ಅಂಕಣಗಳು

Subscribe


 

ಅಷ್ಟನಾಯಿಕಾ ಚಿತ್ತವೃತ್ತಿ : ವಿಪ್ರಲಬ್ಧಾ ನಾಯಿಕೆ

Posted On: Monday, August 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ದೂರಸ್ಥಳಕ್ಕೆ ಹೋದ ನಾಯಕನಿಗಾಗಿ ಕಾಯುತ್ತಾ ಪ್ರೋಷಿತಪತಿಕೆಯಾದ ನಾಯಿಕೆ, ಆತನು ಬರುವ ಸೂಚನೆ ದೊರೆತ ಕೂಡಲೇ ಸರ್ವಾಲಂಕಾರಭೂಷಿತೆಯಾಗುತ್ತಾ ವಾಸಕಸಜ್ಜೆಯಾಗುವಳು. ಆತನ ಆಗಮನ ತಡವಾದಷ್ಟೂ ನಿರೀಕ್ಷೆ ಉಲ್ಬಣಿಸಿ ಆತನು ಬರುವ ಸಂಕೇತಸ್ಥಳಕ್ಕೆ ತಾನೇ ತೆರಳಿ ಅಭಿಸಾರಿಕೆಯಾಗುವಳು. ಆದರೆ ನಾಯಕನು ನಾಯಕಿಗೆ ನೀಡಿದ ವಾಗ್ಧಾನದಂತೆ ಸಂಕೇತಸ್ಥಳಕ್ಕೆ ಬರದೆ ಕಾಯಿಸುವುದರಿಂದಾಗಿ ಆಕೆಗೆ ತಾನು ವಂಚಿತೆಯೆಂಬಂತಾಗಿ ಕ್ರೋಧಿತಳಾಗುತ್ತಾಳೆ. ಬೇಸರ, ದುಃಖ, ಅವಮಾನ, ರೋಧನೆ, ವ್ಯಥೆ, ನಿಟ್ಟುಸಿರು, ನಿರಾಶೆ, ಬಳಲಿಕೆ, ಕಣ್ಣೀರು, ಆತಂಕ, ವಿನಾಕಾರಣ ಭೀತಿ-ಯೋಚನೆ, ಖಿನ್ನತೆ, ಅಸಮಾಧಾನ ಆಕೆಯನ್ನು ಆವರಿಸುತ್ತದೆ. ಈಕೆಯೇ ವಿಪ್ರಲಬ್ಧೆ. ಒಂದೋ ಈಕೆಯು ನಾಯಕನಿಂದ ವಂಚಿತಳಾದ ಭಾವವನ್ನೂ ಹೊಂದಿರಬಹುದು; ಇಲ್ಲವೇ ಸಖಿಯಿಂದ ಮೋಸಹೋದೆನೆಂದೂ ಖಿನ್ನಳಾಗಬಹುದು.

ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ವಿಪ್ರಲಬ್ಧೆನಾಯಕಿಯು ತನ್ನ ಪ್ರಿಯತಮನು ಬೇರೊಬ್ಬ ಯುವತಿಯನ್ನು ಕೂಡಿದ ವಿಷಯ ತಿಳಿಯದೇ ಆತಂಕ ಹೊಂದುತ್ತಾಳೆ. ಮಧ್ಯಮ ಮತ್ತು ಅಧಮ ವಿಪ್ರಲಬ್ಧೆಯರು ತನ್ನ ಪ್ರೇಮಿ ಬೇರೆಯವರ ಸಹವಾಸದಿಂದ ತನ್ನನ್ನು ಮೋಸಗೊಳಿಸಿದನೆಂದು ತಿಳಿಯುತ್ತಾರೆ.

ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.

ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ಮೇದಿನಿ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.

ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.

ಅಂದಹಾಗೆ ಆಕಾಶವಾಣಿಯ ವಾರ್ಷಿಕ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮೇಘ ಮೇದಿನಿ ರಾಷ್ಟ್ರೀಯ ಪ್ರಶಂಸೆ ಗಳಿಸಿರುವುದು ನಿಜಕ್ಕೂ ಒಂದು ಹೆಮ್ಮೆಯ ವಿಷಯ. ಈ ಕಾವ್ಯಕ್ಕೆ ರಸಾರ್ದ್ರ ಸಂಗೀತ ಸಂಯೋಜನೆ ಮಾಡಿದವರು ಪ್ರಸಿದ್ಧ ಹಾಡುಗಾರ ಶ್ರೀಪಾದ ಹೆಗಡೆ ಕಂಪ್ಲಿ. ಶ್ರೀಪಾದ ಹೆಗಡೆಯವರೊಂದಿಗೆ ಹಾಡಿಗೆ ದನಿಗೂಡಿಸಿದವರು ರೇಖಾ ಭಟ್ ಕೋಟೆಮನೆ, ರೇಖಾ ದಿನೇಶ ಹೆಗಡೆ ಶಿರಸಿ. ಸ್ಪರ್ಧೆಗಾಗಿ ಮೇಘ ಮೇದಿನಿಯನ್ನು ಹಿಂದಿಗೆ ಅನುವಾದಿಸಿದವರು ಡಾ. ಧರಣೇಂದ್ರ ಕುರಕುರಿ. ಎಲ್ಲರಿಗೂ ಅಭಿನಂದನೆಗಳು.

 

———

ಭಾಮಿನೀ

ಶತಾವಧಾನಿ ಡಾ. ಆರ್. ಗಣೇಶ್

ಆನಂದಭೈರವಿ : ಶಾರ್ದೂಲವಿಕ್ರೀಡಿತ

 

ಸಂಕೇತಸ್ಥಳದೊಳ್ ನಿಶೀಥಮುಖದೊಳ್ ನಿಷ್ಪಂದದೇಕಾಂತದೊಳ್

ಪಂಕೇಜವ್ರಜದಂತೆ ಕಂದಿರೆ ಮೊಗಂ ರಾಕೇಂದುಸಂದೀಪ್ತಿಯೊಳ್ |

ಸಂಕಲ್ಪಂ ಸಟೆಯಾಗೆ ಕಲ್ಪನೆಗಳುಂ ಕಾಳಾಗೆ ತಾನಾದಳೀ

ಶಂಕಾತಂಕತರಂಗರಿಂಗಣೆ ಮಲಂ ಮೇಣ್ ವಿಪ್ರಲಬ್ಧೆ ಸ್ವಯಂ ||

(ಇನಿಯನಿಗಾಗಿ ಎದುರುನೋಡಿ ನಿರಾಶಳಾದ ನಾಯಿಕೆಯು ಸಂಜೆಯು ಬಲಿತು ಕತ್ತಲಗಿ ಒಂಟಿತನ ವೆಂಟಣಿಸಿದಂತೆಯೇ ಕಳವಳಿಸಿ ವಿಪ್ರಲಬ್ಧೆಯೆನಿಸುತ್ತಾಳೆ.)

ಹಿಂದೋಳ- ಏಕ,ರೂಪಕ ತಾಳಗಳು

ಇಲ್ಲಿಗೆ ಬಾರೆನೆಂದು ಸೊಲ್ಲಿಸಿದವನೆಲ್ಲಿ?

ನಲ್ಲೆಯನೇಂ ತೊರೆದನೇ? ಪ್ರಫುಲ್ಲನು ||ಪ||

ಮನೆಯನೆಂತೋ ಮರೆತು ಬಂದೆ

ಜನರನೆಂತೋ ಜಯಿಸಿ ಬಂದೆ |

ಮನವನೆಂತೋ ಮಥಿಸಿ ಬಂದೊಡ

ಮಿನಿಯನೇಕೆ ಕಾಣಲೊಲ್ಲಂ ? ||

ಮಾತನಿತ್ತು ಮೆರೆಸಿದವನು

ದೂತನಿಂದ ತಿಳಿಸಿದವನು |

ಏತಕಿಂತು ಸುಳಿಯದಾದಂ ?

ಸೋತನೇ ಮತ್ತಾರಿಗೀತಂ ||

ಹೊತ್ತು ಮುಳುಗಿ ಮೀರುತಿಹುದು

ಚಿತ್ತಸೌಖ್ಯವೊ ಜಾರುತಿಹುದು |

ಎತ್ತ ಪೋಪೆನೊ ಹಾ ! ಹತಾಶೆ

ಎತ್ತಲಾಪೆನೊ ಮೊಗವನಿನ್ನು ||

 

 

—————

ಮೇಘಮೇದಿನಿ

ದಿವಾಕರ ಹೆಗಡೆ, ಧಾರವಾಡ

ಇನ್ನು ನಾ ನಿಲಲಾರೆನು | ಬಲ್ಲಿದನಾತ | ಒಲ್ಲೆನೆಂಬನೆ ಎನ್ನನು ||

ಚೆನ್ನ ಕೋಗಿಲೆ ಹಾಡು ಮುನ್ನ ಕೇಳುವುದೀಗ |

ಎನ್ನ ಮನದನ್ನನನಿನ್ನೆಷ್ಟು ಕಾಯಲಿ ||

 

ಕಂದರ್ಪ ಕಾಲವೀಗ | ವಸಂತನು | ಬಂದಿರ್ಪನೇಕೆ ಬೇಗ ||

ಮುಂದಿರ್ಪ ಮಳೆಗಾಲಕೇಕಿಷ್ಟು ಕಾತರ |

ಇಂದಿರ್ಪ ಸೊಗವ ನಾನೇನೆಂದು ಹೇಳಲಿ ||

 

—————

ಭಾಮಿನಿಯ ಭಾವಾಭಿವ್ಯಕ್ತಿ

-ಮಂಟಪ ಪ್ರಭಾಕರ ಉಪಾಧ್ಯ

…ಕ್ಷಣಕ್ಷಣಕ್ಕೂ ನನ್ನವನ ನಿರೀಕ್ಷೆಯಿಂದ ಹತಾಶಳಾಗುತ್ತಾ ನನ್ನ ಮುಖದ ಪ್ರಸನ್ನತೆ-ಕಾತರತೆ ಕಡಿಮೆ ಆಗುತ್ತಿತ್ತು. ಬಂದು ಎಷ್ಟು ಹೊತ್ತಾಯ್ತು. ಇದುವರೆಗೆ ಇಲ್ಲದ ಸಮಯದ ಕಾಳಜಿ ಇದೀಗ ನನ್ನನ್ನು ಕ್ಷಣ ಕ್ಷಣವೂ ದೀರ್ಘವಾಗಿ ಕಾಡಿತು. ಕೊಳದಲ್ಲಿಯ ತಾವರೆಗಳು ಮುದುಡಿದ್ದವು. ಹಕ್ಕಿಗಳೆಲ್ಲ ಕಲರವ ನಿಲ್ಲಿಸಿದ್ದವು. ಎಲ್ಲವೂ ಗೂಡು ಸೇರಿದ್ದವು. ಅನಾಥಳಂತೆ ನಾನು ಗೂಡು ಬಿಟ್ಟಿದ್ದೆ. ಈಗಾಗಲೇ ನನ್ನವನ ಹೃದಯವೆಂಬ ಗೂಡನ್ನು ಸೇರಬೇಕಿತ್ತು. ಪ್ರಕೃತಿಯಲ್ಲಿ ಎಲ್ಲ ಜೀವಿಗಳು ಸಮಯವನ್ನು ಪಾಲಿಸಿದ್ದವು. ನನ್ನವನಿಗೆ ಮಾತ್ರ ಸಮಯಪಾಲನೆ ತಿಳಿದಿಲ್ಲ. ಜೊತೆಗೆ ನನ್ನ ಸಮಯವೂ ಅಸ್ತವ್ಯಸ್ತ. ನನ್ನ ಆತಂಕ ಹೆಚ್ಚುತ್ತಿತ್ತು. ಈ ನೀರವ ನಿರ್ಜನ ಪ್ರದೇಶದಲ್ಲಿ ನನ್ನವನು ಇದ್ದಿದ್ದರೆ ಬೆಳಗಿನತನಕ ಇರಬಹುದಿತ್ತು. ಆದರೆ ಈಗ ಆ ನಂಬಿಕೆಯೇ ನಂಬಿಕೆಯನ್ನು ಕಳೆದುಕೊಂಡಿದೆ. ಹೂಬಾಣಗಳಂತಿದ್ದ ನನ್ನ ಪ್ರೀತಿ ಕೋಪದ ವಿಷವನ್ನು ಸವರಿಕೊಂಡು ನಿಂತಿತ್ತು.

ಅವನಿಗಾಗಿ ನಾನೆಷ್ಟು ರೀತಿಯಲ್ಲಿ ಶೃಂಗರಿಸಿಕೊಂಡಿದ್ದೆ. ಶೃಂಗಾರಕ್ಕೆ ಒಂದು ಶಾಸ್ತ್ರ ಬರೆಯುವಷ್ಟು ಯೋಚಿಸಿದವಳು ನಾನು. ನನ್ನ ಮನಸ್ಸಿನ ಅದೆಷ್ಟು ಭಾವನೆಗಳನ್ನು ಬದಲಿಸಿಕೊಂಡಿದ್ದೆ. ನನ್ನ ತ್ಯಾಗಕ್ಕೆ ಅರ್ಥವೇ ಇಲ್ಲವಾಯ್ತು. ಈತನನ್ನು ಕಾಣಲು ಮನೆಯ ಕೆಲಸಗಳನ್ನು ಅದೆಷ್ಟು ವೇಗದಲ್ಲಿ ಮಾಡಿ ಮುಗಿಸಿದ್ದೆ. ಆತುರದಲ್ಲಿ ಮಾಡದೇ ಬಂದಿದ್ದೆ. ರುಬ್ಬುವಾಗ ಕೈ ಜಜ್ಜಿಕೊಂಡಿದ್ದೆ. ಅಕ್ಕಿ ಕುಟ್ಟುವಾಗ ಕಾಲ ಮೇಲೆ ಒನಕೆ ಬೀಳಿಸಿಕೊಂಡಿದ್ದೆ. ದಾರಿಯಲ್ಲಂತೂ ಎಲ್ಲರಿಗೂ ಉತ್ತರ ಹೇಳಬೆಕಾದರೆ ನನ್ನ ಅರ್ಧ ಜೀವವೇ ಹೋಗಿತ್ತು. ಇದೆಲ್ಲ ಅವನಿಗೆ ತಿಳಿಯುವುದೆಂತು? ಪ್ರೀತಿಸುವುದು ತಪ್ಪೇ? ನನ್ನ ಪಾಲಿಗಂತೂ ತಪ್ಪೆಂದು ಸಾಬೀತಾಯಿತು. ಅವನ ಯಾವ ಪ್ರಣಯಗಳೂ ನನ್ನನ್ನು ತಟ್ಟಲಾರದು. ನನ್ನ ಪ್ರೀತಿಗೆ ಬೆಲೆ ಸಿಗದ ಮೆಲೆ ಆತನ ಪ್ರೀತಿಗೆ ಸ್ಪಂದಿಸಲಾರೆ. ಯಾಕೆ ಸ್ಪಂದಿಸಬೇಕೆಂಬ ತರ್ಕ ನನ್ನದು. ಈ ಸಿಟ್ಟೆಲ್ಲ ಯಾರ ಮೇಲೆ? ಅವನಂತೂ ಇಲ್ಲಿಲ್ಲ. ಕೇವಲ ನನ್ನ ಸಮಾಧಾನಕ್ಕೆ. ಅಸಮಾಧಾನಕ್ಕೆ ಸಿಟ್ಟೇ ಮದ್ದಾಯ್ತು ನನ್ನ ಪಾಲಿಗೆ. ಆತ ಬಂದರೆಷ್ಟು ಬಾರದಿದ್ದರೆಷ್ಟು? ನನಗೋ ಆತ್ಮಗೌರವ ಎದುರಾಯ್ತು. ನಾನು ನಡೆಸಿದ ಹುಚ್ಚಾಟಗಳನ್ನು ನನ್ನ ಆತ್ಮಗೌರವದ ಎದುರು ಅಡ ಇಡಲು ಇಷ್ಟ್ತಪಡಲಿಲ್ಲ. ನಿಧಾನವಾಗಿ ಹಿಂದೆ ಹೆಜ್ಜೆ ಇಡಲಾರಂಭಿಸಿದೆ.

ಮಳೆ ನಿಂತ ಕಾರಣ ಕೆಲ ಜನರು ಓಡಾಟ ಆರಂಭಿಸಿದರು. ಅವರಲ್ಲಿ ಕೆಲವರು ನನ್ನನ್ನು ಆಗ ಪ್ರಶ್ನಿಸಿದವರೂ ಇದ್ದಿದ್ದರು. ಉದ್ಧಟತನದಿಂದ, ಅಹಂನಿಂದ ಉತ್ತರಿಸಿದ ನನಗೆ ಈಗ ಅವರೆಲ್ಲಾ ತುಂಬಾ ಅನುಭವಿಗಳಂತೆ ಕಂಡರು. ಬದುಕಿನ ಸತ್ಯವನ್ನು ಅರಿತು ಅನುಭವಿಸಿದವರಂತೆ ಕಂಡರು. ನಾನು ನನ್ನ ಒಳಗೇ ನಾಚಿಕೊಂಡು ತಲೆ ತಗ್ಗಿಸಿದೆ. ದೇವರೇ ಅವರ್ಯಾರೂ ಪುನಃ ನನ್ನನ್ನು ಕಾಣದಿರಲಿ, ಮಾತನಾಡಿಸದಿರಲಿ ಎಂದು ಹರಕೆ ಹೊತ್ತೆ. ಉತ್ತರಿಸಲು-ಎದುರಿಸುವ ಶಕ್ತಿಯನ್ನೇ ಕಳಕೊಂಡಿದ್ದೆ. ಆದರೂ ಮಸುಕು ಬೆಳಕಿನಲ್ಲಿ ನನ್ನ ಗುರುತು ಸಿಗದಿರಲಿ ಎಂದು ತಲೆತಗ್ಗಿಸಿ ಸೆರಗನ್ನು ಮುಚ್ಚಿ ನಿಧಾನ ನಡಿಗೆಯಿಂದ ಮನೆಯ ಕಡೆ ಹೊರಟೆ. ಅವನನ್ನು ಶಪಿಸುತ್ತಾ ದುಃಖಿಸುತ್ತಾ, ನಾನಿಟ್ಟ ಹಜ್ಜೆಗಳೋ ಒಂದೊಂದು ಹಜ್ಜೆಯೂ ನನ್ನನ್ನು ಚುಚ್ಚುತ್ತಿದ್ದವು. ನೀನು ಇಡುತ್ತಿರುವ ಹಜ್ಜೆಗಳು ತಪ್ಪು ಎಂದು ಅಣಕಿಸುತ್ತಿದ್ದವು. ಆದರೂ ನಾನು ಸರಿಯಾಗಿಯೇ ಇದ್ದೇನೆಂಬ ಭಾವನೆಯಿಂದ ಒತ್ತಿ ಒತ್ತಿ ಹಜ್ಜೆ ಇಟ್ಟಾಗ ಕಲ್ಲುಮಣ್ಣುಗಳು ಮುಳ್ಳುಗಳು ತಾಗಿ ನೋವುಗಳನ್ನೇ ಅನುಭವಿಸುತ್ತಿದ್ದೆ. ನನ್ನನ್ನು ಅಳುವಂತೆ ಅವುಗಳು ಪ್ರಯತ್ನಿಸುತ್ತಿದ್ದವು. ನನ್ನ ಹೃದಯಕ್ಕೆ ಆದ ನೋವಿನ ಎದುರು ಇವೆಲ್ಲಾ ಯಾವ ಲೆಕ್ಕ ಎಂದು ನನ್ನನ್ನು ನಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದೆ. ಏನು ಮಾಡಿದರೂ ಮನೆಯೇ ಬರುತ್ತಿಲ್ಲ. ಮನೆಯ ಆಕರ್ಷಣೆಯೂ ನನಗಿಲ್ಲ. ಹಾಗಿದ್ದರೆ ಮನೆಕಡೆಗೆ ಯಾಕೆ? ಅದು ಗೊತ್ತಿಲ್ಲ. ಇಲ್ಲ. ನನಗೆ ಏನೂ ಗೊತ್ತಿಲ್ಲ; ಅಥವಾ ಗೊತ್ತಿರುವುದು ಹೆಚ್ಚಾಯ್ತು. ಪ್ರಪಂಚವೇ ನನ್ನನ್ನು ಮೋಸಗೊಳಿಸುತ್ತಿದೆ ಎಂದೆನಿಸಿತು. ನಾನೊಬ್ಬಳು ತಬ್ಬಲಿಯಂತೆ, ಮಗುವಿನಂತೆ, ಅನಾಥಳಂತೆ, ಸೋತವಲಂತೆ-ಇನ್ನೋ ಏನೇನೋ ಅನಿಸಿ ಆಯಾಸಗೊಂಡು, ಏನೂ ಕಾಣದೆ ಕಣ್ಣುಕತ್ತಲಾಗಿ ಕುಳಿತೆ. ಚಡಪಡಿಸುತ್ತಲೇ ಮುಂದೇನು ಎಂದು ಆತಂಕಪಟ್ಟೆ.

ಕಾಂತನ ಮೇಲಿನ ನಿರೀಕ್ಷೆ ಹುಸಿಯಾಯ್ತು. ಸುತ್ತಲೂ ಕತ್ತಲು, ನೀರವತೆ, ನಿಶ್ಶಬ್ದ. ಆದರೆ ನನ್ನ ಹೃದಯದಲ್ಲಿ ಉಲ್ಲೋಲಕಲ್ಲೋಲ-ಭೂಕಂಪ. ಮಳೆಯ ಸಿಡಿಲಿಗಿಂತ ಜೊರಾಗಿ ಹೃದಯದ ಬಡಿತದ ಶಬ್ದ ಕರ್ಕಶವಾಗಿತ್ತು. ಮೆಯ್ಮೇಲೆ ಬಿದ್ದ ಮಳೆಯ ಹನಿಗಳು ಕೊತಕೊತನೆ ಕುದಿದ ಬಿಸಿನೀರಿನ ಹನಿಗಳಂತೆ ಸುಡುತ್ತಿದ್ದವು. ತಂಪಾದ ಗಾಳಿಯೂ ನನಗೆ ಬೆವರು ಸುರಿಯುವಂತೆ ಮಾಡುತ್ತಿತ್ತು. ಹಕ್ಕಿಗಳು ನಾದಪೂರ್ಣ ಚಿಲಿಪಿಲಿಯಿಂದ ನನ್ನನ್ನು ನೋಡಿ ಗೇಲಿಮಾಡುವಂತೆ ಕಂಡಿತು. ಕತ್ತಲು ನನ್ನ ಕಣ್ಣುಗಳನ್ನು ಸೇರಿ ಕುರುಡಿಯಾದೆ. ಕುರುಡಿಯಾದ ನಾನು ಹೊರಗಿನ ಯೋಚನೆಯಿಂದ ಒಳಗೆ ಯೋಚಿಸಲು ಪ್ರಾರಂಭಿಸಿದೆ.

ನನ್ನವನ ಮೇಲಿನ ಪ್ರೀತಿ ಬರಡಾಗಿ ನಿರಾಸೆಯುಂತಾಗಿ ಉದ್ವಿಗ್ನತೆ ನಿಂತು ನನ್ನ ಬಗ್ಗೆಯೇ ಸಂಶಯ ಮೂಡಿತು. ಇದುವರೆಗೆ ನಡೆದಿರುವುದೆಲ್ಲಾ ಸತ್ಯವೇ? ಹಾಗೆಯೇ ನನ್ನವನ ಪ್ರೀತಿಯ ಬಗ್ಗೆ ಸಂಶಯ. ಹಾಗೆಯೇ ಇನ್ಯಾರೋ ನನ್ನವನ ಹಾದಿ ತಪ್ಪಿಸಿರಬಹುದೇ?-ಹೀಗೆ ಎಲ್ಲಾ ರೀತಿಯಿಂದ ಪ್ರಶ್ನಿಸಿದಾಗ ಸಂಶಯಗಳ ಸುಳಿಯಲ್ಲಿ ಕೊಚ್ಚಿಹೋದೆ. ನಾನು ಅನುಭವಿಸಿದ ಅನುಭವಗಳು ಅವು ಸತ್ಯವೆಂದು ಗಂಟೆ ಬಾರಿಸಿದವು. ಆತನ ಮೇಲಿನ ಸಂಶಯವನ್ನು ದೂರಮಾಡಿಕೊಳ್ಳಲು ಆತನನ್ನು ಮನಸ್ಸಿನಲ್ಲೇ ಕಷ್ಟದಲ್ಲಿ ಕುಳ್ಳಿರಿಸಿ ಜಗ್ಗಾಡಿದೆ. ಏನು ಮಾಡಿದರೂ ನನಗಾದ ಕಹಿ ಅನುಭವದ ಸತ್ಯವನ್ನು ಬಿಟ್ಟುಕೊಡಲಾಗಲಿಲ್ಲ..

Leave a Reply

*

code