ಅಂಕಣಗಳು

Subscribe


 

ಕೂಚಿಪುಡಿ ಮತ್ತು ಕರಾವಳಿ ಯಕ್ಷಗಾನದ ತೌಲನಿಕ ಅಧ್ಯಯನದ ಆಕರವಾಗಬಲ್ಲ ಭರವಸೆ ‘ಯಕ್ಷ ವಸಂತ’

Posted On: Friday, February 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಇತ್ತೀಚೆಗಷ್ಟೇ ಕರಾವಳಿಯ ಉಡುಪಿಯಲ್ಲಿ ಮೂರುದಿನಗಳ ಪರ್ಯಂತ ನಡೆದು ಸಮಾರೋಪಗೊಂಡ ಯಕ್ಷವಸಂತ ಎರಡೂ ಕಲೆಗಳ ಸಾಮ್ಯ, ವೈರುಧ್ಯಗಳನ್ನು ಅರಿಯುವಲ್ಲಿ ಸಾಕಷ್ಟು ಚಿಂತನ-ಮಂಥನಗಳಿಗೆ ಸೇತುವಾಗಿ, ತೌಲನಿಕ ಅಧ್ಯಯನಕ್ಕೆ ಆಕರವಾಗಬಲ್ಲ ಭರವಸೆ ಕೊಟ್ಟಿತು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಬೆಂಗಳೂರಿನ ಶಾಂಭವಿ ನೃತ್ಯಶಾಲೆ, ಯಕ್ಷಗಾನ ಕಲಾಕೇಂದ್ರ, ಯಕ್ಷಗಾನ ಕಲಾರಂಗ, ಉಡುಪಿ ಎಂಜಿ‌ಎಂ ಕಾಲೇಜು, ಮಣಿಪಾಲ ಎಜ್ಯುಕೇಶನಲ್ ಅಕಾಡೆಮಿ- ಇವರ ಜಂಟಿ ಸಹಭಾಗಿತ್ವದಲ್ಲಿ ಎಂಜಿ‌ಎಂ ಕಾಲೇಜಿನ ರವೀಂದ್ರ ಮತ್ತು ಮುದ್ದಣ ಮಂಟಪದಲ್ಲಿ ಜನವರಿ ೨೪, ೨೫, ೨೬ರಂದು ಪೂರ್ಣಕಾಲಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಚಿನ್ನಪ್ಪ ಗೌಡ ಮತ್ತು ಲಕ್ಷ್ಮೀನಾರಾಯಣ ಕಾಶಿ ಅವರ ಮಾತುಗಳು ವಿಚಾರಪ್ರಚೋದಕವಾಗಿ ಹೊರಹೊಮ್ಮಿದರೆ; ತರುವಾಯ ಯಕ್ಷಗಾನದ ಸಂಗೀತದ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಬೋಧಪ್ರದವಾಗಿದ್ದರೂ; ವಿಷಯಬಾಹುಳ್ಯದಿಂದಾಗಿ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಅವರನ್ನು ಆಗಾಗ ಪೇಚಿಗೆ ಸಿಲುಕಿಸುತ್ತಿತ್ತು. ಕೂಚಿಪುಡಿಗ್ರಾಮದ ಪಾವನಿ, ಪವಿತ್ರ ಸಹೋದರಿಯರ ಕರ್ಣಾನಂದಕರವಾದ ಕೂಚಿಪುಡಿ ಸಂಗೀತದ ಪ್ರಾತ್ಯಕ್ಷಿಕೆ ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ ಮೂರು ದಿನವೂ ಆಗಾಗ ಅನುರಣಿಸುತ್ತಲೇ ಸಾಗಿ; ನೃತ್ಯಪ್ರದರ್ಶನಗಳಲ್ಲೂ ಅವರ ಛಾಯೆ ಹಿನ್ನೆಲೆಯಲ್ಲಿ ಕೇಳಬಾರದೇ ಎಂಬಷ್ಟು ಮೋಹಕವಾಗಿತ್ತು. ಇವೆರಡರ ಹಿನ್ನೆಲೆಯಲ್ಲಿ ನಡೆದ ಧರುವುಗಳ ಕುರಿತ ಚರ್ಚೆ ಮೇಲ್‌ಸ್ತರದ ಅಭಿಪ್ರಾಯಗಳಿಗೆ ಸೀಮಿತವಾದರೂ ಅಧ್ಯಯನದ ಅಂಗಳವನ್ನು ನಿರ್ಮಾಣ ಮಾಡಿದ್ದವು. ಇವುಗಳಲ್ಲಿ ಶಾಸ್ತ್ರೀಯ, ಜನಪದ ಅವೈಜ್ಞಾನಿಕ ವರ್ಗೀಕರಣದಿಂದಾಚೆಗಿನ ಸೌಹಾರ್ದಯುತ ಕೊಡುಕೊಳ್ಳುವಿಕೆಯ ಮನೋವೃತ್ತಿ ಕೊನೆಗೂ ತೆರೆದುಕೊಂಡದ್ದು ಸ್ವಾಗತಾರ್ಹ.

ಇಡೀ ಮೂರು ದಿನದ ಕಾರ್ಯಕ್ರಮದಲ್ಲಿ ಹೈಲೈಟ್ ಆದದ್ದು ಡಾ. ಪಪ್ಪು ವೇಣುಗೋಪಾಲ್ ಮತ್ತು ಡಾ. ಪ್ರಭಾಕರ ಜೋಷಿಯವರು ನಡೆಸಿಕೊಟ್ಟ ಅನುಕ್ರಮವಾಗಿ ಕೂಚಿಪುಡಿ ಮತ್ತು ಯಕ್ಷಗಾನದ ಹುಟ್ಟು-ಬೆಳೆವಳಿಗೆಗಳ ಕುರಿತ ಉಪನ್ಯಾಸ, ಸಂವಾದ, ಬಿರುಸಿನ ಚರ್ಚೆ-ಪ್ರಶ್ನೋತ್ತರಗಳು. ಈ ಗೋಷ್ಠಿಗಳು ಸಾಕಷ್ಟು ದ್ವಂದ್ವ, ಗೊಂದಲಗಳಿಗೆ ಸಮಾಧಾನ ತಂದಿತ್ತದ್ದಷ್ಟೇ ಅಲ್ಲದೆ; ಸದಭಿರುಚಿಯ ರಂಜನೆ, ಪೂರಕ, ಪ್ರೇರಕ ವಿಚಾರ-ವಿಶ್ಲೇಷಣೆಗಳ ಮಂಡನೆಗೆ ಅವಕಾಶವಾದವು. ನಂತರದ ಕೂಚಿಪುಡಿ ಯಕ್ಷಗಾನದ ಪೂರ್ವರಂಗ, ರಂಗಚಲನೆಗಳ ಪ್ರಾತ್ಯಕ್ಷಿಕೆ ಚೆನ್ನಾಗಿತ್ತಾದರೂ ತೃಪ್ತಿದಾಯಕವಾಗಲಿಲ್ಲ. ತೆಂಕುತಿಟ್ಟಿನ ದಶಾವತಾರಿ ಗೋವಿಂದ ಭಟ್ ಮತ್ತು ಹೆಸರಾಂತ ಸ್ತ್ರೀಪಾತ್ರಧಾರಿ ಕೋಳ್ಯೂರು ರಾಮಚಂದ್ರರಾಯರು ತಮ್ಮ ಇಳಿವಯಸ್ಸಿನಲ್ಲೂ ಆಶಾದಾಯಕವಾಗಿ ಹಿರಣ್ಯಕಶಿಪು-ಕಯಾದು ಮತ್ತು ಶಿವ-ದಾಕ್ಷಾಯಿಣಿ ಪ್ರಸಂಗದ ಪ್ರಮುಖ ಪದ್ಯಗಳಿಗೆ ಪೂರ್ಣಪ್ರದರ್ಶನವನ್ನೇ ಕೊಟ್ಟರು. ತೆಂಕುತಿಟ್ಟಿನ ಹೆಜ್ಜೆಗಾರಿಕೆ ಅರಿಯುವ ಪ್ರಾತ್ಯಕ್ಷಿಕೆಯ ನೆಲೆಯಲ್ಲಿ ಈ ಪ್ರದರ್ಶನ ಇರದಿದ್ದರೂ ಹಿರಿಯರು ತಮ್ಮ ಸಾಧ್ಯತೆಗಳಡಿಯಲ್ಲಿ ಪರಿಣಾಮಕಾರಿಯಾಗಿ ರಸಪ್ರತಿಪಾದನೆಯನ್ನು ಸಾಕ್ಷೀಕರಿಸಿದ್ದು ವಿಶೇಷ. ಯುವ ಉತ್ಸಾಹಿಗಳು ಈ ಕುರಿತಾಗಿ ಕೊಂಚ ಸ್ವಯಂಬದ್ಧತೆಯುಳ್ಳವರಾಗಿ ಮನಸ್ಸು ಮಾಡಿದ್ದಿದ್ದರೆ ಹಿರಿಯರ ಮಾರ್ಗದರ್ಶಕತ್ವಕ್ಕೆ ಇನ್ನಷ್ಟು ಅರ್ಥಪೂರ್ಣತೆ ಒದಗುತ್ತಿತ್ತು ಎಂದೆನಿಸಿ ಅರೆಕ್ಷಣಕ್ಕಾದರೂ ಪಿಚ್ಚೆನಿಸಿದ್ದು ಹೌದು. ಇದೇ ಮಾದರಿಯ ಪ್ರದರ್ಶನ ಮೂರನೇಯ ದಿನದ ಯಕ್ಷಗಾನ ಸ್ತ್ರೀವೇಷಗಳ ಕುರಿತ ಚರ್ಚೆಯ ಸಂದರ್ಭವೂ ಪುನರಾವರ್ತಿತವಾಗಿ ೯೦ರ ಹರೆಯದ ಪಾತಾಳ ವೆಂಕಟರಮಣ ಭಟ್ಟರು ವಯಸ್ಸಿನ ತೊಂದರೆಗಳಿಂದಾಚೆಗೂ ಏದುಸಿರನ್ನು ನಿಯಂತ್ರಣಕ್ಕೆ ಆಗಾಗ ತಂದುಕೊಂಡು ನರ್ತಿಸುತ್ತಿದ್ದರೆ ; ತೆಂಕುತಿಟ್ಟಿನ ಕಲಾವಿದರ ಸಾಕ್ಷಿಪ್ರಜ್ಞೆ ಮಸುಕಾಯಿತೇ ಎಂದು ಕಾಡಿದ್ದು ದಿಟ. ಆದಾಗ್ಯೂ ಪೂತನಿ-ಯಶೋದೆಯರ ನಡುವಿನ ಸಂವಾದವನ್ನು ನಡೆಸಿಕೊಟ್ಟ ಗೋವಿಂದ ಭಟ್ ಮತ್ತು ಪಾತಾಳರ ಉತ್ಸಾಹ ಮತ್ತು ಪಾತಾಳರ ಸ್ತ್ರೀವೇಷದ ಕುರಿತಾದ ಸಂಶೋಧನಾತ್ಮಕ ಆವಿಷ್ಕಾರಗಳು, ತಲಸ್ಪರ್ಶಿ ವಿಚಾರಗಳು ದಾಖಲೀಕರಣಕ್ಕೆ ಕೊಡುಗೆ ಸಲ್ಲಿಸಿತು.

ಮೂರನೇ ದಿನದ ಪ್ರಥಮಾರ್ಧ ಯಕ್ಷಗಾನ ಕಲಾರಂಗದ ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವದಲ್ಲಿ ಭರ್ಜರಿಯಾಗಿಯೇ ಪ್ರಾರಂಭವಾಯಿತು. ಬಡಗುತಿಟ್ಟಿನ ಹೆಜ್ಜೆಗಾರಿಕೆ, ಪೂರ್ವರಂಗವನ್ನು ಸೂಕ್ತ ಉದಾಹರಣೆ, ನಿಯಮ-ನಿರ್ದೇಶನಗಳೊಂದಿಗೆ ಆಕರ್ಷಕವಾಗಿ ಅಧ್ಯಯನನಿಷ್ಠವಾಗಿ ಪ್ರಸ್ತುತಪಡಿಸಿದರು. ಆಗೆಲ್ಲಾ ಕಂಡದ್ದು ತೆಂಕುತಿಟ್ಟಿನ ಉತ್ಸಾಹಿಗಳ ಪ್ರಾತ್ಯಕ್ಷಿಕೆಯವೈರಾಗ್ಯ ! ಜೊತೆಗೆ ಕೂಚಿಪುಡಿ ಯಕ್ಷಗಾನಗಳ ಪೂರ್ವರಂಗವನ್ನು ಸಮರ್ಥವಾಗಿ ಬಿಂಬಿಸುವಲ್ಲಿ ಎದುರಾದ ಕಲಾವಿದರ ಧ್ಯೇಯದ ಕೊರತೆ !

ಯಕ್ಷಗಾನ ಪೂರ್ವರಂಗ ಮತ್ತು ’ವೇಷ’ ಪ್ರವೇಶಗಳ ಪ್ರಾತ್ಯಕ್ಷಿಕೆ

ಯಕ್ಷಗಾನ ಪೂರ್ವರಂಗ ಮತ್ತು ’ವೇಷ’ ಪ್ರವೇಶಗಳ ಪ್ರಾತ್ಯಕ್ಷಿಕೆ

 

ಯಕ್ಷಗಾನದ ಬದಲಾವಣೆ ಮತ್ತು ಬೆಳವಣಿಗೆಗಳ ಕುರಿತು ಡಾ.ಜಿ.ಎಲ್.ಹೆಗಡೆ ಬೆಳಕು ಚೆಲ್ಲಲು ಪ್ರಯತ್ನಿಸಿದರೂ ಯಕ್ಷಗಾನದ ಹಲವು ಸಾಧ್ಯತೆಗಳ ಕುರಿತ ಮಾತುಗಳು ಅಲ್ಲಲ್ಲೇ ಮುಚ್ಚಿಹೋಯಿತು. ತತ್ಸಮಾನವಾಗಿ ಹೊರಹೊಮ್ಮಬೇಕಿದ್ದ ಕೂಚಿಪುಡಿಯ ಕುರಿತಾದ ಮಾತುಕತೆಗಳು ಮೇಲೇಳಲೇ ಇಲ್ಲ. ಈ ಸಂಬಂಧ ಪ್ರೊ.ಬಿ.ಸೇತುರಾಂ ಮತ್ತು ಕೇಶವಪ್ರಸಾದ್ ಅವರ ಗೋಷ್ಠಿಗಳು ರದ್ದಾಗಿರುವ ಕಾರಣಗಳು ತಿಳಿದುಬರಲಿಲ್ಲ. ಆದರೂ ಮಧ್ಯಾಹ್ನದ ನಂತರ ವೇದಾಂತಂ ಸತ್ಯನಾರಾಯಣ ಶರ್ಮರ ಕುರಿತ ಸಾಕ್ಷ್ಯಚಿತ್ರವೊಂದೇ ಆವರೆಗಿನ ಕೂಚಿಪುಡಿಯ ಕುರಿತ ತೊಂದರೆಗಳನ್ನು ನಿವಾರಿಸಿಕೊಂಡು ಸದಭಿಪ್ರಾಯದ ಸಾರ್ಥಕ್ಯ ನೀಡಿತು. ಆದಾಗ್ಯೂ ಮೊದಲಿನೆರಡು ದಿನ ಕಾರ್ಯಕ್ರಮ ಪಡೆದುಕೊಂಡ ಓಘ ಮೂರನೇಯ ದಿನದ ಮಧ್ಯಾಹ್ನದ ನಂತರ ಕ್ರಮೇಣ ಇಳಿಮುಖವಾಗುತ್ತಾ ಸಾಗಿದ್ದು ಪ್ರೇಕ್ಷಕರ ನೆರೆಯುವಿಕೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿತ್ತು. ಗೋಪಾಲಕೃಷ್ಣ ಕುರುಪ್ ಅವರ ತೆಂಕುತಿಟ್ಟಿನ ಭಾಗವತಿಕೆಯ ವೈವಿಧ್ಯ-ಸಾಧ್ಯತೆಗಳು ಭಾಗವತನ ಪ್ರತಿಭೆಯ ಅನಾವರಣವನ್ನೂ ಮಾಡಿಸಿದರೂ ಅಧ್ಯಯನಕ್ಕೆ ಪೂರಕವಾಗಿ ಬೇಕಾದ ಕೂಚಿಪುಡಿ ಕಲಾವಿದರ ಅನುಪಸ್ಥಿತಿ ಢಾಳಾಗಿ ಎದ್ದು ಕಾಣಿಸುತ್ತಿತ್ತು.

ಕರಾವಳಿಯ ಯಕ್ಷಗಾನ ಮತ್ತು ಕೂಚಿಪುಡಿಯ ಯಕ್ಷಗಾನದ ಪರಸ್ಪರ ಸಾಧ್ಯತೆಗಳನ್ನು ಅರಿಯುವಲ್ಲಿ ಇದು ಪ್ರಾರಂಭಿಕ ಹಜ್ಜೆಯಾದರೂ ಪ್ರೇಕ್ಷಕನಲ್ಲಿ ಇಳಿಸಂಜೆಯ ಹೊತ್ತಿನ ಪ್ರಯೋಗ-ಪ್ರದರ್ಶನಗಳು ಇಡಿಯ ದಿನದ ಚರ್ಚೆಗಳಿಗಿಂತ ಹೆಚ್ಚಿನ ಆನಂದ, ಆಸ್ವಾದ, ಅಭಿಪ್ರಾಯಗಳನ್ನು ತರುತ್ತವೆ. ಈ ಹಿನ್ನೆಲೆಯಲ್ಲಿ ಕೂಚಿಪುಡಿ ಪ್ರಾತ್ಯಕ್ಷಿಕೆಗಳನ್ನು ಮತ್ತು ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಇನ್ನೂ ಕೊಂಚ ಮಟ್ಟಿನ ಆಸ್ಥೆ ಇರುತ್ತಿದ್ದಿದ್ದರೆ ಕೂಚಿಪುಡಿಯನ್ನು ಪ್ರಪ್ರಥಮವಾಗಿ ನೋಡುವವರ ಮನದಲ್ಲೆದ್ದಿರಬಹುದಾದ ಸಾಕಷ್ಟು ಸಮಸ್ಯೆ, ವೀಕ್ಷಣೆಗೆ ಪ್ರೇಕ್ಷಕನಿಗೆ ಒದಗಿದ ಅದೆಷ್ಟೋ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದಾಗಿತ್ತು. ಅಥವಾ ಕರಾವಳಿ ಯಕ್ಷಗಾನದ ನಡೆವಳಿಕೆಗಳಿಗೆ ಸಮೀಪದ್ದೆನಿಸುವ ಚಿಂದೂ ಯಕ್ಷಗಾನ ಕಲಾವಿದರ ಪ್ರಸ್ತುತಿ/ಪ್ರದರ್ಶನವಿರುತ್ತಿದ್ದಿದ್ದರೆ ಕೂಚಿಪುಡಿ ಮತ್ತು ಉತ್ತರಕರ್ನಾಟಕದ ಯಕ್ಷಗಾನ ಬಯಲಾಟಗಳ ವೈದುಷ್ಯಗಳು ಸ್ಪಷ್ಟವಾಗುತ್ತಿತ್ತು. ಸ್ವತಃ ಕೂಚಿಪುಡಿ ಗ್ರಾಮದವರಾದರೂ ಅಭ್ಯಾಸದ ಕೊರತೆ, ರಸಾಭಾಸ ಪ್ರಸಂಗ, ಹಿಮ್ಮೇಳದ ಅಪಸ್ವರಗಳು ಕಲಾವಿದರನ್ನಷ್ಟೇ ಅಲ್ಲದೆ ಸಹೃದಯರನ್ನು ಮೂರು ದಿನಗಳ ಪರ್ಯಂತವೂ ಬೆನ್ನಟ್ಟಿದ್ದು ವಿಪರ್ಯಾಸ. ಜೊತೆಗೆ ಭರತನಾಟ್ಯ ನೃತ್ಯವಿಭಾಗದಲ್ಲಿ ಪ್ರಚಲಿತವಾಗುತ್ತಿರುವ ಬಿಗುಪರಿಸರ ಕೂಚಿಪುಡಿಯ ಲಾಲಿತ್ಯದ ಮೇಲೂ ಗಾಢ ಪ್ರಭಾವ ಬೀರುತ್ತಿದೆಯೇನೋ ಎಂಬಲ್ಲಿಗೆ ಹಲಕೆಲವು ಸಾಕ್ಷಿಗಳೇ ಉತ್ತರವಾದವು. ಆದರೆ ಅದಕ್ಕೂ ಹಿಂದು-ಮುಂದಿನ ವೇಳೆಯಲ್ಲಿ ಪ್ರದರ್ಶಿತಗೊಂಡ ಕರಾವಳಿಯ ಯಕ್ಷಗಾನದ ಪ್ರಯತ್ನ ಹಾರುಧೂಳಾಗಲಿಲ್ಲವೆಂಬುದೊಂದೇ ಸಮಾಧಾನ. ಮೊದಲನೆಯ ದಿನದ ಕೊಂಡದಕುಳಿಯವರ ನೇತೃತ್ವದ ಪೂರ್ಣಚಂದ್ರ ಮೇಳದ ಯಕ್ಷಗಾನ ಪ್ರದರ್ಶನವು ಬಡಗಿನ ಯಕ್ಷಗಾನದ ಚೌಕಟ್ಟು, ಸಾಧ್ಯತೆಗಳನ್ನು ತೋರಿಸಬಹುದಾಗಿದ್ದ ಎಲ್ಲ ಸಾಧ್ಯತೆಗಳನ್ನು ಕಳೆದುಕೊಂಡು ಪ್ರಯತ್ನಶೂನ್ಯವಾಯಿತು. ಎರಡನೇ ದಿನದ ಧರ್ಮಸ್ಥಳ ಮೇಳದ ತೆಂಕು ಮತ್ತು ಮೂರನೇಯ ದಿನದ ಯಕ್ಷಗಾನ ಕಲಾರಂಗದ ಪ್ರದರ್ಶನಗಳು ಆಸ್ವಾದ ಕಾಪಿಟ್ಟುಕೊಂಡವು.

ಕಲೆ ಯಾವುದೇ ಮಟ್ಟದ್ದಾಗಿರಲಿ, ಹೆಚ್ಚಿನ ಶಿಸ್ತು ಆ ಕಲಾವರಣದ ಸಹಜ ವಾತಾವರಣವನ್ನೇ ಕಸಿಯುತ್ತವೆ. ಅಂತೆಯೇ ಹೆಚ್ಚಿನ ಸ್ವಾತಂತ್ರ್ಯವು ಸ್ವೇಚ್ಛೆಯಾಗಿ ಅಬದ್ಧಗಳಿಗೆ ಅವಕಾಶವನ್ನೀಯುತ್ತವೆ. ಆದರೆ ಶಿಸ್ತು ಮತ್ತು ಸ್ವಾತಂತ್ರ್ಯದ ಸಮಪಾಕವೊಂದೇ ಕಲೆಯ ಸೌಂದರ್ಯವನ್ನು, ಆಯುಸ್ಸನ್ನು ನೂರ್ಮಡಿಗೊಳಿಸುತ್ತವೆ. ಇದಕ್ಕೆ ಔಚಿತ್ಯ, ರಸ-ಧ್ವನಿ ವಿವೇಚನೆಯ ಲಿಟ್ಮಸ್ ಪರೀಕ್ಷೆ ಅನ್ವಯವಾದಲ್ಲಿಗೆ ಸಹೃದಯ ಆನಂದ-ಸಮ್ಮೋಹನದಲ್ಲಿ ಮುಳುಗೇಳುತ್ತಾನೆ. ಇದನ್ನು ಅರ್ಥೈಸಿಕೊಳ್ಳದ ಹೊರತು ಯಾವುದೇ ಕಾರ್ಯಾಗಾರ/ಶಿಬಿರ/ಕಾರ್ಯಕ್ರಮವಾದರೂ ಸರಿ ದಾಖಲೀಕರಣಕ್ಕಷ್ಟೇ ಸೀಮಿತವಾಗುತ್ತವೆ.

ವಿಷಯಾಧಾರಿತವಾದ ಉಪನ್ಯಾಸಗಳು ಸ್ಪಷ್ಟವಾಗಿದ್ದವು. ಆದರೆ ಕರಾವಳಿಯ ಯಕ್ಷಗಾನ ಪಡೆದುಕೊಂಡ ಮೇಲ್ಪಂಕ್ತಿ ಕೂಚಿಪುಡಿಯ ಆವರಣಕ್ಕೆ ಸೂಕ್ತ ಕಲಾವಿದರು ಮತ್ತು ತಜ್ಞರ ಕೊರತೆಯಿಂದ ಒದಗಲಿಲ್ಲ. ಇದರೊಂದಿಗೆ ಸಂಜೆಯ ನಾಟ್ಯಪ್ರಸ್ತುತಿ ನಡೆಸಿಕೊಟ್ಟ ಕಲಾವಿದರ ಅನುಪಸ್ಥಿತಿಯಿಂದಾಗಿ ಪ್ರದರ್ಶನಾಧಾರಿತವಾದ ಚರ್ಚೆಗಳು, ಪ್ರಶ್ನೆಗಳು ಮೇಲೇಳಲು ಸಾಧ್ಯವಾಗಲೇ ಇಲ್ಲ. ಇದ್ದಿದ್ದರೆ ಆಯಾಯ ವಿಷಯಕ್ಕಷ್ಟೇ ಸೀಮಿತವಾಗಿ ಹೋದ ಉಪನ್ಯಾಸಗಳು ಹೆಚ್ಚಿನ ಅರ್ಥವಂತಿಕೆ ಪಡೆಯುತ್ತಿತ್ತು. ಸಂಜೆಯ ಪ್ರಸ್ತುತಿಯ ತರುವಾಯ ಮುಖದರ್ಶನಕ್ಕಾದರೂ ಕೂಚಿಪುಡಿ ಮತ್ತು ಯಕ್ಷಗಾನ ಪ್ರದರ್ಶನ ನೀಡಿದ ಕಲಾವಿದರು ಕಾಣಿಸಿಕೊಂಡು ತಮ್ಮ ಪ್ರದರ್ಶನದ ಔಚಿತ್ಯ, ಸಮಸ್ಯೆ, ಗುಣಾವಗುಣಗಳ ಬಗ್ಗೆ ದೃಷ್ಟಿ ಬೀರುತ್ತಿದ್ದಿದ್ದರೆ ಒಂದಷ್ಟು ಕಾಯಕಲ್ಪ, ಗುಣಮಟ್ಟದ ಬದಲಾವಣೆಗಳಿಗೋ ಹೇತುವಾಗುತ್ತಿತ್ತೇನೋ! ಹಾಗಾಗಿ ಆಹಾರ್ಯಾಭಿನಯ, ಪಾತ್ರೌಚಿತ್ಯಗಳು ಚರ್ಚೆಯ ಪ್ರಧಾನಸ್ಥಾನವನ್ನು ಪಡೆಯಲಿಲ್ಲ. ಹೆಜ್ಜೆಗಾರಿಕೆಯನ್ನೂ ಒಳಗೊಂಡಂತೆ ಚಲನೆಯ ಕುರಿತಾದ ವೈವಿಧ್ಯ, ಆಂಗಿಕದ ಬಗ್ಗೆ ಪ್ರಾತ್ಯಕ್ಷಿಕೆಗಳಿದ್ದವೇ ಹೊರತು ಆಳವಾದ ಚಿಂತನೆಗಳು ಪರಸ್ಪರ ಪಡಿಮೂಡಲೇ ಇಲ್ಲ. ಆದ್ದರಿಂದ ಇಂತಹ ಕಾರ್ಯಾಗಾರಗಳ ಹಿನ್ನೆಲೆಯಲ್ಲಿ ಕ್ರಮವತ್ತಾದ ಸಮ-ಸಮವೆನಿಸುವಂತೆ ವಿದ್ವಜ್ಜನಪೋಷಿತವಾದ ಮತ್ತು ಪ್ರಾಥಮಿಕವಾಗಿ ದೃಷ್ಟಿಸಲೇಬೇಕಾದ ಸಂವಿಧಾನಗಳನ್ನು ಹಾಕಿಕೊಳ್ಳುವ ಅಗತ್ಯ ಹೆಚ್ಚಿಗಿದೆ.

ಕಲಾವಿದರು ತಾವಾಗಿಯೇ ಮುಂದೆ ಬಂದು ಸ್ವ‌ಇಚ್ಛೆಯಿಂದ ಪಾಲ್ಗೊಳ್ಳದ ಹೊರತು ಇಂತಹ ಯೋಚನೆಗಳು ಕಲೆಗೆ ಅಗತ್ಯದ ಆವರಣವನ್ನಷ್ಟೇ ಸೃಷ್ಟಿಸಲು ಶ್ರಮಿಸುತ್ತವೆಯೇ ವಿನಾ ಕ್ರಾಂತಿಯನ್ನೆಬ್ಬಿಸುವಲ್ಲಿ ಹೆಚ್ಚಿನ ಒತ್ತಾಸೆ ನೀಡಲಾರವು ಎಂಬುದಂತೂ ದಿಟ. ಈ ವಿಪರ್ಯಾಸ ಕಾರ್ಯಕ್ರಮದುದ್ದಕ್ಕೂ ಕಂಡುಬಂದಿದ್ದು; ಯಕ್ಷಗಾನ ಕಲಾರಂಗದ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಯಕ್ಷಗಾನ ಮತ್ತು ಹಲವು ಸ್ತರದ ಕಲಾವಿದರು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದು ಇಲ್ಲವೇ ಇಲ್ಲವೆಂಬಷ್ಟು ಕಡಿಮೆ.

ಹೀಗೆ ಮೂರು ದಿನಗಳ ಕೂಚಿಪುಡಿ ಯಕ್ಷಗಾನ ಮತ್ತು ಕರಾವಳಿಯ ಯಕ್ಷಗಾನದ ಮೂರುದಿನಗಳ ತುಲನೆಯಲ್ಲಿ ಆಯಾಯ ನಾಟ್ಯಬಂಧಗಳ ಕೊಡುಕೊಳ್ಳುವಿಕೆಯ ಕಲ್ಪನೆಯನ್ನು ಜನರಲ್ಲಿ ಮೂಡಿಸಿ ಸೋದರಕಲೆಗಳನ್ನು ಗಮನಿಸುವ ದೃಷ್ಟಿ ಎಷ್ಟರಮಟ್ಟಿಗೆ ಅಪ್ಯಾಯಮಾನವಾಗಬಲ್ಲುದು ಎಂಬುದನ್ನು ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಂಘಟಕರಿಗೆ ಅಭಿನಂದನೆಗಳು ಸಲ್ಲುತ್ತವೆ. ಈ ಕೊಡುಕೊಳ್ಳುವಿಕೆಗೆ ಹೆಚ್ಚಿನ ಅರ್ಥ ಒದಗುವುದು ಬಹುಷಃ ಕೂಚಿಪುಡಿ ಗ್ರಾಮಕ್ಕೂ ತೆರಳಿ ಕರಾವಳಿಯ ಯಕ್ಷಗಾನ ಕಲಾವಿದರು ತೆರಳಿ ಅಧ್ಯಯನ ಮಾಡುವುದಿದ್ದಲ್ಲಿ ಮಾತ್ರ. ಆ ಮೂಲಕ ಎರಡೂ ಕಲೆಗಳ ನಡುವೆ ಹೊಸಹಾದಿ ಹಾಕಿಕೊಟ್ಟು ಸಂಬಂಧಗಳನ್ನು ಬಲಪಡಿಸಿ ಸಾಧ್ಯತೆಗಳನ್ನು ಪರಿಶೀಲಿಸಬಹುದಾಗಿದೆ. ಅಂತಹ ವ್ಯವಸ್ಥೆಯನ್ನು ಮತ್ತಷ್ಟು ಆಸ್ಥೆಯಿಂದ ಯೋಜನಾಬದ್ಧವಾಗಿ ಇತ್ತಂಡಗಳೂ ಸಾಕಾರಗೊಳಿಸಿದರೆ ಸಮಗ್ರತೆ ಒದಗೀತು ಎಂಬುದೇ ಇಲ್ಲಿನ ಆಶಯ, ಹಾರೈಕೆ.

Leave a Reply

*

code