ಅಂಕಣಗಳು

Subscribe


 

ಯಕ್ಷಗಾನ ಭಾಗವತಿಕೆಯ ಅನನ್ಯತೆ

Posted On: Wednesday, May 27th, 2015
1 Star2 Stars3 Stars4 Stars5 Stars (No Ratings Yet)
Loading...

Author: -    ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಶತಮಾನಗಳಿಂದ ತನ್ನ ಸ್ವರೂಪ-ಸಂರಚನೆ-ಅಭಿವ್ಯಕ್ತಿಗಳಿಂದ ಅಜ್ಞನಿಂದ ಅಭಿಜ್ಞರವರೆಗೂ, ಮುಗ್ಧನಿಂದ ವಿದಗ್ಧನವರೆಗೂ ಸಮ್ಮೋಹನ ಬೀರಿ ಇಂದಿಗೂ ತನ್ನ ಸಂಕರ್ಷಣಶಕ್ತಿಯ ಗುಟ್ಟನ್ನು ಬಿಟ್ಟುಕೊಡದ ಜನಪದಲೀಲಾಮನೋಹರವಾದದ್ದು ಯಕ್ಷಗಾನವೆಂಬ ನಾಟ್ಯಶ್ರೀರಹಸ್ಯ. ಹಾಗಾಗಿ ಕಲಾಕಾಲಪ್ರವಾಹದ ಎಲ್ಲ ವೇಗ-ಆವೇಗ-ಉದ್ವೇಗಗಳಿಗೆ ಎದೆಯೊಡ್ಡಿ ಸ್ವಂತಸುಖಗಳಾದ ನಿದ್ರೆ-ಹಸಿವು-ವಿಹಾರ-ವಿರಾಮಾದಿ ಭೋಗಗಳನ್ನು ಬಲಿಗೊಟ್ಟು ಆರೋಗ್ಯವನ್ನೂ ಕಡೆಗಣಿಸಿ ರಾತ್ರಿಯಲ್ಲಿ ಹಗಲನೂ ಹಗಲಲ್ಲಿ ರಾತ್ರಿಯನ್ನೂ ಆವಾಹಿಸಿಕೊಂದು ಇಡೀ ಬದುಕನ್ನು ತೇದು ಕಲಾಗಂಧವನ್ನು ಪಸರಿಸಿದ ಪಸರಿಸುತ್ತಿರುವ ಯಕ್ಷಗಾನ ಕಲಾವ್ರತಿಗಳಿಗೆ ಪ್ರಾಂಜಲ ಪ್ರಣಾಂಅವನ್ನು ಸಲ್ಲಿಸುತ್ತೇನೆ.

ಕಾವ್ಯ-ಸಾಹಿತ್ಯ-ನೃತ್ಯಗಳನ್ನು ತಮ್ಮ ಗಾನದ ಮೂಲಕ ಅಖಂಡವಾಗಿ ಕಾಪಿಟ್ಟು ಯಕ್ಷಗಾನದ ವಿಜಯವೈಜಯಂತಿಯ ಯಶೋದರ್ಶನಕ್ಕೆ ಇರುಳಿಡೀ ಧ್ವಜದಂಡವಾಗಿ ನಿಂತ ನಾದತಾಪಸಿಗಳಾದ ಭಾಗವತರ ಪರಂಪರೆಗೆ ಆ ಪರಂಪರೆಯ ಶ್ರದ್ಧೆ-ತ್ಯಾಗ-ಪರಿಶ್ರಮಕ್ಕೆ ಕೈಮುಗಿಯುತ್ತೇನೆ.

ಇದುವರೆಗೂ ಪರೀಕ್ಷೆಗೊಳಪಡದ, ವಿಶ್ಲೇಷಣೆಗೆ ಈಡಾಗದ ಯಾವ ಭಾಗವೂ ಯಕ್ಷಗಾನಕಲಾಶರೀರದಲ್ಲಿ ಉಳಿದಿಲ್ಲ. ಇನ್ನೂ ಇನ್ನಿನ್ನೂ ಚರ್ಚೆ-ಸಂವಾದ-ಕೋಲಾಹಲ ಜಾರಿಯಲ್ಲಿದೆ. ಯಕ್ಷಗಾನ ಎಂಬ ಚುಂಬಕದ ಸ್ವಾರಸ್ಯವೇ ಅದು. ಪ್ರಸಂಗಸಾಹಿತ್ಯ ಕಾವ್ಯ ಹೌದೇ ಅಲ್ಲವೇ, ಹಾಡುಗಾರಿಕೆ ಶಾಸ್ತ್ರೀಯವೋ ಅಲ್ಲವೋ, ಆಹಾರ್ಯ ಎರವಲು ಹೌದೇ, ನರ್ತನ ಸ್ವಂತದ್ದು ಖರೆಯೋ, ಮಾತು ಗ್ರಾಂಥಿಕವೂ ಶಿಷ್ಟವೂ ಆಗಿರಬೇಕೋ ಬೇಡವೋ, ಕಥಾವಸ್ತು ಆಧುನಿಕವಾದರೆ ಸಂಧಿವಾತ ವಕ್ಕರಿಸಿದಂತಲ್ಲವೋ –ಇತ್ಯಾದಿ ಗಂಭೀರವೂ ಗಭೀರವೂ ಆದ ವಿಚಾರಮಂಥನ ಬಿರುಸಾಗಿ ನಡೆಯುತ್ತಲೇ ಇದೆ. ಇದೇ ಹಾದಿಯಲ್ಲಿರುವ ಪಿಷ್ಟಪೇಷಣ ‘ಭಾಗವತಿಕೆಯ ಅನನ್ಯತೆ’- ನನ್ನ ತೊದಲು ಮಾತಿಗೆ ಆಯ್ಕೆ ಮಾಡಿಕೊಂಡ ಹಳೆಯ ವಿಷಯ. ಅದನ್ನು ಪುನರ್ಜ್ಞಾಪನ ಎಂದು ಪರಿಭಾವಿಸಬೇಕಾಗಿ ಪ್ರಾರ್ಥನೆ.

ಯಕ್ಷಗಾನ ಪ್ರಕಾರದಲ್ಲಿ ಭಾಗವತಿಕೆಯ ಅನನ್ಯತೆ ಏನು ಎಂಬ ಪ್ರಶ್ನೆ ಹಾಕಿಕೊಂಡಾಗ ಭಾಗವತನ ಭೂಮಿಕೆ ಏನು ಎನ್ನುವ ಅನುಪ್ರಶ್ನೆ ಎದುರಾಗುತ್ತದೆ. ಗಾಯಕನಿಗೆ ಭಾಗವತ ಎಂಬ ಪರಿಭಾಷೆಯು ಭಗವಂತನಿಗೆ ಸಂಬಂಧಿಸಿದ ಕತೆಯನ್ನು ನಿರೂಪಿಸುತ್ತಾನೆ ಎಂಬ ಗೌರವಾರ್ಥದಲ್ಲಿ ಟಂಕಿಸಲ್ಪಟ್ಟಿದೆ. ಅದು ಆ ಪದವಿಗೆ ಸಂದ ಸಂಭಾವನೆ. ಯಕ್ಷಗಾನದ ಷಟ್ಚಕ್ರಗಳಿಗೆ ಭಾಗವತನೇ ಮೂಲಾಧಾರ. ಇಲ್ಲಿಂದಲೇ ಕಲಾಪ್ರಾಣ ಉನ್ಮುಖವಾಗಿ ಸಾಗಬೇಕು.

ಯಾಕೆ ಮೂಲಾಧಾರ, ಪ್ರಾಣವಾಹಕ? –ಕೇವಲ ಅಲಂಕಾರಕ್ಕಾಗಿಯೋ, ಉತ್ಪ್ರೇಕ್ಷೆಗಾಗಿಯೋ ಬಳಸಿದ್ದಲ್ಲ. ಯಕ್ಷಗಾನ ಎಂಬ ಕಲಾಪ್ರಕಾರವನ್ನು ಮೊತ್ತಮೊದಲು ಪ್ರಕಾಶಿಸುವವನು ಭಾಗವತ. ಹಾಡುವುದಿರಲಿ, ಹಾಡಿ ಪಾತ್ರಗಳನ್ನು ಕುಣಿಸುವುದಿರಲಿ, ಕತೆಯನ್ನು ಮುಂಕೊಂಡೊಯ್ಯುವುದಿರಲಿ ಅಂದರೆ ರಂಗಸಮಯ ನಿರ್ವಹಣೆ ಎಲ್ಲವೂ ಭಾಗವತನ ಒಂಟಿಹೆಗಲ ಮೇಲೆ ಹೇರಿಕೊಂಡಿರುತ್ತದೆ. ಇದೆಲ್ಲದಕ್ಕೂ ಮೂಲಸ್ರೋತವಾದ ಪ್ರಸಂಗ ಅಂದರೆ ಪ್ರಸಂಗಪದ್ಯ, ಅದಕ್ಕೆ ಬೆಳಕು ಕಾಣಿಸುವ ಮೊದಲ ಹಾಗೂ ಕೊನೆಯ ವ್ಯಕ್ತಿ ಭಾಗವತ. ಹೀಗೆ ಭಾಗವತನು ಸಾಹಿತ್ಯಜ್ಞ, ಸಂಗೀತಜ್ಞ, ನರ್ತನಜ್ಞ, ಭಾಷಾಜ್ಞ, ರಂಗಜ್ಞ-ಒಟ್ಟಿನಲ್ಲಿ ಸರ್ವಜ್ಞನಾಗಿರಬೇಕಾಗುತ್ತದೆ. ಇಂಥವನ ಕರ್ತವ್ಯಕರ್ಮವೇ ಭಾಗವತಿಕೆ.

ಯಾವುದೇ ಪ್ರಕಾರದ ಗಾನಪದ್ಧತೆ ತನ್ನದೇ ಆದ ಐಡೆಂಟಿಟಿ ಹೊಂದಿರುತ್ತದೆ. ಅಂದರೆ, ಕೇಳಿದಾಕ್ಷಣ ನಮಗೆ ‘ಓ ಅದು ಈ ಪೈಕಿಯದು’ ಎಂಬ ಬೋಧೆ ತಂದುಕೊಡುತ್ತದೆ. ಮೊದಲ ಉಠಾವಿನಲ್ಲೇ ಇದು ಉತ್ತರಾದಿ, ಇದು ಕರ್ಣಾಟಕಿ, ಇದು ಬಂಗಾಲೀ, ಇದು ದೇಸೀಜಾನಪದ- ಎಂಬುದೆಲ್ಲಾ ಅರಿವಿಗೆ ಬರುತ್ತದೆ. ಅದಕ್ಕೆ ನಮ್ಮ ಕೇಳ್ಮೆಯ ಸಂಸ್ಕಾರದ ಸಹಕಾರ ಬೇಕಾಗುತ್ತದೆ. ಹಾಗೆಂದು ಇವ್ಯಾವುದನ್ನೂ ಕತ್ತಿಮೊನೆಯಲ್ಲಿ ಕೊಯ್ದು ತೋರಿಸಲಿಕ್ಕಾಗುವುದಿಲ್ಲ.

ಕಾರಣ, ಉತ್ತರಾದಿ ದಕ್ಷಿಣಾದಿಗಳ ಮಾರ್ಗದಲ್ಲಿ ಇರುವ ಸಂಗೀತಸ್ವರಗಳು ದಾಯಾದಿಗಳೇನೂ ಅಲ್ಲ. ಷಟ್ಜಾದಿ ನಿಷಾಧಾಂತವಾದ ಎಲ್ಲ ಪ್ರಕೃತಿ ವಿಕೃತಿಸ್ವರಗಳೂ ಅವವೇ; ಅವುಗಳ ಓಡಾಟ ಓಲಾಟ ಕೊಂಡಾಟ ತಾರಾಟಗಳಲ್ಲಿ ವ್ಯತ್ಯಾಸವಿದೆ. ಸ್ಥೂಲವಾಗಿ ವಿಲಂಬ-ವೇಗ-ಕರ್ಷಣ-ಘರ್ಷಣ ಇತ್ಯಾದಿ ಶಬ್ದಗಳ ಸರ್ಕಸ್ಸಿನಿಂದ ವ್ಯತ್ಯಾಸ ಹೇಳುವ ಸಾಹಸ ಮಾಡಬಹುದಾದರೂ, ಆ ಎಲ್ಲ ಲಕ್ಷಣ ಎರಡೂ ಕುಟುಂಬದಲ್ಲಿದೆ. ಆದರೂ ಒಗ್ಗಿದ ಕಿವಿ ಕೂಡಲೇ ಗುರುತಿಸಿ ವರ್ಗೀಕರಿಸಿ ಧನ್ಯವಾಗುತ್ತದೆ, ತನಗೆ ಬೇಕಾದ್ದನ್ನು ಅರಸಿಕೊಳ್ಳುತ್ತದೆ, ಆರಿಸಿಕೊಳ್ಳುತ್ತದೆ. ಹಾಗೆಯೇ ಯಕ್ಷಗಾನದ ಹಾಡಿಕೆ-ಭಾಗವತಿಕೆಯೂ ಸರಿಗಮಪದನಿಗಳಿಂದಲೇ ನಿಸದವಾಗಿ ಮೈತಳೆಯುವಂತದ್ದು.

ಯಕ್ಷಗಾನ ಭಾಗವತಿಕೆಯನ್ನು ಸ್ವರಪ್ರಸ್ತಾರಕ್ಕೆ ಅಳವಡಿಸಿ ಇದು ಇಂತಿಂಥ ರಾಗ ಅನ್ನುವ ಶೋಧ ಈಗಾಗಲೇ ಆಗಿದೆ-ಆಗುತ್ತಿದೆ. ಜೊತೆಗೆ ಹಾಡುಗಾರಿಕೆ ಶಾಸ್ತ್ರೀಯ ಸಂಗೀತದ –ಉತ್ತರಾದಿ ಯಾ ದಕ್ಷಿಣಾದಿ-ಕಕ್ಷೆಯೊಳಗೇ ಇರುವುದರಿಂದ ಅದರ ಸ್ವರೂಪಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದರೆ ತಪ್ಪೇನಿಲ್ಲ. ಅಂದ ಇನ್ನೂ ಸೊಗಸುತ್ತದೆ. ಚಾಲ್ತಿಯಲ್ಲಿಲ್ಲದ ರಾಗಗಳನ್ನು ಚಾಲ್ತಿಯಲ್ಲಿರುವ ಧಾಟಿಗಳಿಗೆ ರಾಗೋಪಚಾರವನ್ನೂ ಮಾಡಬೇಕೆಂಬ ಪೂರ್ವಪಕ್ಷ ಇದೆ. ಇರಲಿ ತಪ್ಪೇನಿಲ್ಲ, ವಾದೇ ವಾದೇ ಜಾಯತೇ ಸತ್ತ್ವಬೋಧಃ.

ಈ ವಾದವನ್ನು ಒಪ್ಪುವ ಮುನ್ನ ಯಕ್ಷಗಾನದ ಹಾಡುಗಾರಿಕೆಯ ಪರಮೋದ್ದೇಶದ ಲಕ್ಷ್ಯ ಏನು ಎಂಬುದನ್ನು ಗಮನಿಸಬೇಕಾಗುತ್ತದೆ. ನಿಸ್ಸೀಮವಾದ ರಾಗಸಾಗರದಲ್ಲಿ ವಿಹಾರಕ್ಕೆ ತೊಡಗಿದ ಸ್ವರನೌಕೆ ಇದಲ್ಲ. ಆದರೂ ಯಕ್ಷಗಾನದ ಹಾಡುವ ರೀತಿಯೇ ಸ್ವಯಂವಿಶಿಷ್ಟ. ಸೀಮಿತವಾದ ಕಾಲಾವಧಿಯಲ್ಲಿ, ನಿರ್ದಿಷ್ಟವಾದ ಸಾಹಿತ್ಯಪಂಕ್ತಿಗಳನ್ನು, ಪಾತ್ರಾಭಿನಯದ ಸಾಧ್ಯತೆಯ ನಿರ್ಬಂಧದಲ್ಲಿ ಭಾಗವತ ಹಾಡಬೇಕು. ಅವನ ಭೂಮಿಕೆ ಗವಾಯಿಯ ಪ್ರದರ್ಶನವೇದಿಯಲ್ಲ.

ಸ್ವಯಂ ಭಾಗವತ ಗಾನವಿದ್ಯಾಪರಮಾಚರ್ಯನಾದರೂ ಯಕ್ಷಗಾನ ರಂಗಸ್ಥಳದಲ್ಲಿ ಮೂರೂಮುಕ್ಕಾಲು ಮೊಳದ ಕಬಡ್ಡಿ ಕೋರ್ಟಿನ ನಿಯಂತ್ರಿತ ಆಟಗಾರ. ಯಾಕೆಂದರೆ ಇಲ್ಲಿ ಭಾಗವತ ಕತೆಗೆ ಆಧಾರವಾದ ಪದ್ಯಸಾಹಿತ್ಯವನ್ನು ನಾಟ್ಯರಂಗದ್ವಾರಾ ಪ್ರೇಕ್ಷಕರಿಗೆ ಸಂವಹಿಸುವ ಜವಾಬ್ದಾರಿ ಹೊತ್ತಿರುತ್ತಾನೆ.

ಆ ಸಾಹಿತ್ಯವೋ ಸಂಗೀತಕ್ಕಿಂತಲೂ ಸರಳವಾದದ್ದು. ನಾಡಾಡಿಗಳ ದಿನದಿನದ ಬಳಕೆಯ ಮಾತು, ಉದ್ಗಾರ, ಚತುರೋಕ್ತಿ, ಲೋಕೋಕ್ತಿಗಳಿಂದಾಗಿ ಕೇಳುತ್ತಿದ್ದಂತೆಯೇ ಅರ್ಥವಾಗುವ ಆಪ್ತವೂ ಆಗುವ ಶಬ್ದಪಂಕ್ತಿಗಳು. ಶಬ್ದದ ಹೆಣಿಗೆಯಲ್ಲಿ ತೊಡಕಿಲ್ಲದಂತೆ ಪೋಣಿಸಿ, ಒಂದು ಯಾ ಎರಡು ಬಾರಿ ಕೇಳುತ್ತಿದ್ದಂತೆಯೇ ಆ ಮಾತಿನ ಅರ್ಥ- ಬರೀ ಅರ್ಥವೇನು ಧ್ವನಿಯೂ- ಬೋಧೆಯಾಗುವಂತೆ ಯಕ್ಷಕವಿಗಳು ಪದ್ಯ ರಚಿಸಿದ್ದಾರೆ.

ಪ್ರಯೋಗಿಸಲ್ಪಟ್ಟ ಶಬ್ದ ಸರಳವಾದರೂ ಭಾವವನ್ನು ವ್ಯಂಜಿಸುವಲ್ಲಿ ಸರ್ವಾತ್ಮನಾ ಶಕ್ತವಾದಂಥವು. ಇದೆಲ್ಲಕ್ಕೂ ಮಕುಟಪ್ರಾಯವಾಗಿ ಅರ್ಥ-ನಾದಗಳ ಅದ್ವೈತವನ್ನು ಸಾಧಿಸಿದಂಥವು. ಸಂಕ್ಷಿಪ್ತವಾಗಿ ಪದ್ಯಸಾಹಿತ್ಯದ ಮೇಲ್ಮೆಯಿದು. ಈ ಎಲ್ಲ ಹೆಚ್ಚುಗಾರಿಕೆಯನ್ನು ಎತ್ತಿ ತೋರಿಸಿ ಹಾಡಿನಲ್ಲಿ ಸ್ಥಿರೀಕರಿಸುವವ ಭಾಗವತ.

ಭಾಗವತ ಹಾಡಿಗೆ ತೊಡಗುತ್ತಿದ್ದಂತೆಯೇ ಶಬ್ದ,ಅರ್ಥ, ಭಾವ, ಅಭಿನಯ ಇವಿಷ್ಟು ಪ್ರೇಕ್ಷಕನಲ್ಲಿ ಸ್ಪುರಿಸುತ್ತದೆ. ಅಂತಹ ಓಜಸ್ವಿತೆ ಭಾಗವತನಿಗೆ ಇರದಿದ್ದರೂ ಬರದಿದ್ದರೂ ಭಾಗವತಿಕೆಗೆ ಇರುತ್ತದೆ. ಕಾರಣ, ಗಾನದ ಶೈಲಿ. ಉತ್ತರಾದಿ ದಕ್ಷಿಣಾದಿ ಎಂದು ಕೇಳಿದೊಡನೆಯೇ ಈಟಚಿsh ಆಗುವ ಹಾಗೆಯೇ ಪದ್ಯದ ಮೊದಲ ಎತ್ತುಗಡೆಗೇ ಇದು ಯಕ್ಷಗಾನ ಶೈಲಿ ಎಂದು ಗೊತ್ತಾಗುವಶ್ಟು ಅದರ ದಿಟ್ಟಿ ದಟ್ಟವಾಗಿದೆ. ಅದಕ್ಕಾಗಿ ಇದರ ಪೂರ್ವಾಚಾರ್ಯರಿಗೆ ನಾವು ಸದಾಋಣಿಗಳು.

ಯಕ್ಷಗಾನ ಪದ್ಯಗಳೇ ಭಾಗವತಿಕೆಯ ಅನನ್ಯತೆಯನ್ನು ಸ್ಥಿರಪ್ರತಿಷ್ಠೆ ಮಾಡಿದ್ದಾವೆ. ಪದ್ಯಬಂಧಗಳ ಬಂಧುರತೆಯೇ ಬೆರಗಿನ ಭಿತ್ತಿ. ಲಯದ ಗುದುಮುರಿಕೆಯಲ್ಲಿ ಪದ್ಯರಚನೆಯನ್ನು ಎಷ್ಟೆಲ್ಲ ತರಹೇವಾರಿ ಮಾಡಬಹುದೆಂಬುದಕ್ಕೆ ಯಕ್ಷಗಾನಪ್ರಸಂಗ ಒಂದು ಪ್ರಯೋಗಾಲಯವಾಗಿ ಇಂದಿಗೂ ಶಿಖರಸ್ಥವಾಗಿದೆ. 2-3-4-5-6-7 ಅಕ್ಷರಗಳ ಸಾಲಂಬ-ನಿರಾಲಂಬ ಗಣಗುಂಫನಗಳಿಂದ ತ್ರಿಶ್ರ-ಚತುರಶ್ರ-ಖಂಡ-ಮಿಶ್ರಾದಿ ತಾಳಗಳ ಲಯಸಾಧ್ಯತೆಯನ್ನೆಲ್ಲಾ ಮಡುಗಟ್ಟಿಸಿ ರಂಗಸ್ಥಳವನ್ನು ಮಾತ್ರವಲ್ಲ, ಕೇಳುವವನ ಭಾವಸ್ಥಲವನ್ನು ತಲ್ಲಣಗೊಳಿಸುವಷ್ಟು ವಿಸ್ಮಯದ ವಿರಾಡ್ರೂಪ ಯಕ್ಷಗಾನ ಕಾವ್ಯಪರಂಪರೆಯದ್ದು.

ಆ ಎಲ್ಲ ರಚನೆಯ ಚಿತ್ರವಿಚಿತ್ರಬಂಧಗಳನ್ನು ಗತಿಗಳನ್ನು ವಲನಗಳನ್ನು ವಿಕಾರವಾಗದಂತೆ ಹಾಡುವ ಭಾಗವತನ ಪದ್ಯದ ಮೊದಲ ಸಾಲೇ ಅವನ ಅನನ್ಯತೆಯನ್ನು ಬಿಂಬಿಸುತ್ತದೆ. ಅದಕ್ಕೆ ಕಾರಣ, ಕ್ಲಿಷ್ಟವೂ ಸುಂದರವೂ ದುಗ್ರ್ರಾಹ್ಯವೂ ಆದ ಛಂದೋರಚನೆ ಮಾಡಿದ ಪೂರ್ವಸೂರಿಗಳಿಗೆ ತಮ್ಮ ರಚನೆಯನ್ನು ಹಾಡುವುದು ಹೇಗೆ ಎಂಬ ಗಾನಾನುಭವವಿದ್ದದ್ದು. ಎಲ್ಲಿ ಸಹಜಗತಿ, ಎಲ್ಲಿ ವಕ್ರ, ಎಲ್ಲಿ ದೀಘ, ಎಲ್ಲಿ ಪ್ಲುತ ಎಂಬ ಲಯವಿನ್ಯಾಸವನ್ನು ಗುನುಗಿಕೊಂಡೇ ರಚಿಸುತ್ತಿದ್ದರು ಅಂದರೆ ತಮ್ಮ ಗೀತಕ್ಕೆ ಅವರೇ ಮೊದಲ ಭಾಗವತರಾಗಿರುತ್ತಿದ್ದರು.ಭಾಗವತಿಕೆ ಅನನ್ಯವಾಗಲು ಇದೂ ಒಂದು ಕಾರಣ. ಅದು ರಾಗಮೂಲದಿಂದಲೂ ಹುಟ್ಟಿರಬಹುದು, ಸ್ವರಮೇಳನದಿಂದಲೂ ಹುಟ್ಟಿರಬಹುದು. ಆದರೆ ಪದ್ಯದ ರಚನಾಕ್ರಮಕ್ಕೂ ಅದನ್ನು ಹಾಡುವ ಧಾಟಿಗೂ ಒಂದು ಆಪ್ತವಾದ ಅಂತಃಸಂಬಂಧವನ್ನು ಈಗಲೂ ನಾವು ಕಾಣಬಹುದು.

ಆದ್ದರಿಂದ ಯಕ್ಷಗಾಯನದಲ್ಲಿ ‘ಗಾಯನ’ ರಾಗಶರೀರಿಯಾಗಿ ತೋರಿಕೊಳ್ಳಲಿಲ್ಲ. ಒಬ್ಬೊಬ್ಬ ಭಾಗವತನ ಶೈಲಿ-ರೀತಿ-ಗತ್ತುಗಳೇ ಪ್ರಮಾಣವೂ ಆಗಿಹೋಗಿದ್ದಾವೆ. ಅದನ್ನೇ ಮಟ್ಟು ಎಂತಲೋ ಧಾಟಿ ಎಂತಲೋ ಕರೆಯುವುದು ವಾಡಿಕೆ. ಅಂತಹ ಮಟ್ಟುಗಳಲ್ಲಿ ರಾಗವಿದ್ದರೂ, ಭಾಗವತಿಕೆಯ ಉದ್ದೇಶ ರಾಗಾಲಪವೂ ಅಲ್ಲ, ರಾಗವಿಸ್ತಾರವೂ ಅಲ್ಲ, ಕಲ್ಪನಾಸ್ವರಜೃಂಭಣೆಯೂ ಅಲ್ಲ, ಸಂಗತಿಗಳ ಜಮಾವಣೆಯೂ ಅಲ್ಲ, ಗಮಕಗಳನ್ನು ಪೇರಿಸುವ ಪಾಂಡಿತ್ಯವೂ ಅಲ್ಲ. ಅಗದೀ ಇಷ್ಟೆಲ್ಲಾ ಮಾಡಲಿಕ್ಕೆ ಅಲ್ಲಿ ಪುರುಸೊತ್ತೇ ಇಲ್ಲ.

ಪುರುಸೊತ್ತನ್ನಾದರೂ ಮಾಡಿಕೊಳ್ಳಬಹುದು. ಆದರೆ ಎಡೆ ಇಲ್ಲ. ಕಾರಣ, ಔಚಿತ್ಯ. ಅರ್ಥವನ್ನು, ಭಾವವನ್ನು, ಸನ್ನಿವೇಶವನ್ನು, ಅಭಿನಯವನ್ನು ಕೆಡಿಸುವ ರಾಗಾನುಸರಣೆಯ ಶ್ರಾದ್ಧನಿಯಮವನ್ನು ಯಕ್ಷಗಾನ ಹತ್ತಿರವೂ ಸೇರಿಸುವುದಿಲ್ಲ. ಆದ್ದರಿಂದ, ಹಿಂದೆಂದೋ ಕಾಲದಲ್ಲಿ ಅದೇ ರಾಗತಾಳದಲ್ಲಿ ಹಾಡಿರಬಹುದಾದ; ಆದರೆ ಈಗ ಛಂದೋನಿರ್ದೇಶನಕ್ಕೆ ಸೀಮಿತವಾದ ಸೌರಾಷ್ಟ್ರ ತ್ರಿವುಡೆ, ನವರೋಜು ಏಕ ಇತ್ಯಾದಿ ಎಲ್ಲ ಬಂಧಗಳು ಭಾಗವತರ ಪರಂಪರೆಯಲ್ಲಿ ಧಾಟಿಗಳ ಸ್ವರೂಪದಲ್ಲಿ ಸ್ಥಾಯಿಯಾಗಿ ಕಾವ್ಯಸಂಪತ್ತನ್ನು ಶ್ರೀಮಂತಗೊಳಿಸಿದ್ದಾವೆ.
ಇದು ಭಾಗವತಿಕೆಯ ಅನನ್ಯತೆ.
ಕನ್ನಡದ ಶಿಷ್ಟಕಾವ್ಯಪ್ರಪಂಚದಲ್ಲಿ ಇನ್ನೂ ಪ್ರಾಸ-ಅನುಪ್ರಾಸ-ಯಮಕ ಯತಿವರಣಾದಿ ಸೂತ್ರನಿರ್ಬಂಧಗಳು ಏನಾದರೂ ಉಳಿದಿದ್ದರೆ ಅದರ ಜೀವಂತ ಸಂಗ್ರಹಾಲಯ ಯಕ್ಷಗಾನ. ಅದರ ದಿಗ್ಧರ್ಶಕ ಭಾಗವತ. ಏಕೆಂದರೆ, ಆತ ಹಾಡಿ ತೋರಿಯಲ್ಲದೇ ರಚನಾಸೌಂದರ್ಯ ತಿಳಿಯುವುದಿಲ್ಲ.

ಛಂದೋರಚನೆ ಚಾಕ್ಷುಷವಲ್ಲ; ಶ್ರಾವಣ. ಬಹುಪ್ರಚುರವಾದ ನವರೋಜು ಏಕ ಬರಿಗಣ್ಣಿಗೆ ತಾನೇನು ಅಂತ ಹೇಳುವುದಿಲ್ಲ. ಹಾಗೇ ಹತ್ತಾರು ರುಚಿಬಾಹುಲ್ಯದ ಸ್ವಾರಸ್ಯದ ರಚನೆಗಳು ಯಕ್ಷಗಾನಗರ್ಭದಲ್ಲಿದ್ದಾವೆ. ಘಂಟಾರವ ಅಷ್ಟ ಎಂಬ ಬಂಧ ಎತ್ತಲಿಂದ ಮೊಳ ಹಾಕಿದರೂ ಜಪ್ಪಯ್ಯ ಅಂತ ಜಗ್ಗದ ಜಕಣೀ. ಬಂಧಗಳಿಗೆ ಕೊಟ್ಟ ಹೆಸರುಗಳಲ್ಲಿ ಏಕರೂಪತೆ ಇರದಿದ್ದರೂ ಪರಂಪರೆಯಿಂದ ಹಾಡಿಕೊಂಡು ಬಂದ ಭಾಗವತನಿಗೆ ಪದ್ಯವನ್ನು ಕಂಡ ಕೂಡಲೇ ಅದರ ಜಾತಕ ಬಿಚ್ಚಿಕೊಳ್ಳುತ್ತದೆ.

ಒಂದೊಮ್ಮೆ ಎದುರಿಗಿರುವ ಬಂಧ ಪೂರ್ವೋದ್ಧೃತವಲ್ಲದೆ, ರಚನಕಾರನ ಸ್ವಂತದ ಹೊಸ ಹೊಸೆತವಾಗಿದ್ದರೂ ಅನುಭವಿ ಭಾಗವತನಿಗೆ ಅದರ ಸುಳುಹು ಸಿಗುತ್ತದೆ. ಏನೇ ನೂತನಬಂಧವೆಂದರೂ ತಾಳಗಳ ಆಚೆಯಂತೂ ಜಾರುವುದಿಲ್ಲ ಹಾಗೂ ಪಾದ-ಗಣಗಳ ಮರ್ಯಾದೆ ಇದ್ದೇ ಇರುತ್ತದೆ. ಈ ಸೂಕ್ಷ್ಮಗಳನ್ನು ಮೂಸಬಲ್ಲ ವಾಸನಾಬಲ ಭಾಗವತನಿಗೆ ಸಿದ್ಧಿಸಿದರೆ ಅಂತಹ ಭಾಗವತಿಕೆ ಲೋಕೋತ್ತರವಾಗಿ ಅನನ್ಯವೇ ಸರಿ.

ಯಕ್ಷಗಾನ ಭಾಗವತಿಕೆಯ ವೈಶಿಷ್ಟ್ಯತೆಯ ಇನ್ನೊಂದು ಮಜಲು ಭಾವನಾಟ್ಯದ್ದು. ವೇಷಧಾರ ಯಾವೆಲ್ಲ ಅಭಿನಯ ಮಾಡಬಲ್ಲನೋ ಹೆಚ್ಚೂ ಕಮ್ಮಿ ಅಷ್ಟೂ ಭಾವಭ್ರೂಣಗಳು ಭಾಗವತನಲ್ಲಿ ಹುಟ್ಟಿ ಬೆಳೆದಿರುತ್ತಾವೆ. ಹಾಡಿನ ಭಾವಕ್ಕೆ ತಕ್ಕುದಾದ, ಕರುಣೆಯಿಂದ ರೌದ್ರದ ತನಕದ ಭಾವಭಿನ್ನತೆಗಳನ್ನು ಗಾನದ ಮೂಲಕ ಅಥವಾ ಹಾಡುವ ರಾಗದ ಸ್ವರಗಳ ತರಂಗಶೀಲತೆಯಿಂದಲೇ ಪ್ರಕಟಿಸುವುದು ಭಾಗವತಿಕೆಯ ಅನನ್ಯತೆಯೇ. ಯಾಕೆಂದರೆ ನಾಟಕದಲ್ಲಾಗಲೀ, ನೃತ್ಯಕ್ಷೇತ್ರದಲ್ಲಾಗಲೀ ಗಾಯಕರು ಸವಿರಾಮರಾಗಿ ರಾಗಾಂದೋಲನದಲ್ಲಿ ಜೀಕಾಡುತ್ತಿರುತ್ತಾರೆ.

ಅಲ್ಲಿ ರಾಗದ ಕೈವಾರಿಕೆ ಮುನ್ನೆಲೆಯಲ್ಲಿರುತ್ತದೆ. ಆದರೆ ನೃತ್ಯಮಾರ್ಗಕ್ಕೂ ಯಕ್ಷಗಾನಕ್ಕೂ ರಂಗನಿರ್ವಹಣೆಯಲ್ಲಿ ಮೂಲಭೂತವಾದ ವ್ಯತ್ಯಾಸವಿದೆ. ನೃತ್ಯ ಏಕಾಹಾರ್ಯ, ಯಕ್ಷಗಾನ ಬಹ್ವಾಹಾರ್ಯ. ಅದು ವಾಕ್ಯಾರ್ಥಾಭಿನಯನಿಷ್ಠ. ಇದು ಪದಾರ್ಥಾಭಿನಯನಿಷ್ಠ. ‘ಕಡುಕೋಪದಿಂ ಖಳನು ಖಡುಗವನೆ ಪಿಡಿದು’ ಅನ್ನುವುದನ್ನು ಚಂದನಶೀತಲತೆಯಲ್ಲಿ ಖುಷಿಯಲ್ಲಿ ಹಾಡುತ್ತಾ ಸಂಗತಿಗಳನ್ನು ಹೆಣೆಯುತ್ತಿರುತ್ತಾರೆ. ಅದನ್ನೇ ಯಕ್ಷಗಾನ ಭಾಗವತ ಹಾಡುವ ಆರ್ಭಟಕ್ಕೆ ರಂಗವೇ ಕಂಪಿಸೀತು.

ಯಕ್ಷಗಾನದಲ್ಲೂ ಭಾಗವತಿಕೆಯ ಸಂಗೀತವನ್ನು ಪರಿಷ್ಕರಿಸಿ ವಾಕ್ಯಾರ್ಥಾಭಿನಯ ಮಾಡಿ ಯಕ್ಷಗಾನದ ರಂಗಕ್ಷಿತಿಜ ವಿಸ್ತರಿಸಬಹುದು ಎಂಬ ಅಭಿಪ್ರಾಯ ಕಲಾವಲಯದಲ್ಲಿದೆ. ಇದರಲ್ಲಿ ಮೊದಲ ತೊಡಕು- ರಂಗದಲ್ಲಿರುವ ಇನ್ನೊಂದು ಪಾತ್ರ ಆಗ ಏನು ಮಾಡಬೇಕು? ಎರಡನೇ ಆಭಾಸ-ಭಾಗವತನ ‘ಯಕ್ಷಗಾನಪದ್ಯ’ ಹಳ್ಳ ಹಿಡಿದು, ಸಂಗೀತ ಕಚೇರಿ ಆಗುತ್ತದೆ. ಮೂರನೇಯದು ವಾಕ್ಯಾಭಿನಯದ ವಿವರ ಸುಲಭಗ್ರಾಹ್ಯವಾಗದೇ ಹೋಗುವುದು.

ಆಗಲೇ ಪ್ರಸ್ತಾಪಿಸಿದಂತೆ ಭಾವನಾಟ್ಯದ ವೇಗ ಕನಿಷ್ಠಪ್ರಮಾಣಕ್ಕಿಂತಲೂ ಕುಂಠಿತವಾದರೆ ಯಕ್ಷಗಾನತ್ವವೇ ಮಸುಳುತ್ತದೆ. ಬೇರೊಂದು ಪದ್ಧತಿಯಲ್ಲಿರುವುದನ್ನು ಇಲ್ಲಿ ಅಳವಡಿಸಬೇಕಾದ ಅಗತ್ಯ, ಅನಿವಾರ್ಯತೆಯಾದರೂ ಏನು? ಅವರವರ ರಿವಾಜನ್ನು ಅವರವರು ಉಳಿಸಿದರೆ ಸಾಲದೇ? ಹೀಗೆ ಕಂಡಕಂಡ ವಿಧಾನಗಳನ್ನು ಒಪ್ಪಿಕೊಳ್ಳುತ್ತಾ ಅಪ್ಪಿಕೊಳ್ಳುತ್ತಾ ಹೋದಾಗ ಇದ್ದ ಮೂಲರೂಪವೂ ಮಾಯವಾಗಿ ಮೂಸಿಯಮ್ಮಿಗೂ ನಾಲಾಯಕ್ಕಾದೀತು !

ಯಕ್ಷಗಾನದ ಹಾಡಿನ ಜಾಡಿಗೆ ತನ್ನದೇ ಆದ ಗುರುತುಗಲ್ಲಿದೆ ಎಂಬುದನ್ನು ಮುಖ್ಯವಾಗಿ ಭಾಗವತೋದ್ಯೋಗಪರ್ವಸ್ಥರು ನಿವ್ರ್ಯಾಜವಾಗಿ ನಿಶ್ಚಯಿಸಿ ಪ್ರವೃತ್ತರಾದರೆ ಮಾತ್ರ ಭಾಗವತಿಕೆಯ ಅನನ್ಯತೆ ಲೋಕಕ್ಕೆ ತಿಳಿಯುತ್ತದೆ. ಬಹುತೇಕ ಮೌಖಿಕ ಪರಂಪರೆಯಲ್ಲಿ ಉಳಿದುಬಂದದ್ದು ಭಾಗವತಿಕೆಯ ವ್ಯವಸಾಯ.

ಶ್ರುತಿ ಇಟ್ಟೋ ಸ್ವರ ಕಲಿತೋ ಸರಳೆ-ಜಂಟಿ-ವರ್ಣ-ಕೀರ್ತನೆ ಅಂತೆಲ್ಲಾ ಅಕಾಡಮಿಕ್ಕಾಗಿ ಅಭ್ಯಾಸ ಮಾಡಿದವರು ವಿರಳ. ಹೆಚ್ಚಾಗಿ ಅನುಕರಣೆಯೇ ಇಲ್ಲಿ ಪ್ರಮಾಣ. ತನ್ನ ಹಾಡುವ ತಾಕತ್ತು ಅಂದರೆ ಶ್ರುತಿ ಏನು ಅಂತಲೂ ಗೊತ್ತಿಲ್ಲದೇ ಭಾಗವತಿಕೆಯನ್ನು ಹಿರಿಭಾಗವತರ ಶ್ರುತಿಯಲ್ಲಿ ಕಲಿತ ಮುಗ್ಧಪರಂಪರೆ ಇದು. ಏರುಶ್ರುತಿಯಲ್ಲಿ ಪಂಚಮದಿಂದ ಪಂಚಮದವರೆಗೆ ಏತನೀರಾವರಿ ಮಾಡಿ ಭಾಗವತಿಕೆಯ ಹಾಡಹೊಲ ಬೆಳೆಸುವ ಪರಿಪಾಠ ನಾಟಿಬಿಟ್ಟಿದೆ.

ಶ್ರುತಿಗೂ ಭಾಗವತಿಕೆಯ ಅನನ್ಯತೆಗೂ ಸಂಬಂಧವಿಲ್ಲ.  ತತ್ರಾಪಿ ಇಡೀ ರಾತ್ರಿ ನಿರಂತರ ಹಾಡುವ ಅನಿವಾರ್ಯತೆಯಲ್ಲಿ ಜಾವ ಕಳೆದಂತೆ ಶ್ರುತಿ ಏರಿಸುವುದು ಕೇವಲ ಪ್ರತಿಷ್ಠೆಯ ಪ್ರಶ್ನೆಯಾದೀತೇ ಹೊರತು ಪ್ರಯೋಜನದ ಪ್ರಶ್ನೆಯಾಗದು. ಶ್ರುತಿ ಏರುತ್ತಿದ್ದಂತೆ ಧ್ವನಿಯ ಪೆಟ್ಟಿಗೆ-ಅದೂ ಚರ್ಮನಿರ್ಮಿತ- ಸೋತು ಕಂಗಾಲಾಗುತ್ತದೆ. ಅದೇನಿದ್ದರೂ ಬಡ್ಡೆಮ್ಮೆ ಕೆಚ್ಚಲು ಹಿಂಡಿದ ಹಾಗೆ, ಶಬ್ದಾರ್ಥವನ್ನಾಗಲೀ ನಾದಾರ್ಥವನ್ನಾಗಲೀ ಹೊಮ್ಮಿಸುವುದರಲ್ಲಿ ಕಂಠ ಕುಂಟುತ್ತದೆ.

ಶೃಂಗಾರವೂ ವೀರವೂ ಒಂದೇ ಆಗುತ್ತದೆ. ಪದ್ಯದ ಸೌಂದರ್ಯವನ್ನು ಮುಕ್ಕಡಿಸಿ ತುಂಡುತುಂದು ವಾಕ್ಯಗಳಾಗಿ ಮಾಡಿ ಸ್ಪಷ್ಟತೆ ಇಲ್ಲದೆ ಉದ್ಗರಿಸುವುದು ಮಾದರಿ ಭಾಗವತಿಕೆಯಾಗದು. ಹಾಗೇ ವೀರರಸದ ಹಾಡಿಕೆಯಲ್ಲೂ ಒಂದೇ ಒಂದು ಶಬ್ದ ನರಮನುಷ್ಯರ ಕಿವಿ ಗ್ರಹಿಸದೇ ಹೋಗಿ ಬರೀ ಅಲಲಲಲ ಎಂಬ ಸ್ವರಕಂಪನ ಮಾತ್ರ ಕೇಳಿ ಹಾಗೇ ಸದ್ದಿಲ್ಲದೆ ಅಡಗುವುದೂ ಇದೆ- ಹಾಡಿಕೆಯ ಅನನ್ಯತೆ ಎನ್ನಲಾಗದು.

ನಮ್ಮ ಶಾರೀರಕ್ಕೆ ಒಗ್ಗುವ ಒಪ್ಪುವ ಒಂದು ನಿಸರ್ಗಸಹಜ ಶ್ರುತಿ ಎಂಬುದೊಂದಿರುತ್ತದೆ. ಅದರಲ್ಲಿ ಗಾಯನದ ಎಲ್ಲ ನಾಟ್ಯಾಯಮಾನತೆಯನ್ನೂ ತ್ರಿಸ್ಥಾಯಿಗಳಲ್ಲಿ ಲಲಿತಮನೋಹರವಾಗಿ ತೋರಿಸಲು ಸಾಧ್ಯ. ಇದರಿಂದ ಸಭಾವವಾಗಿ ಸರಾಗವಾಗಿ ಸಾಹಿತ್ಯವನ್ನು ಹಾಡುವುದು ಭಾಗವತಿಕೆಯ ಪ್ರಶ್ನಾತೀತ ಅನನ್ಯತೆ. ಚಂಡೆಮದ್ದಳೆಯ ನುಡಿತದ ಹಾಸುಬೀಸು, ಸನ್ನಿವೇಶದ ತೀವ್ರತೆಯ ಚುರುಕು ಚಬುಕು, ಎಲ್ಲವೂ ಸರಿ ಹಾಡುಗಾರನು ಸಾಹಿತ್ಯವನ್ನು ಯಾಕೆ ಮೇಘಗರ್ಜಿತವನ್ನಾಗಿ ಮಾಡಬೇಕು? ನನ್ನ ಸಲಹೆ, ಯುದ್ಧವೀರಗಳಿಗೆ ಪದ್ಯದ ಭಣಿತಿಯೇ ಬೇಡ, ಕೇವಲ ಸ್ವರಾವಳಿ ಸಾಕೇ ಸಾಕು. ಅಷ್ಟರಲ್ಲೇ ವಿಭ್ರಮಾವರಣ ಸೃಷ್ಟಿ ಮಾಡಿದರೆ ಅದೂ ಅನನ್ಯತೆ.

ವೀರದ ಗುಂಜಾರವವು ಸಾಹಿತ್ಯವನ್ನು ಮರೆಸಿದಂತೆ ಅತಿಯಾದ ಯಕ್ಷಗಾನಲಕ್ಷಣವಿದೂರವಾದ ರಾಗಗೇಯತೆಯೂ ಸಾಹಿತ್ಯವನ್ನೂ ರಂಗವನ್ನೂ ಭಣಗುಡಿಸುತ್ತದೆ. ಅಕ್ಷರ ಅಕ್ಷರಗಳ ನಡುವೆ ಗಮಕ ಜಡಿದು ಶಬ್ದಶಬ್ದಗಳಿಗೂ ಸಂಗತಿ ನೆರವಲ್ಲು ರಾಗ ತಾನ ಪಲ್ಲವಿ ಮಾಡಿ ಯಕ್ಷಗಾನಪದ್ಯಸಾಹಿತ್ಯದ ಮೂಲ ಉದ್ದೇಶವನ್ನೇ ಮೂಲೋತ್ಪಾಟನ ಮಾಡುವುದು ಭಾಗವತಿಕೆಯ ಅನನ್ಯತೆಯಾದೀತೇ?
ಹಾಗೆ ನೋಡಿದರೆ ಶಾಸ್ತ್ರೀಯಸಂಗೀತದ ರಾಗರಾಶಿಯಲ್ಲೂ ಸಿಗದ ಅಪೂರ್ವನಡೆಗಳು ಯಕ್ಷಗಾನ ಮಾರ್ಗದಲ್ಲಿಯೂ ಇದ್ದಾವೆ. ಅದನ್ನು ಯಾರು ಉಳಿಸಿಕೊಳ್ಳಬೇಕು? ರಂಗಸಂದರ್ಭ ನೋಡಿಕೊಂಡು ರಾಗನಿರ್ವಹಣೆ ಮಾಡಿದರೆ ಸೊಗಸೀತು. ಉದಾಹರಣೆಗೆ ಕುಮಾರವಿಜಯದ ಕಮಾಚ್ ರಾಗ ಆದಿತಾಳದ ಶ್ರೀಕರಶತಮುಖತ್ರಿದಶ. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇನ್ನೂ ಹತ್ತು ಜನ್ಮಕ್ಕಾಗುವಷ್ಟು ಆವಿಷ್ಕರಿಸುವ, ಪರಿಷ್ಕರಿಸುವ, ಬೆಳೆಯುವ, ಬೆಳೆಸುವ ಸರಕು ಇಡಿಕಿರಿದಿದೆ.

ಗೌರೀಮನೋಹರಿ, ಸಾರಮತಿ, ಕಲ್ಯಾಣವಸಂತ, ಮಿಯಾಮಲ್ಹಾರ್ ನಂತಹ ರಾಗಗಳನ್ನು ಯಕ್ಷಗಾನ ಧಾಟಿಗೆ ಅಳವಡಿಸಲಾಗದೇ? ಆದೀತು. ಆದರೆ ರಾಗವಾಗಿ ಅಲ್ಲ ಧಾಟಿಯಾಗಿ. ಮೊದಲೇ ಹೇಳಿದ ಹಾಗೆ ಯಕ್ಷಗಾನದ ಕಿವಿಗೆ ಆ ಪ್ರಯೋಗ ಸಹ್ಯವಾಗಬೇಕು. ಭಾಗವತಿಕೆಯ ಸ್ವರೂಪಕ್ಕೆ ಭಂಗ ಬಾರದಂತಿರಬೇಕು. ಹಾಗೆಂದು ಕಸಿ ಮಾಡುವ ಹುಸಿ ಹುರುಪಲ್ಲಿ ಹೊಸ ಹೊಸ ರಾಗಗಳನ್ನು ಸಿನೆಮಾ ಟ್ಯೂನ್‍ಗಳನ್ನು ಚಪ್ಪಾಳೆಯ ಚಾಪಲ್ಯದಲ್ಲಿ ರಂಗಸ್ಥಳದಲ್ಲಿ ಚಲಾಯಿಸಿ ಚಮಕಿಸುವುದು ಅನನ್ಯತೆಯಲ್ಲ, ಅನ್ಯಾನ್ಯತೆ.

ಕೊನೆಗೊಂದು ಹುಂಬ ಅನಿಸಿಕೆ. ಭಾಗವತರು ಜಾಗಟೆ/ತಾಳವನ್ನು ತಾಲಘಾತಕ್ಕೆ ಬಳಸುತ್ತಾರೆ. ನರ್ತನದಲ್ಲಿ ನಟ್ಟುವನಾರ್ ತಾಳ ಬಳಸುವ ಪದ್ಧತಿಯಿದೆ. ಅದು ಗಾತ್ರದಲ್ಲಿ, ತೂಕದಲ್ಲಿ ಹೆಚ್ಚೇ ಇದ್ದು ಒಮ್ಮೆ ಘಟೀಸಿದರೆ ತರಂಗಕಂಪನ ಕೆಲಸೆಕೆಂಡು ವರೆಗೆ ಪ್ರವಹಿಸುತ್ತದೆ. ಅಲ್ಲದೆ ಹಾಡುಗಾರರ ಧ್ವನಿಯನ್ನು ಬಾಧಿಸುವುದಿಲ್ಲ. ಬಡಗಿನ ತಾಳ ಗಾತ್ರ ಚಿಕ್ಕದು, ಅದನ್ನು ಮುಷ್ಠಿಯೊಳಗಿಟ್ಟು ತಾಡಿಸುವುದು ಪರಂಪರೆ. ಅದರ ಖಟಖಟಾಯಮಾನತೆ ಶ್ರುತಿಹಿತವೆನಿಸುವುದಿಲ್ಲ.

ಇನ್ನು ಜಾಗಟೆಯು ಬಿಡ್ತಿಗೆಗೆ ಎತ್ತಿದಾಗಲಷ್ಟೇ ನಾದತರಂಗವನ್ನು ಆಪ್ಯಾಯಮಾನವಾಗಿ ಹೊರಡಿಸುತ್ತದೆ. ಆದರೆ ಹಾಡಿಗೆ ತೊಡಗಿದಾಗ ತೊಡೆ ಮೇಲಿಟ್ಟು ಕೋಲಿಂದ ಕುಟ್ಟಿದಾಗ ಲೋಹಧ್ವನಿಯ ಪಸೆಯೂ ಇಲ್ಲದೆ, ಠಕ್ ಠಕ್ ಅಂತ ಜೀವಘಾತ ಬಿದ್ದಾಗ, ಜೀವ ತಿನ್ನುತ್ತದೆ. ಶ್ರುತಿಯೊಂದಿಗೆ ಎಂಬುದೇ ಜಾಗಟೆಗೆ ಗೊತ್ತಿರುವುದಿಲ್ಲ. ಹಾಡುವಾಗಲೂ ತಾಳಜಾಗಟೆಗಳ ನಾದಕಂಪನದ ಅಲೆ ಭಾಗವತನ ಶಾರೀರದೊಂದಿಗೆ ಲೀನವಾಗುವಂತೆ ಏನಾದರೂ ರೀಸರ್ಚ್ ಅಂಡ್ ಡೆವಲಪ್‍ಮೆಂಟ್ (ಶೋಧನೆ) ಮಾಡಿದರೆ ಭಾಗವತಿಕೆಯ  ಅನನ್ಯೆತೆ ಅದ್ವಿತೀಯವಾದೀತೆಂಬ ಆಶಯದೊಂದಿಗೆ ವಿರಮಿಸುತ್ತೇನೆ.

 (ಲೇಖಕರು ಕವಿ, ರಂಗನಿರ್ದೇಶಕ, ರೂಪಕ ನಿರ್ದೇಶಕರು, ಅವಧಾನ ಪೃಚ್ಛಕರು)

*******************

Leave a Reply

*

code