ಅಂಕಣಗಳು

Subscribe


 

ಅರ್ಜುನ ಐರಾವತ ತಂದದ್ದು ವಿಶೇಷವೇನೂ ಅಲ್ಲ!!

Posted On: Wednesday, June 15th, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ


ಯಾವುದೇ ಯಕ್ಷಗಾನ ಪ್ರಸಂಗವನ್ನು ರಾತ್ರಿಯಿಡೀ ಕುಳಿತು ನೋಡಿ, ತಾಳಮದ್ದಳೆಯನ್ನು ಸಾಧ್ಯಂತವಾಗಿ ಗಮನಿಸಿ. ಜನ ಹೆಚ್ಚು ಪ್ರತಿಕ್ರಿಯಿಸುವುದು ಹಾಗೂ ಖುಷಿಪಡುವುದು ಹಾಸ್ಯ ಪಾತ್ರಕ್ಕೆ! ಹಾಸ್ಯ ಅನ್ನುವುದು ಯಕ್ಷಗಾನಗಳಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂತಿರುವುದು ಮತ್ತು ಹಾಗೆಯೇ ಇರಬೇಕಾದದ್ದು ಹೌದಾದರೂ ಉಪ್ಪಿನಕಾಯಿಯೇ ಇಲ್ಲದಿದ್ದರೆ ಊಟ ರುಚಿಸುವುದಿಲ್ಲ ಅನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಹಾಗಾಗಿಯೇ ಹಾಸ್ಯ ಕಲಾವಿದರಿಗೆ ಸಾಕಷ್ಟು ಗೌರವವಿದೆ. ಅದರಲ್ಲೂ ಕೆಲವೊಂದು ನಗರಗಳಲ್ಲಿ ನಗುವುದಕ್ಕಂತಲೇ ಒಂದೊಂದು ಕ್ಲಬ್ ಸ್ಥಾಪನೆಯಾಗಿರುವುದನ್ನು ಎಣಿಸುವಾಗ ಯಾರಿಗೇ ಆದರೂ ನಗು ಬರದಿರದು! ಹೀಗಾಗಿಯೇ ಎಲ್ಲರನ್ನೂ ಸಹಜವಾಗಿ ನಕ್ಕು ನಗಿಸುವ ಹಾಸ್ಯ ಕಲಾವಿದರನ್ನು ಎಲ್ಲರೂ ಮೆಚ್ಚಲೇಬೇಕು.

ಆದರೂ ಈಗೀಗಿನ ಕೆಲವು ಅಸಂಬದ್ಧ ಹಾಸ್ಯಗಳನ್ನು ಕೇಳಿಸಿಕೊಳ್ಳುವಾಗ ವೇದನೆಯಾಗುತ್ತದೆ. ನಗಿಸಬೇಕೆಂಬ ಭರದಲ್ಲಿ ಏನೇನೋ ಹೇಳುವುದು, ಇಂಗ್ಲೀಷ್ ಬಳಸುವುದು, ಕಳಪೆ ಹಾಸ್ಯ ಮಾಡುವುದು ಇತ್ಯಾದಿಗಳನ್ನು ನೋಡುವಾಗ ಕಿರಿಕಿರಿಯೆನಿಸುತ್ತದೆ. ಆದರೆ ಬೆರಳೆಣಿಕೆಯ ಇಂತಹ ಹಾಸ್ಯ ಕಲಾವಿದರನ್ನು ಬದಿಗಿರಿಸಿದರೆ ಈಗಲೂ ಅನೇಕಾನೇಕ ಯೋಗ್ಯ ಹಾಸ್ಯ ಪಾತ್ರಧಾರಿಗಳಿದ್ದಾರೆನ್ನುವುದು ನಮಗೆಲ್ಲರಿಗೂ ತೃಪ್ತಿ ಕೊಡುವ ಸಂಗತಿ. ಕೆಲವೊಬ್ಬರ ಹಾಸ್ಯ ಕೇಳುವಾಗ ಬಿದ್ದು ಬಿದ್ದು ನಗುವಂತಾಗುತ್ತದೆ. ಯೋಗ್ಯ ಹಾಸ್ಯ-ನಗು ಯಕ್ಷಗಾನದ ನಡುನಡುವೆ ಹೊಮ್ಮುತ್ತಲೇ ಇರುತ್ತವೆ.

ನಿಮಗೆ ಭಾಗಮಂಡಲದಲ್ಲಿ ವಾಸವಾಗಿರುವ ಮಹಾಬಲ ಭಟ್ ಅನ್ನುವ ಹಾಸ್ಯ ಕಲಾವಿದನ ಬಗೆಗೆ ಗೊತ್ತಿರಬಹುದು. ಪ್ರಸ್ತುತ ಸಂದರ್ಭದ ಉತ್ತಮ ಹಾಸ್ಯ ಕಲಾವಿದರಲ್ಲಿ ಅವರೂ ಒಬ್ಬರೆನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಹಾಗಾಗಿ ಅವರ ಪರಿಚಯ ನಾನು ಮಾಡಿಕೊಡಬೇಕಿಲ್ಲ. ಬದಲಿಗೆ ಅವರ ಹಾಸ್ಯದ ತುಣುಕುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಸುಮ್ಮನೇ ಸಂದರ್ಭಗಳನ್ನು ಊಹಿಸಿಕೊಂಡು ಓದಿಕೊಳ್ಳಿ. ಖುಷಿಯಾದೀತು.

ರಾಮನ ವಧೆಗಾಗಿ ರಾವಣ ತನ್ನ ಮಿತ್ರನಾದ ಮೈರಾವಣನನ್ನು ನೆನೆದು ಆಸ್ಥಾನಕ್ಕೆ ಬರಲು ಆಹ್ವಾನಿಸುತ್ತಾನೆ. ಮೈರಾವಣನನ್ನು ಅರಮನೆಯ ದ್ವಾರದಿಂದ ಕಾವಲು ಭಟ ರಾವಣನೆಡೆಗೆ ಕರೆತರುತ್ತಾನೆ. ಮೈರಾವಣನ್ನು ಕಂಡದ್ದೇ ತಡ ರಾವಣ ಸಿಂಹಾಸನದಿಂದಿಳಿದು ಮೈರಾವಣನಲ್ಲಿ ಮಿತ್ರಾ ಆಸೀನನಾಗು ಎನ್ನುತ್ತಾನೆ. ಆಗ ಮೈರಾವಣ ಗೆಳೆಯಾ ನಾವಿಬ್ಬರೂ ಸ್ನೇಹಿತರಾದರೂ ನೀನೀ ಪುರದ ಅರಸ. ಹಾಗಾಗಿ ನಿನ್ನ ಸಿಂಹಾಸನವನ್ನು ನಾನೇರಲಾರೆ, ನೀನು ಆಸೀನನಾಗು ಎನ್ನುತ್ತಾನೆ. ಆದರೆ ರಾವಣ ಪುನಃ ಒತ್ತಾಯಿಸುತ್ತಾನೆ. ಮೈರಾವಣ ನಿರಾಕರಿಸುತ್ತಾನೆ. ಹೀಗೆ ರಾವಣ ಪದೇ ಪದೇ ಒತ್ತಾಯಿಸುವುದು ಮೈರಾವಣ ನಿರಾಕರಿಸುವುದು ನಡೆಯುತ್ತಲೇ ಇರುತ್ತದೆ. ಆಗ ಅಲ್ಲೇ ಇರುವ ದೂತ (ಮಹಾಬಲ ಭಟ್) ಎದುರು ಬಂದು ಇವರಿಬ್ಬರೂ ಆಸೀನರಾಗುವ ಲಕ್ಷಣ ಕಾಣ್ತಾ ಇಲ್ಲ, ಇವ್ರು ಮಾತು ಮುಗಿಸುವವರೆಗೆ ನಾನು ಆಸೀನನಾಗುತ್ತೇನೆ ಎನ್ನುತ್ತಾ ಸಿಂಹಾಸನ ಏರಲು ಹೊರಡುತ್ತಾನೆ. ಈ ಸನ್ನಿವೇಶ ವೀಕ್ಷಕರಲ್ಲಿ ಎಂತಹ ನಗು ಉಕ್ಕಿಸುತ್ತದೆಯೆಂದರೆ ಆ ನಗುವಿನಲ್ಲಿ ಯಾತನೆ ಇರುವುದಿಲ್ಲ!

ಹಾಗೆಯೇ ಇನ್ನೊಂದು ಸಂದರ್ಭ. ಪ್ರಮೀಳಾರ್ಜುನ ಕಾಳಗದ ಅಂತಿಮ ಹಂತದಲ್ಲಿ ಅರ್ಜುನನಿಗೆ ಅಶರೀರವಾಣಿಯೊಂದು ಕೇಳಿಸುತ್ತದೆ. ಆ ಅಶರೀರವಾಣಿ ಅರ್ಜುನಾ ಯುದ್ಧ ನಿಲ್ಲಿಸು, ಸಂಧಾನ ಮಾಡಿಕೋ ಅನ್ನುತ್ತದೆ. ಆಗ ಅರ್ಜುನ ತನ್ನ ದೂತನಲ್ಲಿ ಅರೆ, ಯಾರೋ ಮಾತಾಡಿದಂತಾಯಿತಲ್ಲ? ಯುದ್ಧ ನಿಲ್ಲಿಸು, ಸಂಧಾನ ಮಾಡಿಕೋ ಅಂದಂತಾಯಿತಲ್ಲ? ಅನ್ನುತ್ತಾನೆ. ಆಗ ದೂತ ಹೌದು ಹೌದು ಯುದ್ಧ ನಿಲ್ಲಿಸು ಸಂತಾನ ಮಾಡಿಕೋ ಅಂತ ನನಗೂ ಕೇಳಿತುಅನ್ನುವಾಗ ಸಭಾಂಗಣದ ತುಂಬಾ ನಗೆ ತುಂಬದಿರುತ್ತದೆಯೇ?

ಹಾಗೆಯೇ ಗಂಭೀರ ಪಾತ್ರಗಳಲ್ಲೂ ಕೆಲವೊಮ್ಮೆ ಆರೋಗ್ಯಕರ ಹಾಸ್ಯ ಮೂಡಿಬರುವುದುಂಟು. ಯಾವುದೋ ಒಂದು ಪ್ರಸಂಗದಲ್ಲಿನ ಸಂದರ್ಭವೊಂದರ ಮಾತುಕತೆಯನ್ನು ಗಮನಿಸಿ. ಇದನ್ನು ಯಾರು ಹೇಳಿದ್ದು ಅಂತಲೂ ನನಗೀಗ ನೆನಪಿಲ್ಲ. ಘಟನೆ ಮಾತ್ರ ಉಲ್ಲೇಖಿಸಬಲ್ಲೆ. ಅರ್ಜುನ ಮತ್ತು ಓರ್ವ ಅರಸನ ನಡುವಿನ ಯುದ್ಧ. ಅರ್ಜುನ ಯುದ್ಧದ ಸಂದರ್ಭದಲ್ಲಿ ತಾನು ಈ ಹಿಂದೆ ಗೈದ ಮಹಾನ್ ಸಂಗತಿಗಳ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಗಜಗೌರಿ ವ್ರತ ಮಾಡಬೇಕೆಂದು ತಾಯಿ ಬಯಸಿದ್ದೇ ತಡ ಊರಿಂದ ಅಲ್ಲ, ಪಕ್ಕದೂರಿಂದ ಅಲ್ಲ ಇಂದ್ರನೂರಿನಿಂದ ಐರಾವತವನ್ನೇ ಕೆಳಗಿಳಿಸಿ ತಂದವ ನಾನು ಅನ್ನುತ್ತಾನೆ. ತಕ್ಷಣ ತಡೆದ ಎದುರು ಪಾತ್ರಧಾರಿ

ಏನು ನೀನು ಐರಾವತವನ್ನು ತಂದೆಯಾ?

ಹೌದು

ಐರಾವತ ಇರುವುದೆಲ್ಲಿ?

ಸ್ವರ್ಗಲೋಕದಲ್ಲಿ

ಸ್ವರ್ಗದ ಅಧಿಪ ಯಾರು?

ದೇವೇಂದ್ರ

ಆ ದೇವೇಂದ್ರ ಸಂಬಂಧದಲ್ಲಿ ನಿನಗೇನಾಗ್ಬೇಕು?

ಅಪ್ಪ

ಥತ್, ಅಪ್ಪನ ಮನೆಯಲ್ಲಿದ್ದ ಒಂದು ಆನೆಯನ್ನು ತಂದ್ರೆ ಅದು ಮಹಾ ಸಾಧನೆಯಾ? ಅದೂ ಒಂದೇ ಒಂದು ಬಾರಿ ತಂದದ್ದಕ್ಕೆ ಇಷ್ಟೆಲ್ಲಾ ಮಾತಾಡ್ತಿ ಅಲ್ವಾ? ಇಕಾ, ನನ್ನಪ್ಪನ ಮನೆಯಲ್ಲಿರ್ಬೇಕಿತ್ತು, ಒಂದು ಸಲ ಅಲ್ಲ, ಎರಡು ಸಲ ಅಲ್ಲ, ವಾರಕ್ಕೆ ಮೂರು ಸಲ ಆನೆ ಬಂದು ಹೋಗ್ತಿತ್ತು. ಬಿಡು ಬೇರೇನಾದ್ರೂ ನೀನು ಸಾಧನೆ ಅಂದುಕೊಂಡದ್ದಿದ್ರೆ ಹೇಳು, ಕೇಳೋಣ

ನಗುವುದಕ್ಕೆ ಯಕ್ಷಗಾನದಲ್ಲಿ ಎಷ್ಟೊಂದು ಅವಕಾಶಗಳಿವೆ ಮಾರಾಯ್ರೇ?

 

Leave a Reply

*

code