂಪ್ಯಂಚವಿಗ್ರಹೇಕಾರಣಾನಿಚ ಹೆಣ್ಣು-ಹೊನ್ನು-ಮಣ್ಣು ಇವು ಮೂರೂ ಯುದ್ಧಕ್ಕೋ, ದ್ವೇಷಕ್ಕೋ, ಕ್ರೋಧಕ್ಕೋ ಕಾರಣವಾಗಬಲ್ಲವು. ನಿಮ್ಮ ಕುಲಕ್ಕೆ ಸಂಬಂಧಿಸಿದಂತೆ ಈ ಮೂರರ ಮೇಲೂ ನಾನು ಕಣ್ಣು ಹಾಕಿದವನಲ್ಲ; ಕೈಯಿಟ್ಟವನಲ್ಲ; ಬಾಯಿಬಿಟ್ಟವನಲ್ಲ. ನೀನಾದರೂ ಈ ಮೂರರಲ್ಲಿ ಯಾವುದರ ಮೇಲಿನ ಲೋಭದಿಂದ ನನ್ನನ್ನು ಹೀಗೆ ಹೊಡೆದು ಕೆಡೆದೆಯೋ? ನನಗೆ ತಿಳಿಯದು.

ನನ್ನ ತಮ್ಮನಾದರೂ ಅಯೋಧ್ಯೆಗೆ ಬಂದು ದೂರು ಕೊಟ್ಟವನಲ್ಲ. ನೀನು ಹೇಗೂ ಪ್ರಭುತ್ವವನ್ನು ತೊರೆದು ರಾಜ್ಯವನ್ನು ಬಿಟ್ಟು ವನವಾಸಿಯಾದವನು. ಏರಿಸಿಕೊಳ್ಳದ ಇಳಿಸಿಕೊಳ್ಳದ ರಾಜ್ಯಭಾರದ ನೊಗಕ್ಕೆ ನೀನು ಹೆಗಲುಕೊಡುವುದಾದರೂ ಹೇಗೆ? ಅಯೋಧ್ಯೆಗೆ ರಾಜ ರಾಮನೋ? ಭರತನೋ? ಉತ್ತರಿಸುವರಾರು? ನೀನು ಕಾಲಿಗೆ ಹಾಕಿದ್ದನ್ನು ತಲೆಯಲ್ಲಿ ಹೊತ್ತು ಸಿಂಹಾಸನದ ಮೇಲಿಟ್ಟ ನಿನ್ನ ತಮ್ಮನದು ಭ್ರಾತೃವಾತ್ಸಲ್ಯವೋ? ತ್ಯಾಗವೋ? ಮೌಢ್ಯವೋ? ಕರ್ತವ್ಯ ಭ್ರಷ್ಟತೆಯೋ? ಈ ಕುರಿತು ತಲೆಕೆಡಿಸಿಕೊಳ್ಳುವವರು ಯಾರೂ ಇಲ್ಲ.

ಅಯೋಧ್ಯೆಯ ಅರಸು ಒಳ್ಳೆಯವರೋ? ಕೆಟ್ಟವರೋ -ಹೇಳುವುದು ಕಷ್ಟ. ಪ್ರಜೆಗಳು ಮಾತ್ರ ಸಜ್ಜನರು. ಸಹೃದಯರು. ಸಂಸ್ಕಾರವಂತರು. ಸಮನ್ವಯ ಬುದ್ಧಿಯುಳ್ಳವರು. ಅವರನ್ನಾಳುವುದಕ್ಕೆ ಅರಸರ ಅಗತ್ಯವಿಲ್ಲ. ಪಾದುಕೆಗಳೇ ಪರ್ಯಾಪ್ತವಾಗುತ್ತವೆ. ಅಯೋಧ್ಯೆಯ ಕುರಿತು ಪ್ರಪಂಚವೇ ತಳಮಳಕ್ಕೀಡಾದರೂ ಕಳವಳಕ್ಕೆರವಾದರೂ ಅಯೋಧ್ಯೆಯ ಮಂದಿ ತಣ್ಣಗಿರುತ್ತಾರೆ. ಅಂತಹ ಶುದ್ಧ ಸ್ನಿಗ್ಧ ಮುಗ್ಧ ಪ್ರಜೆಗಳನ್ನು ಪಡೆದ ನೀವು ಅಪ್ರಬುದ್ಧರಾದರೂ ಅನರ್ಹವಾದರೂ ಧನ್ಯರೇ ಹೌದು.

ತನ್ನ ಹೆಂಡತಿ ರುಮೆಯನ್ನು ರಕ್ಷಿಸಿಕೊಳ್ಳಲಾಗದ ನನ್ನ ತಮ್ಮ ಸುಗ್ರೀವನ ಸಖ್ಯವನ್ನು ಸತಿಸೀತೆಯನ್ನು ಕಳೆದುಕೊಂಡ ನೀನು ಬಯಸಿದ್ದು ಬುದ್ಧಿಗೇಡಿಯ ಲಕ್ಷಣವಲ್ಲದೇ ಮತ್ತೇನು? ನನ್ನ ತಮ್ಮನೊಂದಿಗೆ ಮೈತ್ರೀಬಂಧವನ್ನು ಮಾಡಿಕೊಂಡಿದ್ದಿ. ನಾನು ಬರಿಯ ಮಂಗನಾದರೆ ನನ್ನ ತಮ್ಮ ವಿಭೂತಿಪುರುಷನಾಗುವುದು ಹೇಗೆ? ನನ್ನ ತಮ್ಮ ನಿನ್ನ ಎತ್ತರಕ್ಕಿದ್ದುದು ಹೌದಾದರೆ ಅವನ ಅಣ್ಣನಾದ ನಾನು ಸಣ್ಣವನಾಗುವುದು ಹೇಗೆ?

ರಾವಣನಿಂದ ಅಪಹೃತಳಾದ ಸೀತೆಯನ್ನು ಪಡೆಯುವುದಕ್ಕೆ ಸುಗ್ರೀವ ಸಾಕೋ? ಬೇಕೋ? ಅದಕ್ಕಾಗಿ ಕಿಷ್ಕಿಂಧೆಯವರು ದುಡಿಯಬೇಕೋ? ನೀನು ನನ್ನಲ್ಲಿ ಒಂದು ಮಾತು ಹೇಳುತ್ತಿದ್ದರೆ ಕಾಮರೂಪಿಯಾದ ನಾನು ನನ್ನ ಬಾಲವನ್ನು ಬೆಳೆಸಿ ಆ ತ್ರಿಕೂಟಾಚಲದ ಲಂಕೆಯನ್ನು ನಿನ್ನ ಕಾಲಬುಡದಲ್ಲಿ ತಂದಿರಿಸುತ್ತಿದ್ದೆ. ಏನು ಮಾಡೋಣ? ನಿನಗೆ ಯೋಗವಿಲ್ಲ. ನನಗೆ ಭಾಗ್ಯವಿಲ್ಲ. ಆಡಿ ಪ್ರಯೋಜನವಿಲ್ಲ. ಸೀತೆಯ ದುಃಖಕ್ಕೆ ಕೊನೆಯಿಲ್ಲ. ಕಲ್ಲದೋಣಿಯಲ್ಲಿ ಕುಳಿತು ಕಡಲ ದಾಟಹೊರಟ ನಿನ್ನನ್ನು ಕಂಡು ಕಣ್ಣು ಹನಿಗೂಡುತ್ತಿದೆ. ಕರುಳು ಕನಿಕರಿಸುತ್ತಿದೆ. ಬಾಳಿನುದ್ದಕ್ಕೂ ಬೆಚ್ಚಿ ಬಿದ್ದ ಬೆಚ್ಚಿ ಬೀಳುವ ಭೀರುವಾದ ಸುಗ್ರೀವ ಏನು ಸಹಾಯ ಮಾಡಿಯಾನು? ಎಷ್ಟು ಸಹಾಯ ಮಾಡಿಯಾನು? ಹೇಗೆ ಸಹಾಯ ಮಾಡಿಯಾನು? ಓಡುವುದೊಂದನ್ನುಳಿದು ಬೇರೇನನ್ನೂ ತಿಳಿಯದ ಈ ಕೋಡಗನನ್ನು ಕಟ್ಟಿಕೊಂಡ ನಿನಗೆ ಬ್ರಹ್ಮನೇ ಆಯುಷ್ಯವನ್ನು ಅನುಗ್ರಹಿಸಬೇಕು.

ಲೇಸಾಯ್ತು ರಾಮಾ ಲೇಸಾಯ್ತು !

ರಾಜಹಾ ಬ್ರಹ್ಮಹಾ ಗೋಘ್ನುಶ್ಚೋರಃ ಪ್ರಾಣಿವಧೇರತಃ | ನಾಸ್ತಿಕಃ ಪರಿವೇತ್ತಾಚ ಸರ್ವೇ ನಿರಯಗಾಮಿನಃ ||

ರಾಜನನ್ನು ಕೊಂದವನು, ಗೋಹತ್ಯೆ ಮಾಡಿದವನು, ಬ್ರಹ್ಮಹತ್ಯೆಗೈದವನು, ಪ್ರಾಣಿವಧೆಯಲ್ಲಿ ನಿರತನಾದವನು, ಅಣ್ಣನು ಮದುವೆಯಾಗುವ ಮುನ್ನವೇ ಮದುವೆಯಾದ ತಮ್ಮ ಈ ಐವರೂ ನರಕವನ್ನು ಹೊಂದುತ್ತಾರಂತೆ. ವಾನರರಾಜನಾದ ನನ್ನನ್ನು ಅಧರ್ಮದಿಂದ ಅನ್ಯಾಯವಾಗಿ ಕೊಂದ ನಿನ್ನನ್ನು ತನ್ನೆಡೆಗೆ ಬರಮಾಡಿಕೊಳ್ಳಲು ನರಕವೂ ನಾಚಿ ನೀರಾಗಿ ನಿಂತೀತು.

ರಾಮ ! ರಾಜರು ಮೃಗಯಾವ್ಯಸನಿಗಳು. ಅವರು ವಿಹಾರಹಾರ ವಿನೋದಗಳಿಗಾಗಿ ಬೇಟೆಯಾಡುವುದುಂಟು. ಆದರೆ ತನ್ನಷ್ಟಕ್ಕೆ ತಾನು ಮಲಗಿರುವ ಮೃಗವನ್ನು ಸದ್ದುಮಾಡಿ ಎಬ್ಬಿಸಿ ಓಡಿಸದೇ ಮಲಗಿದಲ್ಲೇ ಹೊಡೆದು ಕೊಲ್ಲುವ ಕ್ರಮವಿಲ್ಲ.

ನೀನೀ ಹೊತ್ತು ಕಾಡಬೇಡನಿಗಿಂತಲೂ ಕೀಳಾಗಿ ಹೋದೆ. ದಂತಗಳಿಗಾಗಿ ಆನೆಯನ್ನೂ, ಚರ್ಮಕ್ಕಾಗಿ ಜಿಂಕೆಯನ್ನೂ, ಉಗುರಿಗಾಗಿ ಹುಲಿಯನ್ನೂ, ಕೊಂಬಿಗಾಗಿ ಕಾಡ್ಗೋಣವನ್ನೂ, ಕೂದಲಿಗಾಗಿ ಚಮರೀಮೃಗವನ್ನೂ ಬೇಟೆಯಾಡಿ ಕೊಲ್ಲುವುದುಂಟು. ಆದರೆ ಶಾಕಾಹಾರಿಯಾದ ಶಾಖಾಮೃಗವಾದ ವಾಲಿ ಎಂಬ ಈ ಮರ್ಕಟನ ಉಗುರು ಕೂದಲು ಚರ್ಮಗಳಿಂದ ನಿನಗಾವ ಪ್ರಯೋಜನ ಹೇಳು.

ಹೇಮಮಾಲಿಯಾದ ವಾಲಿಯ ಹಲ್ಲುಗಳಿಂದ ಬಾಚಣಿಗೆಯನ್ನೂ, ಉಗುರುಗಳಿಂದ ಕಾಲಂದುಗೆಯನ್ನೂ, ಕರುಳಿನಿಂದ ಹಾರವನ್ನೂ, ಚರ್ಮದಿಂದ ಕಂಚುಕವನ್ನೂ, ಕೂದಲುಗಳಿಂದ ದುಕೂಲವನ್ನೂ ನೇಯ್ದೋ, ಕೊಯ್ದೋ, ಕಟ್ಟಿಯೋ, ಪೋಣಿಸಿಯೋ, ಹೊಲಿದೋ ಸಿದ್ಧಪಡಿಸಿ ರಾವಣನ ಸೆರೆಯಲ್ಲಿ ಸಿಕ್ಕಿಬಿದ್ದ ಸೀತೆಗೆ ನೀನಾಕೆಯನ್ನು ಬಿಡಿಸಿ ತಂದರೆ, ಉಡುಗೊರೆಯಾಗಿ ನೀಡಬೇಕೆಂಬ ಹಂಬಲದಿಂದ ನನ್ನನ್ನು ಹೀಗೆ ಹೊಡೆದುರುಳಿಸಿದೆಯೇನು? ರಾವಣನು ಕದ್ದೊಯ್ದದ್ದು ನಿನ್ನ ಮಡದಿಯಾದ ಸೀತೆಯನ್ನೋ? ಅಲ್ಲ ನಿನ್ನ ಸಂಸ್ಕೃತವಾದ ಬುದ್ಧಿಯನ್ನೋ? ಹೇಳಿ ಪ್ರಯೋಜನವಿಲ್ಲ. ಮಣ್ಣು ಮೆದ್ದ ಬುದ್ಧಿಗೆ ಮದ್ದಿಲ್ಲ.

ರಾಮಾ ! ನೀನು ಅಧೀತವಿದ್ಯನಲ್ಲವೇ? ಶಾಸ್ತ್ರವನ್ನು ಬಲ್ಲನಲ್ಲವೆ?

ಪಂಚಪಂಚ ನಖಾಃ ಭಕ್ಷ್ಯಾಃ ಬ್ರಹ್ಮಕ್ಷತ್ರೇಣ ರಾಘವ | ಶಲ್ಯಕಃ ಶ್ವಾವಿಧೋಗೋಧಾ ಶಶಃ ಕೂರ್ಮಶ್ಚ ಪಂಚಮಃ ||

ಬ್ರಾಹ್ಮಣರು ಹಾಗೂ ಕ್ಷತ್ರಿಯರು ಐದು ಉಗುರುಗಳಿರುವ-ಖಡ್ಗಮೃಗ, ಮುಳ್ಳುಹಂದಿ, ಉಡ, ಮೊಲ, ಆಮೆ- ಹೀಗೆ ಈ ಐದು ಪ್ರಾಣಿಗಳ ಮಾಂಸವನ್ನು ಮಾತ್ರ ಭಕ್ಷಿಸಬಹುದೆಂಬುದು ಶಾಸ್ತ್ರವಂತೆ. ವಾನರನಾದ ನಾನು ಪಂಚಖನನೇ ಆಗಿದ್ದರೂ ಧರ್ಮಜ್ಞರಾದವರು ನಮ್ಮ ಜಾತಿಯವರ (ಮಂಗಗಳ) ಚರ್ಮವನ್ನಾಗಲೀ ಎಲುಬನ್ನಾಗಲೀ ಮುಟ್ಟುವುದಿಲ್ಲ. ನೆತ್ತರನ್ನು ಕುಡಿಯುವುದಿಲ್ಲ. ಬಾಡನ್ನು ( ಮಾಂಸ) ಭಕ್ಷಿಸುವುದಿಲ್ಲ. ಮಾನಮರ್ಯಾದೆಗಳಿಂದ ವಿಭೂಶಿತರಾಗಿ, ಶ್ರುತಿ ಸ್ಮೃತಿ ಶಾಸ್ತ್ರ ಸೂತ್ರ ಸಿದ್ಧಾಂತಗಳನ್ನು ಪ್ರತಿಪಾದಿಸಿ ಬಾಳಲ್ಲಿ ಅಳವಡಿಸಿಕೊಂಡವರಾಗಿ ಅನ್ಯರಿಗೆ ಆದರ್ಶಪ್ರಾಯರೂ, ಪರಮಾದರಣೀಯರೂ, ಮಹಾಮಾನವರೂ ಆದ ನಿಮಗೆ ಉಪಯುಕ್ತವಾಗಬಹುದಾದ ಯಾವ ಅಂಗೋಪಾಂಗಗಳನ್ನೂ ಮಂಗಗಳಾದ ನಮ್ಮಲ್ಲಿರುವುದಿಲ್ಲವೆಂಬುದನ್ನು ಸಾಂಗಶಾಸ್ತ್ರಜ್ಞನಾದ ನೀನು ಚೆನ್ನಾಗಿಯೇ ತಿಳಿದಿದ್ದರೂ ಈ ಮಂಗನನ್ನು ಮರೆಯಿಂದ ಹೊಡೆಯುವುದಕ್ಕೇಕೆ ಮುಂದಾದೆಯೋ? ಮೃತ್ಯುದೇವತೆಯೇ ಉತ್ತರಿಸಬೇಕಷ್ಟೆ.

ಈ ಕ್ಷಣದ ತನಕವೂ ನಾನು ನಿನ್ನ ಹಾಗೂ ನಿನ್ನ ವಂಶದ ಕುರಿತಾಗಿ ವಂಶದವರ ಕುರಿತಾಗಿ ಅಪಾರವಾದ ಗೌರವಾದರಾಭಿಮಾನಗಳನ್ನು ಉಳ್ಳವನಾಗಿದ್ದೆ. ಆರಾಧನೀಯಭಾವವನ್ನು ಹೊಂದಿದವನಾಗಿದ್ದೆ. ರಾಮಾ! ನಿನ್ನ ಕೈಯಲ್ಲಿ ಕೈಯಿಟ್ಟು ಕೆಟ್ಟುಹೋದ ನನ್ನ ತಮ್ಮ ಸುಗ್ರೀವನ ಕಟ್ಟಿರುಳ ಕಲಹದ ಕರೆಗೆ ಕ್ರುದ್ಧನಾಗಿ ಓಗೊಟ್ಟು ಕದನಕಣಕ್ಕೆ ಓಡಿಬರುವ ಹೊತ್ತು, ಶಂಕಿತಳಾಗಿ ಆತಂಕಿತಳಾಗಿ ನನ್ನನ್ನು ಕಣ್ಣೀರಿಟ್ಟು ಕೈಮುಗಿದು ಕಾಲಿಗೆ ಬಿದ್ದು ತಡೆದ ತಾರೆಗೆ ನಿನ್ನ ವಂಶದವರ ಶರಶ್ಚಂದ್ರ ಚಂದ್ರಿಕಾಧವಲವಾದ ಅಮಲವಾದ ಅತುಲವಾದ ಅಶಿಥಿಲವಾದ ಪ್ರಥುಲವಾದ ಬಹುಲಾವದ ಕೀರ್ತಿ ಗುಣಗಾನ ಮಾಡಿ, ಸಮಾಧಾನವನ್ನು ಹೇಳಿ ಭಯಕ್ಕೆಡೆಯಿಲ್ಲವೆಂಬ ಭರವಸೆಯನ್ನಿತ್ತು, ಬವರಕ್ಕೆ ಬಂದವ ನಾನು. ಬೆನ್ನುಬಗೆಗಳಿಲ್ಲದ ರಾಮನೆಂಬ ಬಂಡೆಯೊಂದು ಭಾಸ್ಕರವಂಶದಲ್ಲಿ ಹುಟ್ಟೀತೆಂಬುದನ್ನು ಬೆರಳು ಮಡಚದೆಯೇ ಭವಿಷ್ಯವನ್ನು ಅಳೆಯಬಲ್ಲ ತಿಳಿಯಬಲ್ಲ್ಲ ತ್ರಿಕಾಲಜ್ಞಾನಿಯೂ ತರ್ಕಿಸಲಾರ.

ನೀನು ಕಿಷ್ಕಿಂಧೆಗೆ ಬಂದಿರುವ ವಿಚಾರವೇನೋ ತಿಳಿದಿತ್ತು. ತಥಾಪಿ ನಿನ್ನನ್ನು ಕಂಡು ಚಕ್ರವರ್ತಿ ತನೂಜನಾದ ನಿನಗೆ ಸಾರ್ವಭೌಮೋಚಿತವಾದ ಸತ್ಕಾರ ಸಂಮಾನಗಳನ್ನು ಸಲ್ಲಿಸುವುದಕ್ಕೆ ಮನವಿದ್ದರೂ ಮಾರ್ಗವಿರಲಿಲ್ಲ.

ನೀನು ಬಂದು ನಿಂತಿದ್ದು ಋಷ್ಯಮೂಕದಲ್ಲಿ. ವಾಲಿಗದು ಮರಣದ ಮನೆ. ನಾನಲ್ಲಿಗೆ ಬಂದರೆ ಸಾಯುತ್ತೇನೆ. ನನ್ನವರು ಬಂದರೆ ಕಲ್ಲಾಗಿ ಬೀಳುತ್ತಾರೆ. ಇದು ಮತಂಗಮುನಿಗಳ ಶಾಪ. ನಾನಲ್ಲಿಗೆ ಬಂದು ನಿನ್ನನ್ನು ಕಾಣುವುದೆಂದರೆ ನನ್ನ ಸಾವನ್ನು ನಾನೇ ಅರಸಿಕೊಂಡು ಬಂದು ಆಲಂಗಿಸಿಕೊಂಡಂತೆ.

ಆದರೆ ನೀನು ನನ್ನಂತಲ್ಲ. ನಿನಗೆ ಅಂತಹ ನಿರೋಧವಿರೋಧನಿರ್ಬಂಧಗಳೇನೂ ಇರಲಿಲ್ಲವಲ್ಲ ? ನೀನು ಕಿಷ್ಕಿಂಧೆಯ ಪುರದ್ವಾರದಲ್ಲಿ ಬಂದುನಿಂದು ಹೇಳಿ ಕಳುಹಿಸುತ್ತಿದ್ದರೆ ಓಡೋಡಿ ಬಂದು ನಿನ್ನಡಿಗೆ ಮುಡಿ ಚಾಚಿ ಕಿಷ್ಕಿಂಧೆಯ ಸಾಮ್ರಾಜ್ಯವನ್ನೇ ನಿನ್ನ ಪದತಲದಲ್ಲಿಟ್ಟು ಕೈಮುಗಿಯುತ್ತಿದೆ. ಸುಗ್ರೀವನ ಕುರಿತಾಗಿ ಅಯೋಧ್ಯೆಯ ಅಧಿಕಾರಿಯಾಗಿ ನೀನು ನೀಡಬಹುದಾದ ನ್ಯಾಯ ನಿರ್ಣಯಕ್ಕೆ ತಲೆಬಾಗಿ ವಿನೀತನಾಗಿ ನಿನ್ನ ಮಾತನ್ನು ಅಂಗೀಕರಿಸುತ್ತಿದ್ದೆ. ಇಲ್ಲವೇ ನಿನ್ನೊಡನೆ ವೀರನಂತೆ ಹೋರಾಡಿ ಕೊಲ್ಲುತ್ತಿದ್ದೆ ಅಥವಾ ಗೆಲ್ಲುತ್ತಿದ್ದೆ. ಅದು ಸಾಧ್ಯವಾಗದೇಹೋದರೆ ವೀರಮರಣವನ್ನು ಹೊಂದುತ್ತಿದ್ದೆ. ಸತ್ತರೂ ಸಮಾಧಾನದಿಂದ ಸ್ವರ್ಗ ಸೇರುತ್ತಿದ್ದೆ. ಕಾಚಿಂತಾಮರಣೇರಣೇ ಎಂಬ ಮಾತನು ಮನಗಾಣದ ವೀರನಾರು?

ರಾಘವ ! ಹುಟ್ಟಿ ಅರ್ಧಶತಮಾನವೂ ಕಳೆಯದ ನಿನ್ನ ಕುರಿತಾಗಿ ಈ ಪೃಥಿವಿಯಲ್ಲಿ ಹರಡಿದ ಕಥೆಯೇನು? ಪೃಥೆಯೇನು? ಯಾರು ರಾಮ? ಆತ ರಘುಕುಲಸೋಮ. ನೀಲಮೇಘಶ್ಯಾಮ. ತೇಜೋಧಾಮ. ಧರ್ಮರಾಮ. ಸದ್ಗುಣಸ್ತೋಮ. ಸಂಗರಭೀಮ. ಭೂಮಿಗಿಳಿದ ಭೂಮ. ಮಹಿಮಾವ್ಯೋಮ. ರಾಮನೆಂಬುದು ಪತಿತ ಪಾವನನಾಮ. ಆತನಿಂದಲೇ ಲೋಕಕ್ಷೇಮ. ಆತ ಭುವನಾಭಿರಾಮ. ನಯನಾಭಿರಾಮ. ಎಲುಬಿಲ್ಲದ ನಾಲಗೆ. ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಈ ಪ್ರಶಂಸೆಗಳೆಲ್ಲ ನೀರಿನಲ್ಲಿ ಮಾಡಿದ ಹೋಮವಾಗಿ ಹೋಯ್ತು. ನಂಬಿದವರ ಕಂಗೆಡಿಸುವ ಧೂಮವಾಗಿ ಹೋಯ್ತು. ಬೆಲೆಯಿಲ್ಲದೇ ಬಣ್ಣಗೆಟ್ಟು ಹೋಮವಾಗಿ ಹೋಯ್ತು.

ಸುಳ್ಳು ಸುಳ್ಳೇ ಸಂಪನ್ನನೆಂದು ಉದ್‌ಘಾಟಿಸಿಕೊಳ್ಳುತ್ತಿರುವ ಧರ್ಮಧ್ವಜನೂ, ಉದ್ಧತನೂ, ಉದ್ರಿಕ್ತನೂ, ಉನ್ಮತ್ತನೂ, ಕ್ಷುದ್ರನೂ, ಪಂಚಕನೂ ಆದ ನೀನು ಪುಣ್ಯಾತ್ಮನೂ ಮಹಾತ್ಮನೂ ಪ್ರಾತಃಸ್ಮರಣೀಯನೂ ಪರಮಧಾರ್ಮಿಕನೂ ಪೌರ ಜಾನಪದಪ್ರಿಯನೂ ಆದ ದಶರಥ ಚಕ್ರವರ್ತಿಗೆ ಹೇಗೆ ಮಗನಾಗಿ ಹುಟ್ಟಿದೆಯೋ? ಇನ್ನು ಮುಂದೆ ಈ ಮೇದಿನಿಗೆ ಬೀಳುವುದು ಮುಗಿಲಮಳೆಯಲ್ಲ. ನಿನ್ನ ಧರ್ಮಬಾಹಿರಕೃತ್ಯದಿಂದ ನೊಂದ ನಿನ್ನ ತಂದೆಯ ಕಣ್ಣೀರು.

ದಾಶರಥೇ ! ಚಾರಿತ್ರ್ಯಭ್ರಂಶವನ್ನೇ ಕಟ್ಟುವ ಹಗ್ಗವನ್ನಾಗಿ ಹೊಂದಿರುವ, ಸತ್ಪುರುಷರ ಧರ್ಮವನ್ನೇ ಅತಿಕ್ರಮಿಸಿರುವ, ಅಧರ್ಮವೇ ಅಂಕುಶವಾಗಿರುವ, ರಾಮಾಭಿಧಾನದ ಆನೆಯಿಂದ ನಾನಿಂದು ಹತನಾಗಿ ಹೋದೆ. ಶೀಲವತಿಯಾದ ಹೆಣ್ಣು ಪತಿತನನ್ನು ವರಿಸಿ ಅನಾಥೆಯಾದಂತೆ ನಿನ್ನನ್ನು ಹೊಂದಿ ಈ ವಸುಂಧರೆ ಅನಾಥೆಯಾಗಿಹೋದಳು.

ಸಾಕೇತದ ಸಿಂಹಾಸನಕ್ಕೂ ನಿನ್ನನ್ನು ಕಂಡು ಅಸಹ್ಯವಾಗಿರಬೇಕು. ಹಾಗಾಗಿಯೇ ಅಯೋಧ್ಯೆಯ ಅರಸೊತ್ತಿಗೆ ನಿನ್ನಿಂದ ದೂರಾಯಿತು. ನಾಡಿಗೆ ಸಲ್ಲದ ನೀನು ಕಾಡು ಸೇರುವಂತಾಯಿತು. ಪ್ರಭುತ್ವವನ್ನು ಪತ್ನಿಯನ್ನೂ ಕಳೆದುಕೊಂಡು ಪಥಭ್ರಷ್ಟನಾಗಿ ಪ್ರಜ್ಞಾಶೈಥಿಲ್ಯವನ್ನು ಹೊಂದಿದವನಂತೆ ವರ್ತಿಸುತ್ತಿರುವ ನೀನು ಮನುಷ್ಯನೇ ಅಲ್ಲ.

ಲೇಸಾಯ್ತು ರಾಘವ ! ಲೇಸಾಯ್ತು. ವಾಲಿಯ ಬದುಕಿನಲ್ಲಿ ಮರಣಕ್ಕೂ ಒಂದು ಮಹತ್ವವಾದ ಅರ್ಥ ಬಂತು. ದೊಡ್ಡ ಹೆಸರು ಬಂತು. ನಾಳೆ ಯಾರೂ ಹೇಳಿಯಾರು ಇದಿರು ನಿಂತು ವಾಲಿಯನ್ನು ಹೊಡೆದವನು ರಾಮನೂ ಅಲ್ಲ; ಪ್ರಯೋಗಕ್ಕೂ ಇಳಿಯಲಿಲ್ಲ. ಬದುಕಿದ್ದಾವಾಗ ಒಂದೇ ಒಂದು ಗಾಯವೇನು; ಗಾಯದ ಕಲೆಯೂ ಇರದ ಧೀರನಾದ ವಾಲಿಗೆ ಇಷ್ಟು ಸಾಕು.

ಪ್ರತಿ ಜೀವವೂ ಹುಟ್ಟಿನ ಹೊಟ್ಟೆಯಲ್ಲೇ ಸಾವನ್ನು ಕಟ್ಟಿಕೊಂಡು ಬರುತ್ತದೆಂಬುದನ್ನು ಮಹಾತ್ಮರಾದ ಮತಂಗರ ಉಪದೇಶದಿಂದ ಚೆನ್ನಾಗಿ ಮನಗಂಡವ ನಾನು. ಹುಟ್ಟಿದ್ದು ಸಾಯುತ್ತದೆ. ಕಂಡದ್ದು ಕಣ್ಮರೆಯಾಗುತ್ತದೆ. ಕಾಲದ ಅವಧಿ ಎಷ್ಟೆಂಬುದಷ್ಟೇ ಕೌತುಕದ ಪ್ರಶ್ನೆ. ಅಳಿಯದ ಆಕೃತಿಯೊಂದು ಅಳಿಯುವ ವಿಶ್ವದಲ್ಲಿ ಉದಿಸುವುದುಂಟೇ ? ನಾನು ಸಾವಿಗಾಗಿ ಶೋಕಿಸುವುದಿಲ್ಲ.

ನಾನಿನ್ನೂ ಬದುಕಿದ್ದಾವಾಗಲೇ ನನ್ನ ಹೆಣ ಸಿಗದೇಹೋದರೂ ತಮ್ಮನಾದ ಸುಗ್ರೀವ ಯಾವಾಗ ನನ್ನ ಅಂತ್ಯಸಂಸ್ಕಾರವನ್ನು ನೆರವೇರಿಸಿದನೋ ಆಗಲೇ ನಾನು ಅರ್ಧ ಸತ್ತುಹೋಗಿದ್ದೇನೆ. ಇದು ತನಕ ನಾನು ಕಿಷ್ಕಿಂಧೆಯನ್ನಾಳುತ್ತಿದುದು ಆಸೆಯಿಂದಲ್ಲ, ಸೇಡಿನಿಂದ. ಸಾಂಸಾರಿಕವಾದ ಮೋಹ ವಾತ್ಸಲ್ಯಗಳು ಶತಚ್ಛಿದ್ರವಾಗಿ ಶತಮಾನಗಳೇ ಸಂದುಹೋದವು. ಮಡದಿ ಮಕ್ಕಳು ನನ್ನವರು ಎಂದು ಅಭಿನಯಿಸಿ ನನಗೂ ಸಾಕಾಗಿಹೋಗಿದೆ. ಯಾರು ನಮಗೆ ಅತ್ಯಂತ ಪ್ರೀತಿಪಾತ್ರರೋ ಅವರಿಂದ ಸಣ್ಣ ನೋವಾದರೂ ಸಹಿಸಲು ಸಾಧ್ಯವಾಗುವುದಿಲ್ಲ. ನನ್ನ ಶತ್ರುವೊಬ್ಬ ಎದೆ ಮೆಟ್ಟಲಿ; ಆದರೂ ನಾನು ಬದುಕಿದ್ದೇನು. ಹೊರಗಿನ ಪೆಟ್ಟನ್ನು ಮರೆಯಬಹುದು. ಒಳಗಿನ ಪೆಟ್ಟನು ಮರೆಯಲಾದೀತೇ? ಕಣ್ಣು ನನ್ನದೇ, ಕೈಬೆರಳು ನನ್ನದೇ. ದೇಹಾಭಿಮಾನ ಮುಗಿಯಿತು. ಸಂಸಾರದ ಆಶಾಪಾಶಗಳು ಸಂದವು. ಆದರೂ ನನ್ನದೊಂದು ಪ್ರಶ್ನೆಯುಂಟು.

ರಾಘವ ! ದಾಶರಥಿಗಳಾದ ನೀವು ನಾಲ್ವರೂ ಅಣ್ಣ ತಮ್ಮಂದಿರು ಹೇಗಿರಬೇಕು ಎಂಬುದನ್ನು ಲೋಕಕ್ಕೆ ತೋರಿಕೊಟ್ಟವರು. ನೀನೊಂದು ಮಾತು ಹೇಳಿದೆಯಂತೆ  ಎಲ್ಲವನ್ನೂ ಮತ್ತೊಮ್ಮೆ ಪುರುಷಾಯತ್ತವಾಗಿ ಸಾಧಿಸಿಕೊಳ್ಳಬಹುದು. ಆದರೆ ಸಾಹೋದರ್ಯವೆಂಬುದು ಹುಟ್ಟಿನಿಂದಲೇ ಬರಬೇಕು. ಮನೆಯೇ ಮುರಿದುಹೋಗಬಹುದಾದ ರಾಜಕೀಯ ಸ್ಥಿತಿಯಲ್ಲಿ ಮನೆತನದ ಮಾಂಗಲ್ಯವನ್ನುಳಿಸಲೋಸುಗ ಸಾಕೇತದ ಸಾಮ್ರಾಜ್ಯವನ್ನೇ ಭರತನಿಗೆ ಬಿಟ್ಟುಕೊಟ್ಟ ಭ್ರಾತೃವತ್ಸಲನಾದ ನೀನು ಕಿಷ್ಕಿಂಧೆಯಲ್ಲಿ ಮಾಡಿದ್ದೇನು?

ತಾಯಿಯೂ ತಂದೆಯೂ ಆದ ಋಕ್ಷರಜಸ್ಸೆಂಬ ವಾನರನ ಅವಯವಗಳಾದ ಬಾಲದಿಂದಲೂ ಕಂಠದಿಂದಲೂ ಹುಟ್ಟಿಬಂದ ಕ್ಷೇತ್ರೈಕ್ಯವನ್ನು ಹೊಂದಿದ್ದ ವಾಲಿಸುಗ್ರೀವರ ಅಭಿಜಾತ ಸಾಹೋದರ್ಯವನ್ನು ಒಂದಕ್ಕೊಂದು ಬೆಸೆಯದಂತೆ ಬೇರ್ಗೆಡಿಸಿ ಬೇರ್ಪಡಿಸಿ ಕತ್ತರಿಸಿ ಮುಂದೆ ಎಂದೆಂದೂ ಒಂದಾಗದಂತೆ ಮಾಡುವುದಕ್ಕೆ ಮುಂದಾದೆಯಲ್ಲ ! ಇದು ನ್ಯಾಯವೇ?

ನನ್ನ ತಮ್ಮನ ಮಡದಿಯನ್ನುಪಭೋಗಿಸಿದ್ದಕ್ಕಾಗಿ ನೀನೇನೋ ನನಗೆ ಶಿಕ್ಷೆ ಕೊಟ್ಟೆ. ಆದರೆ ನನ್ನ ತಮ್ಮ ನನ್ನ ಹೆಂಡತಿಯನ್ನುಪಭೋಗಿಸಿದ್ದಕ್ಕೆ ಏನು ಶಿಕ್ಷೆ ಕೊಡುತ್ತೀ ಹೇಳು.

ನನಗೆ ಕಳೆದ ಸಂವತ್ಸರಗಳು ಹೆಚ್ಚು. ಉಳಿದ ಹೊತ್ತು ಕಡಿಮೆ. ನನಗೆ ಕಳೆದ ದಿನಗಳು ಕಡಿಮೆ. ಉಳಿದ ವರ್ಷಗಳು ಹೆಚ್ಚು. ರಾಮಚಂದ್ರ ! ಜ್ಞಾನಿಯಾದ ಜನಕನ ಮಗಳ ಕೈಹಿಡಿದಿರುವ ನೀನು. ಮಣ್ಣಿನ ಮಗಳನ್ನು ಮದುವೆಯಾದವ ನೀನು. ಅಯೋನಿಜೆಯಾದ ಸೀತೆಗೆ ವಲ್ಲಭನಾದವ ನೀನು. ನಿನ್ನ ಹೆಂಡತಿಯನ್ನು ಕದ್ದೊಯ್ದ ರಾವಣನು ಬದುಕಿರುತ್ತಾ, ನಿನಗೆ ಒಂದಿನಿತು ಅಪರಾಧವೆಸಗದ ನನ್ನನ್ನು ಮರದ ಮರೆಯಲ್ಲಿ ಮೈಮರೆಸಿಕೊಂಡು ಮುನ್ನೆಚ್ಚರಿಕೆಯನ್ನೇ ನೀಡದೇ ಮಾರ್ಗಣವನ್ನೆಸೆದು ವಾಮಮಾರ್ಗದಿಂದ ಹೊಡೆದುರುಳಿಸಿದೆಯಲ್ಲ…ಧರ್ಮವೇ? ನಿನ್ನ ಬಾಳಬಟ್ಟೆಗೆ ಕಪ್ಪುಚುಕ್ಕೆಯಾಗಿ ಹೋದ ನಿನ್ನ ಕೀರ್ತಿಧಾವಲ್ಯವನ್ನು ಕುಂದಿಸಿದ ಈ ಕುಟಿಲಕೃತ್ಯಕ್ಕೆ, ಕ್ರೂರಕರ್ಮಕ್ಕೆ, ಕೇಡಿನ ಕೆಲಸಕ್ಕೆ ಸಮರ್ಥನೆಯನ್ನೋ, ಸಮಾಧಾನವನ್ನೋ, ತಾತ್ತ್ವಿಕವಾದ ಸತವನ್ನೋ ಹೇಳಿ ನಿನ್ನ ಪಾಪದ ಪರಿಮಾರ್ಜನೆಯನ್ನು ಮಾಡಿಕೋ. ಅಪವಾದವನ್ನು ಹೊತ್ತು ಬಾಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸು !!!

Leave a Reply

*

code