ಅಂಕಣಗಳು

Subscribe


 

ವಿರಹದುರಿಯ ಬೇಗೆಯಲ್ಲಿ ನೃತ್ಯಕಾರ್ಯಕ್ರಮಗಳು !!!

Posted On: Tuesday, December 14th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಇಂದಿನ ಭರತನಾಟ್ಯ ಕಾರ್ಯಕ್ರಮಗಳನ್ನೊಮ್ಮೆ ನೋಡಿ. ಬಹುತೇಕ ನೃತ್ಯಬಂಧಗಳಲ್ಲಿ ಅದರಲ್ಲೂ ವರ್ಣ, ಪದ, ಅಷ್ಟಪದಿಗಳನ್ನು ಪ್ರಧಾನವಾಗಿ ಗಮನಿಸಿದರೆ ನೀವು ಕಾಣುವುದು ಮಧುರ ಭಕ್ತಿಯೆಂಬ ಶೃಂಗಾರವಲ್ಲದ ಶೃಂಗಾರವನ್ನೋ; ಅಥವಾ ವಿರಹೋತ್ಕಂಠಿತೆಯಾಗಿ ನೆಗೆಯುವ ನಾಯಿಕೆಯನ್ನು !

ಹಾಗೆ ನೋಡಿದರೆ ಭರತನಾಟ್ಯದಂತಹ ನೃತ್ಯಪ್ರಕಾರದಲ್ಲಿ ಭಕ್ತಿ ಶೃಂಗಾರ ವ್ಯಾಪಕವಾದದ್ದು ೧೯೩೦ರ ದಶಕದ ನಂತರ. ಸದಿರ್ ನೃತ್ಯ ಪ್ರಕಾರ ಅಳಿವಿನಂಚಿನಲ್ಲಿದ್ದಾಗ, ಸಮಾಜವು ಸದಿರ್ ಮತ್ತು ಶೃಂಗಾರವನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾಗ ನೃತ್ಯದ ಮರುಹುಟ್ಟಿಗೆ ರುಕ್ಮಿಣೀದೇವಿ ಪರಿಚಯಿಸಿದ ಮಧುರ ಭಕ್ತಿ ಪ್ರತಿಪಾದನೆ ಸದಿರ್‌ನ ಕೊಂಕು-ಕೊಳಕುಗಳನ್ನು ತೊಳೆದು ಭರತನಾಟ್ಯವಾಗಿ ಮಿಂಚುವಲ್ಲಿ ಒಂದು ಕಾಲಕ್ಕೆ ಕೊಡುಗೆಯಾದದ್ದು ನಿಜ.
ರುಕ್ಮಿಣೀ ಅವರ ಮಾತಿನಲ್ಲೇ ಹೇಳುವುದಾದರೆ ‘ಶೃಂಗಾರಕ್ಕೆ ಪರ್ಯಾಯವಾಗಿ ರೂಪಿಸಿದ್ದು ಮಧುರ ಭಕ್ತಿಯನ್ನು. ಹಾಗೆಂದು ಶೃಂಗಾರ ಬೇಡವೆಂದಲ್ಲ ; ಬೇಕು. ಅದು ಅಗತ್ಯ ಕೂಡಾ ! ಆದರೆ ನಾನು ಅಭಿವ್ಯಕ್ತಿಸುವ ವಿಧಾನ ಉಳಿದವರಿಗಿಂತ ವಿಭಿನ್ನ ಮತ್ತು ಕೊಡುವ ಆಯಾಮ ಬೇರೆ.’ ಅವರ ಪ್ರಕಾರ ಸದಿರ್‌ನಂತಹ ನೃತ್ಯದ ದಿಕ್ಕನ್ನು ಬದಲಾಯಿಸಿ, ದೇವದಾಸಿಗಳ ಕಪಿಮುಷ್ಟಿಯಿಂದ ಅದನ್ನು ಮುಕ್ತವಾಗಿ ಮಾಡಬೇಕಿದ್ದಲ್ಲಿ ಭಕ್ತಿಯನ್ನು ಶೃಂಗಾರದ ವಿರುದ್ಧ ಕಲ್ಪನೆಯೆಂಬಂತೆ ಬೆಳೆಸುವ ಅಗತ್ಯತೆ ಇತ್ತು. ಭಕ್ತಿಪೂರಿತ ಸಾಹಿತ್ಯವನ್ನೇ ಹೆಚ್ಚು ಎಂಬಂತೆ ತೋರುವುದರಿಂದ ನೃತ್ಯದ ಸತ್ತ್ವ ಮತ್ತು ಗೌರವ ಹೆಚ್ಚುತ್ತದೆ ಎಂಬುದು ಆಕೆಯ ವಾದ.
ಆದರೆ ಅಂದಿನ ಸಂಧಿಗ್ಧ ಕಾಲಕ್ಕೆ ಅಗತ್ಯವಿದ್ದ ಸುಧಾರಣೆಯು ಮತ್ತೊಮ್ಮೆ ಸುಧಾರಣೆಯಾಗಬೇಕಾದ ಅನಿವಾರ್ಯತೆಯನ್ನು ಹೊತ್ತು ನಿಂತಿರುವುದು ಇಂದಿನ ವಾಸ್ತವ, ಅಪಾಯ, ವಿಪರ್ಯಾಸ ಮತ್ತು ಅಚ್ಚರಿಯೊಂದಿಗಿನ ದೊಡ್ಡ ವಿಷಾದ. ಇಂದಿಗೆ ಯಾವುದೇ ವರ್ಣ, ಪದಂಗಳ ಅಭಿವ್ಯಕ್ತಿಯನ್ನು ನೋಡಿ, ಭಕ್ತಿ ಶೃಂಗಾರದಲ್ಲಿ ಭಕ್ತಿಯೂ ಇಲ್ಲ; ಶೃಂಗಾರವೂ ಇಲ್ಲ ಎಂಬಂತಾಗಿದೆ. ನೃತ್ಯದಲ್ಲಿ ಗೀತಗೋವಿಂದ ಅಷ್ಟಪದಿ, ಕ್ಷೇತ್ರಜ್ಞನ ಪದಗಳಾದಿಯಾಗಿ ಯಾವುದನ್ನೆಲ್ಲ ಮಧುರ ಭಕ್ತಿಗೆ ಎಂದು ‘ಬ್ರಾಂಡ್’ ಮಾಡಿದ್ದಾರೋ, ಅದೆಲ್ಲಕ್ಕೂ ಇರುವ ಶೃಂಗಾರವೆಂಬ ಮೂಲಧಾತುವನ್ನು ಕೀಳೆಂದು ಕಾಣುತ್ತಾ ಭಕ್ತಿಯನ್ನೇ ಬಂಡವಾಳವಾಗಿಸಿ ಅಲೌಕಿಕವನ್ನು ಮುಟ್ಟಲು ಹೆಣಗುತ್ತಿದ್ದಾರೆ. ಶೃಂಗಾರದ ಅವಸ್ಥೆಗಳಿಗಿಂತ, ಭಕ್ತಿ ಶೃಂಗಾರವೇ ಉನ್ನತವಾದದ್ದು ಎಂಬ ಧೋರಣೆಯಲ್ಲೇ ‘ಶಕ್ತಿಪ್ರದರ್ಶನ’ಕ್ಕೆ ಸಜ್ಜಾಗುತ್ತಿದ್ದಾರೆ. ಅಂಧಾನುಕರಣೆಯೋ ಅಥವಾ ಔದಾಸೀನ್ಯವೋ; ನಾಟ್ಯಶಾಸ್ತ್ರದ ಮೂಲ ವ್ಯಾಖ್ಯೆಗಳನ್ನೇ ಮರೆತು, ಭಕ್ತಿಯನ್ನೇ ‘ಶೃಂಗಾರಶಾಸ್ತ್ರ’ವೆಂಬ ಹಣೆಪಟ್ಟಿ ಕಟ್ಟಿಸಿಕೊಂಡು ಭರತನಾಟ್ಯದ ಥಿಯರಿಯಲ್ಲಷ್ಟೇ ಶೃಂಗಾರವನ್ನು ಕಾಣುತ್ತಾ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತೆ ಅಕ್ಷರಶಃ ಅಸ್ಪೃಶ್ಯನನ್ನಾಗಿಸಿದ್ದಾರೆ !
ಹಾಗೆ ನೋಡಿದರೆ ಭಕ್ತಿಯೆಂಬ ಕಲ್ಪನೆಯನ್ನು ವಿದ್ವಾಂಸರು, ಲಾಕ್ಷಣಿಕರು ರಸವೆಂದು ಪ್ರತಿಪಾದಿಸಿದರೂ ಅದನ್ನು ಅಲ್ಲಗಳೆದವರೇ ಹೆಚ್ಚು. ಭಕ್ತಿ ಮುಂತಾದ ಭಾವಗಳು ರಸತ್ವವನ್ನು ಪಡೆಯಬಲ್ಲುದು ಎಂದು ಭೋಜರಾಜ ತನ್ನ ಶೃಂಗಾರ ಪ್ರಕಾಶ, ಸರಸ್ವತೀ ಕಂಠಾಭರಣದಲ್ಲಿ ಹೇಳಿದರೂ ಅಭಿನವ ಗುಪ್ತ ಮೊದಲಾದವರು ಅದನ್ನೊಪ್ಪುವುದಿಲ್ಲ. ಯಾವುದು ಸಹಜವೋ ಅದು ರಸ. ಯಾವುದು ಮತ್ತೊಂದರ ಜನ್ಯವೋ ಅದು ರಸವಾಗಲಾರದು ; ರಸದೃಷ್ಟಿಯ ಆಳಕ್ಕಿಳಿದು ಗಮನಿಸಿದರೆ ಎಂದೆಂದಿಗೂ ನಮಗೆ ಕಾಣುವುದು ಪ್ರಮುಖವಾಗಿ ಸಂಭೋಗಶೃಂಗಾರ ಮತ್ತು ವಿಪ್ರಲಂಭಶೃಂಗಾರ ಎಂಬ ಎರಡು ಬಗೆ ಮಾತ್ರ ; ಹಾಗಾಗಿ ಮಧುರ ಭಕ್ತಿಯೆಂಬುದು ನೇರ ಹಾದಿಯಿಂದ ಬರದೆ, ಬಯಲುಹಾದಿಯಲ್ಲಿ ಇರದೆ ಒಳಹಾದಿಗಳಿಂದ ಬಂದ ಒಂದು ಉತ್ಪನ್ನ ಎಂಬುದು ಅವರ ವಾದ.
ಭಕ್ತಿಯನ್ನು ಅನುಭವದ ನಿಟ್ಟಿನಲ್ಲಿ ನೋಡಿದಾಗ ಅದು ಭಗವದ್ವಿಷಯವಾದ ಪ್ರೀತಿ. ಯಾವುದೇ ವಸ್ತುವನ್ನು ದೊಡ್ಡದಾಗಿ ಗೌರವಿಸಿ ಪ್ರದರ್ಶಿಸುವುದು ಭಕ್ತಿ. ಮನುಷ್ಯ, ಪ್ರಾಣಿ, ಪರಿಸರದ ಬಗ್ಗೆಯೂ ಇದನ್ನು ತೋರಿಸಬಹುದು. ತಂದೆ, ತಾಯಿ, ಗಂಡ, ಹೆಂಡತಿ..ಹೀಗೆ ಲೌಕಿಕವಾಗಿಯೂ ಇರಬಹುದು. ಈಗ ‘ದೇಶಭಕ್ತಿ’ಯ ಪರಿಕಲ್ಪನೆಯೂ ಸೇರಿಕೊಂಡಿದೆ. ಆದರೆ ಲಿಂಗಕ್ಕೂ ಮೀರಿದ ಭಾವಸರ್ವಸ್ವ ಶೃಂಗಾರ. ಅದು ಕೇವಲ ಅಲಂಕಾರ, ಒನಪು, ಒಯ್ಯಾರ ಮಾತ್ರವಲ್ಲ, ಸಮರ್ಪಣೆಯ ಶೃಂಗ. ಅಲ್ಲಿ ದೇವರಾಗಲಿ ಅಥವಾ ಯಾವುದೇ ಆಗಲಿ ಅದು ಪ್ರೀತಿಯ ಅಗಾಧ ಸಾಧ್ಯತೆ. ಎಲ್ಲಾ ಹಂಗನ್ನು ತೊರೆದು, ತನ್ನದು ಎನ್ನುವ ಪ್ರತ್ಯೇಕತೆಯನ್ನು ಕಳಚಿ ಜೀವಾತ್ಮ ಪರಮಾತ್ಮ-ಎಲ್ಲವೂ ಒಂದೇ ಆಗಿ ಒಂದರೊಳಗೊಂದು ಸಮೃದ್ಧವಾಗಿ ಸೇರಿಕೊಳ್ಳುವ ಅದ್ಭುತ ಪರಿಕಲ್ಪನೆ.
ಹಾಗಾಗಿಯೇ ಸರ್ವ ರಸಗಳಲ್ಲಿಯೂ ಶೃಂಗಾರಕ್ಕೇ ಮೊದಲ ಸ್ಥಾನ. ಉಳಿದೆಲ್ಲಾ ರಸಗಳೂ ಶೃಂಗಾರದ ವಿಭಾಗಗಳಷ್ಟೇ! ಶುದ್ಧ ಶೃಂಗಾರ ಭಕ್ತಿಗಿಂತ ಮೇಲ್ಮಟ್ಟದ್ದು, ಭಕ್ತಿಯು ಶೃಂಗಾರದ ಸಾಧನಾ ಹಂತದ ಒಂದು ದಾರಿಯಷ್ಟೇ ಹೊರತು ಐಕ್ಯವನ್ನು ಸಾಧಿಸುವ ಅಂಶವಲ್ಲ ; ಭಕ್ತಿ ಭಾವ ಶೃಂಗಾರ ಮಾಧ್ಯಮದ ಮೂಲಕ ವ್ಯಕ್ತವಾಗಿ, ಅದಕ್ಕೆ ತಕ್ಕ ದೇಹ ಚಲನೆಗಳೂ ಮೂಡಿಬಂದಾಗ ಅದನ್ನು ಮಧುರಭಕ್ತಿಯೆಂದು ಕರೆದು ಶೃಂಗಾರದ ಒಳಗೆ ಸೇರಿಸಬಹುದಾದರೂ ಶೃಂಗಾರದ ಪರಮ ತತ್ತ್ವಕ್ಕಿಂತ ಮೇಲಲ್ಲ ಎಂಬುದು ಲಾಕ್ಷಣಿಕರ ಅಭಿಮತ. ಸರಳವಾಗಿ ಉದಾಹರಿಸುವುದಾದರೆ ಭಜನೆಯೇ ಭಕ್ತಿಯಲ್ಲ. ಭಜನೆಗಿಂತಲೂ ಮುಂದಿನದು ಅದರೊಳಗಿನ ಸಮರ್ಪಣಾ ಭಾವ. ಆದರೆ ಭಜನೆಯ ಭಕ್ತಿಯನ್ನೇ ಎಲ್ಲವೂ ಅಂದುಕೊಂಡಿರುವ ಪರಿಸ್ಥಿತಿ ಇಂದಿನ ಭರತನಾಟ್ಯ ಕಲಾವಿದರದ್ದು!
ಹಾಗಂತ ಕಲೆಯನ್ನು ದೈವಿಕವಾಗಿ ಬಿಂಬಿಸುವುದು, ಅದಕ್ಕೆ ಭಕ್ತಿಯನ್ನು ಬಳಸುವುದು ಕಲೆಯ ಅಸ್ತಿತ್ವದ ದೃಷ್ಟಿಯಿಂದ ಒಂದು ಹಂತಕ್ಕೆ ಔಚಿತ್ಯ, ಅಗತ್ಯ ಮತ್ತು ಅನಿವಾರ್ಯವೂ ಹೌದು. ಆದರೆ ಕಲಾವಿದರು ಭಕ್ತಿಯನ್ನು ಅರ್ಥವಿಲ್ಲದ ಮಡಿವಂತಿಕೆಯ ಚೌಕಟ್ಟು ಹಾಕಿ ಕೂರಿಸಿ, ‘ಉಳಿಸಿಕೊಂಡದ್ದು ಹೇಗಾದರೂ ದಕ್ಕಬೇಕು’ ಎಂಬ ಒಂದು ಬಗೆಯ ಮೀಸಲಾತಿ, ಪ್ರತ್ಯೇಕತೆಯ ಆಗ್ರಹವನ್ನಷ್ಟೆ ಕಟ್ಟಿಕೊಂಡು ತಿರುಗುತ್ತಾ ; ತಮ್ಮ ‘ಬ್ರಾಂಡ್’ಗಳನ್ನು ರಸದೃಷ್ಟಿಗೆ ಒಯ್ಯಲು ಆಗದೇ ಇದ್ದರೂ; ರಸಿಕನಿಗೆ ಯಾವ ಬಗೆಯ ಸಂವಹನ ಆಗದೇ ಹೋದರೂ ‘ತಮ್ಮದು ಶಾಸ್ತ್ರೀಯ, ಹಾಗಾಗಿ ಅರ್ಥವಾಗುವುದಿಲ್ಲ’ ಎಂಬ ವಿತಂಡ ವಾದವನ್ನು ಮಾಡುತ್ತಲೇಯಿದ್ದಾರೆ ! ಹೀಗೆ ಕಲಾವಿದರು ತಮ್ಮ ಯೋಗ್ಯತೆ-ಪ್ರತಿಭೆಯನ್ನು ಪರಿಗಣಿಸದೇ ಕೇವಲ ವಸ್ತುವಿನಲ್ಲಷ್ಟೆ ಯೋಗ್ಯತೆಯಿದೆ ಎಂಬ ಅಜ್ಞಾನ ಪ್ರದರ್ಶಿಸಿದರೆ ಆಗುವ ಪರಿಣಾಮ, ಕಲೆಯ ಕೊಲೆ !
ಒಟ್ಟಿನಲ್ಲಿ ಇಂದಿನ ಭರತನಾಟ್ಯವು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನದ್ದು ಕಲಿತಿದೆ. ಆದರೆ ಲೌಕಿಕದಿಂದ ಪಾರಮಾರ್ಥಿಕತೆ ಸಂವಹನಕ್ಕೆ ದಾರಿಯಾದ ಶೃಂಗಾರವನ್ನು ‘ಕೇವಲ ಕಾಮ’ವೆಂಬಂತೆ ಅಸ್ಪೃಶ್ಯವಾಗಿ ಕಾಣುತ್ತಿರುವುದು, ಪ್ರೇಕ್ಷಕನ ರಸಾನುಭವಕ್ಕಾಗಿ ಅನುಸರಿಸಲೇಬೇಕಾದ ಕರ್ತವ್ಯವನ್ನು ಮರೆತು ರಸಿಕ ಪಡೆಯಲೇಬೇಕಾದ ಹಕ್ಕನ್ನು ವಂಚಿಸುತ್ತಿರುವುದು ಜಾಣತನವಲ್ಲ ; ಬದಲಾಗಿ ತನಗೆ ತಾನೇ ಮಾಡಿಕೊಳ್ಳುತ್ತಿರುವ ಮೋಸ. ಅನುಭಾವಿಕ ಪ್ರಜ್ಞೆಯೊಳಗೆ ಒಂದಾಗಿ ನಲಿಯುವುದು ಕೈಗೆಟುಕದ ದ್ರಾಕ್ಷಿಯಂತಾದಾಗ ನಾವು ಕಟ್ಟುವ ಭಕ್ತಿಶೃಂಗಾರವೆಂಬ ರಕ್ಷಣಾ ತಡೆಗೋಡೆ ರಸದಿಂದ, ಅಂತಃಸತ್ತ್ವಕ್ಕೆ ಇಡುವ ಸವಾಲಿನಿಂದ ವಿಮುಖವಾಗುವ ಪಲಾಯನವಾದವಲ್ಲದೆ ಬೇರೇನಲ್ಲ.
ಕಲೆಯ ಅತ್ಯುಚ್ಚ ಮಟ್ಟದಲ್ಲಿ ಯಾವುದೇ ಆದರೂ ಸಾರ್ವಜನೀನವಾಗಿರುವುದು ರಸ; ಇಲ್ಲವಾದರೆ ಅದು ಮಡಿಯೆಂಬ ‘ನೀರಸ’. ರಸವಿಹೀನವಾದರೆ ಶಾಸ್ತ್ರೀಯ ನೃತ್ಯವಾದರೂ ಅದು ಯಾವ ಪ್ರಯೋಜನಕ್ಕೂ ಇಲ್ಲ. ಆದರೆ ನಮ್ಮೊಳಗಿನ ನಿರ್ಜೀವ ಮನಸ್ಸು, ಸ್ವಹಿತಾಸಕ್ತಿ, ಅಂಧತ್ವ, ಜಡತ್ವಗಳಿಗೆ ಸಾಕ್ಷಿಯಾಗಿ ಮಡಿವಂತಿಕೆಯ ಸೋಗನ್ನು ಮುಂದುವರೆಸಿಕೊಂಡು ಹೋದರೆ ಮುಂದೊಮ್ಮೆ ಕೊನೆಯ ಸಾಲಿನಲ್ಲಿ ನಿಲ್ಲುವ ಅರ್ಹತೆಯೂ ಕಡಿದು ಹೋಗಬಹುದು. ಕಾಲ ಮತ್ತು ಕಲೆ ಬಯಸುವ ಶೃಂಗಾರರಸದೃಷ್ಟಿ ಆಯಾಯ ಹಂತಕ್ಕೆ ದೊರಕದೇ; ನೃತ್ಯದ ಒಂದು ಕಾಲದ ಪುನರುಜ್ಜೀವನಕ್ಕೆ ಹಾದಿಯಾದ ಭಕ್ತಿಯನ್ನೇ ಸತತವಾಗಿ ಪರ್ಯಾಯಶಕ್ತಿಯೆಂಬಂತೆ ಬಳಸುತ್ತಾ ಹೋದರೆ ಆಡು ಕೂಡಾ ಮುಟ್ಟದೆ ಹೋಗುವ ಆಡುಸೋಗೆಯಂತೆ ಭರತನಾಟ್ಯವನ್ನು ಕಲಾ ಅಸೃಶ್ಯತೆ ಕಾಡೀತು! ನಮ್ಮ ಅತಿಯಾದ ಮಡಿ ನಮ್ಮನ್ನೇ ಎಲ್ಲರಿಂದ ದೂರವಿಟ್ಟೀತು! ಎಚ್ಚರವಿರಲಿ, ಅತಿಯಾದರೆ ಅಮೃತವೂ ವಿಷ!

ಪ್ರೀತಿಯಿಂದ
ಸಂಪಾದಕರು

Leave a Reply

*

code