ಅಂಕಣಗಳು

Subscribe


 

ಹಾಸ್ಯಗಾರ

Posted On: Sunday, February 12th, 2017
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಇ. ಮಹಾಬಲ ಭಟ್ಟ, ಉಜಿರೆ

 ಯಾರು ಈ ಹಾಸ್ಯಗಾರ ? – ನಾಟಕ/ಯಕ್ಷಾಗಾನಾದಿಗಳಲಿ ಈತನ ಕರ್ತವ್ಯ ಏನು? ಬಹುಷಃ ಇದನ್ನು ಪರಿಪೂರ್ಣವಾಗಿ ತಿಳಿದರೆ ಮಾತ್ರ ಹೆಸರಿಗೂ ಸಾರ್ಥಕ್ಯ; ಅಂತೆಯೇ ರಂಗದಲ್ಲಿ ಪ್ರತಿಭೆಯೂ, ಪಾತ್ರವು ವೈಭವಯುತವಾಗಿ ಮೇಲೇರಲು ಸಾಧ್ಯ. ಇಲ್ಲದಿದ್ದರೆ ಚರ್ವಿತಚರ್ವಣವೇ ಹಾಸ್ಯವಾಗುತ್ತಾ ಹೋಗುತ್ತದೆ, ಇಲ್ಲವೇ ದುರ್ಭಾಷೆಯ ಪ್ರಯೋಗಕ್ಕೋ ಅಥವಾ ಜನರಂಜನೆಗೆ ಎಂಬ ನೆವದಲ್ಲಿ ಕೀಳುಮಟ್ಟಕ್ಕೋ ಇಳಿಯುತ್ತದೆ. ಇಂದಿಗಂತೂ ಯಾವುದೇ ಸ್ಥಿತಿ, ವ್ಯಕ್ತಿಯನ್ನು ವಿಕೃತವಾಗಿ ಬಿಂಬಿಸುವುದೇ ಹಾಸ್ಯವೆಂದುಕೊಳ್ಳುವ ಅಪಾಯವೇ ಹೆಚ್ಚು.

ರಂಗದಲ್ಲಿ ಇತರ ಪಾತ್ರಗಳಿಗಿಂತ ಹಾಸ್ಯಪಾತ್ರವೊಂದೇ ರಸಭಾವಾಭಿವ್ಯಕ್ತಿಯ ಚೈತನ್ಯವನ್ನು ಉಂಟುಮಾಡಬಲ್ಲುದಾಗಿದೆ. ಆದರೆ ಉತ್ತಮ ಮಟ್ಟದ ಹಾಸ್ಯವನ್ನು ಪ್ರಸ್ತುತಪಡಿಸುವುದು ಅಥವಾ ಹಾಸ್ಯಗಾರನಾಗುವುದೆಂದರೆ ಅಷ್ಟು ಸುಲಭದ ಮಾತಲ್ಲ. ಇದಕ್ಕೆ ನಾಲ್ಕು ಪ್ರಮುಖ ಅಂಶಗಳ ನಿರ್ದೇಶನವಿದ್ದು, ಶಾಸ್ತ್ರನಿಯಮವಾಕ್ಯದಲ್ಲಿ ಇದನ್ನು ಹೇಳುವುದಾದರೆ ‘ಏಕದೇಶವಿದ್ಯಸ್ತು ಕ್ರೀಡನಕೋ ವಿಶ್ವಾಸ್ಯಶ್ಚ ವಿದೂಷಕಃ | ವೈಹಾಸಿಕೋ ವಾ’ (ವಾತ್ಸಾಯನ ಕಾಮಸೂತ್ರ-ಅಧಿಕರಣ ೧, ಅಧ್ಯಾಯ ೪, ಸೂತ್ರ ೩೩)-ಅಂದರೆ ಏಕದೇಶವಿದ್ಯೆಯನ್ನು (ನೃತ್ಯಗೀತ ವಾದ್ಯ ಇತ್ಯಾದಿ ೬೪ ಕಲೆಗಳಲ್ಲಿ ಕೆಲವು ಕಲೆಯಲ್ಲಾದರೂ ನಿಪುಣನಾಗಿರುವುದು) ಅಭ್ಯಾಸ ಮಾಡಿರಬೇಕು, ಸಂದರ್ಭಕ್ಕನುಗುಣವಾದ ಕ್ರೀಡಾದಿಗಳನ್ನು (ಹಾಸ್ಯ) ಮಾತಿನ ಮೂಲಕ ಅಥವಾ ಆಂಗಿಕಾಭಿನಯದ ಮೂಲಕ ಕೊಡಬೇಕು, ವಿಶ್ವಾಸಪಾತ್ರನಾಗಿರಬೇಕು ಎಂಬಲ್ಲಿಗೆ ಕೆಟ್ಟಭಾಷೆ, ಅಶ್ಲೀಲತೆಯನ್ನು ಪ್ರಯೋಗ ಮಾಡದೆ ಇರುವ ಖಚಿತತೆ ಬೇಕು, ವೈಹಾಸಿಕ ಅಂದರೆ ಸದಾ ಉತ್ಸಾಹ, ನಗುವಿಕೆ.. ಇಂತಹ ಭಾವಾನುಭಾವ ಸ್ಥಾಯಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತನ್ನ ಪ್ರತಿಭಾಶಕ್ತಿಯಿಂದ ತೋರಿಸುತ್ತಲೇ ಇರಬೇಕು. ಇನ್ನು ವಿದೂಷಕನಾಗಲು ಯಾವ ಪಾತ್ರಗಳು ಸೂಕ್ತ ಎಂಬುದನ್ನು ‘ಭಿಕ್ಷುಕ್ಯಃ ಕಲಾವಿದಗ್ಧಾ’ ಎಂಬ ಸೂತ್ರದಿಂದ ಪ್ರಾರಂಭಗೊಳ್ಳುವ ವಿಚಾರಗಳು ಪುಷ್ಠೀಕರಿಸುತ್ತದೆ. (ವಾತ್ಸಾಯನ ಕಾಮಸೂತ್ರ-ಅಧಿಕರಣ ೧, ಅಧ್ಯಾಯ ೪, ಸೂತ್ರ ೩೫) ಅಂದರೆ ಭಿಕ್ಷುಕ ಪಾತ್ರಗಳು, ಸಂನ್ಯಾಸಿ ಪಾತ್ರಗಳು, ವೇಶ್ಯೆಯರ ಪಾತ್ರಗಳು ವಿಶೇಷವಾಗಿ ಹಾಸ್ಯವನ್ನು ಕಲಾಪ್ರೌಢಿಮೆಯಿಂದ ನಿರ್ವಹಿಸಬೇಕು.

ಯಕ್ಷಗಾನ ಇತ್ಯಾದಿ ಕಲೆಗಳಲ್ಲಿ ಕಲಾಪ್ರೌಢಿಮೆಗಿಂತ ಮಾತಿನ ಪ್ರೌಢಿಮೆಗೇ ಇಂದು ಕಲಾವಿದರು, ಕಲಾಸಕ್ತರು ನೆಚ್ಚಿಕೊಂಡಿರುವುದೂ ಕೂಡಾ ಹಾಸ್ಯಗಾರರ ಹಾಸ್ಯದ ಮೇಲೆ ಒತ್ತಡ ಬೀಳಲು ಪ್ರಮುಖ ಕಾರಣವಾಗಿದೆ. ಮಾತಿನ ಮೂಲಕ ಪ್ರೇಕ್ಷಕರಲ್ಲಿ ನಗೆಯುಕ್ಕಿಸಬೇಕು ಎಂಬ ಅನಿವಾರ್ಯತೆಯಿದೆ. ಇಲ್ಲದಿದ್ದರೆ ವೈಕೃತ್ಯಕ್ಕೆ, ಮಾಂತ್ರೀಕರಣಕ್ಕೆ, ಡೊಂಬರಾಟಕ್ಕೆ ಕಲಾವಿದರು ಇಳಿಯುತ್ತಾರೆ. ಅದರಲ್ಲೂ ನಾವು ಸಾಮಾನ್ಯವಾಗಿ ವಿದೂಷಕನನ್ನು ಮಾತ್ರ ಹಾಸ್ಯದ ಸ್ಥಾನದಲ್ಲಿ ನಿಲ್ಲಿಸಿದ್ದೇವೆ. ವಸ್ತುತಃ ಈ ಭಾವವನ್ನು ಅನುಸರಿಸುವ ಪಾತ್ರವು ಮುಖ್ಯ ಉಪಯುಕ್ತತೆಯನ್ನು ಪ್ರತಿಪಾದಿಸುತ್ತದೆಯಷ್ಟೇ ! ಅಷ್ಟಕ್ಕೂ ವಿದೂಷಕರ ಕೆಲಸವೆಂಬುದು ವೇಶ್ಯೆಯರ, ನಾಗರಿಕರ, ಮಂತ್ರಿಗಳ ಮಧ್ಯೆ ಸಂಧಿವಿಗ್ರಹವನ್ನುಂಟುಮಾಡುವುದು ಎಂಬರ್ಥದಲ್ಲೇ ಸಲ್ಲುತ್ತದೆ. ‘ಏತೇ ವೇಶಾನಾಂ ನಾಗರಕಾಣುಂ ಚ ಮಂತ್ರಿಣಃ ಸಂಧಿವಿಗ್ರಹನಿಯುಕ್ತಾಃ (ವಾತ್ಸಾಯನ ಕಾಮಸೂತ್ರ-ಅಧಿಕರಣ ೧, ಅಧ್ಯಾಯ ೪, ಸೂತ್ರ ೩೪). ಅಂದರೆ ಉಳಿದ ಪಾತ್ರಗಳೂ ಸರಿಯಾದ ರಸಪೋಷಣೆಗೆ ಸಹಕರಿಸಿ ಹೊಂದಿಕೊಂಡರೆ ಸ್ವಲ್ಪಮಟ್ಟಿನ ಹಾಸ್ಯವೂ ಕೂಡಾ ಉತ್ತಮ ಹಾಸ್ಯವಾಗಿ ರಂಜಿಸಬಹುದು ಎಂಬುದು ಇದರ ಮರ್ಮ. ಅದಿಲ್ಲದೆ ಇನ್ನಿತರ ಪಾತ್ರಗಳು ಏನೂ ಸಹಕರಿಸದೇ ಹಾಸ್ಯಪಾತ್ರವೊಂದೇ ರಸಪೋಷಣೆಗೆ ಒದ್ದಾಡಿದರೆ ಆಗ ಹಾಸ್ಯದೊಂದಿಗೆ ಅಪಹಾಸ್ಯವೂ ಸೇರಿ ಸಾರ್ವಜನಿಕವಾಗಿ ವಿಮರ್ಶೆಯ ಕಟಕಟೆಯನ್ನು ಏರುತ್ತದೆ. ಅದರಲ್ಲೂ ಅಷ್ಟಕ್ಕೂ ಸರಳರೇಖೆಯಲ್ಲಿ ನಡೆಯುವ ವಿಮರ್ಶೆಯು ವಿಮರ್ಶಿಗರಿಗಷ್ಟೇ ಆಹಾರವಾದೀತೇ ವಿನಾ; ಹಾಸ್ಯಕ್ಕಾಗಲೀ ಹಾಸ್ಯಗಾರರಿಗಾಲೀ, ಹಾಸ್ಯರಸಕ್ಕಾಗಲೀ ಪರಿಪೋಷಣೆ ನೀಡಿದ ಸಂಗತಿ ತೀರಾ ಅಪರೂಪ.

ಇನ್ನು ಯುದ್ಧಾದಿ ಸಂದರ್ಭಗಳಲ್ಲಿ ಅಥವಾ ನಾಯಕ-ನಾಯಿಕೆಯರ ಮಧ್ಯೆ ಹಾಸ್ಯಗಾರನ ಪಾತ್ರ ಬಂದರಂತೂ ರಸಭಾವಪೋಷಣೆಗೆ ಭಂಗ ಆಗಿಯೇ ತೀರುತ್ತದೆ. ಆಗೆಲ್ಲಾ ಹಾಸ್ಯಗಾರನು ತನ್ನ ಮಿತಿಯನ್ನು ಮೀರಬೇಕಾಗುತ್ತದೆ. ಅದರಲ್ಲೂ ನಾಯಕನಾದವನು ಈ ಭಾವವುಳ್ಳ ಪಾತ್ರದ ಮೂಲಕ ಸಂಧಿವಿಗ್ರಹ ಕಾರ್ಯವನ್ನು ನಿರ್ವಹಿಸಿಕೊಳ್ಳುವುದೂ ಹಾಸ್ಯರಸದ ಪ್ರಧಾನ ಪರಿಪೋಷಣೆಯ ಮಾರ್ಗ. ಒಟ್ಟಿನಲ್ಲಿ ಯುಕ್ತ ಸಮಯಕ್ಕೆ ಹಾಸ್ಯಗಾರನ ಪಾತ್ರವು ರಂಗದಲ್ಲಿ ಬಂದರೆ ಮಾತ್ರ ರಸಪೋಷಣೆ ಹೊಂದಲು ಸಾಧ್ಯ.

( ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಮುಖ್ಯ ಸಂಶೋಧನಾಧಿಕಾರಿ, (ಯುಜಿಸಿ ಮೇಜರ್ ರೀಸರ್ಚ್ ಪ್ರೊಜೆಕ್ಟ್)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ಬೆಳ್ತಂಗಡಿ.)

 

Leave a Reply

*

code