ಅಂಕಣಗಳು

Subscribe


 

ಯಕ್ಷಗಾನ ಕೋವಿದ ಪಾರ್ತಿಸುಬ್ಬನ ಕಾವ್ಯಾನುಭಾವ

Posted On: Wednesday, June 14th, 2017
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಕರ್ನಾಟಕದ ಅಷ್ಟೇ ಅಲ್ಲ, ಭಾರತೀಯ ಅವಿಗಳಿಗೆ, ತಮ್ಮ ಅಧಿಕೃತ ಪರಿಚಯವನ್ನು ತಮ್ಮದೇ ಕೃತಿಗಳಲ್ಲಿ ಪಾಲಿಸುವಲ್ಲಿ ಅದೇಕೋ ಉತ್ಸಾಹವಿಲ್ಲ. ಯಾವ ಕಾವ್ಯವನ್ನು ಕೈಗೆತ್ತಿಕೊಂಡು ಕವಿ-ಕಾವ್ಯ-ದೇಶ ಕಾಲದತ್ತ ಕಣ್ಣು ಹಾಯಿಸಿದರೂ ಮುಕ್ಕಾಲುಪಾಲು ಊಹಾಪೋಹಗಳೇ ಇರುತ್ತವೆ. ಕಾಲವಂತೂ ‘ಸುಮಾರು’ ಎನ್ನುವ ವಿಶೇಷಣದಿಂದಲೇ ಮೊದಲಾಗಬೇಕು. ಕನಿಷ್ಠ ಎಂದರೂ ಎರಡರಿಂದ ನಾಲ್ಕು ಶತಮಾನಗಳಷ್ಟು ಜಗ್ಗಾಡಬೇಕು. ಇನ್ನು ಕವಿಯ ದೇಶದ ಕುರಿತು ಆ ಕೃತಿಯೊಳಗಡೆ ಅಲ್ಲಲ್ಲಿ ಸಾಂದರ್ಭಿಕವಾಗಿಯೋ ಸಾಹಜಿಕವಾಗಿಯೋ ಬರುವ ಯಾವುದೇ ದೇವತಾಸ್ತುತಿ ಇಲ್ಲವೇ ಊರಿನ ಉಲ್ಲೇಖವನ್ನೇ ಹಿಡಿಗಳ ಮಾಡಿ ತೂಗಬೇಕು. ಇನ್ನು ಕೆಲವು ಕವಿಗಳಿಗೆ ತಮ್ಮ ಹೆಸರು ವಂಶ ದೇಶನಾಮಗಳನ್ನು ಶ್ಲೇಷೆಯಲ್ಲಿ ಹೇಳುವುದರಲ್ಲೇ ಪರಮಚಾಪಲ್ಯ. ಉದಾ : ಕೊಡಸೆ ಬುಡ| ಗಿರಿಜೆ ನಡು| ಗಂಗೆ ತುದಿ ನೋಡೆ | ಒಡನೂರ ಪೆಸರಕ್ಕು ಅದ ಸಂಜ್ಞೆ ನೋಡೆ. ಹೀಗೆ ಇನ್ನಿನ್ನೂ ವಿಳಾಸವನ್ನು ಕಗ್ಗಂಟು ಮಾಡುವುದರಲ್ಲಿ ಆ ಕವಿಗಳಿಗೆ ಏನೋ ಒಂದು ಕೀಟಲೆತನ. ಕಾಳಿದಾಸನಂತಹ, ಅಕಿಂಚನನ್ನೆನಿಸಿಕೊಂಡು ಮರೆಯಲ್ಲಿ ಉಳಿವ ಕೃತಕೃತ್ಯನಿಗೆ ‘ಕವಿಯಲ್ತು ಕಾವ್ಯಂ ಸಲ್ಗುಂ’ ಎಂಬ ನಿರ್ಮಮ ಕಾವ್ಯಶ್ರದ್ಧೆ. ಇಷ್ಟಕ್ಕೂ ಕಾವ್ಯಕೃತಿ ಕೈಯಲ್ಲಿರುವಾಗ ಕವಿಯ ಜಾತಕದ ಬಗ್ಗೆ ಕುತೂಹಲ ಯಾಕೆ ಎಂಬ ಪ್ರಶ್ನೆಯೂ ಉಚಿತವಾದ್ದೇ. ಆ ಕವಿಗಳಿಗೇ ಇಲ್ಲದ ಆತ್ಮಮೋಹದ ಚಿಂತೆ ನಮಗ್ಯಾಕೆ? ಕೃತಿಕಾರನ ಹೆಸರಿನ ಮಹಿಮೆಯಿಂದ ಕೃತಿಯನ್ನು ಮೆರೆಸಬೇಕಾಗಿಲ್ಲ, ಸತ್ತ್ವ ಇದ್ದರೆ ಸತ್ಯ ಉಳಿಯುತ್ತದೆ, ಸೌಂದರ್ಯ ಬೆಳಗುತ್ತದೆಂಬ ಉದಾತ್ತ ಆಶಯ ಈ ನೆಲದ ಕವಿಪುಂಗವರದ್ದು. ಇಂಥ ಕವಿಪಂಕ್ತಿಯ ಒಂದು ಪ್ರತಿಭಾಪ್ರಸೂನವೇ ಪಾರ್ತಿಸುಬ್ಬ.

‘ಇವನಾರವ ಇವನಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ ಎನ್ನಿರಿ ’- ಅನ್ನೋದೊಂದೇ ಪಾರ್ತಿಸುಬ್ಬನ ಕುರಿತು ಮೊತ್ತಮೊದಲು ಹೇಳಿಕೊಳ್ಳಬೇಕಾದ ಮಾತು. ಪಾರ್ತಿಸುಬ್ಬ ಎಂಬ ನಾಮಾಂಕಿತದಿಂದ ಪ್ರಚಲಿತನೂ ಪ್ರಸಿದ್ಧನೂ ಆದ ವ್ಯಕ್ತಿಯು ಸುಮಾರು ೧೧ ಯಕ್ಷಗಾನ ಗೇಯಪ್ರಬಂಧವನ್ನು ರಚಿಸಿದ ಕವಿ. ಯಕ್ಷಗಾನದ ಗೇಯಸಾಹಿತ್ಯವನ್ನು ಪ್ರಸಂಗ ಎನ್ನುವುದು ರೂಢಿ. ನೃತ್ಯಕ್ಷೇತ್ರದಲ್ಲಿರುವ ಜಾವಳಿಗಳನ್ನು ಹೋಲುವ ರಂಗಪಠ್ಯವಿದು. ಒಂದು ಕತೆಯನ್ನು ಆಧರಿಸಿ ಇಡೀ ಕಥಾವಸ್ತುವನ್ನು ಛಂದೋಬದ್ಧವಾದ sಛಿಡಿeeಟಿಠಿಟಚಿಥಿ -ಜಚಿiಟogueಗಳಲ್ಲಿ ರಚಿಸುವುದೇ ಕವಿಯ ಕೆಲಸ. ಪ್ರಸಂಗದ ಪದ್ಯಗಳು ತಾಳ ನಿರ್ವಹಣೆಯ ಚೌಕಟ್ಟಿನೊಳಗಿದ್ದು ಪ್ರಾಚೀನ ಕನ್ನಡ ಕಾವ್ಯಗಳ ಪ್ರಾಸಾದಿ ನಿಯಮಗಳನ್ನು ತಮಗೆ ತಾವೇ ಹೇರಿಕೊಂಡು ಮಾರ್ಗದ ಶಿಸ್ತನ್ನು ಅನುಸರಿಸಿದರೂ, ಪದ್ಯಸಾಹಿತ್ಯ ಬಹುತೇಕ ಜನಪದರೂಪದ ದೇಶೀಶೈಲಿಯಲ್ಲಿರುತ್ತದೆ. ಹಾಗಾಗಿ ಯಕ್ಷಗಾನ ಕವಿಗೆ ಪೂರ್ವಸೂರಿಗಳ ಕಾವ್ಯಾಭ್ಯಾಸ ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ. ಲಯದ ಕುರಿತು ತಿಳಿವಳಿಕೆ, ರಂಗಾನುಭವ, ಒಂದಷ್ಟು ಕತೆಯ ಮೂಲ ಮಾಹಿತಿ- ಇಷ್ಟಿದ್ದರೆ ಸೊಗಸಾದ ಪದ್ಯ ಬರೆವ ಅಭಿಜಾತಪ್ರತಿಭೆ ಅವನಿಂದ ಪ್ರಸಂಗ ಬರೆಸುತ್ತದೆ. ಪಾರ್ತಿಸುಬ್ಬನೆಂದು ಖ್ಯಾತನಾದ ಕವಿ ಈ ಜಾತಿಗೆ ಸೇರಿದವ. ತನ್ನ ಕುರಿತು ಸುಳುಹಿನ ತೆಳುಗೆರೆಯನ್ನೂ ಉಳಿಸಲಿಲ್ಲ ಈ ಪುಣ್ಯಾತ್ಮ. ಶತಮಾನಗಳಿಂದ ಪಾರ್ತಿಸುಬ್ಬ ಎಂಬ ಚತುರಕ್ಷರ ಚತುರಕವಿಯ ಹೆಸರು ಕಾಸರಗೋಡಿನಿಂದ ಗೋಕರ್ಣದ ವರೆಗೂ ಜನಜನಿತವಾಗಿದೆ.

ಧಾತ್ರೀಗುತ್ತಮ ಕಣ್ವನಾಮಪುರದೀ ನಿಂತಿರ್ದ ಶ್ರೀಕೃಷ್ಣನಾ

ತತ್ಪಾಂದಂಬುಜ ದಿವ್ಯನಾಮವರದಿಂದೀ ಪಾರ್ವತೀನಂದನಂ

ಬತ್ತೀಸಾಕೃತಿತಾಳರಾಗ ವಿಧಧಿಂ ರಾಮಾಯಣಂ ಪೇಳ್ವುದಾ

ಭಕ್ತಿಧ್ಯಾನದಿ ಕೇಳ್ದು ಪುಣ್ಯಕಥೆಯಂ ಸಂತೋಷಮಂ ಮಾಳ್ಪುದು

ಪಂಚವಟೀ ಪ್ರಸಂಗದ ನಾಂದೀಪದ್ಯಗಳಲ್ಲಿ ಬರುವ ಇದೊಂದು ಪದ್ಯ ಹಾಗೂ ಇತರ ಪ್ರಸಂಗಗಳ ಮುಕ್ತಾಯದ ಮಂಗಲಪದ್ಯದಲ್ಲಿ ಬರುವ ‘ಸಲಹಲಿ ಕಣ್ವಪುರದೊಡೆಯ ಶ್ರೀಕೃಷ್ಣ’ ಎನ್ನುವ ಸಾಲು ಹಾಗೂ ಕೃಷ್ಣಚರಿತೆ, ಐರಾವತ ಪ್ರಸಂಗಗಳಲಿ ನಡುನಡುವೆ ಕಾಣಿಸುವ ‘ಕಣ್ವಪುರದ ಗೋಪಾಲ’ ಎನ್ನುವ ಅಂಕಿತಗಳ ಪ್ರಥಾಮಾಧಾರದಲ್ಲಿ ಈ ಕೃತಿಗಳ ಕರ್ತೃ ಕಣ್ವಪುರದವ ಅಂದರೆ ಈಗಿನ ಕುಂಬಳೆಯವ, ಈತನ ಕಾಲ ಸುಮಾರು ೧೭೬೦-೧೮೨೦ರ ಅವಧಿಯ ವರೆಗೆ ಎಂಬುದಾಗಿ ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ವೆಂಕಪ್ಪ ಶೆಟ್ಟಿ, ಕುಕ್ಕಿಲ ಕೃಷ್ಣಭಟ್ ಮುಂತಾದ ಹಲವು ಶೋಧಕರು ನಿರ್ಧರಿಸಿದ್ದಾರೆ. ಕರ್ನಾಟಕ ಕವಿಚರಿತ್ರೆಯ ೨ನೇ ಸಂಪುಟದಲ್ಲೂ ಇದೇ ಅಭಿಪ್ರಾಯ ದಾಖಲಗಿದೆ.

ಕುಂಬಳೆಗೆ ಕಣ್ವಪುರ, ಕಣಿಪುರ, ಕಣ್ಯೂರು ಎನ್ನುವ ಹೆಸರು ಚಾಲ್ತಿಯಲ್ಲಿತ್ತು. ಕುಂಬಳೆಯಲ್ಲಿ ಪ್ರಾಚೀನವಾದ ಗೋಪಾಲಕೃಷ್ಣ ದೇವಸ್ಥಾನವೂ ಇದೆ. ಹಾಗಾಗಿ ಊರು ಹಾಗೂ ಹೀಗೂ ಈಗಿನ ಕೇರಳರಾಜ್ಯದ ಕಾಸರಗೋಡು ತಾಲ್ಲೂಕಿನ ಕುಂಬಳೆ –ಅಂತ ಒಪ್ಪಲಾಗಿದೆ. ಆ ದೇವಳದಲ್ಲಿ ಸ್ಥಾನಿಕ ಅಥವಾ ಪಾಟಾಳಿ(ಪಾಡಾಳಿ)ಯಾಗಿದ್ದವ ಸುಬ್ಬ. ಪಾಡಾಳಿ ಎಂದರೆ ಹಾಡುವವ. ದೇವಸ್ಥಾನಗಳಲ್ಲಿ ಪ್ರಧಾನ ಅರ್ಚಕರಿಗೆ ಸಹಾಯಕರಾಗಿ ಪೂಜಾಕೈಂಕರ್ಯದಲ್ಲಿ ತೊಡಗಿರುವವರು ಪಾಟಾಳಿಗಳು. ಅವರಿಗೆ ದೇವತಾಸ್ತುತಿಯನ್ನು ಹಾಡುವುದು ಕಡ್ಡಾಯ ಕೆಲಸ. ಈಗಲೂ ಸಹ ಈ ವರ್ಗದ ಜನರಿಗೆ ಯಕ್ಷಗಾನ ಎಂಬುದು ಆಡುಂಬೊಲ. ಮುದ್ದಣಕವಿ ಈ ಸಮುದಾಯದವನೇ. ಪಾರ್ವತಿ ಎಂಬವಳ ಮಗ ಸುಬ್ಬ -ಪಾರ್ತಿಸುಬ್ಬ ಅಂತಲೇ ಈತ ಕರೆಯಲ್ಪಟ್ಟ; ಗುರುತಿಸಲ್ಪಟ್ಟ. ಬಾಲ್ಯದಲ್ಲೇ ಕೇರಳದ ತಿರುವಾಂಕೂರು ಕಡೆ ತಿರುಗಾಡಿ ಕಥಕಳಿಯನ್ನು, ಕೂತ್ತುಕ್ಕುಳಿ ಕೂಡಿಯಾಟ್ಟಂನ್ನು ಕಂಡು, ಅದರ ಸಾಹಿತ್ಯವನ್ನು, ರಂಗಪ್ರಯೋಗವನ್ನು ಸ್ವಾಯತ್ತೀಕರಿಸಿ ಮತ್ತೆ ಊರತ್ತ ಮರಳಿದ. ಕಥಕಳಿಯ ರಂಗಪಠ್ಯದ ನೆರಳಚ್ಚಲ್ಲೇ ಈತ ಪುತ್ರಕಾಮೇಷ್ಠಿ ಪಟ್ಟಾಭಿಷೇಕ ಪ್ರಸಂಗ ರಚಿಸಿದ್ದಾನೆ. ಆದರೆ ಮುಂದಿನ ಪ್ರಸಂಗಗಳಲ್ಲಿ ಈ ಕವಿಯ ಸ್ವಂತ ನಡೆ, ಜಾಡು ಢಾಳಾಗಿ ಕಾಣುತ್ತದೆ. ಪುತ್ರಕಾಮೇಷ್ಠಿಯಿಂದ ಕುಂಭಕರ್ಣಕಾಳಗದ ತನಕ ಪಾಂಕ್ತವಾಗಿ ರಾಮಾಯಣಪ್ರಸಂಗ ರಚಿಸಿದ್ದರಿಂದ ಈತನನ್ನು ‘ಯಕ್ಷಗಾನದ ವಾಲ್ಮೀಕಿ’ ಅಂತ ಕರಾವಳಿಗರು ಹೆಮ್ಮೆಯಿಂದ ಕರೆಯುತ್ತಾರೆ.

ಇವತ್ತಿಗೂ ರಾಮಾಯಣಸಂಬಂಧಿಯಾದ ಯಕ್ಷಗಾನಕೃತಿಗಳಲ್ಲಿ ಪಾರ್ತಿಸುಬ್ಬನ ಪಠ್ಯಕ್ಕೇ ಅಗ್ರತಾಂಬೂಲ. ಅದಕ್ಕೆ ಮುಖ್ಯಕಾರಣ, ಅವನ ಕೃತಿಗಳ ರಂಗಾನುಕೂಲವಾದ ಸಾಹಿತ್ಯದ ಸರಳ, ಅಭಿನಯಕ್ಕೆ ಅನಾಯಾಸವಾಗಿ ಒಗ್ಗಿಬರುವ ಶಬ್ದಶಕ್ತಿ, ಅವನ ಇಂತಹ ರಚನೆಗೆ ಅವನು ಭಾಗವತನಾಗಿದ್ದ ಎಂಬುದು ಇಂಬಾದದ್ದು. ಭಾಗವತ ಎಂದರೆ ಕೇವಲ ಹಾಡುಗಾರ ಮಾತ್ರ ಅಲ್ಲ, ಇಡೀ ರಂಗವನು ನಿರ್ವಹಿಸುವ, ನಿಯಂತ್ರಿಸುವ ನಿರ್ದೇಶಕ, ಅಂದರೆ ಆಂಗಿಕ-ವಾಚಿಕ-ಆಹಾರ್ಯ-ಸಾತ್ತ್ವಿಕ ಈ ಚತುರಭಿನಯಗಳ ಬೇರುಮಟ್ಟದ ಅನುಭವ-ಅಭ್ಯಾಸ ಅವನಿಗಿರಬೇಕಾಗುತ್ತದೆ. ಪಾರ್ತಿಸುಬ್ಬನಿಗಿರಬಹುದಾದ ರಂಗಪ್ರಜ್ಞೆ, ಅಭಿನಯಕಲ್ಪನೆ, ರಸದೃಷ್ಟಿ ಎಷ್ಟು ಸತ್ತ್ವಪೂರ್ಣ ಎಂಬುದನ್ನು ಅವನ ಕೃತಿಯ ಪದ್ಯಗಳೇ ಹೇಳುತ್ತವೆ.

ಈ ಪಾರ್ತಿಸುಬ್ಬನ ಇತಿವೃತ್ತವನ್ನು, ಅವನ ಹುಟ್ಟು, ಊರು, ಕಾಲಗಳನ್ನು ಡಾ.ಶಿವರಾಮ ಕಾರಂತರು ಸಪ್ರಮಾಣವಾಗಿ ಪ್ರಶ್ನಿಸಿದರು. ಅವನದ್ದೆಂದು ಹೇಳಲಾಗುವ ಪುತ್ರಕಾಮೇಷ್ಠಿ, ಪಟ್ಟಾಭಿಷೇಕ, ಪಂಚವಟಿ, ಉಂಗುರಸಂಧಿ, ಸೇತುಬಂಧನ, ಅಂಗದಸಂಧಾನ, ಕುಂಭಕರ್ಣಕಾಳಗ, ಕುಶಲವ, ಕೃಷ್ಣಚರಿತೆ, ಐರಾವತ, ಸಭಾಲಕ್ಷಣ- ಇವಿಷ್ಟೂ ಕೃತಿಗಳಲ್ಲಿ ‘ಕಣ್ವಪುರ ಕೃಷ್ಣ’ ಅಂಕಿತ ಇದೆ ಅಷ್ಟೇ. ಆದರೆ ಸುಬ್ಬ ಎಂಬ ಹೆಸರು ಎಲ್ಲೂ ಇಲ್ಲ- ಎಂಬಿವೇ ಮುಂತಾದ ಶೋಧನ್ಯೂನತೆಗಳನ್ನು ಹೆಕ್ಕಿ ಹೊರಗೆಸೆದು, ‘ನಾನು ಆತನನ್ನು ಅಜ್ಞಾತಕವಿ ಅಂತಲೇ ಹೇಳುವವ’ ಎಂದು ಹಟ ಸಾಧಿಸಿದರು. ಪಾರ್ತಿಸುಬ್ಬ ಅಂತ ಹೆಸರಿಸಿ ಕುಂಬಳೆಗೆಳೆತಂದ ಬಣದವರು, ಲಾಗಾಯ್ತಿನಿಂದಲೂ ಕರಾವಳಿ ಪ್ರಾಂತದಲ್ಲಿ ಮನೆಮಾತಾಗಿ ಕರ್ಣಾಕರ್ಣೀಯಾಗಿ ಹಬ್ಬಿದ್ದ ಪಾರ್ತಿಸುಬ್ಬನ ದಂತಕತೆ ಆಧರಿಸಿ, ಅದೂ ಒಂದು ಪ್ರಮಾಣ ಅಂತ ದನಿಯೇರಿಸಿದರು. ಒಟ್ಟಿನಲ್ಲಿ ಆರಂಭದಲ್ಲಿಯೇ ಹೇಳೀದಂತೆ ಒಬ್ಬ ಒಳ್ಳೆ ಕವಿಗೆ ಬಯೋಡೇಟಾ ಖಚಿತವಾಗಿ ಸಿಗದೇ ಹೋಯಿತು.

’ನಾಸ್ತಿ ತೇಷಾ ಯಶಃ ಕಾಯೇ ಜರಾಮರಣಜಂ ಭಯಂ’-ಇಂತಹ ಕವಿಗಳು ಯಶಃಶರೀರಿಗಳು. ನಾಮರೂಪಾಧಾರಿತರಲ್ಲ. ಅವರಿಗೆ ಸಾವಿಲ್ಲ. ಈ ಮೌಲಿಕ ಸತ್ಯವನ್ನು, ತಥ್ಯವನ್ನು ಒಪ್ಪಿ ಅಜ್ಞಾತಕವಿಯಾದ ಪಾರ್ತಿಸುಬ್ಬ ಎಂಬವನ ಯಾಕ್ಷಗಾನಿಕವಾದ ಕವಿತಾಸಾಮರ್ಥ್ಯ ಹೇಗೆ ಹದವಾಗಿ ಹಾಳತವಾಗಿ ಹರಿತವಾಗಿತ್ತು ಎಂಬುದನ್ನು ಶುದ್ಧಸಹೃದಯತೆಯಿಂದ ಪರಿಶೀಲಿಸಿ, ಕಾವ್ಯಾನಂದವನ್ನು ಅನುಭವಿಸೋಣ.

ರಾಮಲಕ್ಷ್ಮಣರು ಅಯೋಧ್ಯೆಯಿಂದ ವನವಾಸಕ್ಕೆ ಹೊರಟ ಸಂದರ್ಭ.

ಬಂದರು ರಾಮಲಕ್ಷ್ಮಣರು-ಆನೆ-ಮಂದಿ ಕುದುರೆ ತೇರುಗಳು ಕೂಡೆ ಬರಲು | ಕೇರಿಕೇರಿಯನೆಲ್ಲ ಕಳೆದು |ತಮ್ಮ| ಊರಿದು ಮನೆಯಿದೆಂಬಾ ಭ್ರಮಯುಳಿದು | ಸೇರಿ ನೋಳ್ಪರ ಕಣ್ಣ ಸೆಳೆದು | ಹಾಯ್ವ| ನೀರೊಡನಾಶಾಪಾಶವನೆಲ್ಲ ಹರಿದು ||

ದಶರಥ ಸತ್ತ ರಾಣೀವಾಸದಲ್ಲಿ ದುಃಖದ ಒಡ್ಡು ಮೆಯ್‌ಗಡಿದಿದೆ. ವಸಿಷ್ಠರ ಸಾಂತ್ವನದ ರೀತಿ.

(ಸಾಂಗತ್ಯ) ಬಾಲೆಯರಿರ ಕೇಳಿ ಬಲುಶೋಕದಲಿ ನೀವು | ಗೋಳಿಟ್ಟು ಮರುಗಲೇನಿಹುದು|| ಗಾಡಿ ಸಿಡಿಲು ಮಳೆ ಹೊಯ್ಯಬೇಡೆನ್ನುತ್ತ | ತೋಳನೆತ್ತಿದರೆ ನಿಲ್ಲುವುದೇ ||೧|| ಎಲೆಯಲ್ಲ ತನುವಿದು | ಮಳೆಗಾಲದಲಿ ತುಂಬಿ | ದ್ಹೊಳೆಯಲ್ಲಿ ನೆರೆಪುಟ್ಟುವಂತೆ ನಳಿನಸಂಭವ ಬರೆದಾದಿನ ಸಂದರೆ | ಉಳಿವವೇ ನಿಮಿಷ ಪ್ರಾಣಗಳು||

ಪಾರ್ತಿಸುಬ್ಬನ ರಂಗಸೃಷ್ಟಿಯ ಕಲ್ಪಕತೆಗೆ ಅತ್ಯುತ್ತಮ ಉದಾಹರಣೆ ಮಾಯಾಶೂರ್ಪಣಖಿ. ವಾಲ್ಮೀಕಿ ರಾಮಯಣದಲ್ಲಿಲ್ಲದ ಆದರೆ ತೊರವೆ ರಾಮಾಯಣದಲ್ಲಿ ಕಂಡುಬರುವ ಘೋರಶೂರ್ಪಣಖಿಯ ಮಾನುಷೀ ರೂಪಾಂತರ. ರಾಮಲಕ್ಷ್ಮಣರನ್ನು ಮೋಹಿಸಲಿಕ್ಕಾಗಿ ಹದಿನಾರು ವತ್ಸರದ ಹೆಣ್ಣಾದಳವಳು | ಮುದದಿಂದ ಶೃಂಗಾರ ಮಾಡಿ ನೋಡಿದಳು – ಎಂಬುದನ್ನು ಗಮನಿಸಿ. ಎಷ್ಟೇ ಸೊಗಸಾಗಿ ರೂಪಾಂತರ ಮಾಡಿಕೊಂಡರೂ ರಾಕ್ಷಸೀಸಂಸ್ಕಾರ ಇದ್ದೇ ಇರುತ್ತದೆ. ಆಗಾಗ ಧುತ್ತೆಂದು ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. ರಾಕ್ಷಸವೃತ್ತಿಯನ್ನು ಹತ್ತಿಕ್ಕಿ ಒನಪು ಒಯ್ಯಾರಗಳ oveಡಿಡಿeಚಿಛಿಣ ಮಾಡುವ ಒಳ್ಳೆಯ ಅವಕಾಶ ನಟರಿಗೆ. ಅಭಿನಯಕ್ಕೆ ವಿಫುಲಾವಕಾಶವಿರುವಂತೆ ಶೃಂಗಾರ-ವೀರ-ಹಾಸ್ಯ-ಬೀಭತ್ಸರಸಗಳನ್ನು ಮೇಳೈಸಿ ಸಹೃದಯ ಹೃದಯಾಹ್ಲಾದಕವಾದ ಸನ್ನಿವೇಶವನ್ನು ಪಾರ್ತಿಸುಬ್ಬ ತುಂಬ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ. ಆತ ರಂಗಜ್ಞನಾಗದೇ ಇಂತಹ ದೃಶ್ಯನಿರ್ಮಾಣ ಸಾಧ್ಯವಿಲ್ಲ.

ಲಕ್ಷ್ಮಣ ಶೂರ್ಪಣಖೆಯ ಕಿವಿ ಮೂಗು ಮೊಲೆಗಳನ್ನು ಕತ್ತರಿಸುತ್ತಾನೆ.- ಸುಬ್ಬನ ಪ್ರಸಂಗದಲ್ಲಿ. ಇದು ಅಸಭ್ಯ, ಅಶ್ಲೀಲ ಎನ್ನುವ ವಾದವೂ ಇದೆ. ಆದರೆ ವಾಲ್ಮೀಕಿ ರಾಮಾಯಣದಲ್ಲಿಯೇ ಸೀತಾನ್ವೇಷಣ ಭಾಗದಲ್ಲಿ ಎದುರಾದ ಅಯೋಮುಖಿ ಎಂಬ ರಾಕ್ಷಸಿಯ ಕುಚಕರ್ಣನಾಸಾಚ್ಛೇದನವನ್ನು ಅದೇ ಲಕ್ಷ್ಮಣ ಮಾಡುತ್ತಾನೆ. ವಾಲ್ಮೀಕಿಗೆ ಅಸಭ್ಯವಲ್ಲವಾದರೆ ಸುಬ್ಬನ ಮೇಲೇಕೆ ಆಪಾದನೆ? ರಂಗದ ದೃಷ್ಟಿಯಿಂದ ಬಣ್ಣದ ವೇಷ-ಮೋಹಕ ಸ್ತ್ರೀವೇಷ-ಮರಳಿ ಬೊಬ್ಬಿರಿಯುವ ಘೋರವೇಷ- ಹೀಗೆ ತುಂಬಾ ರೋಚಕವಾದ ಪಾಠ್ಯ. ಇದು ರಂಗಕ್ಕೆ ಪಾರ್ತಿಸುಬ್ಬನ ಅದ್ವಿತೀಯವಾದ ಕೊಡುಗೆ.

ಅಂಗಭಂಗಿತಳಾದ ಶೂರ್ಪಣಖಿ ರಾವಣನಲ್ಲಿ ಆಡುವ ಚಾಡಿಮಾತು :

(ಬೇಗಡೆ-ತ್ರಿವುಡೆ) ತರಬೇಕು ತರುಣಿಯಳ | ಕಾಮನ ಮುಂಗೈ |ಯರಗಿಣಿಯಂತಿಹಳ || ಸ್ಮರನ ಸಿಂಗಾಡಿ ಪುರ್ಬಿನ ನೀರೆ ಮಲ್ಲಿಗೆ | ಪರಿಮಳಿಸುವ ಮೈಯ | ವರಕರಿಗಮನೆಯ ||

ಬೈರಾಗಿ ರಾವಣ ಸೀತೆಯಲ್ಲಿ ಭಿಕ್ಷೆ ಕೇಳುವ ಬಗೆ :

(ಅಷ್ಟತಾಳ) ಭಿಕ್ಷವ ನೀಡೇ ದೇವಿ |ಸನ್ಯಾಸಿಗೆ | ಭಿಕ್ಷವ ನೀಡೇ ದೇವಿ || ಕುಕ್ಷಿಗಾಧಾರವಿಲ್ಲದೆ ದೇಶದೇಶ ಪ್ರ| ದಕ್ಷಿಣೆಗೆಯ್ದಿಲ್ಲಿ ಬಂದೆ ಕಾಣಮ್ಮ ||

ಕಾಡಿನಲ್ಲಿ ಸೀತೆಯ ಹುಡುಕಾಟದಲ್ಲಿ ಬಂದ ರಾಮಲಕ್ಷ್ಮಣರನ್ನು ಕಂಡ ಅಯೋಮುಖಿಯ ಸ್ವಗತ :

(ಅಷ್ಟತಾಳ) ತಿನಿಸು ಸಿಕ್ಕಿತು ಎನಗೊಂದು | ಔ | ತಣವ ಮಾಡುವೆ ಬಂಧುಬಳಗಕ್ಕೆ ಇಂದು || ಎದೆಯ ಗುಂಡಿಯನ್ನೆ ಮುರಿದು |.. ತು|ಪ್ಪದಲಿ ಜಾಳಿಸುತ ಎಣ್ಣೆಯಲಿಕ್ಕಿ ಹುರಿದು || ಬದಿ ಎಲುಬುಗಳ ಗುದ್ದ್ಯರೆದು | ಎನ್ನ ಮದುವೆಯಾದವನ ಸಂಗಡ ತಿಂಬೆ ನೆರೆದು ||

ಯಕ್ಷಗಾನ ರಂಗದಲ್ಲಿ ವಾಚಿಕವೂ (ಅರ್ಥಗಾರಿಕೆ) ಪ್ರಧಾನ ಪಾತ್ರ ವಹಿಸುತ್ತದೆ. ವಾಚಿಕಕ್ಕೆ ಅನುಕೂಲಿಸುವ ಅಂದರೆ ಸಂಭಾಷಣೆಯನ್ನು ಕೈವಾರಿಸುವ ಪದ್ಯವಿದ್ದಷ್ಟೂ ಸೊಗಸು ಹೆಚ್ಚು. ಪಾರ್ತಿಸುಬ್ಬ ಸಂಭಾಷಣರಚನಚತುರ. ಅದೂ ಆಡುಮಾತಿನ ಸೊಗಡಲ್ಲಿ ಪಾತ್ರಗಾಂಭೀರ್ಯವುಳಿಸಿ ಮಾತನ್ನು ಹೆಣೆಯುತ್ತಾನೆ. ವಾಲಿ ಸುಗ್ರೀವರ ಹಣಾಹಣಿ, ಮರದ ಮರೆಯಲ್ಲಿ ರಾಮನಿದ್ದಾನೆ. ಸುಗ್ರೀವ ಅಖಾಡಕ್ಕೆ ಹಾರಿ ವಾಲಿಯನ್ನು ಕೆಣಕುತ್ತಾನೆ.

(ಝಂಪೆತಾಳ) ವಾಲಿ – ಮತ್ತು ಮತ್ತೆನ್ನಿದಿರು |ನಿತ್ತು ಕೊಂಡೀ ರಣದೊ|ಳುತ್ತರವ ಕೊಡುವೆ ಭಲೆ |ಧೂರ್ತಸುಗ್ರೀವ ||

ಸುಗ್ರೀವ  ಧೂರ್ತನಲ್ಲದೊಡನುಜ |ಪತ್ನಿಯನು ಸೆಳೆದಿಟ್ಟು |ರಕ್ತಮದದಿಂದ ಕೊಡದಿರ್ಪೆಯಾ ವಾಲಿ ||

ವಾಲಿ – ಬಾಯಲ್ಲಿ ಬಂದಂತೆ ಬಗುಳಿ ನೀ ಸುಮ್ಮನೇ | ಸಾಯದಿರು ಪೆಟ್ಟಿನಲಿ |ಸಟೆಯಲ್ಲ ತಮ್ಮ ||

ಸುಗ್ರೀವ _ ನ್ಯಾಯವೇ ಸರಿ ಮಾತು ನಡತೆ ತಪ್ಪಿದ ಮೇಲೆ | ನಾಯಿಂದ ಕಡೆಯಾಗಿ ಬಗುಳುವುದೇ ಸಿದ್ಧ ||

ಬರೀ ಆದೇಶಾರ್ಥಕ ಕ್ರಿಯಾಪದಗಳ ಸಮುಚ್ಚಯದಲ್ಲಿ ದೃಶ್ಯ ಒಂದರ ಭೀಕರತೆಯನ್ನು ಕವಿ ಕಟ್ಟಬಲ್ಲ. ಸೀತಾದರ್ಶನ ಮುಗಿಸಿ ಹನುಮಂತ ಲಂಕೆಯ ಉದ್ಯಾನವನ್ನು ಧೂಳೀಪಟ ಮಾಡಿ ಅಕ್ಷಯಕುಮಾರನನ್ನು ಕೊಂದಾಗ, ಇಂದ್ರಜಿತುವು ಈ ಮಾರುತಿಯನ್ನು ನೋಡಲೆಂದು ಬಂದು ಅವನು ಕಂಡ ದೃಶ್ಯ :

(ವಾರ್ಧಕ) ಕೊಲ್ಲು ಕಡಿ ತಿವಿ ಕುಟ್ಟು ಇರಿ |ಬಾಣ ತೊಡು ಕಪಿಯ | ಹಲ್ಲಮುರಿ ಹಾಯ್ಕು ಹೊಯ್ ಕರುಳನುಗಿ ಬಗಿ ತಿನ್ನು | ಬಿಲ್ಲಿಲೆಸೆ ಖಡ್ಗ-ತೋಮರ-ಪರಶು-ಮುಸಲ-ಮುದ್ಗರ-ಕಂಪಣಗಳಿಂದ || ಚೆಲ್ಲ ಬಡಿ ಕೆಡಹು ಹಾಯ್ಕೆನುತ ಶಸ್ತ್ರಗಳ ಬಿಡ|ಲಲ್ಲಿಗಲ್ಲಿಗೆ ಮುರಿದುವಲ್ಲದೇ ಹನುಮನದ |ಹುಲ್ಲಕಡ್ಡಿಗೆ ಬಗೆಯದಿರೆ ಇಂದ್ರಜಿತು ಬಳಿಕ ಎಲ್ಲರೊಡನಿಂತೆಂದನು ||

ರಾಮಾದಿಗಳು ಭೋರ್ಗರೆವ ಸಮುದ್ರತಟದಲ್ಲಿ ನಿಂತಿದ್ದಾರೆ. ಕಡಲುದಾಟಿ ಲಂಕೆಗೆ ಹೋಗುವ ಬಗೆ ರಾಮನಿಗೆ ಹೊಳೆಯುತ್ತಿಲ್ಲ. ಆಗ ಒಬ್ಬೊಬ್ಬ ಕಪಿವೀರ ಜಂಭ ಕೊಚ್ಚಿಕೊಳ್ಳುವ ಹದ :

(ರೂಪಕ) ವನಧಿಯ ಕಡಿದು ದಾರಿಯ ಮಾಳ್ಪೆ ಲಂಕೆಗೆಂ| ದೆನುತ ಕಣ್ಣಲಿ ಕಿಡಿಗರೆದ || ಸೀಳುವುದೇತಕಂಬುಧಿಯನ್ನು ಲಂಕೆಗೆ |ಪಾಳೆಯ ನಡೆವುದಿನ್ನೇಕೆ | ಬಾಲವ ಕಳುಹಿ ರಾವಣನ ಕಟ್ಟೆಳೆತಪ್ಪ |ಊಳಿಗವೆನಗೆಂದ ನೀಲ ||

ಜನಸಾಮಾನ್ಯರ ಬೀದಿಮಾತೂ ಸಹಜಕಾವ್ಯಪಂಕ್ತಿಯಾಗುತ್ತದೆ ಕುಶಲಕವಿಯ ಕಬ್ಬದ ಕುಲುಮೆಯಲ್ಲಿ. ರಾಮಲಕ್ಷ್ಮಣರನ್ನು ಕಂಡುಬಂದ ರಾವಣದೂತರಾದ ಶುಕಸಾರಣರು ರಾಮಾದಿಗಳ ವಿಕ್ರಮೋರ್ಜಿತಸತ್ತ್ವವನ್ನು ರಾವಣನಲ್ಲಿ ಬಣ್ಣಿಸಿದಾಗ ರಾವಣನು ಹೀಯ್ಯಾಳಿಸುವ ರೀತಿ :

(ಅಷ್ಟ) ಮರುಳಾದೆಯೇನೋ ನೀ ಬದನೆಕಾಯನು ದೊಡ್ಡ | ಪರಬ್ರಹ್ಮವೆಂಬ ಹಾಗೆ || ಬೇರು ಬಲ್ಲ್ಲವರಿಗೆ ಮರದೆಲೆಯನು ತಂದು | ತೋರುವರೆಲೆ ಮರುಳೆ || ಸರಳಿನ ಮೊನೆಯೊಂದು ತಾಗಿದಡಿವು ಮೈಯ್ಯ | ತುರಿಸಿ ಕಿಕ್ಕಿರಿಗಟ್ಟುತ || ಭರದೋಳೋಡುವ ಕಪಿ ಪರಿವಾರಂಗಳಿಗೆ ಸಂ|ಗರದೊಳೆಚ್ಚಾಟವಂತೆ||

ಸಂಧಾನಕ್ಕಾಗಿ ಅಂಗದ ರಾವಣನ ಆಸ್ಥಾನಕ್ಕೆ ಹೋಗಿ ಹಿತವಚನ ಹೇಳುವ ಪದ್ಯದ ಜಾನಪದ ಘಮಲು :

(ಏಕ) ಏನ್ನ್ಯಾ ರಾವಣ |ನೀನ್ನ್ಯಾ ಸೀತೆಯ |ಕಾಣದ ಹಾಂಗೆ ಕದ್ದು ತಂದೆಯೇನ್ನ್ಯಾ || ಮಂಡೋದರಿ ಭಾಳ | ಮಕ್ಕಳಾ |ಹೆತ್ತವಳೆ | ಕಂಡೋರ ಬಾಯ್ ಕುತ್ತ | ಮಾಡಬೇಡ್ಯಾ || ಬಂಡಾ, ಟಕಿಕ್ಕಿ ಸಿಕ್ಕಿ | ತಂಡ ತಂಡದೊಳಿಪ್ಪ | ಹೆಂಡ್ಯಾರ ವಾಲೆ ಕಳಚಬೇಡ್ಯಾ || ರುಂಡಮಾಲೆಯ ಕಟ್ಟಿ | ಕೊಂಡಂಥ ಶಿವಕೊಟ್ಟ |ದ್ದೂಂಡುಂಡು ಸುಕದಾಗೇ ಸಾಯಿಕಾಣ್ಯೂ |

ಇಂದ್ರಜಿತು-ಲಕ್ಷ್ಮಣರ ಯುದ್ಧಸನ್ನಿವೇಶ. ಇಬ್ಬರೂ ಮೂದಲಿಸಿಕೊಳ್ಳುತ್ತಾರೆ :

(ಅಷ್ಟ) ಲಕ್ಷ್ಮಣ- ಎಲವೊ ರಾವಣ ಕೇಳು ಪರಸತಿಯರ ದ್ರೋಹ | ನೆಲನ ಹೊಕ್ಕರು ಬೆನ್ನ ಬಿಡದು ||

ಇಂದ್ರಜಿತು – ಹರಣದಾಸೆಗಳುಳ್ಳಡಣ್ಣನ ಕರೆಸಿಕೊ | ಚರಣ ನಂಬಿದ ವಿಭೀಷಣನ || ತಿರಿದುಂಬುದಕ್ಕೆ ಜೋಳಿಗೆಯ ಪಾಲಿಸಿ ದೇಶಾಂ | ತರಕಟ್ಟು ಕೋಲೊಂದ ಕೊಟ್ಟು ||

ಪಾರ್ತಿಸುಬ್ಬ ಶಾಸ್ತ್ರವೇತ್ತನಲ್ಲ; ಹಾಡುಗಬ್ಬದ ಹೊಲದಲ್ಲಿ ಹಾರುವ ಹಕ್ಕಿ. ಹಾಡುವ ಧಾಟಿ ಮಟ್ಟು ಬಲ್ಲವ, ತನ್ನ ಸುತ್ತಲಿನ ದಿನದಿನದ ಆಗುಹೋಗುಗಳನ್ನು ಆಡುಮಾತಿನ ಮೂಲಲಯದಲ್ಲಿ ಗ್ರಹಿಸುವವ; ಅಂದರೆ ಶುದ್ಧಾಂಗ ಜಾನಪದಕವಿ. ಅದಕ್ಕೆ ಉದಾಹರಣೆ ಕುಶಲವಕಾಳಗದ ಈ ಪದ್ಯ.

(ಝಂಪೆ) ಅಶ್ವಮೇಧವ ರಚಿಸಬೇಕೆಂದು ಶ್ರೀರಾಮ |ಶಶ್ವತದಿ ಸನ್ನಹವ ತರಿಸಿ || ವಿಶ್ವಮಿತ್ರಾದಿಗಳು| ಯಾಗಶಾಲೆಯ ರಚಿಸಿ |ವಿಶ್ವಗಾಯಕ ದೀಕ್ಷೆ ವರಿಸಿ ||

ಪ್ರಾಸ ಹಾಗೂ ಗಣನಿರ್ಬಂಧದಲ್ಲಿ ವಿಶ್ವಮಿತ್ರ ಅಂತ ಅಪಶಬ್ದ ಪ್ರಯೋಗಿಸಿದ್ದಾನೆ. ವಿಶ್ವಾಮಿತ್ರ ಎಂಬುದು ವೇದವಾಙ್ಮಯದಿಂದಲೂ ಇರುವ ಶಬ್ದ. ವಿಶ್ವ + ಆಮಿತ್ರ- ಅಸಮಂತಾತ್ ಮಿತ್ರಂ, ವಿಶ್ವಕ್ಕೆ ಎಲ್ಲೆಡೆಯಿಂದಲೂ ಮಿತ್ರನಾದವ. ವಿಶ್ವಾಮಿತ್ರ ಎಂಬುದು ಸ್ವತಂತ್ರ ಶಬ್ದ,ಸಂಧಿಯಲ್ಲ ಎಂಬ ಪಕ್ಷವೂ ಇದೆ. ಈ ಒಂದು ಶಬ್ದವನ್ನು ಉಳಿಸಿಕೊಳ್ಳಲಿಕ್ಕಾಗಿ ಪಾಣಿನಿ ಒಂದು ಸೂತ್ರವನ್ನೇ ರಚಿಸಿದ್ದಾನೆ. ಮಿತ್ರೇಚರ್ಕ್ಷಾ ಎಂಬ ಸೂತ್ರವೇ ಅದು. ಪಾರ್ತಿಸುಬ್ಬ ಮುಗ್ಧ. ಶಾಸ್ತ್ರಕೋಲಾಹಲದಿಂದ ದೂರವಿದ್ದವ.

ಕೃಷ್ಣಚರಿತೆಯ ಪ್ರಸಂಗದಲ್ಲಿ ದೇವಕಿಯ ತಲೆಗಡಿಯೆ ಬಂದ ಕಂಸನನ್ನು ಕುರಿತು ವಸುದೇವನ ಮೊರೆ :

(ರೂಪಕ) ಕೊಂದವರಿಗೆ ಕೊಲೆ ತಪ್ಪದು ಕಡೆಗೀ ಭಯ ನಿನಗಪ್ಪುದು | ಸಂದರೆ ಪ್ರಾಣದ ಹಗೆ |ಎಂದೆಂದಿಗು ಬಿಡದು || ಮುಳ್ಮೊನೆ ಕಾಲಿಗೆ ನೆಟ್ಟರೆ |ಪಲ್ಮೊನೆ ಚುಚ್ಚುವುದೇತಕೆ | ಕೀಳ್ಮನಸಿನ ಕಂಗೆಡಿಕೆಯ ಕಲ್ಮನ ಮಾಡದಿರು ||

ಯಶೋದೆ ಹತ್ತಿರ ಕೃಷ್ಣನನ್ನು ಗೋಪಿಕೆಯರು ದೂರುವ ತರತರದ ಚಿತ್ರ ದಾಸಸಾಹಿತ್ಯದಲ್ಲಿ ಸಾಕಷ್ಟಿದ್ದಾವೆ. ಪಾರ್ತಿಸುಬ್ಬ ತನ್ನ ಧಾಟಿಯಲ್ಲಿ ಅದನ್ನೇ ಹೇಳಿದ್ದಾನೆ :

(ಮಟ್ಟೆ) ಕೇಳೆ ಗೋಪಿ ರಂಗನಾಟವ |ನಿ-ನ್ನಲ್ಲಿ ನಾವು ಪೇಳದಿರುವುದುಚಿತವಲ್ಲ | ಪೇಳ್ದರಿಷ್ಟು ಕಾರ್ಯವಿಲ್ಲ|| ಅಟ್ಟದ ಮೇಲಡಗಿಸಿ ಬ|ಚ್ಚಿಟ್ಟರದರ ಬುಡಕೆ ಕೋಲ|ಲಿಟ್ಟು ತೂತು ಮಾಡಿ ಬಂ,|ದಷ್ಟು ಬಾಯನಿಟ್ಟು ಸವಿಯು | ತೊಟ್ಟಿನವರ ಕರೆದು ಕೊಡುವನು ||ಬೆದರಿಸಲು ಕ| ಲ್ಲಿಟ್ಟು ಭಾಂಡಗಳನೆ ಒಡೆವನು || ಸತಿಪತಿಯರ |ಜುಟ್ಟುಜುಟ್ಟು ಕಟ್ಟಿಬಿಡುವನು|| ನೀ ಕರುಣದಿಂದ ||

ಯಮುನಾನದಿಯಲ್ಲಿ ಗೋಪಿಕೆಯರು ವಿವಸ್ತ್ರರಾಗಿ ಜಲಕೇಳಿಯಾಡುತ್ತಿದ್ದಾರೆ. ಆ ಸಮಯದಲ್ಲೇ ಬಾಲಕೃಷ್ಣನು :

ಗಾಡದಿಂದೊಟ್ಟಿದ್ದ ಸೀರೆಯ | ಮೋಡಿಯಿಂದಲಿ ತೆಗೆದು ನಲಿನಲಿ|ದಾಡಿ ಕಡಹದ ಮರವನೇರಿದ || ಸೀರೆಯನೊಯ್ದುದ ಕಂಡಾ |ನಾರಿಯರಾರೆಂದು ತಿಳಿಯದಿರೆ ಲಜ್ಜಿಸುತಂ || ಭೋರೆಂದೆನುತೆಲ್ಲರು ಬಾ|ಯಾರುತ ಕೂಕೂಕುವೆಂದು ಕೂಗಿದರಾಗಳ್ ||

(ಅಷ್ಟ) ಕುಕ್ಕೂ ಕೂ ಎಂದು ಕೂಗಿಡೆ ಸತಿಯರು | ದಿಕ್ಕೆಲ ಕೇಳಿತು ಕುಕ್ಕೂಕು |ಅಕ್ಕೊ ಮತ್ತಿಕ್ಕೊ ಮ|ರಕ್ಕೇರದಿರು ಬೊಮ್ಮ|ರಕ್ಕಸನೈದನೆ ಕುಕ್ಕೂಕೂ || ಮನೆಮನೆಗೈತಂದು ಕೆನೆಮೊಸರೆನೆ ತಿಂದು |ಜುಣುಗಾಡಿದಂತಲ್ಲ ಕುಕ್ಕೂಕು | ಮನೆಯವರಿದ ಕೇಳಿ| ದರೆ ನಿನ್ನ ಎಳೆದೊಯ್ದು ದಣಿಸಿ ದಂಡಿಸುವರು ಕುಕ್ಕೂಕು||

ಹಳ್ಳಿಯ ಬೆಳ್ಳಂಬೆಳಗಿನಲ್ಲಿ ಕೇಳುವರು ಯಾರೆಂದೇ ತಿಳಿಯದೆ ಕೊರಳೆತ್ತಿ ಗೋಗರೆಯುವ ಪಕ್ಷಿಜಾತಿಯ ಕೂಕ್ಕೂಕೋ ಎಂಬ ಅನುಕರಣಧ್ವನಿಯನ್ನೇ ಗೋಪಿಕೆಯರ ಆರ್ತಾಲಾಪಕ್ಕೆ ಬಳಸಿದ ಕವಿಯ ಇಂತಹ ಲೋಕಾನುಕರಣ, ಲೋಕಪರಿಶೀಲನ ಮುಂದಿನ ಯಕ್ಷಪದ್ಯಕಾರರಿಗೆಲ್ಲ ಪರಮಾದರ್ಶವಾಯ್ತು.

ತನ್ನ ಮಿತಿಯಲ್ಲಿ ಗಟ್ಟಿಯಾದ ಒಂದು ಪದ್ಯಪರಂಪರೆ ನಿರ್ಮಿಸಿದ ಪಾರ್ತಿಸುಬ್ಬ ಯಕ್ಷಗಾನಕ್ಷೇತ್ರಕ್ಕೆ ನಿತ್ಯಪ್ರಾತಃಸ್ಮರಣೀಯ. ಪಾರ್ತಿಸುಬ್ಬನದ್ದೆಂದು ಸಂಪಾದಿಸಿದ ೧೧ ಕೃತಿಗಳ ಒಟ್ಟು ಪದ್ಯಸಂಖ್ಯೆ ೩೦೭೩. ಇಂಥ ಹಿರಿಯ ಕವಿಯೂ ಹೇಳಿದ್ದು ಹೀಗೆ.

ಕನ್ನಡಯಕ್ಷಗಾನದಲಿ|ನಾಮನಸು ಬಂದಂತೆ ವರ್ಣೀಸಿದೆನಿದರ ನಿ| ಸ್ಸೀಂಅ ಕವಿಗಳು ಕೇಳಿ ಅಪ್ಪುಗಳ ಕಳೆದು ಶುದ್ಧಪ್ರತಿಯ ಮಾಡಿ ಬಳಿಕ || ಭೂಮಿಯೊಳೂ ರಾಗತಾಳವನರಿತು ಪಾಡಿದರೆ | ಆ ಮಹಾಕಣ್ವಪುರದೊಡೆಯ ಶ್ರೀಕೃಷ್ಣ ಸು | ಪ್ರೇಮದಿಂ ಸಕಲಭಾಗ್ಯವನಿತ್ತು ಸಕಲರಂ |ರಕ್ಷಿಸುವವನು ದಿನದೊಳು||

ಪಾರ್ತಿಸುಬ್ಬನ ಈ ವಿದ್ವದ್ವಿನಯಕ್ಕೆ, ಕಲಾಶ್ರದ್ಧೆಗೆ ನಾವೂ ನಮಿಸುವ.

Leave a Reply

*

code