ಅಂಕಣಗಳು

Subscribe


 

ರಂಗಾಕ್ಷರ

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಮತ್ತು ನೂಪುರ ಭ್ರಮರಿಯ ನಂಟು ಇಂದು ನಿನ್ನೆಯದಲ್ಲ. ನಿಯತಕಾಲಿಕೆಯ ಹಿತೈಷಿಗಳ ಪೈಕಿ ಉಪಾಧ್ಯಾಯರಿಗೆ ಅಗ್ರಸ್ಥಾನವೇ ಇದೆ. ಹಾಗಾಗಿ ಶಂಕರನಾರಾಯಣ ಉಪಾಧ್ಯಾಯರನ್ನು ಲೇಖಕರು, ಕವಿ, ರಂಗನಿರ್ದೇಶಕ, ರಾಮಕಥಾ ರೂಪಕ ನಿರ್ದೇಶಕರು, ಅವಧಾನ ಪೃಚ್ಛಕರು ಎಂದೆಲ್ಲಾ ಪರಿಚಯಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೂಪುರ ಬಳಗದ ಅನೇಕ ಯೋಜನೆ, ದಾಖಲೀಕರಣ, ಶೋಧನೆಗಳಿಗೆ ಕಾವಲಾಗಿ, ಮಾರ್ಗದರ್ಶಕರಾಗಿ, ಚಿಂತಕರಾಗಿ, ಪೋಷಕರಾಗಿರುವವರು ಎಂದು ಶ್ರುತಪಡಿಸಿಕೊಳ್ಳುವುದರಲ್ಲೇ ನಮಗೆ ಹೆಚ್ಚಿನ ಖುಷಿಯಿದೆ. ಅವರೊಂದಿಗಿನ ಕಲಾಯಾತ್ರೆಗಳ ಹೆಜ್ಜೆಯನ್ನು ಮೆಲುಕು ಹಾಕಲು ಹೊರಟರೆ ಪುಟಗಳು ಸಾಲವು.

ಅವರ ವಿದ್ವತ್ತು, ಕಲೆ, ನೇರ ನುಡಿ, ವಿಮರ್ಶೆ, ಕಾವ್ಯ, ಬರೆಹಗಳ ಧಾಟಿ, ಭಾಷೆ, ಮಾತು, ಪದ-ವಾಕ್ಯ ಸಮಾಹಾರ, ರಂಗಜ್ಞಾನ, ನಿರ್ದೇಶನ, ಕಲಾಪ್ರೋತ್ಸಾಹ, ಪ್ರಾಮಾಣಿಕ ಕಲಾಮನಸ್ಸುಗಳ ಪೋಷಣೆ, ಆಯೋಜನೆ, ಸಂಘಟನೆ, ಪುಸ್ತಕ ಬರೆವಣಿಗೆಯ ಹರಹು, ಕಲಾಮೀಮಾಂಸೆಗಳ ಚಿಂತನೆಗಳನ್ನು ಪರಾಮರ್ಶಿಸುತ್ತಾ ಹೋದರೆ ಗ್ರಂಥವೇ ಆದೀತೇನೋ ! ನಾಡಿನ ಅನೇಕ ವಿದ್ವಾಂಸರೊಂದಿಗೆ, ಕಲಾವಿದರೊಂದಿಗೆ ಅವರಿಗಿರುವ ಹೊಕ್ಕು ಬಳಕೆ ಬಹಳ ಆಪ್ತ. ವಯಸ್ಸು-ಪದವಿಗಳ ಹಮ್ಮಿನಿಂದ ಕಳಚಿಸಿ ಯಾರನ್ನಾದರೂ ಮುಕ್ತವಾಗಿ ಮಾತನಾಡಿಸಬಲ್ಲ, ಎಲ್ಲರಿಗೂ ನಿಲುಕುವ ಸ್ನೇಹಜೀವಿ. ರಸ-ಭಾವ-ಬದುಕು-ವ್ಯಕ್ತಿತ್ವದ ಕುರಿತು ಯಾರ ಮುಲಾಜಿಗೂ ಬೀಳದ ಸ್ಪಷ್ಟ, ಸ್ವತಂತ್ರ ನಿಲುವು ಅವರದ್ದು. ಬುದ್ಧಿಗೂ ಭಾವಕ್ಕೂ ಏಕಕಾಲಕ್ಕೆ ಎಟುಕುವ ವ್ಯಕ್ತಿತ್ವ – ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.

ಕೊರ್ಗಿ ಅವರ ಬರೆಹಗಳೆಂದರೆ ಕಾವ್ಯದೊಳಗಿನ ಗದ್ಯ, ಗದ್ಯದೊಳಗಿನ ಕಾವ್ಯ. ಆಶುನಿರೂಪಣೆಯ ಕವಿತ್ವದಲ್ಲಂತೂ ಅವರದ್ದು ಸೋದಾಹರಣ ಪ್ರತಿಭೆ. ಅವರ ಬರೆಹದ ನಿದರ್ಶನಕ್ಕೆ- ಕಳೆದ ಮತ್ತು ಈ ಶತಮಾನದ ನಾಟ್ಯಲೋಕದ ನಡೆದಾಡುವ ದಂತಕತೆಯೆನಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂರಂತಹ ನಾಟ್ಯವನ್ನು ಕನ್ನಡ ಭಾಷೆಯ ಚೆಲುವಿಗೊಡ್ಡಿ ಆಸ್ವಾದನಾ ರೂಪದಲ್ಲಿ ಬರೆದ ಪ್ರಬಂಧವು ವಿಮರ್ಶೆ-ಕಾವ್ಯ-ಗದ್ಯಗಳನ್ನೂ ಏಕಕಾಲಕ್ಕೆ ಸಮೀಕರಣಗೊಳಿಸಿ ಸ್ವತಃ ಪದ್ಮಾ ಅವರನ್ನೇ ನಿಬ್ಬೆರಗುಗೊಳಿಸಿದೆ ! ಹೀಗೆ ಒಂದು ಅತ್ಯಪೂರ್ವ ಬರೆಹ ಪ್ರಕಾರವಾಗಿಯೂ ಗುರುತಿಸಿಕೊಂಡು ‘ನಾಟ್ಯಾಮೃತವರ್ಷ’ ಎಂಬ ಹೆಸರಿನಲ್ಲಿ ಮರುಮುದ್ರಣವನ್ನೂ, ಇಂಗ್ಲೀಷ್‌ಗೆ ಭಾವಾನುವಾದವನ್ನೂ ಕಂಡ ನಾಟ್ಯಪ್ರದರ್ಶನಮೀಮಾಂಸೆ. ಒಂದರ್ಥದಲ್ಲಿ ಪದ್ಮಾ ಅವರ ನಾಟ್ಯಕ್ಕೆ ಕೊರ್ಗಿ ಅವರು ಅರ್ಪಿಸಿದ ಗದ್ಯವಿಮರ್ಶಾಕಾವ್ಯವೂ ಹೌದು. ಇನ್ನು ಗೋಯಕ್ಷವೈಭವ, ಕೃಷ್ಣಕರ್ಣಾಮೃತದ ಕನ್ನಡ ಅವತರಣಿಕೆ, ಕಾವ್ಯಕ್ಕೇ ಹೊಸತೆನಿಸುವಂತೆ ಮೇಘ-ವರ್ಷಗಳ ಕುರಿತ ೨೦೦ಕ್ಕೂ ಮಿಗಿಲಾದ ಛಂದೋಮಯ ಕಾವ್ಯಗುಚ್ಛ, ತ್ಯಾಗರಾಜ ಭಾವ-ಬದುಕಿನ ಕೃತಿಯನ್ನೂ ಸೇರಿದಂತೆ ಹೊರಬಂದಿರುವ ಅವರ ಅನೇಕ ಕೃತಿಗಳು ಓದುಗರಿಗೆ ರಸದೂಟ.

ಒಟ್ಟಿನಲ್ಲಿ ಯಾವುದೇ ಬರೆಹವಿರಲಿ, ಶೋಧವಿರಲಿ, ಕಾರ್ಯಕ್ರಮವಿರಲಿ…, ಅವರೊಂದಿಗಿನ ಮಾತು-ಮಥನ-ಸಂಸರ್ಗ-ಸ್ನೇಹ ನಮ್ಮನ್ನು ಇನ್ನಷ್ಟು ಪಕ್ವಗೊಳಿಸುವ ದಾರಿ. ಅವರೊಂದಿಗಿನ ಸ್ನೇಹ ಹಲವು ಕಲಾರತ್ನಗಳನ್ನು ಒದಗಿಸಿದೆ. ಕಲೆಯ ಹಲವು ಬೆಟ್ಟಗಳನ್ನು ಹತ್ತಿಳಿಯುವಂತೆ ಮಾಡಿದೆ. ಒಂದರ್ಥದಲ್ಲಿ ಬಳಗದಲ್ಲಿ ಅವರು ಹಿರಿಯಣ್ಣನಂತೆ. ತಿದ್ದುವ, ಗುದ್ದುವ, ಬೈಯುವ, ಬೆವರಿಳಿಸುವ, ಮೆಚ್ಚುವ ಎಲ್ಲ ಹಕ್ಕುಗಳು ಅವರಿಗಿದೆ. ಶಂಕರನಾರಾಯಣ ಉಪಾಧ್ಯಾಯರ ಹಿರಿಯ ಸಹೋದರ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರಿಂದ ಆರಂಭವಾದ ನಂಟು ನೂಪುರ ಭ್ರಮರಿಯೊಂದಿಗಷ್ಟೇ ಅಲ್ಲದೆ ಕೌಟುಂಬಿಕವಾಗಿ, ಕಲೋದ್ಯೋಗಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸಾಕಷ್ಟು ಸುಗ್ರಾಸವನ್ನೇ ನೀಡುತ್ತಲಿದೆ. ಅವರು ಯತಾರ್ಥದಲ್ಲೂ ಹೆಸರಿಗೆ ಅನ್ವರ್ಥವೆನಿಸುವಂತೆ ಉಪಾಧ್ಯಾಯರೇ ! ನಾವು ಅವರಿಗೆ ಆಜನ್ಮ ಋಣಿಗಳು. ನೂಪುರ ಭ್ರಮರಿಯ ‘ವಿಮರ್ಶಾ ವಾಙ್ಮಯಿ’ ಪ್ರಶಸ್ತಿ’ ಶಂಕರನಾರಾಯಣರ ವಿಮರ್ಶನಶೀಲವ್ಯಕ್ತಿತ್ವಕ್ಕೆ ನಾವಿತ್ತ ಚಿಕ್ಕ ಅರ್ಪಣೆಯಷ್ಟೇ. ಅವರ ವಿದ್ವತ್ತಿಗೆ, ಕವಿತ್ವಕ್ಕೆ, ಕಲೆಯಲ್ಲಿನ ನಿರಂತರ ದುಡಿತಕ್ಕೆ ರಾಷ್ಟ್ರಮಟ್ಟದ ಮನ್ನಣೆಗಳು ಅರ್ಹ. ಆದರೂ ಅವುಗಳ ಮರ್ಜಿಗೆ ಬೀಳದ ಅಪೂರ್ವ ಜೀವನಪ್ರೀತಿ ಅವರಿಗಿದೆ. ಒಟ್ಟಿನಲ್ಲಿ ಕೊರ್ಗಿ ಅವರ ಬಗ್ಗೆ ಬರೆದಷ್ಟೂ ಕಡಿಮೆಯೇ!

ಈಗಾಗಲೇ ಅಣ್ಣ-ತಮ್ಮಂದಿರಿಬ್ಬರ ಅಂಕಣ-ಲೇಖನ-ವಿಮರ್ಶೆ-ಕಾವ್ಯಗಳು ನೂಪುರದ ಅಂಗಳದಲ್ಲಿ ಪ್ರಕಟವಾಗಿ ಓದುಗರಿಂದ ಮಾನ್ಯವಾಗಿರುವುದು ತಮಗೆ ತಿಳಿದದ್ದೇ. ಇದೀಗ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ‘ರಂಗಾಕ್ಷರ’ವೆಂಬ ವಿನೂತನ ಸರಣಿ ಮಾಲಿಕೆಯ ಮೂಲಕ ಅವರದೇ ಸೃಷ್ಟಿ-ವ್ಯಷ್ಟಿಯಲ್ಲಿ ಮೂಡಿಬಂದ ಗೀತ-ನೃತ್ಯ-ರೂಪಕಗಳ ಸಂವಿಧಾನವನ್ನು ನಮಗೀಯುತ್ತಿದ್ದಾರೆ. ಪ್ರಾಯೋಗಿಕವಾಗಿಯೂ ರೂಪಕ ಮಾಧ್ಯಮದಲ್ಲಿ ರಂಗದಲ್ಲಿ ಪ್ರಚಲಿತವಾದ ಹೆಗ್ಗಳಿಕೆ ನೂಪುರ ಭ್ರಮರಿಯ ಕುಟುಂಬಕ್ಕಿದ್ದು ಅದಕ್ಕೂ ಕಾರಣಕರ್ತರು ಉಪಾಧ್ಯಾಯರೇ ಎಂಬುದನ್ನು ಬೇರೆ ಹೇಳಬೇಕಿಲ್ಲ.

ಪ್ರಸ್ತುತ- ಕಲಾಮಾಧ್ಯಮ, ಬರೆವಣಿಗೆ, ಅಂಕಣ, ಪ್ರಕಟಣೆ.. ಹೀಗೆ ಯಾವುದೇ ಮುಖದಿಂದ ನೋಡಹೊರಟರೂ ಇದು ಕಲಾಜಗತ್ತಿಗೇ ನವೀನ ಪ್ರಾಕಾರ-ಆಕಾರ. ಇದನ್ನು ಯಥೋಚಿತವಾಗಿ ಬಳಸಿ ಬೆಳೆಸಿಕೊಳ್ಳುವ ಹೊಣೆ ಕಲಾಮನಸ್ಸುಗಳದ್ದು.- ಸಂಪಾದಕಿ.

Releasing moments of Yakshamaargamukura - a historical work on Indian dance and drama

Releasing moments of Yakshamaargamukura – a historical work on Indian dance and drama

Posted On: November 1st, 2022 by
ಕಾಮದಹನ

ಕಾಮದಹನ

Posted On: December 30th, 2019 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ತುಲಸೀದಾಸ

Posted On: June 15th, 2019 by - ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ರೂಪಕ- ಕೃಷ್ಣಕಾರುಣ್ಯ

Posted On: August 15th, 2018 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ರಂಗರೂಪಕ- ಗಂಗಾವತರಣ

Posted On: February 15th, 2018 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಪ್ರಯೋಗ ಪ್ರಾವಣ್ಯದ ರಂಗರೂಪಕ-ಸಮುದ್ರಮಥನ

Posted On: October 12th, 2017 by ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು