ಅಂಕಣಗಳು

Subscribe


 

ಭರತನಾಟ್ಯದವರು ಯಕ್ಷಗಾನದ ಪದ್ಯಗಳನ್ನು ಗಮನಿಸಬಾರದೇ?

Posted On: Tuesday, December 15th, 2015
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಡಾ| ಎಂ. ಪ್ರಭಾಕರ ಜೋಷಿ

ಯಕ್ಷಗಾನ ವೆಬ್‌ಸೈಟ್ ಸಂಪಾದಕ, ಕಲಾವಿದ, ಸಂಶೋಧಕ ಮಂಗಳೂರಿನ ಡಾ| ಎಂ. ಪ್ರಭಾಕರ ಜೋಷಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟು ಪದಂಗಳ ಕುರಿತಾದ ನರ್ತನ ಲೋಕದ ವಿಚಾರಗಳನ್ನು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗಳಿಗೆ ಜೊತೆಗೊಂದು ಅನಿಸಿಕೆಯೂ ಇದೆ. ನಿಮ್ಮ ಅನಿಸಿಕೆಗಳಿಗೂ ಸ್ವಾಗತ.


೧. ಪದಂ ಅಭಿನಯದಲ್ಲಿ ನಾಯಿಕಾ ನಾಯಕಾ ಭಾವವೇ ಯಾಕಾಗಬೇಕು? ಆರ್ದ್ರ ಭಕ್ತಿಯ ವಿವಿಧ ಭಾವಗಳೂ ಆಗಬಹುದಲ್ಲವೇ?

೨. ಹಲವು ದಾಸರ ಪದಗಳು ನೃತ್ಯದ ಪದಂ ವಿಭಾಗಕ್ಕೆ ಸೂಕ್ತ. ತೆಲುಗು ತಮಿಳುಗಳಲ್ಲೇ ಉತ್ತಮ ಪದಂಗಳಿವೆಯೆಂಬುದು ಕೇವಲ ಒಂದು mind set ಅಷ್ಟೇ !

೩. ಮೇಲತ್ತೂರು ವೆಂಕಟ್ರಾಮ ಶಾಸ್ತ್ರಿಗಳ ಯಕ್ಷಗಾನಗಳಲ್ಲಿರುವ ಪದಂಗಳನ್ನು ಒಪ್ಪುವ ನಮ್ಮ ಭರತನಾಟ್ಯ ಕ್ಷೇತ್ರವು, ನಮ್ಮದೇ ಆದ ಯಕ್ಷಗಾನದಲ್ಲಿರುವ ಪದಂಗಳನ್ನು ಗಮನಿಸಿಲ್ಲ ಎಂಬುದು ವಿಚಾರಾರ್ಹ.

ಅನಿಸಿಕೆ : ಹೌದು.. ನಾಯಿಕಾ-ನಾಯಕಾ ಭಾವವೇ ಆಗಬೇಕೆಂದೇನಿಲ್ಲ., ದಾಸರ ಪದಗಳೂ ಪದಂ ವಿಭಾಗಕ್ಕೆ ಸೂಕ್ತ, ನಿಜ. ಆದರೆ ಸಾಂಪ್ರ್ರದಾಯಿಕವಾಗಿ ಬೆಳೆದು ಬಂದ ಪದ್ಧತಿಯನ್ನನುಸರಿಸುವ ಕಲಾವಿದರಿಗೆ ಇಂತಹ ಸುಧಾರಣೆ, ಮಾರ್ಪಾಡು ಎನ್ನುವುದು ಹಿತವೆನಿಸೀತೇ? ಶಾಸ್ತ್ರ ಉಲ್ಲಂಘನೆಯೆನಿಸಿಕೊಳ್ಳದೇ? ಹಾಗಾಗಿ ಆರ್ದ್ರ ಭಕ್ತಿಯ ಭಾವಗಳನ್ನೂ, ದಾಸರ ಪದಗಳನ್ನು ಅಳವಡಿಸಿಕೊಂಡರೂ ಅವುಗಳನ್ನು ಪಕ್ಕಕ್ಕಿಟ್ಟು ನೋಡುವ ಕ್ರಮ ಮುಂದುವರೆದಿದೆ. ಹಾಗೆಂದ ಮಾತ್ರಕ್ಕೆ ಇದು ಸರಿ-ತಪ್ಪಿನ ಪ್ರಶ್ನೆಯಲ್ಲ. ನೃತ್ಯ ಕಲಾವಿದರ, ವಿದ್ವಾಂಸರ ಮನಸ್ಥಿತಿ..

ಅಂತೆಯೇ ಒಂದು ಕಲೆಯ ಕ್ಷೇತ್ರದ ಅಂಶಗಳನ್ನು ಅದರ ಸಮಕಾಲೀನ ಕಲೆ ತನ್ನಲ್ಲಿ ಅಳವಡಿಸಿಕೊಳ್ಳುವುದು-ಬಿಡುವುದು ಗುರುಗಳ ಮತ್ತು ಕಲಾವಿದರ ಮನೋಧರ್ಮವನ್ನೂ ಒಳಗೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಸಂಪ್ರದಾಯದ ಚೌಕಟ್ಟು‌ಇದೆ ಎನ್ನುವ ವಿಚಾರವಿದ್ದರೆ ಅದೂ ಕೂಡಾ ಪ್ರಶ್ನಾರ್ಹವೇ ಸರಿ! ಹಲವು ಯಶಸ್ವೀ ಪ್ರಯತ್ನ ಮತ್ತು ಪ್ರಯೋಗಗಳು ಮೂಡಿಬಂದಲ್ಲಿ ಈ ನಿಟ್ಟಿನಲ್ಲಿ ಬೆಳಕಿಂಡಿಯಾದೀತು !

2 Responses to ಭರತನಾಟ್ಯದವರು ಯಕ್ಷಗಾನದ ಪದ್ಯಗಳನ್ನು ಗಮನಿಸಬಾರದೇ?

  1. Bhramari Shivaprakash

    ನಮಸ್ತೆ,
    ಪದಂ-ದಾಸರಪದಗಳ ಬಗೆಗಿನ ತಮ್ಮ ಚಿಂತನೆಗೆ ನನ್ನ ಸಹಮತ ಇದೆ.
    ಹಿನ್ನೆಲೆ –
    ತಮಿಳು ತೆಲುಗಿನ ಪದಂಗಳನ್ನು ನಾವು ಮೂರು ಮುಖ್ಯ ವಿಭಾಗಗಳಲ್ಲಿ ಅಭ್ಯಸಿಸುತ್ತೇವೆ. 1) ಶೃಂಗಾರ ಪದ (ಉದಾ: ತೆಲುಗಿನ ಕ್ಷೇತ್ರಜ್ಞನ ಪದಗಳು, ತಮಿಳಿನ ಎಪ್ಪೊ ವರುವಾರೋ ಮುಂತಾದವು), 2) ಭಕ್ತಿ ಪದ (ಉದಾ: ಗೋಪಾಲಕೃಷ್ಣ ಭಾರತಿಯವರ ನಂದನಾರ ಚರಿತಂ ನಿಂದ ಆಯ್ದ ನಟನಂ ಆಡಿನಾರ್, ಅರುಣಾಚಲಕವಿಯ ರಾಮನಾಟಕದಿಂದ ಆಯ್ದ ರಾಮನಕ್ಕು ಮನ್ನನ್ ಮೋಡಿ), 3) ವಾತ್ಸಲ್ಯ ಪದ(ಉದಾ: ಉತ್ತುಕ್ಕಾಡು ವೆಂಕಟ ಸುಬ್ಬ ಅಯ್ಯರ ಅವರ ಹಲವು ರಚನೆಗಳು – ಪಾಲ್ ವಿಡಿಯುಂ ಮುಗಂ, ತಾಯೆ ಯಶೋದ ಉಂದನ್, ಮಾಡು ಮೇಕ್ಕುಂ ಕಣ್ಣೇ, ಮಣಿ ನೂಪುರ ಧಾರಿ, ವಿಶಮಕಾರ ಕಣ್ಣನ್) ಹೀಗೆ. ಕರ್ನಾಟಕ ಸೆಕೆಂಡರಿ ಎಜುಕೇಶನ್ ಎಕ್ಸಾಮಿನೇಶನ್ ಬೋರ್ಡ್ ನಡೆಸುವ ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳ ಪಾಠ ಪಟ್ಟಿಯಲ್ಲಿ ನಿಗದಿಪಡಿಸಿರುವ 2 ಯಾ 3 ಪದಂಗಳಲ್ಲಿ 1 ಯಾ 2 ಶೃಂಗಾರ ಪದಗಳಾಗಿರಬೇಕೆನ್ನುವ ಅದರಲ್ಲೂ ಮುಖ್ಯವಾಗಿ ಕ್ಷೇತ್ರಜ್ಞನ ಪದವಾಗಿರಬೇಕೆಂದು ತಿಳಿಸಿರುತ್ತಾರೆ. ಈ ರೀತಿಯ ಪಾಠ ಪಟ್ಟಿಗೆ ಬದ್ಧರಾಗಿ ನಮ್ಮ ಎಲ್ಲ ನೃತ್ಯ ಗುರುಗಳು ಪದಂಗಳನ್ನು ಕಲಿಸುತ್ತಾರೆ.
    ಹೀಗೆ ಕಲಿತ ಪದಂಗಳ ಸಾಹಿತ್ಯ ಬಂಧವು ಒಂದು ಪಲ್ಲವಿ, ಒಂದು ಅನುಪಲ್ಲವಿ ಮತ್ತು ಚರಣಗಳನ್ನು ಹೊಂದಿರುತ್ತದೆ. ಮೇಲೆ ಹೇಳಿದ ಭಾವದ ಸಾಹಿತ್ಯವಿರುತ್ತದೆ. ಶಾಸ್ತ್ರೀಯ ಸಂಗೀತ ಪದ್ಧತಿಯ ರಾಗ ತಾಳಗಳಲ್ಲಿರುತದೆ. ಕೆಲವು ಪದಂಗಳು ಪಲ್ಲವಿಯಿಂದ ಕೊನೆಯ ಚರಣದವರೆಗೆ ಒಂದು ಸಂದರ್ಭದ ವರ್ಣನೆಯಾಗಿದ್ದರೆ, ಕೆಲವುದರಲ್ಲಿ ಕಥಾ ವಿಸ್ತರಣೆಗೆ ಅವಕಾಶವಿರುತ್ತದೆ.
    ಈ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಗಮನಿಸಿದರೆ, “ದೇವರನಾಮ”ಗಳೂ – “ಪದಂ”ಗಳೂ ಎರಡೂ “ಒಂದೇ”! ಮೆಲ್ಲ ಮೆಲ್ಲನೆ ಬಂದನೆ , ಹಾಲುಕ್ಕಿತೋ ರಂಗ, ನಿನ್ನ ಮಗನ ಲೀಲೆಯ, ಮೊದಲಾದ ದೇವರನಾಮಗಳು ಶೃಂಗಾರ ಪದಗಳೇ! ಜಗದೋದ್ಧಾರನ, ಪೋಗದಿರೆಲೋ ರಂಗ, ಮನೆಯೊಳಗಾಡೋ ಗೋವಿಂದ, ಎಲ್ಯಾಡಿ ಬಂದೆ ಮುದ್ದು ಮೊದಲಾದ ಅನೇಕ ದೇವರನಾಮಗಳು ವಾತ್ಸಲ್ಯ ಪದಗಳೇ! ಹರಿ ಸ್ಮರಣೆ ಮಾಡೊ, ತಾಂತಾಂತಾಂ ಎಂದು, ಯಾರೇ ಬಂದವರು, ನೀನ್ಯಾಕೋ ನಿನ್ನ ಮುಂತಾದ ನೃತ್ಯಕ್ಕೆ ಅಳವಡಿಸಬಹುದಾದಂಥ ದೇವರನಾಮಗಳು ಭಕ್ತಿ ಪದಂಗಳೇ!

    ಈ ಅಂಶವನ್ನು ಒಪ್ಪಲು ನಾನು ಅರ್ಥೈಸಿಕೊಂಡಿರುವ(ಸಮರ್ಥನೆ ಕೂಡ) ಹಲವು ಅಂಶಗಳು –
    ವೇದಗಳು, ಉಪನಿಷತ್ತುಗಳು, ಭಾಗವತ ಪುರಾಣ, ಪದ್ಮಪುರಾಣ, ಶ್ವೇತಾಶ್ವತರ ಉಪನಿಷದ್ ಮೊದಲಾದವುಗಳ ಸಾರವನ್ನು ಎಲ್ಲರೂ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವ ನೆಲೆಯಲ್ಲಿ ಸುಮಾರು 7ನೇ ಶತಮಾನದಲ್ಲಿ ಪ್ರಾರಂಭಗೊಂಡಿತ್ತೆನ್ನುವ ಭಕ್ತಿ ಪಂಥದ ಆರಂಭದ ಕಾಲದಲ್ಲಿ ದಿವ್ಯಪ್ರಬಂಧ, ತಿರುಮುರೈ ಎಂಬ ಕಾವ್ಯವಾಗಳಾಗಿಯೋ, ಮತ್ತೆ ಮುಂದುವರಿಯುತ್ತ ಶಿವಶರಣರ ಕಾಲದಲ್ಲಿ(12ನೇ ಶತಮಾನ) ವಚನ ಸಾಹಿತ್ಯವಾಗಿ ಬಿಡಿ ಬಿಡಿಯಾಗಿ ಸಣ್ಣ ಸಣ್ಣ ರಚನೆಗಳಾಗಿದ್ದವು, ಕನ್ನಡದ ಮಣ್ಣಿನಲ್ಲಿ ಮಧ್ವ ತತ್ವದ ವೈಷ್ಣವ ಭಕ್ತಿಯ ಆದ್ಯ ಪ್ರವರ್ತಕರಾದ ಶ್ರೀಪಾದರಾಯರ ಕಾಲದಲ್ಲಿ(15ನೇ ಶತಮಾನ) ಪಲ್ಲವಿ, ಅನುಪಲ್ಲವಿ,ಚರಣಗಳನ್ನು ಹೊಂದಿದ ದೇವರನಾಮಗಳಾಗಿ ರೂಪುಗೊಂಡದ್ದನ್ನು ನಾವು ಕಾಣಬಹುದು. ಇವುಗಳ ನಂತರ –
    ಭರತನಾಟ್ಯದಲ್ಲಿ ಪ್ರಯೋಗವಿರುವ “ಪದಂ”ಗಳ ಕಾಲಮಾನವನ್ನು ಗಮನಿಸಿದರೆ – ಅವೆಲ್ಲವೂ ಕನ್ನಡದ ದೇವರನಾಮಗಳ ಉಗಮಾನಂತರದ ಕಾಲದ್ದು.
    1) ಶೃಂಗಾರ ಪದಗಳ ರಾಜನೆಂದು ಕರೆಸಿಕೊಂಡಿರುವ ಕ್ಷೇತ್ರಜ್ಞ – 1600 AD
    2) ತಾಯೆ ಯಶೋದ ಉಂದನ್ ಮೊದಲಾದ ವಾತ್ಸಲ್ಯ ಪದಗಳನ್ನು ರಚಿಸಿದ ಊತ್ತುಕ್ಕಾಡು ವೆಂಕಟ ಕವಿ 1700 AD
    3) ರಾಮನಕ್ಕು ಮನ್ನನ್ ಮೊಡಿ ಬರೆದ ಅರುಣಾಚಲಕವಿ – 1711 AD
    8ನೇ ಶತಮಾನದಲ್ಲಿ ರಚಿತವಾದ 63 ಶಿವಭಕ್ತರ(ನಾಯನಾರ್) ಕಥೆಗಳಲ್ಲಿ ಒಂದಾದ ನಂದನಾರ್ ಎಂಬ ಶಿವಭಕ್ತನ ಕಥೆಗೆ “ನಂದನಾರ್ ಚರಿತಂ” ಎಂಬ ಕಾವ್ಯದಲ್ಲಿ ಹೊಸ ಸ್ಪರ್ಷ ನೀಡಿದ ಕವಿ ಗೋಪಾಲಕೃಷ್ಣ ಭಾರತಿ – 1810AD

    ನಟನಂ ಆಡಿನಾರ್, ರಾಮನಕ್ಕು ಮನ್ನನ್ ಮೋಡಿ ಮುಂತಾದ ಪದಂಗಳು ನಂದನಾರ್ ಚರಿತಂ, ರಾಮನಾಟಕ ಕಾವ್ಯಗಳಿಂದ ಆಯ್ದ ಒಂದು ಸಂದರ್ಭಕ್ಕೆ “ಪದಂ” ನ ರೂಪ ನೀಡಿರುವಂಥವು. ಅಂದರೆ ಅಳವಡಿಸಿಕೊಂಡಂಥವು. ಭರತನಾಟ್ಯ ಕಲಾವಿದರಿಗೋಸ್ಕರ ಬರೆದಂಥ ಬಿಡಿ ರಚನೆಯಲ್ಲ! ಇಂಥ ಅಳವಡಿಕೆಯ ಹಿಂದೆ ಗಮನಿಸಬೇಕಾದ ಅಂಶವೇ – ವಿವಿಧ ಕಾವ್ಯಗಳನ್ನು ಅಧ್ಯಯನ ಮಾಡಿ ನೃತ್ಯಕ್ಕೆ ಸೂಕ್ತ ರಚನೆಗಳನ್ನು ಆಯ್ದು ಪ್ರದರ್ಶಿಸುವ ಸೃಜನಶೀಲತೆಯನ್ನು ತೋರಿದ ಅಂದಿನ ಕಾಲದ ನಟುವನಾರ್ಗಳು ಅಥವಾ ಸ್ವತಃ ನರ್ತಕಿಯರು.

    ಆಗ ನಮಗೆ ತೋರುವ ಬಹು ಮುಖ್ಯ ಲಕ್ಷಣವೇ – ವೇದಕಾಲದಿಂದ ತೊಡಗಿ ಇಂದಿನವರೆಗೂ ನಡೆದುಕೊಂಡುಬರುತ್ತಿರುವ ಮಾನವ ಜೀವನದ ವಿಕಸನ – ಅದರಲ್ಲೂ ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ “ಕಲೆಯ ವಿಕಸನ”. ಈ ವಿಕಸನದ ಹಾದಿಯ ಒಂದು ಮೈಲಿಗಲ್ಲೇ ವಾಗ್ಗೇಯಕಾರರು/ನಟುವನಾರುಗಳಾದ ತಂಜಾವೂರು ಸಹೋದರರು 18ನೇ ಶತಮಾನದಲ್ಲಿ ಪರಿಷ್ಕರಿಸಿ ಕೊಟ್ಟ ನೃತ್ಯಬಂಧಗಳ ಪಟ್ಟಿ. ತಂಜಾವೂರಿನಲ್ಲಿ ಮರಾಠ ದೊರೆಗಳ ಆಳ್ವಿಕೆಯ ಕಾಲದಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ನೃತ್ಯ ಕಾರ್ಯಕ್ರಮಗಳನ್ನು “ಕಾಲಮಿತಿ”ಗೆ ಒಳಪಡಿಸಿ(3 ಗಂಟೆ) ಅಲರಿಪುವಿನಿಂದ – ತಿಲ್ಲಾನದ ವರೆಗಿನ ನೃತ್ತ-ನೃತ್ಯಗಳ ಸಮತೋಲನ, ನರ್ತಕಿಯ ದೈಹಿಕ ಸಾಮರ್ಥ್ಯ, ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಇಂಥ ಪದ್ಧತಿಯನ್ನು ಪರಿಕಲ್ಪಿಸಿ ತಮ್ಮ ಶಿಷ್ಯರ ಮೂಲಕ ಪ್ರಯೋಗಕ್ಕೆ ತಂದರು. ಈ ಕಾಲಘಟ್ಟದ ಮೊದಲಿನ ನೃತ್ಯದ “ಮಾರ್ಗ” ಬೇರೆ ಇತ್ತು.

    ಕನ್ನಡದ ದಾಸಸಾಹಿತ್ಯದ ಕೊಡುಗೆ ವಾಗ್ಗೇಯಕಾರ ತ್ರಿಮೂರ್ತಿಗಳ ಹಾಗೂ ತಂಜಾವೂರು ಸಹೋದರರ ಕಾಲದ ಮೊದಲೇ ಆಗಿದ್ದರೂ – ಇವರುಗಳ ತೆಲುಗು/ಸಂಸ್ಕೃತ/ತಮಿಳು ರಚನೆಗಳಲ್ಲಿನ ಸಂಗೀತದ ತಾಂತ್ರಿಕ ಮಹತ್ವದಿಂದಾಗಿ ಅವುಗಳಿಗೆ ಕನ್ನಡದ ದೇವರನಾಮಗಳಿಗಿಂತ ಜಾಸ್ತಿ ಪ್ರಚಾರ ಲಭಿಸಿದೆ. ಪುರಂದರ ದಾಸರು ವಾಗ್ಗೇಯಕಾರರಾದರೂ, ಅವರು ತಮ್ಮ ಕೀರ್ತನೆಗಳನ್ನು ಹಾಡುವ ಕ್ರಮಗಳಿಗೆ ನಿರ್ದಿಷ್ಟ ದಾಖಲೀಕರಣದ(ಶಿಷ್ಯರ ಮೂಲಕ ಪ್ರಸರಣ, ಸ್ವರ ಸಹಿತ ಬರೆದಿಡುವುದು) ಗೋಜಿಗೆ ಹೋಗಲಿಲ್ಲ. ಹೀಗಾಗಿ ಕಾಲಕ್ರಮೇಣ ಸಂಗೀತ-ನೃತ್ಯ ಪ್ರದರ್ಶನಗಳಲ್ಲಿ ದೇವರನಾಮಗಳಿಗೆ “ಲಘು ಶಾಸ್ತ್ರೀಯ” ಎಂಬ ಪಟ್ಟ ಬಂದಿತು.

    ಇದನ್ನೇ ಗಟ್ಟಿ ಹಿಡಿದ ನಮ್ಮ “ಕನ್ನಡದ ವಾಗ್ಗೇಯಕಾರರುಗಳು” ತೆಲುಗು/ಸಂಸ್ಕೃತಗಳಲ್ಲಿ ಕೃತಿ ರಚನೆಗೆ ತೊಡಗಿದರೇ ವಿನಾ ಕನ್ನಡದಲ್ಲಿ ಶಾಸ್ತ್ರೀಯ ರಚನೆಗಳನ್ನು ಸೃಷ್ಟಿಸಲಿಲ್ಲ. ಅಂಥ ಕನ್ನಡದ ಶಾಸ್ತ್ರೀಯ ರಚನೆಗಳು ನಮಗೆ ಕಾಣುವುದು ವೀಣೆ ಶೇಷಣ್ಣ ಮತ್ತು ಅವರ ನಂತರದ ವಾಗ್ಗೇಯಕಾರರ ರಚನೆಗಳಲ್ಲಿ (19 ನೇ ಶತಮಾನದ ಕೊನೆ ಮತ್ತೆ ಮುಂದೆ).

    ತಂಜಾವೂರು ಸಹೋದರರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ಶಿಷ್ಯರಾಗಿದ್ದು ತಮಿಳು ಮೂಲದವರಾದದ್ದರಿಂದ ಅವರು ತಮಿಳು/ತೆಲುಗಿನಲ್ಲಿ ಕೌತ್ವಂಗಳು, ಶಬ್ದಂಗಳು, ಪದವರ್ಣಗಳು, ಪದಂಗಳು, ತಿಲ್ಲಾನಗಳನ್ನು ರಚಿಸಿದರು. ಸಹಜವೇ!

    ಪುರಂದರದಾಸರ ಕಾಲ ಕಲೆಗಳಿಗೆ ಮಹತ್ತರ ಪ್ರೋತ್ಸಾಹವಿತ್ತ ವಿಜಯನಗರ ಅರಸರ ಆಳ್ವಿಕೆಯ ಕಾಲವಾದದ್ದರಿಂದ ಅಂದಿನ ನೃತ್ಯಗಾರರು ಶ್ಲೋಕಾಭಿನಯ, ಚೂರ್ಣಿಕೆ, ಸ್ವರಜತಿ, ಸ್ವರಪ್ರಬಂಧ, ದಾಸರ ಪದಗಳು, ಉಗಾಭೋಗ, ಸೂಳಾದಿ, ಸಪ್ತ ತಾಳೇಶ್ವರಿ ವರ್ಣ, ನವಸಂಧಿ ನೃತ್ಯ, ಕನ್ನಡ ಪದಗಳು/ಜಾವಳಿಗಳು, ಅಷ್ಟಪದಿ, ತಿಲ್ಲಾನಗಳನ್ನು ನರ್ತಿಸುತ್ತಿದ್ದರು. ಈ ಅಂಶವನ್ನು ನಾವು ಮೈಸೂರು ಸಂಪ್ರದಾಯದ ನೃತ್ಯ ಪದ್ಧತಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅಂದರೆ ಕನ್ನಡದ ಮಣ್ಣಿನಲ್ಲಿ ಶಾಸ್ತ್ರೀಯವೆನಿಸಿಕೊಂಡ ನೃತ್ಯ ಪದ್ಧತಿಯಲ್ಲಿ ಕನ್ನಡದ ರಚನೆಗಳ ಪ್ರಯೋಗವಿತ್ತು. ಆದರೆ. . .
    20ನೇ ಶತಮಾನದ ಆದಿಯಲ್ಲಿ ಯಾವಾಗ “ಸಾದಿರ್ ನಾಚ್” ಎಂದು ಕರೆಸಿಕೊಳ್ಳುತ್ತಿದ್ದ ನೃತ್ಯ “ಭರತನಾಟ್ಯ” ಎಂದು ಕರೆಸಿಕೊಂಡು ಜಗತ್ಪ್ರಸಿದ್ಧಿ ಪಡೆಯಿತೋ, ಆಗ ನಮ್ಮ ಕರ್ನಾಟಕದಲ್ಲಿ ಮೈಸೂರು ಶೈಲಿಯ ನೃತ್ಯವನ್ನು ಕಲಿತು ಪ್ರಚುರ ಪಡಿಸಿದವರ ಸಂಖ್ಯೆಗಿಂತ ತಂಜಾವೂರು ಸಹೋದರರ ವಂಶಜರು ಹುಟ್ಟುಹಾಕಿದ ತಂಜಾವೂರು, ಪಂದನಲ್ಲೂರು, ವಳವೂರು ಶೈಲಿಗಳನ್ನು ಕಲಿತು ಪ್ರಚುರಪಡಿಸಿದವರ ಸಂಖ್ಯೆ ಜಾಸ್ತಿ ಕಾಣುತ್ತದೆ. ಇದರಿಂದಾಗಿ, ಸ್ವಾಭಾವಿಕವಾಗಿ ತಮಿಳು ತೆಲುಗಿನ ನೃತ್ಯ ಬಂಧಗಳೇ ಹೆಚ್ಚು ಪ್ರಚಾರಕ್ಕೆ ಬಂದವು. ನಮ್ಮ ಎಲ್ಲ ಲಲಿತ ಕಲೆಗಳನ್ನು “ಪರಂಪರೆ, ಸಂಪ್ರದಾಯ” ಎಂಬ ಕಣ್ಣುಗಳ ಮೂಲಕ ಕಾಣುವ ಕ್ರಮದಿಂದಾಗಿ “ಪದವರ್ಣಗಳನ್ನು ಮಾಡಿದರೆ ತಮಿಳು/ ತೆಲುಗಿನದ್ದೇ ಆಗಬೇಕಪ್ಪ!” ಎನ್ನುವ ಸಂಕುಚಿತ ಅಭಿಪ್ರಾಯಗಳು ಕಾಣಿಸಿಕೊಂಡವು. “ದಾಸರ ಪದಗಳಿಗಿಂತ ತಮಿಳು/ತೆಲುಗಿನ ಪದಂಗಳಿಗೇ ಒಂದು ತೂಕ ಹೆಚ್ಚು! ಹೀಗೆ. . . .

    ಹಿತ್ತಲ ಗಿಡ ಮದ್ದಲ್ಲ ಎಂಬ ಕನ್ನಡಿಗರ ಮನೋಭಾವದಿಂದಾಗಿ ಕನ್ನಡದ ಕಾವ್ಯಗಳಿಂದ ಆಯ್ದ ನೃತ್ಯಬಂಧಗಳನ್ನು ಲಕ್ಷಣಕ್ಕನುಸಾರವಾಗಿ ನರ್ತಿಸಿದರೂ ಒಪ್ಪುವ ವಿಶಾಲ ಹೃದಯ ನಮ್ಮಲಿಲ್ಲ. ತಮಿಳಿನ ಕಾವ್ಯಗಳಿಂದ ಆಯ್ದು ಯಾರಾದರೂ ತಮಿಳು ನೆಲದ ಕಲಾವಿದರು ಕನ್ನಡದ ಮಣ್ಣಿನಲ್ಲಿ ಪ್ರದರ್ಶಿಸಿದರೆ ಅದು ಬಹು ಬೇಗ ಸಮ್ಮತವಾಗಿ ಪ್ರಚಾರಕ್ಕೆ ಬಂದು, ನಮ್ಮ ನೃತ್ಯ ಬಂಧಗಳಲ್ಲಿ ಒಂದಾಗಿ ಬಿಡುತ್ತದೆ. ಕನ್ನಡ ಸಾರಸ್ವತಲೋಕದಲ್ಲಿ ಸದಭಿರುಚಿಯ ಪ್ರಯೋಗಗಳನ್ನು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಕಾಣುವ ತೆರೆದ ಮನಸ್ಸೇ ಕಾಣುವುದಿಲ್ಲ.

    ಇನ್ನು – ಯಕ್ಷಗಾನದ ಪದ್ಯಗಳು ಭರತನಾಟ್ಯಕ್ಕೆ ಅಳವಡಿಕೆ ಯಾಕಾಗಬಾರದು ಎನ್ನುವ ಬಗ್ಗೆ – ಇಲ್ಲೂ ಹಾಗೆ – ಪ್ರಾದೇಶಿಕತೆಯಿಂದಾಗಿ ಪ್ರತಿಯೊಂದು ಶಾಸ್ತ್ರೀಯ ನೃತ್ಯ ಶೈಲಿಗೂ ಅದರ ಸುತ್ತ ಮುತ್ತ ಪ್ರಚಲಿತವಿರುವ ಜನಪದ ನೃತ್ಯ ಶೈಲಿಯ ಪ್ರಭಾವವಿರುತ್ತದೆ. ಉದಾ: ತಮಿಳು ನೆಲದ ಭರತನಾಟ್ಯಕ್ಕೆ – ಕೊರವಂಜಿ, ಭಾಗವತ ಮೇಳಗಳ ಪ್ರಭಾವ. ಕನ್ನಡ ನೆಲದ ಭರತನಾಟ್ಯಕ್ಕೆ ಕರಾವಳಿಯ ಯಕ್ಷಗಾನದ ಪ್ರಭಾವ. ಕೇರಳದ ಕಥಕ್ಕಳಿಗೆ ಕೋಡಿಯಾಟ್ಟಾಮ್, ಚಾಕ್ಯಾರ್ ಕೂತ್ತಿನ ಪ್ರಭಾವ. ಕೂಚಿಪುಡಿಗೆ ಬುರ್ರಕಥಾ, ಕೋಲಾಟ, ಭಾಮಾಕಲಾಪ, ಗೊಲ್ಲಕಲಾಪದ ಪ್ರಭಾವ ಹೀಗೆ. ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾದ ವಿಷಯವೇ – ಭಾರತದ ಎಲ್ಲ ಶಾಸ್ತ್ರೀಯ/ಜನಪದ ಸಂಗೀತ/ನೃತ್ಯಗಳಿಗೆ ಮೂಲ ಒಂದೇ – ಅಭಿವ್ಯಕ್ತಿ ಬೇರೆ ಬೇರೆ. ಹೀಗಾಗಿ ಯಕ್ಷಗಾನದ ಪದ್ಯಗಳನ್ನು ಭರತನಾಟ್ಯದ ನೃತ್ಯಬಂಧಗಳ ಚೌಕಟ್ಟಿಗೆ ಅಳವಡಿಸಿ ಪ್ರಸ್ತುತಪಡಿಸುವುದು ಒಂದು ಸಾಧ್ಯತೆಯೆ!. ಸದಭಿರುಚಿಯ ಪ್ರಯೋಗವಾಗಿರಬೇಕೆಂಬ ಸೂಕ್ಷ್ಮ ಎಚ್ಚರ ಮಾತ್ರ ನಮ್ಮಲ್ಲಿರಬೇಕು.

    ಇನ್ನೂ ಆಳವಾದ ಚರ್ಚೆಗೆ ಸಿದ್ಧಳಿರುವ
    ಭ್ರಮರಿ ಶಿವಪ್ರಕಾಶ್
    26-1-2016

  2. Vidwan Pulikeshi Kasturi

    I agree with Joshi sir.
    I have selected some daasara padams and have made itas Shringara padams and taught it to my students.

Leave a Reply

*

code